ಐ ಲವ್ ಮಹಮ್ಮದ್ ಬರಹದ ಫ್ಲೆಕ್ಸ್ ನಿಷೇಧಿಸಿ: ಸಿದ್ದೇಶ್ವರ್‌

KannadaprabhaNewsNetwork |  
Published : Sep 26, 2025, 01:00 AM IST
25ಕೆಡಿವಿಜಿ1, 2-ದಾವಣಗೆರೆ ಕಾರ್ಲ್ ಮಾರ್ಕ್ಸ್ ನಗರದಲ್ಲಿ ಗುಂಪಿನಿಂದ ಕಲ್ಲು ತೂರಾಟ, ಹಲ್ಲೆಗೊಳಗಾದ ಮನೆಗೆ ಭೇಟಿ ನೀಡಿ, ಕುಟುಂಬ ಸದಸ್ಯರಿಗೆ ಕೇಂದ್ರದ ಮಾಜಿ ಸಚಿವ ಡಾ.ಜಿ.ಎಂ.ಸಿದ್ದೇಶ್ವರ, ಗಾಯತ್ರಿ ಸಿದ್ದೇಶ್ವರ, ಯಶವಂತರಾವ್ ಇತರರು ಧೈರ್ಯ ಹೇಳಿದರು. ...........25ಕೆಡಿವಿಜಿ3, 4-ದಾವಣಗೆರೆ ಕಾರ್ಲ್ ಮಾರ್ಕ್ಸ್ ನಗರದಲ್ಲಿ ಗುಂಪಿನಿಂದ ಕಲ್ಲು ತೂರಾಟ, ಹಲ್ಲೆಗೊಳಗಾದ ಮನೆಗೆ ಭೇಟಿ ನೀಡಿದ್ದ  ಕೇಂದ್ರದ ಮಾಜಿ ಸಚಿವ ಡಾ.ಜಿ.ಎಂ. ಸಿದ್ದೇಶ್ವರ, ಗಾಯತ್ರಿ ಸಿದ್ದೇಶ್ವರ, ಯಶವಂತರಾವ್ ಇತರರು................25ಕೆಡಿವಿಜಿ5, 6-ದಾವಣಗೆರೆ ಕಾರ್ಲ್ ಮಾರ್ಕ್ಸ್ ನಗರದಲ್ಲಿ ಗುಂಪಿನಿಂದ ಕಲ್ಲು ತೂರಾಟ, ಹಲ್ಲೆಗೊಳಗಾದ ಬಗ್ಗೆ ವೃದ್ದೆಯೊಬ್ಬರು ಕೇಂದ್ರದ ಮಾಜಿ ಸಚಿವ ಡಾ.ಜಿ.ಎಂ. ಸಿದ್ದೇಶ್ವರ, ಗಾಯತ್ರಿ ಸಿದ್ದೇಶ್ವರ, ಯಶವಂತರಾವ್ ಇತರರಿಗೆ ವಿವರಿಸುತ್ತಿರುವುದು. ................................25ಕೆಡಿವಿಜಿ7-ದಾವಣಗೆರೆ ಕಾರ್ಲ್ ಮಾರ್ಕ್ಸ್ ನಗರದಲ್ಲಿ ಗುಂಪಿನಿಂದ ಕಲ್ಲು ತೂರಾಟ, ಹಲ್ಲೆಗೊಳಗಾದ ಘಟನೆ ಹಿನ್ನೆಲೆಯಲ್ಲಿ ಬಿದ್ದಿದ್ದ ಕಲ್ಲುಗಳನ್ನು ಮಹಜರನ್ನೇ ಮಾಡದೇ ಯಾಕೆ ತೆರವು ಮಾಡಿಸಿದ್ದೀರಿ ಎಂದು ಎಎಸ್ಪಿಗೆ ಕೇಂದ್ರದ ಮಾಜಿ ಸಚಿವ ಡಾ.ಜಿ.ಎಂ.ಸಿದ್ದೇಶ್ವರ ತರಾಟೆಗೆ ತೆಗೆದುಕೊಂಡಿರುವುದು. | Kannada Prabha

