ಬಳ್ಳಾರಿ ಕನ್ನಡ ಸಾಹಿತ್ಯ ಸಮ್ಮೇಳನ ಮುಂದಕ್ಕೆ?

KannadaprabhaNewsNetwork |  
Published : Oct 13, 2025, 02:01 AM ISTUpdated : Oct 13, 2025, 05:32 AM IST
ಕನ್ನಡ | Kannada Prabha

ಸಾರಾಂಶ

ಗಣಿನಾಡು ಬಳ್ಳಾರಿಯಲ್ಲಿ ಇದೇ ಡಿಸೆಂಬರ್‌ 26ರಿಂದ 3 ದಿನಗಳ ಕಾಲ ನಡೆಯಬೇಕಿರುವ ಬಹುನಿರೀಕ್ಷಿತ ‘ಅಖಿಲ ಭಾರತ 87ನೇ ಕನ್ನಡ ಸಾಹಿತ್ಯ ಸಮ್ಮೇಳನ’ದ ಬಗ್ಗೆ ಈವರೆಗೆ ಯಾವುದೇ ಸೂಕ್ತ ತಯಾರಿಯೇ ಆಗಿಲ್ಲ. ಹೀಗಾಗಿ ಸಮ್ಮೇಳನ ಮುಂದೂಡುವ ಸಾಧ್ಯತೆ ಹೆಚ್ಚಿದೆ.

 ಮಲ್ಲಿಕಾರ್ಜುನ ಸಿದ್ದಣ್ಣವರ

 ಹುಬ್ಬಳ್ಳಿ :  ಗಣಿನಾಡು ಬಳ್ಳಾರಿಯಲ್ಲಿ ಇದೇ ಡಿಸೆಂಬರ್‌ 26ರಿಂದ 3 ದಿನಗಳ ಕಾಲ ನಡೆಯಬೇಕಿರುವ ಬಹುನಿರೀಕ್ಷಿತ ‘ಅಖಿಲ ಭಾರತ 87ನೇ ಕನ್ನಡ ಸಾಹಿತ್ಯ ಸಮ್ಮೇಳನ’ದ ಬಗ್ಗೆ ಈವರೆಗೆ ಯಾವುದೇ ಸೂಕ್ತ ತಯಾರಿಯೇ ಆಗಿಲ್ಲ. ಹೀಗಾಗಿ ಸಮ್ಮೇಳನ ಮುಂದೂಡುವ ಸಾಧ್ಯತೆ ಹೆಚ್ಚಿದೆ.

ಕಸಾಪ ಕಾರ್ಯಕಾರಿಣಿ ಮತ್ತು ಸಾಮಾನ್ಯ ಸಭೆಗಳೇ ನಡೆಯುತ್ತಿಲ್ಲ, ಸರ್ವಾಧ್ಯಕ್ಷರ ಘೋಷಣೆಯೂ ಆಗಿಲ್ಲ, ಸಮ್ಮೇಳನದ ಪೂರ್ವ ಸಿದ್ಧತೆಗಳ ಕುರಿತು ವಿವಿಧ ಸಭೆಗಳನ್ನು ಮಾಡಲು ಕಸಾಪಕ್ಕೆ ಈವರೆಗೆ ಸಾಧ್ಯವಾಗಿಲ್ಲ.

ಈ ಎಲ್ಲಾ ಇಲ್ಲಗಳ ಮಧ್ಯೆ, ಈ ಬಾರಿ ತುಸು ವಿಪರೀತ ಎನ್ನುವಂತೆ ಮಳೆಯೂ ಸುರಿಯುತ್ತಿದೆ. ಸಮ್ಮೇಳನಕ್ಕೆ ನಿಗದಿಪಡಿಸಿದ ದಿನಾಂಕ ತಿಂಗಳೊಪ್ಪತ್ತಿನ ಸಮೀಪದಲ್ಲಿದೆ. ಇಷ್ಟು ಅಲ್ಪ ಅವಧಿಯಲ್ಲಿ ಸಮ್ಮೇಳನದ ಸಂಪೂರ್ಣ ಸಿದ್ಧತೆ ಮಾಡಿಕೊಳ್ಳುವುದು ಖಂಡಿತ ಅಸಾಧ್ಯ ಎನ್ನುವ ಮಾತು ಸಾಹಿತ್ಯ ವಲಯದಲ್ಲಿ ಕೇಳಿ ಬರುತ್ತಿದೆ. 

