ವಿಜೃಂಭಣೆಯಿಂದ ಸಂಪನ್ನಗೊಂಡ ಬಾಳೆಹೊನ್ನೂರು ಗಣೇಶೋತ್ಸವ

KannadaprabhaNewsNetwork |  
Published : Sep 28, 2026, 01:15 AM IST
೨೭ಬಿಹೆಚ್‌ಆರ್ ೩: ಬಾಳೆಹೊನ್ನೂರಿನ ವಿದ್ಯಾಗಣಪತಿಯ ವಿಸರ್ಜನಾ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು. | Kannada Prabha

ಸಾರಾಂಶ

ಬಾಳೆಹೊನ್ನೂರುಜಿಲ್ಲೆಯಲ್ಲಿಯೇ ಅತಿ ದೊಡ್ಡ ಗಣೇಶೋತ್ಸವದಲ್ಲಿ ಒಂದಾದ ವಿದ್ಯಾಗಣಪತಿ ಸೇವಾ ಸಮಿತಿ ಕಳೆದ ಹದಿನಾಲ್ಕು ದಿನಗಳಿಂದ ಆಯೋಜಿಸಿದ್ದ 68ನೇ ಸಾರ್ವಜನಿಕ ಗಣೇಶೋತ್ಸವಕ್ಕೆ ಭಾನುವಾರ ವೈಭವದ ತೆರೆ ಬಿದ್ದಿತು.

14 ದಿನಗಳ ಧಾರ್ಮಿಕ ಕಾರ್ಯ ಸಂಪನ್ನ । ಮೆರವಣಿಗೆಗೆ ಕಳೆ ಕಟ್ಟಿದ ಕಲಾತಂಡಗಳು

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಜಿಲ್ಲೆಯಲ್ಲಿಯೇ ಅತಿ ದೊಡ್ಡ ಗಣೇಶೋತ್ಸವದಲ್ಲಿ ಒಂದಾದ ವಿದ್ಯಾಗಣಪತಿ ಸೇವಾ ಸಮಿತಿ ಕಳೆದ ಹದಿನಾಲ್ಕು ದಿನಗಳಿಂದ ಆಯೋಜಿಸಿದ್ದ 68ನೇ ಸಾರ್ವಜನಿಕ ಗಣೇಶೋತ್ಸವಕ್ಕೆ ಭಾನುವಾರ ವೈಭವದ ತೆರೆ ಬಿದ್ದಿತು.

ಗಣೇಶೋತ್ಸವದ ಅಂಗವಾಗಿ 14 ದಿನಗಳ ಪರ್ಯಂತ ಗಣೇಶನ ಪ್ರತಿಷ್ಠಾಪನೆ, ಗಣಹೋಮ ಸೇರಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ವಿಜೃಂಭಣೆಯಿಂದ ನಡೆದವು. ಭಜನೆ, ವಿವಿಧ ತಂಡಗಳು ನಡೆಸಿದ ಸುಗಮ ಸಂಗೀತ, ಭರತನಾಟ್ಯ, ನೃತ್ಯರೂಪಕ, ಕನ್ನಡ, ತುಳು ನಾಟಕ, ಯಕ್ಷಗಾನ, ಆರ್ಕೆಸ್ಟ್ರಾ, ವಿನೂತನ ಮಾದರಿ ನೃತ್ಯ ಕಾರ್ಯಕ್ರಮ, ಶಾಲಾ ಮಕ್ಕಳ ಜಾನಪದ ಹಾಗೂ ಸಿನಿಮಾ ನೃತ್ಯ ಸ್ಪರ್ಧೆ, ಸಾರ್ವಜನಿಕರ ನೃತ್ಯ, ಗಾಯನ ಸ್ಪರ್ಧೆಗಳು ಸೇರಿದಂತೆ ವಿವಿಧ ಟಿವಿ ವಾಹಿನಿಗಳ ನಟ, ಕಲಾವಿದರ ಕಾರ್ಯಕ್ರಮಗಳು ಭಕ್ತರ ಮನಸೂರೆಗೊಂಡವು.