ಸಾರಾಂಶ

ಕಾರ್ಲ್ ಮಾರ್ಕ್ಸ್ ನಗರದಲ್ಲಿ ಕಲ್ಲು ತೂರಾಟ, ಹಲ್ಲೆಗೊಳಗಾದ ಮನೆಗೆ ಭೇಟಿ ನೀಡಿ, ಕುಟುಂಬ ಸದಸ್ಯರಿಗೆ ಕೇಂದ್ರದ ಮಾಜಿ ಸಚಿವ ಡಾ. ಜಿ.ಎಂ. ಸಿದ್ದೇಶ್ವರ, ಗಾಯತ್ರಿ ಸಿದ್ದೇಶ್ವರ, ಯಶವಂತ ರಾವ್ ಇತರರು ಧೈರ್ಯ ಹೇಳಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಐ ಲವ್ ಮಹಮ್ಮದ್ ಬರಹದ ಫ್ಲೆಕ್ಸ್‌ನ್ನು ರಾಜ್ಯದಲ್ಲಿ ನಿಷೇಧಿಸುವಂತೆ ಕೇಂದ್ರದ ಮಾಜಿ ಸಚಿವ, ಬಿಜೆಪಿ ಹಿರಿಯ ನಾಯಕ ಜಿ.ಎಂ. ಸಿದ್ದೇಶ್ವರ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.

ನಗರದ ಕಾರ್ಲ್ ಮಾರ್ಕ್ಸ್ ನಗದಲ್ಲಿ ಕಳೆದ ರಾತ್ರಿ ಕಲ್ಲು ತೂರಾಟ, ಹಿಂದುಗಳ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದ ಸ್ಥಳಗಳಿಗೆ ಭೇಟಿ ನೀಡಿ, ಹಲ್ಲೆಗೊಳಗಾಗಿದ್ದ ಯಮನೂರಪ್ಪ, ಗಂಗಮ್ಮ ಕುಟುಂಬಕ್ಕೆ ಧೈರ್ಯ ಹೇಳಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಉತ್ತರ ಪ್ರದೇಶ, ಮಹಾರಾಷ್ಟ್ರದಲ್ಲಿ ಐ ಲವ್ ಮಹಮ್ಮದ್ ಬರಹದ ಬ್ಯಾನರನ್ನು ನಿಷೇಧಿಸಿರುವ ಮಾಹಿತಿ ಇದೆ. ಅದೇ ರೀತಿ ನಮ್ಮ ರಾಜ್ಯದಲ್ಲೂ ಅಂತಹ ಬರಹದ ಬ್ಯಾನರ್, ಫ್ಲೆಕ್ಸ್ ನಿಷೇಧಿಸಲಿ. ಮನೆಗಳ ಮೇಲೆ ತೂರಾಡಿದ್ದಕ್ಕೆ ಸಾಕ್ಷಿಯಾಗಿದ್ದ ಕಲ್ಲುಗಳನ್ನೂ ಬಿಡದಂತೆ ಪೊಲೀಸರು ತೆರವು ಮಾಡಿದ್ದಾರೆ. ಎಫ್ಐಆರ್‌ ಮಾಡಿ, ಸ್ಥಳ ಮಹಜರು ಮಾಡುವ ಮುನ್ನವೇ ಪೊಲೀಸ್ ಇಲಾಖೆಯವರು ಕಲ್ಲುಗಳನ್ನು ಏಕೆ ತೆಗದರು? ಕಾನೂನು ಪ್ರಕಾರ ಪೊಲೀಸ್ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ನಡೆದುಕೊಳ್ಳಬೇಕು. ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ದೂರು ನೀಡಬೇಕು ಎಂದು ಕಿಡಿಕಾರಿದರು.

