ಬಿಟ್ಟಂಗಾಲದಲ್ಲಿ ‘ಬೇಲ್ ಪಣಿ’ ಕ್ರೀಡಾಕೂಟ: ಹಿರಿಯ ಕಿರಿಯರ ಸಂಭ್ರಮ

KannadaprabhaNewsNetwork |  
Published : Aug 11, 2024, 01:31 AM IST
ಚಿತ್ರ : 10ಎಂಡಿಕೆ4 : ಬಿಟ್ಟಂಗಾಲದಲ್ಲಿ  ಕೆಸರು ಗದ್ದೆ ಕ್ರೀಡಾಕೂಟ ನಡೆಯಿತು.  | Kannada Prabha

ಸಾರಾಂಶ

ಬೇಲ್‌ ಪಣಿ ಕೆಸರು ಗದ್ದೆ ಕ್ರೀಡಾಕೂಟ ಬಿಟ್ಟಂಗಾಲದಲ್ಲಿ ಸಂಭ್ರಮದಿಂದ ನಡೆಯಿತು. ಕ್ರೀಡಾಕೂಟದಲ್ಲಿ ಮಕ್ಕಳು ಹಿರಿಯ ನಾಗರಿಕರು ಭಾಗವಹಿಸಿದ್ದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಜಬ್ಬೂಮಿ ಸಂಘಟನೆ, ರೂಟ್ಸ್ ಆಫ್ ಕೊಡಗು ಹಾಗೂ ವಿವಿಧ ಸಂಘಟನೆಗಳ ಜಂಟಿ ಆಶ್ರಯದಲ್ಲಿ ‘ಕೊಡಗಿನ ಕೃಷಿಯೊಂದಿಗೆ ಸಂಸ್ಕೃತಿ ಮಿಡಿತ ಹೊಂದಿದ್ದು, ಮರೆಯಾಗುತ್ತಿರುವ ಕೃಷಿ ಪರಂಪರೆ ಬಗ್ಗೆ ಅಭಿಮಾನ ಮೂಡಿಸಿ, ಉತ್ತೇಜಿಸಿ ಮತ್ತು ಕೊಡವ ಸಮುದಾಯಗಳ ನಡುವೆ ಬಾಂಧವ್ಯ ಬೆಸೆಯುವ ನಿಟ್ಟಿನಲ್ಲಿ ಆಯೋಜಿಸಿದ್ದ ‘ಬೇಲ್ ಪಣಿ’ ಕೆಸರು ಗದ್ದೆ ಕ್ರೀಡಾಕೂಟ ಶನಿವಾರ ಬಿಟ್ಟಂಗಾಲದಲ್ಲಿ ಸಂಭ್ರಮದಿಂದ ನಡೆಯಿತು.

ಬಿಟ್ಟಂಗಾಲ ಗ್ರಾಮದ ನಾಯಡ ಕುಟುಂಬದ ಬತ್ತದ ಗದ್ದೆಯಲ್ಲಿ ಮುರುವಂಡ ಮಿಥುನ್ ಅಣ್ಣಯ್ಯ, ಪೊನ್ನಕಚ್ಚಿರ ಪುನೀತ್ ಅವರ ಮೇಲುಸ್ತುವಾರಿಯ ಗದ್ದೆಯಲ್ಲಿ ನಡೆದ ಕ್ರೀಡಾಕೂಟದಲ್ಲಿ ನೂರಾರು ಕಿರಿಯರು, ಹಿರಿಯರು ಭಾಗವಹಿಸಿ, ನೂರಾರು ಪ್ರೇಕ್ಷಕರ ಪ್ರೋತ್ಸಾಹ-ಬೆಂಬಲದೊಂದಿಗೆ ಕೆಸರು ಗದ್ದೆಯಲ್ಲಿ ಮಿಂದು, ಎದ್ದು, ಬಿದ್ದು ಕ್ರೀಡಾ ಉತ್ಸಹ ಪ್ರದರ್ಶಿಸಿದರು.

