ತ್ರಿವರ್ಣಮಯವಾಗಿ ಕಂಗೊಳಿಸಿದ ಬಳ್ಳಾರಿ ನಗರ

KannadaprabhaNewsNetwork |  
Published : Aug 14, 2026, 01:30 AM IST
ಬಳ್ಳಾರಿಯಲ್ಲಿ ಗುರುವಾರ ಬಿಜೆಪಿಯಿಂದ ಹಮ್ಮಿಕೊಂಡಿದ್ದ ತಿರಂಗಾ ಯಾತ್ರೆಯಲ್ಲಿ ಪಕ್ಷದ ಕಾರ್ಯಕರ್ತರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು. | Kannada Prabha

ಸಾರಾಂಶ

ಸ್ವಾತಂತ್ರ್ಯೋತ್ಸವದ ಅಂಗವಾಗಿ ಬಿಜೆಪಿ ವತಿಯಿಂದ ಬಳ್ಳಾರಿ ನಗರದಲ್ಲಿ ಗುರುವಾರ ತಿರಂಗಾ ಯಾತ್ರೆ ನಡೆಸಲಾಯಿತು. ಶ್ರೀಕನಕ ದುರ್ಗಮ್ಮ ದೇವಸ್ಥಾನದಿಂದ ಶುರುವಾದ ಯಾತ್ರೆಗೆ ಮಾಜಿ ಶಾಸಕ ಜಿ. ಸೋಮಶೇಖರ ರೆಡ್ಡಿ ಚಾಲನೆ ನೀಡಿದರು.

ಬಳ್ಳಾರಿ: ಸ್ವಾತಂತ್ರ್ಯೋತ್ಸವದ ಅಂಗವಾಗಿ ಬಿಜೆಪಿ ವತಿಯಿಂದ ನಗರದಲ್ಲಿ ಗುರುವಾರ ತಿರಂಗಾ ಯಾತ್ರೆ ನಡೆಸಲಾಯಿತು. ನಗರದ ಪ್ರಮುಖ ರಸ್ತೆಗಳಲ್ಲಿ ರಾಷ್ಟ್ರಧ್ವಜ ಹಿಡಿದು ಸಾಗಿದ ನೂರಾರು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ದೇಶಭಕ್ತಿಯ ಘೋಷಣೆಗಳನ್ನು ಮೊಳಗಿಸಿ ಗಮನ ಸೆಳೆದರು.

ನಗರದ ಶ್ರೀಕನಕ ದುರ್ಗಮ್ಮ ದೇವಸ್ಥಾನದಿಂದ ಶುರುವಾದ ಯಾತ್ರೆಗೆ ಮಾಜಿ ಶಾಸಕ ಜಿ. ಸೋಮಶೇಖರ ರೆಡ್ಡಿ ಚಾಲನೆ ನೀಡಿದರು. ಅಂಡರ್ ಬ್ರಿಡ್ಜ್, ಗಡಗಿ ಚನ್ನಪ್ಪ ವೃತ್ತ, ಬೆಂಗಳೂರು ರಸ್ತೆ, ತೇರುಬೀದಿ ಮೂಲಕ ಮತ್ತೆ ಗಡಗಿ ಚನ್ನಪ್ಪ ವೃತ್ತಕ್ಕೆ ಯಾತ್ರೆ ತಲುಪಿತು.

ತಿರಂಗಾ ಯಾತ್ರೆಯಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು ಉತ್ಸಾಹದಿಂದ ಹೆಜ್ಜೆ ಹಾಕಿದರು. ಯಾತ್ರೆ ಸಾಗಿದ ಮಾರ್ಗದುದ್ದಕ್ಕೂ ‘ಭಾರತ್ ಮಾತಾ ಕೀ ಜೈ’, ‘ವಂದೇ ಮಾತರಂ’ ಸೇರಿದಂತೆ ವಿವಿಧ ದೇಶಭಕ್ತಿ ಘೋಷಣೆಗಳು ಮೊಳಗಿದವು. ರಾಷ್ಟ್ರಧ್ವಜಗಳೊಂದಿಗೆ ಸಾಗಿದ ಕಾರ್ಯಕರ್ತರಿಂದ ನಗರದ ಪ್ರಮುಖ ರಸ್ತೆಗಳು ತ್ರಿವರ್ಣಮಯವಾಗಿ ಕಂಗೊಳಿಸಿದವು.

ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ ಹಾಗೂ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರನ್ನು ಸ್ಮರಿಸುವ ಉದ್ದೇಶದಿಂದ ತಿರಂಗಾ ಯಾತ್ರೆ ಹಮ್ಮಿಕೊಳ್ಳಲಾಗಿತ್ತು. ದೇಶದ ಏಕತೆ, ಅಖಂಡತೆ ಮತ್ತು ಸಾರ್ವಭೌಮತ್ವ ಎತ್ತಿಹಿಡಿಯುವ ಸಂದೇಶವನ್ನು ಯಾತ್ರೆ ಸಾರಿತು.

