ಬಾಳಂಬೀಡ ಏತ ನೀರಾವರಿ, ಪ್ರಾಯೋಗಿಕವಾಗಿ ಕೆರೆಗೆ ನೀರು

KannadaprabhaNewsNetwork | Published : Nov 12, 2023 1:00 AM

ಸಾರಾಂಶ

ದೀಪಾವಳಿಗೆ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದ ಬಾಳಂಬೀಡ ಏತ ನೀರಾವರಿ ಯೋಜನೆ, ಪ್ರಾಯೋಗಿಕವಾಗಿ ಕೆರೆಗೆ ನೀರು ಹರಿಸುವ ಕಾರ್ಯ ಆರಂಭವಾಗಿದ್ದು, ಈಗ ವರದಾ ನದಿಯಲ್ಲಿ ನೀರಿನ ಹರಿವು ಬೇಕಾಗಿದೆ.

ದೀಪಾವಳಿಗೆ ರೈತರ ಮೊಗದಲ್ಲಿ ಮಂದಹಾಸ

ಕನ್ನಡಪ್ರಭ ವಾರ್ತೆ ಹಾನಗಲ್ಲ

ದೀಪಾವಳಿಗೆ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದ ಬಾಳಂಬೀಡ ಏತ ನೀರಾವರಿ ಯೋಜನೆ, ಪ್ರಾಯೋಗಿಕವಾಗಿ ಕೆರೆಗೆ ನೀರು ಹರಿಸುವ ಕಾರ್ಯ ಆರಂಭವಾಗಿದ್ದು, ಈಗ ವರದಾ ನದಿಯಲ್ಲಿ ನೀರಿನ ಹರಿವು ಬೇಕಾಗಿದೆ.

ಹಾನಗಲ್ಲ ತಾಲೂಕಿನ ಅತಿ ದೊಡ್ಡ ಏತ ನೀರಾವರಿ ಯೋಜನೆ ಬಾಳಂಬೀಡ ಏತ ನೀರಾವರಿ ಕಳೆದ ಮೂರು ವರ್ಷಗಳಿಂದ ಕಾಮಗಾರಿ ಆರಂಭವಾಗಿ ಮುಗಿಯುವ ಹಂತದಲ್ಲಿತ್ತು. ಮಳೆಗಾಲ ಆರಂಭದ ಹೊತ್ತಿಗೆ ನೀರು ಹರಿಸುವ ಕಾರ್ಯದ ನಿರೀಕ್ಷೆ ಇತ್ತು. ಆದರೆ ಮಳೆಯ ಕೊರತೆ ಕಾರಣವಾಗಿ ಅಂತಿಮ ಕಾಮಗಾರಿ ಸ್ವಲ್ಪ ಮಟ್ಟಿಗೆ ವಿಳಂಬದ ದಾರಿ ಹಿಡಿಯಿತಾದರೂ ಈಗ ದೀಪಾವಳಿ ಮುನ್ನಾ ದಿನ ನೀರು ಹರಿಸುವ ಮೂಲಕ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ವಿದ್ಯುತ್ ಪೂರೈಕೆಯಲ್ಲಿಯೂ ಸ್ವಲ್ಪ ವಿಳಂಬಕ್ಕೆ ಕಾರಣವಾಗಿದ್ದರಿಂದ ಎರಡು ಮೂರು ತಿಂಗಳ ನೀರು ಹರಿಸುವಿಕೆ ವಿಳಂಬವಾಯಿತು.