ವಿಸರ್ಜನೆ ದಿನ ಭಾನುವಾರ ಆಯೋಜಿಸಿದ್ದ ಅನ್ನ ಸಂತರ್ಪಣೆಯಲ್ಲಿ ಹನ್ನೆರಡು ಸಾವಿರಕ್ಕೂ ಅಧಿಕ ಭಕ್ತರು ಪಾಲ್ಗೊಂಡು ಅನ್ನಪ್ರಸಾದ ಸ್ವೀಕರಿಸಿದರು. ಅನ್ನದಾನ ಸಮಿತಿಯ ಪ್ರಮುಖರಾದ ಎಂ.ಎಸ್.ಅರುಣೇಶ್, ಸಮಿತಿ ಅಧ್ಯಕ್ಷ ಕೆ.ಎಸ್ . ಚನ್ನಗಿರಿ ನೇತೃತ್ವದ ಸಮಿತಿ ಸದಸ್ಯರು ಅನ್ನ ಸಂತರ್ಪಣೆ ಅಚ್ಚುಕಟ್ಟಾಗಿ ನೆರವೇರಿಸಿದರು.

ವಿಸರ್ಜನಾ ಮೆರವಣಿಗೆಯಲ್ಲಿ ಕೀಲುಕುದುರೆ, ಕರಗನೃತ್ಯ, ಮಾರ್ಪಳ್ಳಿ ಚಂಡೆ ವಾದನ, ಚಿಲಿಪಿಲಿ ಬೊಂಬೆಗಳ ನೃತ್ಯ, ಸ್ಥಳೀಯ ಹಲಗೆ ಓಲಗದ ವಾದನ, ಹತ್ತು ಸಾವಿರಕ್ಕೂ ಹೆಚ್ಚು ಜನ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ವಿಶೇಷ ಅಲಂಕೃತಗೊಳಿಸಿದ್ದ ಟ್ರ್ಯಾಕ್ಟರ್‌ನಲ್ಲಿ ಕಲಾವಿದ ಮಾಗುಂಡಿ ತಂಗಳ ಮನೆಯ ಪ್ರಸಾದ್ ಆಚಾರ್ಯ ತಯಾರಿಸಿದ್ದ ಗಣೇಶ ವಿಗ್ರಹ ವಿರಿಸಿದ್ದು ಭಕ್ತರ ಗಮನ ಸೆಳೆಯಿತು. ಮೆರವಣಿಗೆ ಕಲಾರಂಗ ಕ್ರೀಡಾಂಗಣದಿಂದ ಕೊಪ್ಪ ರಸ್ತೆ ರಂಭಾಪುರಿ ಪೆಟ್ರೋಲ್ ಬಂಕ್ ತಲುಪಿ, ಮುಖ್ಯರಸ್ತೆಯಲ್ಲಿ ಬಸ್ ನಿಲ್ದಾಣ, ಜೇಸಿ ವೃತ್ತ, ರೋಟರಿ ವೃತ್ತಕ್ಕೆ ತಲುಪಿತು.

ಮುಖ್ಯರಸ್ತೆಯಲ್ಲಿ ನೂರಾರು ಜನ ವರ್ತಕರು ಸಾವಿರಾರು ತೆಂಗಿನ ಕಾಯಿ ಒಡೆದು, ಪಟಾಕಿ ಸಿಡಿಸಿ ಹಾಗೂ ಬೃಹತ್ ಹಾರಗಳನ್ನು ಹಾಕುವ ಮೂಲಕ ಪೂಜೆ ಸಲ್ಲಿಸುವ ಮೂಲಕ ಭಕ್ತಿ ಸಮರ್ಪಿಸಿದರು. ಮೆರವಣಿಗೆ ಬಳಿಕ ಗಣೇಶನನ್ನು ಭದ್ರಾನದಿಯಲ್ಲಿ ವಿಸರ್ಜಿಸುವ ಮೂಲಕ ಗಣೇಶೋತ್ಸವಕ್ಕೆ ವೈಭವದ ತೆರೆ ಕಂಡಿತು.

