ಮಂಗಳೂರು: ಹಿರಿಯ ಪತ್ರಕರ್ತ ಪ್ರೊ.ಬಾಲಕೃಷ್ಣ ಗಟ್ಟಿ ನಿಧನಕ್ಕೆ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಮಂಗಳೂರು ಪ್ರೆಸ್ ಕ್ಲಬ್ ಹಾಗೂ ಪತ್ರಿಕಾ ಭವನದ ವತಿಯಿಂದ ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸಂತಾಪ ಸೂಚಕ ಸಭೆ ನಡೆಸಿ ನುಡಿನಮನ ಸಲ್ಲಿಸಲಾಯಿತು.ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿ ಮಾತನಾಡಿ, ಬಾಲಕೃಷ್ಣ ಗಟ್ಟಿ ಶಿಕ್ಷಣ, ಪತ್ರಿಕೋದ್ಯಮದ ಜೊತೆಗೆ ಸಾಹಿತ್ಯ ಕ್ಷೇತ್ರಕ್ಕೂ ತಮ್ಮದೇ ಆದ ಕೊಡುಗೆ ನೀಡಿದವರು. ಜೊತೆಗೆ ಸಂಘಟನೆಗೂ ಒತ್ತು ನೀಡಿದವರು ಎಂದರು.
ಕರ್ನಾಟಕ ರಾಜ್ಯ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಮಾತನಾಡಿ, ಬಾಲಕೃಷ್ಣ ಗಟ್ಟಿ ಸರಳ ಸಜ್ಜನಿಕೆಯ ನೇರ ನಡೆ ನುಡಿಯ ವ್ಯಕ್ತಿಯಾಗಿದ್ದರು ಎಂದರು.
ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಮಾತನಾಡಿ, ಬಾಲಕೃಷ್ಣ ಗಟ್ಟಿ ಮಾಧ್ಯಮ ಕ್ಷೇತ್ರದ ಮೂಲಕ ಸಾಕಷ್ಟು ಮಂದಿಗೆ ಪ್ರೇರಣೆ ನೀಡುವ ಕೊಡುಗೆ ನೀಡಿದವರು ಎಂದರು.ಹಿರಿಯ ಪತ್ರಕರ್ತ ಯಶವಂತ ಬೋಳೂರು, ನಂದ ಗೋಪಾಲ್, ದ.ಕ. ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ, ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀನಿವಾಸ ನಾಯಕ್ ಇಂದಾಜೆ , ಬಾಲಕೃಷ್ಣ ಗಟ್ಟಿಯವರ ಒಡನಾಡಿಗಳಾಗಿದ್ದ ಡೊನಾಲ್ಡ್ ಪಿರೇರಾ, ಬಶೀರ್, ಪತ್ರಕರ್ತ ಭಾಸ್ಕರ ರೈ ಕಟ್ಟ ನುಡಿ ನಮನ ಸಲ್ಲಿಸಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್. ಸ್ವಾಗತಿಸಿದರು.