ಹಾನಗಲ್ಲ ತಾಲೂಕಿನ ಉತ್ತರ ಭಾಗದ ಬಹುತೇಕ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಇದಾಗಿದ್ದು,ಅಂತರ್ಜಲ ಹೆಚ್ಚಿಸುವ ಮಹತ್ತರ ಯೋಜನೆಯಾಗಿದೆ. ಹಾನಗಲ್ಲ ತಾಲೂಕಿನ ಶೇ. ೪೦ ರಷ್ಟು ಕೃಷಿ ಭೂಪ್ರದೇಶದ ೬೭ ಗ್ರಾಮಗಳ ೧೮೨ ಕೆರೆಗಳಿಗೆ ವರದಾ ನದಿಯಿಂದ ನೀರು ತುಂಬುವ ಮೂಲಕ ಅಂತರ್ಜಲ ಅಭಿವೃದ್ಧಿ ಹಾಗೂ ಜನ ಜಾನುವಾರುಗಳಿಗೆ ಕುಡಿವ ನೀರು ಕೊಡುವ ಮಹಾತ್ವಾಕಾಂಕ್ಷಿ ಯೋಜನೆ ಇದಾಗಿದೆ. ಮಾಜಿ ಸಚಿವ ದಿ.ಸಿ.ಎಂ.ಉದಾಸಿ ಅವರ ಬಹು ವರ್ಷಗಳ ಒತ್ತಾಸೆ ಇಚ್ಛಾಶಕ್ತಿಯ ಫಲವಾಗಿ ೨೦೧೯ ರಲ್ಲಿ ಆರಂಭವಾದ ಕಾಮಗಾರಿ, ಹಾಲಿ ಶಾಸಕ ಶ್ರೀನಿವಾಸ ಮಾನೆ ಉಸ್ತುವಾರಿಯಲ್ಲಿ ಕಾಮಗಾರಿಗೆ ವೇಗದ ಚಾಲನೆ ದೊರೆತು,ಈಗ ಪೂರ್ಣಗೊಂಡು ರೈತರ ಕೆರೆಗಳಿಗೆ ನೀರು ಹರಿಸಲು ಸಜ್ಜಾಗಿದೆ. ೧೮೨ ಕೆರೆಗಳಿಗೆ ೧.೩೩ ಟಿಎಂಸಿ ನೀರು ಒಂದು ಬಾರಿಗೆ ಹರಿಸಲಾಗುತ್ತದೆ. ೨೨ ಕಿಮಿ ಮುಖ್ಯ ಪೈಪ್‌ಲೈನ್, ೨೨೧ ಕಿಮಿ ವಿತರಣಾ ಪೈಪಲೈನ್‌ ಹೊಂದಿರುವ ಈ ಯೋಜನೆ, ೧೫ ಮುಖ್ಯ ವಿಭಾಗಗಳ ಮೂಲಕ ನೀರು ಹರಿಸುತ್ತದೆ.

ಏಕಕಾಲಕ್ಕೆ ೧೮೬ ಕ್ಯೂಸೆಕ್‌ ನೀರು ವರದಾ ನದಿಯಿಂದ ಹರಿಸುವ ಸಾಮರ್ಥ್ಯ ಹೊಂದಿರುವ ಈ ಯೋಜನೆ, ಒಂದು ಕೃಷಿ ವರ್ಷದಲ್ಲಿ ೯೦ ದಿನ ನೀರು ಹರಿಸಿ ಕೆರೆ ತುಂಬುವ ಯೋಜನೆಯಾಗಿದೆ.

ಪ್ರಾಯೋಗಿಕವಾಗಿ ನೀರು ಹರಿಸುವ ಕಾರ್ಯ ಆರಂಭವಾಗಿದೆ. ಎಲ್ಲಿಯೂ ಯಾವುದೇ ಸಮಸ್ಯೆಯಾಗಿಲ್ಲ. ಅಧಿಕಾರಿಗಳು ಗುತ್ತೆಗೆದಾರರು, ಅಭಿಯಂತರು ಈ ಯೋಜನೆಯ ಸಾಕಾರಕ್ಕೆ ಶ್ರಮ ಹಾಕುತ್ತಿದ್ದಾರೆ. ಇದು ರೈತರ ಮಹಾತ್ವಾಕಾಂಕ್ಷಿ ಯೋಜನೆ.ಇದರ ಪ್ರಯೋಜನೆ ರೈತ ಸಮುದಾಯದಲ್ಲಿ ಹರ್ಷ ತರುವಂತಹದ್ದು. ದೀಪಾವಳಿ ಸಂದರ್ಭದಲ್ಲಿ ಈ ಯೋಜನೆಯ ನೀರು ಹರಿಸುವ ಮೂಲಕ ಅಧಿಕಾರಿಗಳು ಒಳ್ಳೆಯ ಕೆಲಸ ಮಾಡಿದ್ದಾರೆ ಎನ್ನುತ್ತಾರೆ ಶಾಸಕ ಶ್ರೀನಿವಾಸ ಮಾನೆ.

Share this article