ಮುಂಜಾಗರೂಕ ಕ್ರಮವಾಗಿ ಪಟ್ಟಣದಾದ್ಯಂತ 250ಕ್ಕೂ ಅಧಿಕ ಪೊಲೀಸರನ್ನು, ಅಗ್ನಿ ಶಾಮಕ ಸಿಬ್ಬಂದಿಗಳನ್ನು ನಿಯೋಜಿಸಿ ಬಂದೋಬಸ್ತ್ ಮಾಡಿ ಜಿಲ್ಲಾ ಎಸ್ಪಿ ಜಿತೇಂದ್ರ ದಯಾಮ ಪರಿಶೀಲಿಸಿದ್ದು, ಕೊಪ್ಪ ಅಡಿಷನಲ್ ಎಸ್ಪಿ ಮೇಘ ಅಗರ್‌ವಾಲ್, ಎನ್.ಆರ್.ಪುರ ಸಿಪಿಐ ಗುರು ಕಾಮತ್, ಪಿಎಸ್‌ಐ ಅಂಬರೀಷ್ ಉಸ್ತುವಾರಿ ವಹಿಸಿದ್ದರು. ಬಾಳೆಹೊನ್ನೂರು ಠಾಣಾ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧ ಹಾಗೂ ಮುಖ್ಯರಸ್ತೆಯಲ್ಲಿ ವಾಹನ ನಿಲುಗಡೆಗೆ ಬ್ರೇಕ್ ಹಾಕಲಾಗಿತ್ತು.(ಬಾಕ್ಸ್)

ಉತ್ಸವ ವಾಹನಕ್ಕೆ ಸಾರಥಿಯಾದ ಶಾಸಕ

ವಿದ್ಯಾಗಣಪತಿ ಮೂರ್ತಿ ಮೆರವಣಿಗೆ ನಡೆಸಲು ಸಿದ್ಧಗೊಳಿಸಿದ್ದ ಅಲಂಕೃತ ವಾಹನವನ್ನು ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ಸ್ವತಃ ಚಲಾಯಿಸುವ ಮೂಲಕ ಗಮನಸೆಳೆದರು.

ಕಲಾರಂಗ ಕ್ರೀಡಾಂಗಣದಲ್ಲಿ ಮೆರವಣಿಗೆಗೆ ಗಣೇಶ ವಿಗ್ರಹವನ್ನು ಉತ್ಸವ ವಾಹನಲ್ಲಿರಿಸಿದ ಬಳಿಕ ಅರ್ಚಕರು ವಿಶೇಷ ಪೂಜೆ ಸಲ್ಲಿಸಿದ ಸಂದರ್ಭದಲ್ಲಿ ಶಾಸಕರು ಉತ್ಸವ ವಾಹನ,ಗಣೇಶನಿಗೆ ಪೂಜಿಸಿ ಈಡುಗಾಯಿ ಒಡೆದರು. ಮೈಸೂರು ಪೇಟ ತೊಟ್ಟು ಟ್ರ್ಯಾಕ್ಟರ್‌ನಲ್ಲಿ ಗಣೇಶನ ಸಾರಥಿಯಾದರು. ಈ ಅಪರೂಪದ ಕ್ಷಣಕ್ಕೆ ಸ್ಥಳದಲ್ಲಿದ್ದ ಭಕ್ತರು, ಸಾರ್ವಜನಿಕರು ಶಿಳ್ಳೆ, ಕೇಕೆ ಹಾಕಿ ಸಂಭ್ರಮಿಸಿದರು. ಹಲವರು ಶಾಸಕರೊಂದಿಗೆ ಸೆಲ್ಪಿ ಕ್ಲಿಕ್ಕಿಸಿ ಸಂತಸಪಟ್ಟರು. ಬಳಿಕ ಮಲೆನಾಡಿನ ಹಲಗೆ ಓಲಗಕ್ಕೆ ಭಕ್ತರೊಂದಿಗೆ ಸೇರಿ ನರ್ತಿಸುವ ಮೂಲಕ ಶಾಸಕರು ಗಮನಸೆಳೆದರು.