ಗಂಗಮ್ಮ ಕಣ್ಣೀರು:

ನೀವು ಹೆದರಿಕೊಂಡು ಜೀವನ ಹೇಗೆ ಮಾಡುತ್ತೀಯಾ? ಪೊಲೀಸರು ಕಲ್ಲು ಆರಿಸಿಕೊಂಡು ಹೋದರೆ ನೀನೇನು ಮಾಡುತ್ತೀಯಾ ಎಂದು ಗಂಗಮ್ಮನಿಗೆ ಅವರು ಪ್ರಶ್ನಿಸಿದರು. ಆಗ, ತಮ್ಮ ಮಗ ರಂಗನಾಥನನ್ನು ಪೊಲೀಸರು ಠಾಣೆಗೆ ಕರೆದೊಯ್ದಿದ್ದಾರೆ. ನಮ್ಮ ಮನೆ ಲೈನ್‌ನಲ್ಲಿ ಮೂರು ಹಿಂದೂಗಳ ಮನೆಗಳಿವೆ. ನಮ್ಮನ್ನೇ ಗುರಿಯಾಗಿಸಿಕೊಂಡು ಕಲ್ಲು ತೂರಾಟ, ದೌರ್ಜನ್ಯ ಮಾಡಿ, ಹಲ್ಲೆ ಮಾಡಿದ್ದಾರೆ ಎಂದು ಕಣ್ಣೀರು ಹಾಕಿದರು.

ಆಗ ಜಿ.ಎಂ. ಸಿದ್ದೇಶ್ವರ, ನೀವು ಪ್ರಶ್ನೆ ಮಾಡಿದ್ದು ಸರಿಯಾಗಿದೆ. ಮತ್ತೊಂದು ಕೋಮಿನವರು ಗಲಾಟೆ ಮಾಡಿದ್ದು ತಪ್ಪು. ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆಯವರು ಸರ್ಕಾರದ ಪರವಾಗಿಯೇ ಮಾತನಾಡುತ್ತಾರೆ ಎಂದು ಕಿಡಿದರು. ಆಗ ಮತ್ತೊಬ್ಬ ಮಹಿಳೆ ಮಾಲಾಶ್ರೀ, ತಮ್ಮ ಮನೆ ಎದುರಿನಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳ ಮೇಲೆ, ಮನೆಗಳ ಮೇಲೆ ಕಲ್ಲು ಎಸೆದಿದ್ದಾರೆ ಎಂದು ಅಳಲು ತೋಡಿಕೊಂಡರು.

ವೀಡಿಯೋ ಮಾಡೋದನ್ನೂ ತಡೆದರು:

ಗಂಗಮ್ಮ, ಮಾಲಾಶ್ರೀ ಸೇರಿದಂತೆ ಸ್ಥಳೀಯ ಮಹಿಳೆಯರು, ಮತ್ತೊಂದು ಕೋಮಿನವರು ಎಲ್ಲ ಪ್ಲ್ಯಾನ್ ಮಾಡಿಕೊಂಡೇ ಕಲ್ಲು ತೂರಾಟ ಮಾಡಿ, ಮನೆಗಳಿಗೆ ನುಗ್ಗಿ ದಾಂಧಲೆ ಮಾಡಿ, ಹಲ್ಲೆ ಮಾಡಿದ್ದಾರೆ. ನಾವು ಮೊಬೈಲ್‌ನಲ್ಲಿ ವೀಡಿಯೋ ಮಾಡಿಕೊಳ್ಳುವುದನ್ನೂ ತಡೆದಿದ್ದಾರೆ. ವೀಡಿಯೋ ಮಾಡುವುದು ತಪ್ಪಾ? ಮನೆ ಒಳಗೆ ನುಗ್ಗುತ್ತಿದ್ದ ಗುಂಪಿನಿಂದಾಗಿ ನಾವೆಲ್ಲರೂ ಭಯಭೀತರಾಗಿದ್ದೆವು ಎಂದು ಅವರು ಕಣ್ಣೀರಿಟ್ಟರು.

