ಜಿ. ಸೋಮಶೇಖರ
ಶ್ರಾವಣ ಮಾಸದ ಕೊನೆಯ ಸೋಮವಾರ ಚಿರಿಬಿ ಮೂಗಬಸವೇಶ್ವರ ರಥೋತ್ಸವ ಪರಂಪರಾಗತವಾಗಿ ನಡೆದುಕೊಂಡು ಬಂದಿತ್ತು. ೨೦೦೭ರಿಂದ ರಥೋತ್ಸವ ಬಗ್ಗೆ ಚಿರಿಬಿ ಮತ್ತು ರಾಂಪುರ ಗ್ರಾಮಸ್ಥರ ನಡುವೆ ವಿವಾದವಿದೆ. ಇದು ಒಂದು ಹಂತದಲ್ಲಿ ಸಂಘರ್ಷಕ್ಕೂ ಕಾರಣವಾಗಿ ಉಭಯ ಗ್ರಾಮಸ್ಥರ ವಿರುದ್ಧ ಪ್ರಕರಣ ದಾಖಲಾಗಿವೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಜಾತ್ರೆ ನಿಷೇಧಿಸಿ ಅಂದಿನಿಂದ ಇಂದಿನವರೆಗೆ ಆದೇಶ ಹೊರಡಿಸುತ್ತಲೇ ಬಂದಿದ್ದು, ಈ ಬಾರಿಯು ಜಾತ್ರಾ ನಿಷೇಧ ಮುಂದುವರಿದಿದೆ.
ಏನಿದು ವಿವಾದ?ಶ್ರೀ ಸ್ವಾಮಿಯ ರಥೋತ್ಸವದ ಚಕ್ರಗಳಿಗೆ ಭಕ್ತರು ಸಮರ್ಪಿಸುವ ತೆಂಗಿನಕಾಯಿ, ಬಾಳೆಹಣ್ಣು ಒಡೆಯುವ ಸಂಬಂಧ ಉಭಯ ಗ್ರಾಮಸ್ಥರ ನಡುವೆ ವಿವಾದ ಏರ್ಪಟ್ಟಿದೆ. ಎರಡೂ ಗ್ರಾಮಸ್ಥರು ಈ ವಿಚಾರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡು ತಮ್ಮ ಹಕ್ಕು ಪ್ರತಿಪಾದಿಸಿದರು. ಯಾರು ಕೂಡ ಪಟ್ಟು ಸಡಿಲಿಸಲು ಮುಂದಾಗಲೇ ಇಲ್ಲ. ಈ ವಿವಾದವೇ ಇಡೀ ರಥೋತ್ಸವ ಮತ್ತು ಜಾತ್ರೆ ನಿಲ್ಲಿಸುವ ಮಟ್ಟಿಗೆ ಹೋಯಿತು. ಅಲ್ಲದೇ ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದೆ.
ಚಿರಿಬಿ ಮೂಗಬಸವೇಶ್ವರಗೆ ಕೊಟ್ಟೂರು ಮತ್ತು ಸುತ್ತಮುತ್ತಲಿನ ಭಾಗದಲ್ಲಿ ಅಪಾರ ಸಂಖ್ಯೆಯ ಭಕ್ತರಿದ್ದಾರೆ. ಈ ರಥೋತ್ಸವ ಸಾಂಸ್ಕೃತಿಕ, ಧಾರ್ಮಿಕ ಪರಂಪರೆ ಬೆಳೆಸಿಕೊಂಡು ಬಂದಿತ್ತು. ಜಾತ್ರೆ ನಡೆಯುವ ಮೂರು ದಿನಗಳಲ್ಲಿ ಕುಸ್ತಿ ಪಂದ್ಯಾಟ ಸಹ ನಡೆಯುತ್ತಿತ್ತು. ಇದೊಂದು ಶ್ರಾವಣ ಮಾಸದಲ್ಲಿ ನಡೆಯುವ ಅಪರೂಪದ ರಥೋತ್ಸವ ಎಂಬಂತಿತ್ತು. ಆದರೆ ೧೭ ವರ್ಷಗಳಿಂದ ಜಾತ್ರೆ ಸ್ಥಗಿತಗೊಂಡಿರುವುದು ಭಕ್ತರಲ್ಲಿ ತೀವ್ರ ಬೇಸರ ಮತ್ತು ಅಸಮಾಧಾನ ತಂದಿದೆ.ಪೊಲೀಸ್ ಬಂದೋಬಸ್ತ್:
ಚಿರಿಬಿ, ರಾಂಪುರದ ನಡುವಿನ ಈ ಸಂಬಂಧದ ತಗಾದೆ ಈಗಲೂ ನ್ಯಾಯಾಲಯದಲ್ಲಿ ಮುಂದುವರಿದಿದೆ. ಹಾಗಾಗಿ ಜಾತ್ರೆಯನ್ನು ಈ ಬಾರಿಯೂ ನಡೆಸದೇ ಯಥಾಸ್ಥಿತಿ ಕಾಪಾಡಿಕೊಳ್ಳಲು ಡಿವೈಎಸ್ಪಿ ಮೂಲಕ ವಿಜಯನಗರ ಜಿಲ್ಲಾಧಿಕಾರಿಗೆ ಕೊಟ್ಟೂರು ಪೊಲೀಸ್ ಠಾಣೆಯಿಂದ ಮನವಿ ಸಲ್ಲಿಸಲಾಗಿತ್ತು. ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಸೆ.೨ರಂದು ಯಾವುದೇ ಬಗೆಯ ಜಾತ್ರಾ ಮಹೋತ್ಸವ ನಡೆಯುವಂತಿಲ್ಲ ಎಂದು ಆದೇಶಿಸಿದ್ದಾರೆ. ಚಿರಿಬಿ ಮೂಗಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಯಾವುದೇ ಜಾತ್ರಾ ಕಾರ್ಯಕ್ರಮಗಳು ನಡೆಯದಂತೆ ವ್ಯಾಪಕ ಪೊಲೀಸ್ ಬಂದೋಬಸ್ತ್ ಸೋಮವಾರದಿಂದ ನಿಯೋಜಿಸಲಾಗುವುದು ಎಂದು ಕೊಟ್ಟೂರು ಸರ್ಕಲ್ ಇನ್‌ಸ್ಪೆಕ್ಟರ್ ವೆಂಕಟಸ್ವಾಮಿ ತಿಳಿಸಿದ್ದಾರೆ.ಚಿರಿಬಿ ಮೂಗಬಸವೇಶ್ವರ ರಥೋತ್ಸವ ಪ್ರಕ್ರಿಯೆಗೆ ನಿರಂತರ ತಡೆಯುಂಟಾಗುತ್ತಿರುವುದು ಬೇಸರ ತರಿಸಿದೆ. ಒಣಪ್ರತಿಷ್ಠೆಗೆ ಜಾತ್ರೆ ನಡೆಯದಂತಾಗಿದೆ. ಮುಂಬರುವ ವರ್ಷದಲ್ಲಾದರೂ ಈ ಗೊಂದಲ ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಮುಖಂಡರು ಮುಂದಾಗಬೇಕು ಎನ್ನುತ್ತಾರೆ ಕೊಟ್ರೇಶ ಕೊಟ್ಟೂರು.