ಕ್ರೀಡಾ ಕೂಟದಲ್ಲಿ 6 ವರ್ಷದ ಮಕ್ಕಳಿಂದ ಹಿಡಿದು ಹಿರಿಯ ನಾಗರಿಕರು ನಾಟಿ ಗದ್ದೆಯಲ್ಲಿ ಭಾಗವಹಿಸಿ ಸಂತಸ ಪಟ್ಟರು.

ಕಾರ್ಯಕ್ರಮದ ಆರಂಭದಲ್ಲಿ ಸಾಂಪ್ರದಾಯಿಕವಾಗಿ ಗೆಜ್ಜೆತಂಡ್ ಎದುರು ಪುಡಿಯೊಕ್ಕಡ ಹರೀಶ್ ಅವರ ಮೂಲಕ ‘ತಪ್ಪಡ್ಕ’ಕಟ್ಟಿ ಕಾರ್ಯಕ್ರಮದ ಯಶಸ್ವಿಗೆ, ಕೊಡಗಿನ ಪ್ರಕೃತಿ, ಜೀವ ಜಲ, ಪರಂಪರೆಯ ಗತವೈಭವ ಮರುಕಳಿಸಿ ಅದರ ಸಂರಕ್ಷಣೆ ಪ್ರಾರ್ಥಿಸಲಾಯಿತು.

ಪುಚ್ಚಿಮಂಡ ಬಬ್ಬುಲು, ಮಾಚೇಟ್ಟಿರ ಸುನಿಲ್ ತಂಡ ಕೋವಿಯಲ್ಲಿ 12 ಸುತ್ತಿನ ಗುಂಡು ಹಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಗದ್ದೆಯಲ್ಲಿ ನಾಟಿ ಮಾಡುವ ಮೂಲಕ ನಾಯಡ ಶ್ಯಾಮ್ ಸೋಮಣ್ಣ ಅವರೊಂದಿಗೆ ಜಬ್ಬೂಮಿ ಸಂಘಟನೆ ಮತ್ತು ರೂಟ್ಸ್ ಆಫ್ ಕೊಡಗು ಪ್ರಮುಖರು ಚಾಲನೆ ನೀಡಿದರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಜಬ್ಬೂಮಿ ಸಂಚಾಲಕ ಚೊಟ್ಟೆಕ್‌’ಮಾಡ ರಾಜೀವ್ ಬೋಪಯ್ಯ, ಮಚ್ಚಮಾಡ ಅನೀಶ್ ಮಾದಪ್ಪ, ಮಾಚಂಗಡ ಸಚಿನ್, ಉಳುವಂಗಡ ಲೋಹಿತ್ ಭೀಮಯ್ಯ, ಮಲ್ಲಪನೆರ ವಿನು ಚಿಣ್ಣಪ್ಪ, ಪಾಲೆಂಗಡ ಅಮಿತ್ ಭೀಮಯ್ಯ, ಗುಡಿಯಂಗಡ ನಿಖಿಲ್, ಚೇಂದಂಡ ಶಮ್ಮಿ ಮಾದಯ್ಯ, ಅಚ್ಚಾಂಡಿರ ಕುಶಾಲಪ್ಪ, ಅಪ್ಪಂಡೇರಂಡ ಯಶ್ವಂತ್, ಮಾಚೇಟ್ಟಿರ ಸುನಿಲ್, ಪುಚ್ಚಿಮಂಡ ಬಬುಲ್ ಅಪ್ಪಯ್ಯ ಪ್ರಮುಖರು ಹಾಜರಿದ್ದರು.

ಉಳುವಂಗಡ ಲೋಹಿತ್ ಭೀಮಯ್ಯ ಅವರು ಜಬ್ಬೂಮಿ ಗೀತೆ ಹಾಡಿದರು. ಕಾರ್ಯಕ್ರಮದಲ್ಲಿ ಮಹಿಳೆಯರು, ಪುರುಷರಿಗೆ, ಶಾಲಾ ಮಕ್ಕಳಿಗೆ ಹಗ್ಗ ಜಗ್ಗಾಟ, ಕೆಸರು ಗದ್ದೆ ಓಟ, ಕೆಸರು ಗದ್ದೆ ನಡಿಗೆ, ಕೈಪುಳಿ ಹಾಗೂ ಕೈಕಣೆ ನಡಿಗೆ ಗಮನ ಸೆಳೆಯಿತು.