ಆಗ ಧೈರ್ಯ ಹೇಳಿದ ಜಿ.ಎಂ.ಸಿದ್ದೇಶ್ವರ್‌, ನೊಂದ ನಿವಾಸಿಗಳೊಂದಿಗೆ ನಾವಿದ್ದೇವೆ. ಮೊದಲು ಇಲಾಖೆಯಿಂದ ಈ ಕುಟುಂಬಗಳಿಗೆ ಸೂಕ್ತ ರಕ್ಷಣೆ ಭದ್ರತೆ ಕಲ್ಪಿಸಿ. ಐದು ನೂರಕ್ಕೂ ಹೆಚ್ಚು ಜನ ಗುಂಪು ಕಟ್ಟಿಕೊಂಡು ಬಂದು, ಕಲ್ಲು, ದೊಣ್ಣೆ ಹಿಡಿದು, ದಾಳಿ ಮಾಡಿ, ಅವಾಚ್ಯವಾಗಿ ನಿಂದಿಸಿ, ಭಯ ಹುಟ್ಟು ಹಾಕಿದರೆ ಕೆಲವೇ ಕುಟುಂಬ, ಮಕ್ಕಳು, ಮಹಿಳೆಯರು ಏನು ಮಾಡಬೇಕು ಎಂದು ಪೊಲೀಸರ ವಿರುದ್ಧ ಅಸಮಾಧಾನಗೊಂಡರು.

ಈ ಸಂದರ್ಭ ಬಿಜೆಪಿ ಮುಖಂಡರಾದ ಗಾಯತ್ರಿ ಸಿದ್ದೇಶ್ವರ, ದೂಡಾ ಮಾಜಿ ಅಧ್ಯಕ್ಷರಾದ ಯಶವಂತ ರಾವ್ ಜಾಧವ್, ರಾಜನಹಳ್ಳಿ ಶಿವಕುಮಾರ, ವಕೀಲ ಎ.ವೈ. ಪ್ರಕಾಶ, ಎಸ್‌ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ ಟಿ.ದಾಸಕರಿಯಪ್ಪ, ಪಕ್ಷದ ಮಾಜಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್. ಜಗದೀಶ, ಮಾಜಿ ಮೇಯರ್ ಕೆ.ಆರ್.ವಸಂತ ಕುಮಾರ, ಬಿ.ರಮೇಶ ನಾಯ್ಕ, ಬಾತಿ ವೀರೇಶ ದೊಗ್ಗಳ್ಳಿ, ಜಯಪ್ರಕಾಶ, ಎಸ್.ಟಿ.ಯೋಗೇಶ್ವರ, ದುಗ್ಗೇಶ, ಶಿವು, ಗಣೇಶ, ಶಿವನಗೌಡ, ಜಗದೀಶ ಕುಮಾರ ಪಿಸೆ ಇತರರು ಇದ್ದರು. * ದಾವಣಗೆರೇಲಿ ಹಿಂದೂಗಳೇ ಬಹುಸಂಖ್ಯಾತರು: ಸಿದ್ದೇಶ್ವರ್‌

ದಾವಣಗೆರೆ: ಸುಮಾರು 500ಕ್ಕೂ ಹೆಚ್ಚು ಜನರ ಗುಂಪು ಹಿಂದೂಗಳ ಮನೆಗೆ ನುಗ್ಗಿ, ಹಲ್ಲೆ, ದೌರ್ಜನ್ಯ ಮಾಡಿದ್ದಾರೆ. ಇಂತಹವರಿಗೆ ಒಂದು ಚೂರೂ ಮಾನವೀಯತೆ ಬೇಡವಾ? ಆ ಹುಡುಗಿಯನ್ನು ಕಾಲುಗಳಲ್ಲಿ ಹಾಕಿ ತುಳಿದಿದ್ದಾರಂತೆ. ಕಲ್ಲು ತೂರಿದ್ದನ್ನು ಪೊಲೀಸರೇ ಆರಿಸಿ ಚೆಲ್ಲಿದ್ದಾರಂತೆ. ಮಹಜರು ಮಾಡದೇ ಕಲ್ಲು ಯಾಕೆ ಆರಿಸಿ, ಚೆಲ್ಲಿದ್ದಾರೆ ಎಂದು ಕೇಂದ್ರದ ಮಾಜಿ ಸಚಿವ, ಬಿಜೆಪಿ ಹಿರಿಯ ನಾಯಕ ಡಾ. ಜಿ.ಎಂ. ಸಿದ್ದೇಶ್ವರ ಹರಿಹಾಯ್ದರು.

