ಕನ್ನಡಪ್ರಭ ವಾರ್ತೆ ಸುರಪುರ
ತಾಲೂಕಿನ ದೇವಿಕೇರಾ ಗ್ರಾಮದ ಗ್ರಾಮದೇವತೆಗಳ ಜಾತ್ರೆಯಲ್ಲಿ ಪ್ರಾಣಿಬಲಿ ತಡೆ ಸಂಪೂರ್ಣ ಯಶಸ್ವಿಯಾಗಿದ್ದು, ಜಿಲ್ಲಾಡಳಿತ, ಪೊಲೀಸರು, ಮಾಧ್ಯಮಗಳು ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ. ಅಲ್ಲದೆ ಗ್ರಾಮಸ್ಥರ ಸಹಕಾರ ಮಾತಿನಲ್ಲಿ ವರ್ಣಿಸಲು ಸಾಧ್ಯವಿಲ್ಲ ಎಂದು ಬೆಂಗಳೂರಿನ ಬಸವ ಧರ್ಮ ಜ್ಞಾನ ಪೀಠದ ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ, ಪಶು-ಪ್ರಾಣಿ ಬಲಿ ನಿರ್ಮೂಲನ ಜಾಗೃತಿ ಮಾಹಾಸಂಘ ಅಧ್ಯಕ್ಷರಾದ ದಯಾನಂದ ಸ್ವಾಮೀಜಿ ತಿಳಿಸಿದರು.ನಗರದಲ್ಲಿ ಪ್ರಾಣಿ ಬಲಿ ತಡೆಯುವಂತೆ ಪ್ರಚಾರ ಮಾಡುತ್ತಾ ಮಾತನಾಡಿದ ಅವರು, ಜಾತ್ರೆಗಳಲ್ಲಿ ನಡೆಯುವ ಪ್ರಾಣಿ ಬಲಿ ಹಾಗೂ ಗೋ ಹತ್ಯೆಯನ್ನು ತಡೆಗಟ್ಟಲು ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಎಂಬುದಾಗಿ ಹೈಕೋರ್ಟ್ ಆದೇಶ ನೀಡಿದೆ. ಇದನ್ನು ಅಧಿಕಾರಿಗಳಿಗೆ ಮತ್ತು ಗ್ರಾಮಸ್ಥರಿಗೆ ಮನವಿ ಮಾಡಿಕೊಡಲಾಯಿತು ಎಂದರು.
ದೇವಿಕೇರಾದ ಗ್ರಾಮ ದೇವತೆಗಳ ಜಾತ್ರೆಯಲ್ಲಿ ಕೋಣ, ಕುರಿ, ಆಡು ಕೋಳಿ ಮುಂತಾದ ಯಾವುದೇ ಪ್ರಾಣಿಗಳ ಬಲಿ ತಡೆದಿರುವುದು ಸಂಪೂರ್ಣ ಯಶಸ್ವಿಯಾಗಿದೆ. ಭಾರತೀಯ ಧಾರ್ಮಿಕ ಕ್ಷೇತ್ರದಲ್ಲಿ ಮತ್ತೊಂದು ಐತಿಹಾಸಿಕ ಮೈಲಿಗಲ್ಲಾಗಿ ಸ್ಥಾಪಿಸಲ್ಪಟ್ಟಿದೆ ಎಂದರು.ಪ್ರಸ್ತಕ್ತ ವರ್ಷ ಕರ್ನಾಟಕ ಹೈಕೋರ್ಟ್ ಆದೇಶ ಮತ್ತು ಕರ್ನಾಟಕ ಪ್ರಾಣಿ ಬಲಿ ಪ್ರತಿಬಂಧಕ ಅಧಿನಿಯಮ 1959ರ ಅಡಿಯಲ್ಲಿ ಯಾದಗಿರಿ ಜಿಲ್ಲಾಡಳಿತ, ಜಿಲ್ಲಾಧಿಕಾರಿ ಡಾ. ಸುಶೀಲಾ ಹಾಗೂ ಜಿಲ್ಲಾ ಎಸ್‌ಪಿ ಸಂಗೀತಾ ನೇತೃತ್ವದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು 200ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ, ವಿವಿಧ ಇಲಾಖೆಗಳ ಅಧಿಕಾರಿಗಳು ಮುಂಜಾಗೃತಾ ಕ್ರಮ ಕೈಗೊಂಡು ಪ್ರಾಣಿಬಲಿ ತಡೆದಿದ್ದಾರೆ ಎಂದು ತಿಳಿಸಿದರು.
ದೇವಿಕೇರಾ ಜಾತ್ರೆಯ ಸಮಯದಲ್ಲಿ ಇಡೀ ರಾತ್ರಿ ನಮ್ಮ ಜತೆ ಶರಣಪ್ಪ ಕಮ್ಮಾರ, ರೋಹಿತ್ ಮುಂತಾದವರ ತಂಡದ ಜೊತೆ ಜಾತ್ರೆಯಲ್ಲಿ ಬೀಡುಬಿಟ್ಟು ಜಾಗೃತಿ ಮೂಡಿಸಲಾಯಿತು. ಇದರಿಂದ ಪ್ರಾಣಿಬಲಿ ತ್ಯಜಿಸಿ ಅಹಿಂಸಾತ್ಮಕವಾಗಿ ಸಾತ್ವಿಕ ಪೂಜೆ ಸಲ್ಲಿಸಿದ್ದಾರೆ ಎಂದರು.ಸಂಪೂರ್ಣ ಮಾಂಸ ರಫ್ತು ನಿಷೇಧ ಕಾನೂನು ಹಾಗೂ ಸಂಪೂರ್ಣ ಗೋಹತ್ಯೆ ನಿಷೇದ ಕಾಯ್ದೆಯನ್ನು ಜಾರಿಗೆ ತಂದು ಭಾರತವನ್ನು ಸಂಪೂರ್ಣ ಗೋ ಹತ್ಯೆ ಮುಕ್ತ ಮತ್ತು ಮಾಂಸ ರಫ್ತು ಮುಕ್ತ ರಾಷ್ಟ್ರ ಎಂದು ಘೋಷಿಸಲು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಭಾರತ ಸರ್ಕಾರಕ್ಕೆ ಆಗ್ರಹಿಸುತ್ತಿದ್ದೇವೆ ಎಂದರು.