ಹೊಸಕೋಟೆ: ಬೆಂಗಳೂರು ಹಾಲು ಒಕ್ಕೂಟ ಹೈನುಗಾರರ ಶ್ರೇಯೋಭಿವೃದ್ಧಿಗೆ ಜತೆಗೆ ಬಮುಲ್ ಕಲ್ಯಾಣ ಟ್ರಸ್ಟ್ ಅಡಿಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಸಾಮಾಜಿಕ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ಬಮೂಲ್ ಕಲ್ಯಾಣ ಟ್ರಸ್ಟ್ ವತಿಯಿಂದ ಗ್ರಾಮೀಣ ಪ್ರದೇಶಗಳಲ್ಲಿ ಹೈಮಾಸ್ಟ್ ದೀಪಗಳ ಅಳವಡಿಕೆ, ಮೂಲಸೌಕರ್ಯ ಅಭಿವೃದ್ಧಿ ಸೇರಿದಂತೆ ವಿವಿಧ ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಗ್ರಾಮಗಳ ಪ್ರಮುಖ ವೃತ್ತಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಬೆಳಕಿನ ವ್ಯವಸ್ಥೆ ಕಲ್ಪಿಸುವುದರಿಂದ ರಾತ್ರಿ ಜನರು ಮತ್ತು ವಾಹನ ಸಂಚಾರಕ್ಕೆ ಅನುಕೂಲವಾಗಲಿದೆ. ಹೈನುಗಾರರ ಕಲ್ಯಾಣದ ಜತೆಗೆ ಗ್ರಾಮೀಣರ ಜೀವನಮಟ್ಟ ಸುಧಾರಣೆಗೂ ಟ್ರಸ್ಟ್ ಕೊಡುಗೆ ನೀಡುತ್ತಿರುವುದು ಮಾದರಿ ಕೆಲಸ ಎಂದರು.
ಬಮುಲ್ ನಿರ್ದೇಶಕ ಬಿ.ವಿ.ಸತೀಶ್‌ಗೌಡ ಮಾತನಾಡಿ, ಬಮುಲ್ ಕೇವಲ ಹಾಲು ಉತ್ಪಾದಕರಿಂದ ಹಾಲು ಖರೀದಿ ಮಾಡುವುದಷ್ಟೇ ಅಲ್ಲ. ಬಮುಲ್ ಕಲ್ಯಾಣ ಟ್ರಸ್ಟ್‌ನಿಂದ ಶುದ್ಧ ಕುಡಿಯುವ ನೀರಿನ ಘಟಕ, ಹೈಮಾಸ್ಟ್ ದೀಪ, ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಆರೋಗ್ಯ ವಿಮೆ ಹಾಗೂ ವೈದ್ಯಕೀಯ ನೆರವು ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ನಿರಂತರವಾಗಿ ರೂಪಿಸುತ್ತಿದೆ. ಬೆಂಗಳೂರು ನಗರ, ಗ್ರಾಮಾಂತರ ಹಾಗೂ ರಾಮನಗರ ಮೂರು ಜಿಲ್ಲೆಗಳಲ್ಲಿ ಬಮುಲ್ ಉತ್ತಮ ಕಾರ್ಯಗಳನ್ನು ಮಾಡುತ್ತಿದೆ ಎಂದರು.ಈ ವೇಳೆ ರಾಜ್ಯ ಒಕ್ಕಲಿಗರ ಸಂಘದ ಮಾಜಿ ನಿರ್ದೇಶಕ ಗೋಪಾಲಗೌಡ, ಯುವ ಮುಖಂಡ ನಾರಾಯಣಗೌಡ, ತಾಪಂ ಮಾಜಿ ಅಧ್ಯಕ್ಷ ವೆಂಕಟೇಶ್, ಗ್ರಾಮಸ್ಥರು ಉಪಸ್ಥಿತರಿದ್ದರು.
ಹೊಸಕೋಟೆ ತಾಲೂಕಿನ ಸೊಣ್ಣಹಳ್ಳಿಪುರ ಗ್ರಾಮದಲ್ಲಿ ಬಮುಲ್ ಕಲ್ಯಾಣ ಟ್ರಸ್ಟ್ ಅಳವಡಿಸಿರುವ ಹೈಮಾಸ್ಟ್ ದೀಪಗಳಿಗೆ ಶಾಸಕ ಶರತ್ ಬಚ್ಚೇಗೌಡ ಚಾಲನೆ ನೀಡಿದರು. ಬಮುಲ್ ನಿರ್ದೇಶಕ ಬಿ.ವಿ.ಸತೀಶ್‌ಗೌಡ, ರಾಜ್ಯ ಒಕ್ಕಲಿಗರ ಸಂಘದ ಮಾಜಿ ನಿರ್ದೇಶಕ ಗೋಪಾಲಗೌಡ ಇತರರಿದ್ದರು.