ಕಾರ್ಲ್ ಮಾರ್ಕ್ಸ್ ನಗರಕ್ಕೆ ಗುರುವಾರ ಭೇಟಿ ನೀಡಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರದ ಅವಧಿಯಲ್ಲಿ ಒಂದು ಸಲವಾದರೂ ಇಂತಹ ಘಟನೆ ನಡೆದಿದೆಯಾ? ದಾವಣಗೆರೆಯಲ್ಲಿ ಹಿಂದೂಗಳು ಬಹು ಸಂಖ್ಯಾತರಿದ್ದಾರೆ, ನೆನಪಿರಲಿ ಎಂದು ಮತಾಂಧ ಕಿಡಿಗೇಡಿಗಳಿಗೆ ಎಚ್ಚರಿಸಿದರು.

ಜಿಲ್ಲಾಡಳಿತ, ಪೊಲೀಸ್ ಸೇವೆ ಜಿಲ್ಲೆಯಲ್ಲಿ ಸಂಪೂರ್ಣ ಕುಸಿತ ಕಂಡಿದೆ. ಅಧಿಕಾರದಲ್ಲಿ ಯಾವುದೇ ಸರ್ಕಾರವಿರಲಿ, ಅಧಿಕಾರಿಗಳು ನ್ಯಾಯಯುತವಾಗಿ ನಡೆದುಕೊಳ್ಳಬೇಕು. ನಾನು ಅಧಿವೇಶನದಲ್ಲಿ ಮಾತನಾಡಿಲ್ಲ ಅಂತಾನೆ. ಅವನಿಗೆ ಕಾಮನ್‌ಸೆನ್ಸ್‌ ಇಲ್ಲ ಅಂತೆಲ್ಲಾ ಮಾತನಾಡುತ್ತಾನೆ. ನಾನು ಸಂಸತ್ತಿನಲ್ಲಿ ಸಾವಿರ ಪ್ರಶ್ನೆ ಕೇಳಿದ್ದೇನೆ. ಸಾಕಷ್ಟು ಭಾರೀ ಮಾತನಾಡಿದ್ದೇನೆ. ಆಗ ಇವನು ಎಲ್ಲಿದ್ದ? ಆನೆ ಹೋಗುವಾಗ ನಾಯಿ ಬೊಗಳುತ್ತಿರುತ್ತೆ. ನಾವು ಹೋಗುತ್ತಿರಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಹೆಸರು ಪ್ರಸ್ತಾಪಿಸದೇ ಸಿದ್ದೇಶ್ವರ ತಿರುಗೇಟು ನೀಡಿದರು.

PREV

Recommended Stories

ಕಾಸರಗೋಡಲ್ಲಿ ಕನ್ನಡ ಫಲಕ: ಕೇರಳಕ್ಕೆ ಕೇಂದ್ರ ನಿರ್ದೇಶನ
ಒಂದು ತಿಂಗಳಾದ್ರೂ ಬೈಕ್‌ ಟ್ಯಾಕ್ಸಿಗೆ ನೀತಿ ರೂಪಿಸದ ರಾಜ್ಯ ಸರ್ಕಾರದ ವಿರುದ್ಧ ಹೈಕೋರ್ಟ್‌ ಗರಂ