(ಬಾಕ್ಸ್)ಭಾವೈಕ್ಯತೆಗೆ ಸಾಕ್ಷಿ ಬಾಳೆಹೊನ್ನೂರು ಗಣೇಶ: ರಾಜೇಗೌಡ

ಶಾಂತಿ, ಸಾಮರಸ್ಯ, ಸದ್ಭಾವನೆ, ಭಾವೈಕ್ಯತೆಗೆ ಬಾಳೆಹೊನ್ನೂರು ಗಣೇಶೋತ್ಸವ ಸಾಕ್ಷಿ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.

ಗಣೇಶೋತ್ಸವದ ಉತ್ಸವದ ವೇಳೆ ಮಾತನಾಡಿ ಬಾಳೆಹೊನ್ನೂರಿನಲ್ಲಿ ಜಿಲ್ಲೆಯಲ್ಲೇ ಅತ್ಯಂತ ದೊಡ್ಡಮಟ್ಟದಲ್ಲಿ ಶಿಸ್ತು ಬದ್ಧವಾಗಿ ಗಣೇಶೋತ್ಸವ ಆಚರಣೆಗೆ ಮಾದರಿಯಾಗಿದೆ. ರಾಜ್ಯದಲ್ಲೂ ಗಮನಸೆಳೆದಿದೆ. ವಿಶೇಷ ಕಲಾ ಸೇವೆಗಳಿಗೆ ಅವಕಾಶ ನೀಡಿ, ಕಲೆ ಉಳಿಸುವ ಕೆಲಸ ಮಾಡಲಾಗುತ್ತಿದೆ. ವಿವಿಧ ಊರುಗಳಿಂದ ಇದನ್ನು ವೀಕ್ಷಿಸಲು ಜನರೂ ಬರುತ್ತಾರೆ. ಎಲ್ಲಾ ಧರ್ಮೀಯರು ಸಹ ಈ ಉತ್ಸವಕ್ಕೆ ಸಹಕರಿಸುವ ಮೂಲಕ ಯಶಸ್ಸಿಗೆ ಶ್ರಮಿಸುತ್ತಾರೆ. ಶೃಂಗೇರಿ ಕ್ಷೇತ್ರವೇ ವಿಶಿಷ್ಟ ವಾಗಿದ್ದು, ಇದು ಇಲ್ಲಿನ ಧರ್ಮ ಶ್ರದ್ಧೆಗೆ ಸಾಕ್ಷಿ ಎಂದರು.೨೭ಬಿಹೆಚ್‌ಆರ್ ೩: ಬಾಳೆಹೊನ್ನೂರಿನ ವಿದ್ಯಾಗಣಪತಿಯ ವಿಸರ್ಜನಾ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು.೨೭ಬಿಹೆಚ್‌ಆರ್ ೪: ಗಣೇಶೋತ್ಸವದ ಉತ್ಸವ ವಾಹನಕ್ಕೆ ಚಾಲಕನಾಗಿ ಕಾರ್ಯನಿರ್ವಹಿಸಿದ ಶಾಸಕ ಟಿ.ಡಿ.ರಾಜೇಗೌಡ.೨೭ಬಿಹೆಚ್‌ಆರ್ ೫: ಗಣೇಶೋತ್ಸವದ ಮೆರವಣಿಗೆ ಕಳೆ ನೀಡಿದ ವಿವಿಧ ವೇಷಭೂಷಣಗಳು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

೨೦೩೫ ಕ್ಕೆ ೪೦೦ ಕೋಟಿ ಜನರು ಬೊಜ್ಜಿನ ಸಮಸ್ಯೆ: ಕೆ.ಟಿ.ಹನುಮಂತು
ದೇಶಕ್ಕೆ ಮಾದರಿಯಾಗುವ ಸಂವಿಧಾನ ಭವನ: ಪಿ.ರವಿಕುಮಾರ್