ಗೊಂದಲದಲ್ಲಿ ಕಸಾಪ:

ಈ ಸಾಹಿತ್ಯ ಸಮ್ಮೇಳನದ ಕರ್ಣಧಾರತ್ವ ವಹಿಸಿಕೊಂಡು ಸಂಭ್ರಮದಿಂದ ಕಾರ್ಯಕ್ರಮ ಸಂಘಟಿಸಬೇಕಿದ್ದ ಕಸಾಪ ಗೊಂದಲದ ಗೂಡಾಗಿದೆ. ಇದೇ ನ. 4ರಂದು ಜಮಖಂಡಿಯಲ್ಲಿ ನಡೆಯಬೇಕಿದ್ದ ಪರಿಷತ್ತಿನ ಕಾರ್ಯಕಾರಿಣಿ ಸಭೆ, ವಿವಿಧ ಕಾರಣಗಳಿಂದ ರದ್ದಾಗಿದೆ. ಅದರಂತೆ, ಸತ್ಯಕಾಮ ಅವರ ಕರ್ಮಭೂಮಿ ಕಲ್ಲಹಳ್ಳಿಯಲ್ಲಿ ನ.5ರಂದು ನಡೆಯಬೇಕಿದ್ದ ಕಸಾಪ ಸಾಮಾನ್ಯ ಸಭೆಯೂ ವಿವಿಧ ಕಾರಣಗಳಿಂದ ರದ್ದಾಗಿದ್ದು, ಕಸಾಪದೊಳಗೆ ಎಲ್ಲವೂ ಸರಿ ಇಲ್ಲ ಎನ್ನುವುದನ್ನು ಸಾರಿ ಹೇಳುತ್ತಿದೆ.

ಕಳೆದ ವರ್ಷ ಮಂಡ್ಯದಲ್ಲಿ ನಡೆದ 86ನೇ ಸಮ್ಮೇಳನದಲ್ಲಿ ಆಗಿರುವ ಹಣದ ದುರುಪಯೋಗ ಕುರಿತಂತೆ ತನಿಖೆ ಶುರುವಾಗಿದೆ. ಈ ಮಧ್ಯೆ, ಬಳ್ಳಾರಿ ಸಮ್ಮೇಳನಕ್ಕೆ ತಗಲುವ ಖರ್ಚು-ವೆಚ್ಚಕ್ಕಾಗಿ ರಾಜ್ಯ ಸರ್ಕಾರ ಈವರೆಗೆ ತಾನು ನೀಡಬೇಕಿರುವ ಅನುದಾನವನ್ನೂ ಘೋಷಿಸಿಲ್ಲ. ಹೀಗಾಗಿ, ಬಳ್ಳಾರಿ ಸಮ್ಮೇಳನದ ಬಗ್ಗೆ ಅನಿಶ್ಚಿತತೆ ಶುರುವಾಗಿದೆ. 

ಸರ್ವಾಧ್ಯಕ್ಷರು ಯಾರು?:

ಹಿಂದಿನ ಬಹುತೇಕ ಸಮ್ಮೇಳನಗಳಲ್ಲಿ ಯಾವುದೇ ಗೊಂದಲವಿಲ್ಲದೇ ಸರ್ವಾಧ್ಯಕ್ಷರನ್ನು ಆಯ್ಕೆ ಮಾಡುವ ಮೂಲಕ ಸಾಹಿತಿಗಳು ಮತ್ತು ಕನ್ನಡ ಪ್ರೇಮಿಗಳಲ್ಲಿ ಸಮ್ಮೇಳನದ ಹುರುಪು-ಹುಮ್ಮಸ್ಸಿನ ವಿಶ್ವಾಸ ಮೂಡಿಸಲಾಗುತ್ತಿತ್ತು. ಈ ಬಾರಿ ಆ ಯಾವ ಭರವಸೆಯ ಮಾತುಗಳು ಈವರೆಗೂ ಯಾರಿಂದಲೂ ಕೇಳಿ ಬಂದಿಲ್ಲ. ಸರ್ವಾಧ್ಯಕ್ಷರು ಯಾರು? ಎನ್ನುವುದು ದೊಡ್ಡ ಪ್ರಶ್ನೆಯಾಗಿದೆ.

