ಹರಪನಹಳ್ಳಿ: ತಾಲೂಕಿನ ಅರಸಿಕೇರಿ ಗ್ರಾಮದಲ್ಲಿ ಜ. 5ರಿಂದ ಮೂರು ದಿನಗಳ ಕಾಲ ಜರುಗುವ ದಂಡಿ ದುರುಗಮ್ಮನ ಜಾತ್ರೆಯಲ್ಲಿ ಪ್ರಾಣಿ ಬಲಿ ಸಂಪೂರ್ಣ ನಿಷೇಧಿಸಲಾಗಿದೆ. ತಪ್ಪಿದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಇಲ್ಲಿಯ ಪೊಲೀಸ್ ವೃತ್ತ ನಿರೀಕ್ಷಕ ನಾಗರಾಜ ಎಂ. ಕಮ್ಮಾರ ತಿಳಿಸಿದ್ದಾರೆ.ಅವರು ತಾಲೂಕಿನ ಅರಸಿಕೇರಿ ಗ್ರಾಮದಲ್ಲಿ ಪೊಲೀಸ್ ಇಲಾಖೆ ಹಾಗೂ ಗ್ರಾಪಂ ಸಹಯೋಗದಲ್ಲಿ ನಡೆದ ಶಾಂತಿಸಭೆಯಲ್ಲಿ ಬುಧವಾರ ಮಾತನಾಡಿದ ಅವರು, ಪಂಚಾಯಿತಿ ವತಿಯಿಂದ ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕು, ಜನದಟ್ಟಣೆಯಾಗಿರುವ ಬಸ್ ನಿಲ್ದಾಣ ಪಕ್ಕದಲ್ಲಿರುವ ಶೆಡ್‌ಗಳನ್ನು ತೆರವುಗೊಳಿಸಿ ವಾಹನಗಳ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು.ತುರ್ತು ಸೇವೆಗೆ 112ಕ್ಕೆ ಕರೆ ಮಾಡಿ ಎಂದ ಅವರು, ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗುವುದು. ಈ ವರ್ಷ ಬರಗಾಲ ಹಾಗೂ ಕೋವಿಡ್ ಇರುವುದರಿಂದ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳು ಇರುವುದಿಲ್ಲ ಎಂದು ಅವರು ತಿಳಿಸಿದರು.ಅಭಿವೃದ್ಧಿ ಅಧಿಕಾರಿ ಅಂಜಿನಪ್ಪ ಮಾತನಾಡಿ, ಜಾತ್ರೆಗೆ ಬರುವ ಭಕ್ತರಿಗೆ ಗ್ರಾಪಂ ವತಿಯಿಂದ ಚರಂಡಿ, ಸ್ವಚ್ಛತೆ, ನೀರಿನ ವ್ಯವಸ್ಥೆ ಸೇರಿದಂತೆ ಮೂಲ ಸೌಕರ್ಯ ಒದಗಿಸಲಾಗುವುದು. ಆರೋಗ್ಯ ಇಲಾಖೆಯಿಂದ ರಕ್ತದಾನ ಶಿಬಿರ ನಡೆಸಲಾಗುವುದು ಎಂದರು.ವಕೀಲ ಡಾ. ಸುರೇಶ ಮಾತನಾಡಿ, ಜಾತ್ರೆಗೆ ಬರುವ ಭಕ್ತರಿಗೆ ಶೌಚಾಲಯ ವ್ಯವಸ್ಥೆ ಇರುವುದಿಲ್ಲ. ಬಸ್ ನಿಲ್ದಾಣದಲ್ಲಿ ತಾತ್ಕಾಲಿಕವಾಗಿ ಶೌಚಾಲಯ ವ್ಯವಸ್ಥೆ ಮಾಡಿಸಿ ಎಂದು ತಿಳಿಸಿದರು.
ಜಾತ್ರಾ ಕಮಿಟಿ ಸದಸ್ಯ ಪೂಜಾರ ಮರಿಯಪ್ಪ ಮಾತನಾಡಿ, ಪ್ರತಿ ವರ್ಷದಂತೆ ಮೂರು ದಿನಗಳ ಕಾಲ ಶಾಂತಿಯುತವಾಗಿ ಜಾತ್ರೆ ನಡೆಸಲಾಗುವುದು ಎಂದು ಹೇಳಿದರು.ಪಿಎಸ್‌ಐ ರಂಗಯ್ಯ ಮಾತನಾಡಿ, ಸಾರ್ವಜನಿಕರಿಗೆ ತೊಂದರೆಯಾಗದಂತೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುವುದು. ದೇವಸ್ಥಾನದ ಸುತ್ತಮುತ್ತ ಸಿಸಿ ಕ್ಯಾಮೆರಾ ಅಳವಡಿಕೆ ಸೂಕ್ತ ಎಂದು ಹೇಳಿದರು.ಗ್ರಾಪಂ ಅಧ್ಯಕ್ಷ ಇನಾಯತ್ ಉಲ್ಲಾ, ಎಎಸ್‌ಐ ಜಾತಪ್ಪ, ಸಿಬ್ಬಂದಿ ಕೂಲಹಳ್ಳಿ ಕೊಟ್ರೇಶ, ಮಂಜುನಾಥ, ಗ್ರಾಪಂ ಸದಸ್ಯರಾದ ಅಡ್ಡಿ ಚೆನ್ನವೀರಪ್ಪ, ಅದಾಮ್ ಸಾಹೇಬ್, ಐ. ಸಲಾಂ ಸಾಹೇಬ್, ಹಾಲೇಶ, ವೆಂಕಟೇಶ, ಕೆ.ಡಿ. ಅಂಜಿನಪ್ಪ, ಲಕ್ಷ್ಮಣ, ಷಣ್ಮುಖಪ್ಪ, ನವೀನ, ಕಾರ್ಯದರ್ಶಿ ನಾಗರಾಜ ಉಪಸ್ಥಿತರಿದ್ದರು.