ಮಂಜುನಾಥ ಕೆ.ಎಂ. ಬಳ್ಳಾರಿ
ರಜನಿ ಲಕ್ಕ ಅವರು ಈಜುಕೊಳದಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಾಲ್ಕು ಪದಕಗಳನ್ನು ಬಾಚಿಕೊಂಡಿದ್ದಾರೆ. ಆ ಮೂಲಕ ಬಳ್ಳಾರಿಯ ಕೀರ್ತಿಯನ್ನು ಏಷ್ಯನ್ ಕ್ರೀಡಾಂಗಣದಲ್ಲಿ ಬೆಳಗಿಸಿದ್ದಾರೆ.
ಬೆಂಗಳೂರಿನ ಯಲಹಂಕದ ‘ದ್ರಾವಿಡ್ ಸೆಂಟರ್ ಫಾರ್ ಸ್ಪೋರ್ಟ್ಸ್ ಎಕ್ಸಲೆನ್ಸ್’ನಲ್ಲಿ ಅಕ್ಟೋಬರ್ 4ರಿಂದ 10ರವರೆಗೆ ನಡೆದ 2ನೇ ಏಷ್ಯನ್ ಮಾಸ್ಟರ್ಸ್ ಸ್ವಿಮ್ಮಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ರಜನಿ ಲಕ್ಕ ಅವರು ಒಂದು ಚಿನ್ನ, ಎರಡು ಬೆಳ್ಳಿ ಹಾಗೂ ಒಂದು ಕಂಚಿನ ಪದಕ ಗೆದ್ದು ಗಮನ ಸೆಳೆದಿದ್ದಾರೆ.ನೀರಿನಲ್ಲೇ ಚಿನ್ನದ ಬೇಟೆ: 65ರಿಂದ 69 ವರ್ಷ ವಯೋಮಾನದ ವಿಭಾಗದಲ್ಲಿ ಸ್ಪರ್ಧಿಸಿದ್ದ ರಜನಿ ಲಕ್ಕ ಅವರು 200 ಮೀಟರ್ ಬಟರ್‌ಫ್ಲೈ ಸ್ಪರ್ಧೆಯಲ್ಲಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ. 100 ಮೀಟರ್ ಬಟರ್‌ಫ್ಲೈ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿರುವ ಅವರು, 400 ಮೀಟರ್ ಇಂಡಿವಿಜುಯಲ್ ಮೆಡ್ಲೆ(ಐಎಂ) ವಿಭಾಗದಲ್ಲೂ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದಾರೆ. 200 ಮೀಟರ್ ಇಂಡಿವಿಜುಯಲ್ ಮೆಡ್ಲೆ (ಐಎಂ) ಸ್ಪರ್ಧೆಯಲ್ಲಿ ಕಂಚಿನ ಪದಕ ಗಳಿಸುವ ಮೂಲಕ ಒಟ್ಟು ನಾಲ್ಕು ಪದಕಗಳ ಸಾಧನೆ ಮಾಡಿದ್ದಾರೆ.
ಒಂಬತ್ತು ದೇಶಗಳ ಕ್ರೀಡಾಪಟುಗಳ ಸಂಗಮ: ಏಷ್ಯನ್ ಮಾಸ್ಟರ್ಸ್ ಈಜು ಚಾಂಪಿಯನ್‌ಶಿಪ್‌ನಲ್ಲಿ ಭಾರತ, ಜಪಾನ್, ಚೀನಾ, ಮಲೇಷಿಯಾ, ಶ್ರೀಲಂಕಾ, ಇರಾನ್, ಥೈಲ್ಯಾಂಡ್, ಓಮನ್ ಹಾಗೂ ದಕ್ಷಿಣ ಕೊರಿಯಾ ಸೇರಿದಂತೆ ಒಂಬತ್ತು ದೇಶಗಳ ಒಟ್ಟು 1,320 ಕ್ರೀಡಾಪಟುಗಳು ಭಾಗವಹಿಸಿದ್ದರು. ವಿವಿಧ ವಯೋಮಾನದ ವಿಭಾಗಗಳಲ್ಲಿ ನಡೆದ ಈ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿ ನಾಲ್ಕು ಪದಕಗಳನ್ನು ಗೆದ್ದಿರುವ ರಜನಿ ಲಕ್ಕ ಅವರ ಸಾಧನೆ ಬಳ್ಳಾರಿ ಜಿಲ್ಲೆಯ ಕ್ರೀಡಾ ಕ್ಷೇತ್ರಕ್ಕೆ ಹೆಮ್ಮೆ ತಂದಿದೆ.
ಅರವತ್ತು ದಾಟಿದರೆ ಸಾಧನೆಯ ಹಾದಿ ಮುಗಿಯಿತು ಎಂದುಕೊಳ್ಳುವವರಿಗೆ ರಜನಿ ಲಕ್ಕ ಅವರ ಈಜಿನ ಸಾಧನೆ ಹೊಸ ಸಂದೇಶ ನೀಡಿದೆ. ಸಾಧಿಸುವ ಛಲವಿದ್ದರೆ ವಯಸ್ಸು ಅಡ್ಡಿಯಾಗದು; ಆತ್ಮವಿಶ್ವಾಸವಿದ್ದರೆ ಗೆಲುವಿನ ದಡ ಸೇರಬಹುದು ಎಂಬುದನ್ನು ಅವರು ಸಾಬೀತುಪಡಿಸಿದ್ದಾರೆ.
ನಾಲ್ಕು ಸ್ಪರ್ಧೆ, ನಾಲ್ಕು ಪದಕ
ಬೆಳ್ಳಿ: 100 ಮೀಟರ್ ಬಟರ್‌ಫ್ಲೈ
ಕಂಚು: 200 ಮೀಟರ್ ಇಂಡಿವಿಜುಯಲ್ ಮೆಡ್ಲೆ(ಐಎಂ)