ಬೂಕರ್‌ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್‌ ಅವರನ್ನು ಸಮ್ಮೇಳನದ ಸರ್ವಾಧ್ಯಕ್ಷೆ ಮಾಡಲು ಕಸಾಪ ಚಿಂತಿಸಿತ್ತು. ಆದರೆ, ಈ ಮಧ್ಯೆ ಹುಟ್ಟಿಕೊಂಡ ಕೆಲವು ಅನುಚಿತ ಬೆಳವಣಿಗೆಗಳು ಆ ಆಸೆಯನ್ನು ಕಮರುವಂತೆ ಮಾಡಿವೆ. ಈ ಹಿನ್ನೆಲೆಯಲ್ಲಿ ಹಲವರತ್ತ ಕಸಾಪದ ಚಿತ್ತ ನೆಟ್ಟಿದೆ. ಅದರಲ್ಲೂ ಈ ಬಾರಿ ಮಹಿಳಾ ಸಾಹಿತಿಗೇ ಸರ್ವಾಧ್ಯಕ್ಷ ಪಟ್ಟ ಕಟ್ಟುವ ಕನಸನ್ನು ಇನ್ನೂ ಜೀವಂತ ಇಟ್ಟುಕೊಂಡಿರುವ ಕಸಾಪ, ಸೂಕ್ತರಿಗಾಗಿ ಶೋಧ ಮುಂದುವರಿಸಿದೆ.

ಮುಂದೂಡಿಕೆ ಅನಿವಾರ್ಯ

ಮಂಡ್ಯ ಸಮ್ಮೇಳನದ ಖರ್ಚು-ವೆಚ್ಚದ ಬಗ್ಗೆ ತನಿಖೆ ನಡೆಯುತ್ತಿರುವುದರಿಂದ, ಕಸಾಪಕ್ಕೆ ಕಾರ್ಯಕಾರಿಣಿ ಮತ್ತು ಸಾಮಾನ್ಯ ಸಭೆಯನ್ನೂ ನಡೆಸಲು ಸಾಧ್ಯವಾಗಿಲ್ಲ. ಈವರೆಗೆ ಸಮ್ಮೇಳನದ ಯಾವುದೇ ಸಿದ್ಧತೆಗಳು ನಡೆದಿಲ್ಲ. ಹಾಗಾಗಿ, ಡಿ.26ರಿಂದ ಬಳ್ಳಾರಿಯಲ್ಲಿ 87ನೇ ಸಮ್ಮೇಳನ ನಡೆಸುವುದು ಕಷ್ಟಸಾಧ್ಯವಾಗಿದ್ದು, ಮುಂದೂಡುವುದು ಅನಿವಾರ್ಯವಾಗಿದೆ.

- ಡಾ.ಎಲ್‌.ಆರ್.ಅಂಗಡಿ, ಅಧ್ಯಕ್ಷರು, ಕಸಾಪ ಧಾರವಾಡ ಜಿಲ್ಲೆ.

ಮುಂದೂಡಿಕೆ ಏಕೆ?

- ಸಾಹಿತ್ಯ ಪರಿಷತ್ತು ವಿವಿಧ ಕಾರಣಗಳಿಂದ ಗೊಂದಲದ ಗೂಡು

- ಕಸಾಪ ಕಾರ್ಯಕಾರಿಣಿ, ಸಾಮಾನ್ಯ ಸಭೆಯೇ ನಡೆಯುತ್ತಿಲ್ಲ

- ಸರ್ಕಾರದಿಂದ ಸಮ್ಮೇಳನಕ್ಕೆ ಅನುದಾನ ಘೋಷಣೆಯಾಗಿಲ್ಲ

- ಈವರೆಗೆ ಅಧ್ಯಕ್ಷರು ಯಾರೆಂಬ ಘೋಷಣೆಯೇ ಹೊರಬಿದ್ದಿಲ್ಲ

- ಮಂಡ್ಯ ಸಾಹಿತ್ಯ ಸಮ್ಮೆಳನದ ಖರ್ಚು-ವೆಚ್ಚದ ತನಿಖೆ ಪ್ರಗತಿ

- ಈ ಎಲ್ಲ ವಿವಿಧ ಕಾರಣಳಿಂದ ತೂಗುಯ್ಯಾಲೆಯಲ್ಲಿ ಸಮ್ಮೇಳನ

PREV
Read more Articles on

Recommended Stories

ಬಂಡಿಗಣಿಯಲ್ಲಿಂದು ಸರ್ವಧರ್ಮ ಮಹಾಸಂಗಮ: ಸಿಎಂ ಭಾಗಿ
ಆರೆಸ್ಸೆಸ್‌ ಬೆಳವಣಿಗೆ ಕೆಲ ಶಕ್ತಿ, ಸಂಘಟನೆಗಳಿಗೆ ಸಹಿಸಲಾಗ್ತಿಲ್ಲ: ಅರುಣಕುಮಾರ