ವಿಶೇಷ ಕಾರ್ಯಕ್ರಮವಾಗಿ ವಿರಾಜಪೇಟೆ ಪ್ರಗತಿ ಶಾಲಾ ಮಕ್ಕಳಿಂದ ಪ್ರಾಯೋಗಿಕ ಗದ್ದೆ ನಾಟಿ ಮಾಡಲಾಯಿತು.

ಪೆರುವನಾಡ್ ಗೆ ಸಂಬಂಧಪಟ್ಟ ಸತತವಾಗಿ ಬತ್ತದ ಕೃಷಿ ಮಾಡುತ್ತಿರುವ ಬುಟ್ಟಿಯಂಡ ಪಟ್ಟು ಅಯ್ಯಪ್ಪ, ಬುಟ್ಟಿಯಂಡ ಚಿಮ್ಮಿ ಪೂಣಚ್ಚ, ಪುಚ್ಚಿಮಂಡ ಈಶ್ವರ ಮುತ್ತಪ್ಪ, ಬೊಪ್ಪಂಡ ರವಿ, ಪೊನ್ನಕಚ್ಚಿರ ಕುಶ ಬಿದ್ದಪ್ಪ, ಕುಪ್ಪಂಡ ಉತ್ತಯ್ಯ ಅವರನ್ನು ಸನ್ಮಾನಿಸಲಾಯಿತು.

ಕ್ರೀಡಾಕೂಟದಲ್ಲಿ ಜಿಲ್ಲೆಯ ವಿವಿಧ ಶಾಲೆ ಹಾಗೂ ಇತರ ಭಾಗಗಳಿಂದ ಪೈಪೋಟಿಯಲ್ಲಿ ಭಾಗವಹಿಸಿದ್ದರು. ಮಾಲೇಟೀರ ಶ್ರೀನಿವಾಸ್ ನಿರೂಪಿಸಿದರು.

ಕಾರ್ಯಕ್ರಮಕ್ಕೆ ಕೊಡಗು ಜಾವಾ ಎಸ್ಡಿ ಮೋಟಾರ್ ಸೈಕಲ್ ಕ್ಲಬ್, ವಿರಾಜಪೇಟೆಯ ಪ್ರಗತಿ ಶಾಲೆ, ಕೊಡವಾಮೆರ ಕೊಂಡಾಟ, ತಿಂಗಕೊರ್ ಮೊಟ್ಟ್ ತಲಕಾವೇರಿ, ಮೈಸೂರು ಕೊಡವ ಸ್ಟೂಡೆಂಟ್ಸ್ ಅಸೋಸಿಷನ್, ಕನೆಕ್ಟಿಂಗ್ ಕೊಡವಾಸ್, ಬೆಂಗಳೂರು ಕೊಡವ ಸಮಾಜ ಯೂತ್ ಕೌನ್ಸಿಲ್, ಬಾಳೆಹೊನ್ನೂರುವಿನ ಮಹಾಲಕ್ಷ್ಮಿ ಕಾಫಿ ಟ್ರೇಡರ್ಸ್, ದಿಯನ್ ಎಂಟರ್ಪ್ರೈಸೆಸ್, ಕೊಡವ ನಾಡ್, ಕೆಫೆ ಹೆ ಶೇಕ್ ಸಹ ಪ್ರಯೋಜನೆ ನೀಡಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಸ್ಕಾಂ ಸೇವೆ ಅಸ್ತವ್ಯಸ್ತ: 12311 ಕೇಸ್‌ಗಳು ದಾಖಲು
ಮಳೆ ದಿನ ಕಳೆದರೂ ನಗರವಿನ್ನೂ ಅಸ್ತವ್ಯಸ್ತ