ಬಿಜೆಪಿ ಕಾರ್ಯಕರ್ತರೊಂದಿಗೆ ಸಾರ್ವಜನಿಕರು, ವಿದ್ಯಾರ್ಥಿಗಳು, ಯುವಜನರು ಹಾಗೂ ಮಹಿಳೆಯರು ಸಹ ಯಾತ್ರೆಯಲ್ಲಿ ಪಾಲ್ಗೊಂಡು ದೇಶಭಕ್ತಿ ಮೆರೆದರು. ಮಹಿಳೆಯರು, ಮಕ್ಕಳು ಹಾಗೂ ಯುವಕರು ಕೈಯಲ್ಲಿ ರಾಷ್ಟ್ರಧ್ವಜ ಹಿಡಿದು ಉತ್ಸಾಹದಿಂದ ಮೆರವಣಿಗೆಯಲ್ಲಿ ಸಾಗಿದರು. 500 ಮೀಟರ್ ಉದ್ದದ ರಾಷ್ಟ್ರಧ್ವಜವನ್ನು ಹಿಡಿದು ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಸಾಗಿ ಬಂದರು.

ಇದೇ ವೇಳೆ ಮಾತನಾಡಿದ ಪಕ್ಷದ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಮೋಕಾ ಅವರು, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ತ್ಯಾಗ ಮತ್ತು ಬಲಿದಾನವನ್ನು ಪ್ರತಿಯೊಬ್ಬರೂ ಸ್ಮರಿಸಬೇಕು. ದೇಶದ ಪ್ರಗತಿ ಹಾಗೂ ಏಕತೆಗಾಗಿ ಪ್ರತಿಯೊಬ್ಬ ನಾಗರಿಕರೂ ತಮ್ಮ ಕರ್ತವ್ಯ ನಿರ್ವಹಿಸಬೇಕು ಎಂಬ ಆಶಯದಲ್ಲಿ ತಿರಂಗಾಯಾತ್ರೆ ಹಮ್ಮಿಕೊಳ್ಳಲಾಗಿದೆ. ಯುವಜನರಲ್ಲಿ ದೇಶಪ್ರೇಮ ಮತ್ತು ರಾಷ್ಟ್ರಭಕ್ತಿಯ ಭಾವನೆ ಬೆಳೆಸುವಲ್ಲಿ ಇಂತಹ ಕಾರ್ಯಕ್ರಮಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದರು.

ಮಾಜಿ ಶಾಸಕ ಜಿ. ಸೋಮಶೇಖರ ರೆಡ್ಡಿ, ಪಾಲಿಕೆ ಸದಸ್ಯರಾದ ಗುಡಿಗಂಟಿ ಹನುಮಂತು, ಸುರೇಖಾ ಮಲ್ಲನಗೌಡ, ಕೆ. ಹನುಮಂತಪ್ಪ, ಗುರ್ರಂ ವೆಂಕಟರಮಣ, ರಾಜೇಶ್, ಹಲಕುಂದಿ ಮಲ್ಲಿಕಾರ್ಜುನ, ಹಂಪಿ ರಮಣಾ, ಉಜ್ವಲಾ ಪಾಲ್ಗೊಂಡಿದ್ದರು. ತಿರಂಗಾ ಯಾತ್ರೆಯ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಕೆಲಕಾಲ ಜನದಟ್ಟಣೆ ಕಂಡುಬಂದಿತು. ರಾಷ್ಟ್ರಧ್ವಜ ಹಿಡಿದು ಸಾಗಿದ ಕಾರ್ಯಕರ್ತರು ಶಿಸ್ತಿನಿಂದ ಮೆರವಣಿಗೆಯಲ್ಲಿ ಭಾಗವಹಿಸಿ ಸ್ವಾತಂತ್ರ್ಯೋತ್ಸವದ ಸಂಭ್ರಮವನ್ನು ಹೆಚ್ಚಿಸಿದರು. ಯಾತ್ರೆಯುದ್ದಕ್ಕೂ ದೇಶಭಕ್ತಿಯ ಘೋಷಣೆಗಳು ಮೊಳಗಿದವು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ ಸ್ಮರಿಸಿ ರಾಜು: ಕುರಡಗಿ
ಹೆಚ್ಚುತ್ತಿರುವ ಅಪ್ರಾಪ್ತರ ಗರ್ಭಿಣಿ ಪ್ರಕರಣಕ್ಕೆ ಕಡಿವಾಣ ಹಾಕಿ