ಕೃಷ್ಣ ಲಮಾಣಿ
ಹಂಪಿಯ ವಿರೂಪಾಕ್ಷೇಶ್ವರ ದೇವಾಲಯ, ಕಮಲ ಮಹಲ್, ವಿಜಯ ವಿಠಲ ದೇವಾಲಯ, ಉಗ್ರ ನರಸಿಂಹ, ಕಡಲೆಕಾಳು, ಸಾಸಿವೆಕಾಳು ಗಣಪತಿ ಮಂಟಪ, ಮಹಾನವಮಿ ದಿಬ್ಬ, ಹಜಾರ ರಾಮ ದೇವಾಲಯ, ರಾಣಿ ಸ್ನಾನಗೃಹ ಸೇರಿದಂತೆ ವಿವಿಧ ಸ್ಮಾರಕಗಳ ಬಳಿ ಈ ಯುವಕರು ಪುಸ್ತಕಗಳನ್ನು ಮಾರಾಟ ಮಾಡುತ್ತಿದ್ದಾರೆ. ಆದರೆ, ಕಳೆದ ಕೆಲವು ದಿನಗಳಿಂದ ಪ್ರವಾಸಿಗರಿಗೆ ತೊಂದರೆ ಆಗಲಿದೆ ಎಂದು ಪುಸ್ತಕ ಮಾರಾಟ ಮಾಡುವ ಯುವಕರಿಗೆ ಪುರಾತತ್ವ ಇಲಾಖೆಗಳ ಅಧಿಕಾರಿಗಳು ಅವಕಾಶ ನೀಡುತ್ತಿಲ್ಲ. ಕೆಲವು ಕಡೆ ಪುಸ್ತಕಗಳನ್ನು ಕೂಡ ಜಪ್ತು ಮಾಡಿಕೊಂಡಿದ್ದಾರೆ. ಇದರಿಂದ ಪುಸ್ತಕ ಮಾರಾಟದಿಂದಲೇ ಬದುಕು ಕಟ್ಟಿಕೊಂಡಿರುವ ಯುವಕರು ಕಂಗಾಲಾಗಿದ್ದಾರೆ.
ಹಂಪಿ ಮಾಹಿತಿ ಪುಸ್ತಕಗಳು: ಹಂಪಿ ಸ್ಮಾರಕಗಳು, ವಿಜಯನಗರ ಸಾಮ್ರಾಜ್ಯ, ಶ್ರೀಕೃಷ್ಣ ದೇವರಾಯರ ಸುವರ್ಣ ಯುಗ, ಸ್ಮಾರಕಗಳ ಛಾಯಾಚಿತ್ರ ಒಳಗೊಂಡ ಪುಸ್ತಕಗಳನ್ನು ಹಂಪಿ, ಕಮಲಾಪುರ, ಕಡ್ಡಿರಾಂಪುರ, ವೆಂಕಟಾಪುರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ 30ಕ್ಕೂ ಅಧಿಕ ಯುವಕರು ಮಾರಾಟ ಮಾಡಿ; ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಇನ್ನು ಕಾಲೇಜ್‌ಗಳ ರಜಾ ದಿನಗಳಲ್ಲೂ ಕೆಲವು ವಿದ್ಯಾರ್ಥಿಗಳು ಪುಸ್ತಕಗಳನ್ನು ಮಾರಾಟ ಮಾಡಿ, ತಮ್ಮ ಓದಿನ ಖರ್ಚು ಭರಿಸಿಕೊಳ್ಳುತ್ತಿದ್ದಾರೆ.ಕನ್ನಡ, ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಮರಾಠಿ ಭಾಷೆಗಳಲ್ಲಿ ಹಂಪಿ ಕುರಿತು ಮುದ್ರಣಗೊಂಡಿರುವ ಪುಸ್ತಕಗಳನ್ನು ಮಾರಾಟ ಮಾಡುತ್ತಿದ್ದಾರೆ. ರಾಬರ್ಟ್ ಸಿವೆಲ್ ಸೇರಿದಂತೆ ಕೆಲವು ಇತಿಹಾಸಕಾರರು ಬರೆದಿರುವ ಪುಸ್ತಕಗಳನ್ನು ಈ ಯುವಕರು ಮಾರಾಟ ಮಾಡುತ್ತಿದ್ದಾರೆ. ಪುಸ್ತಕಗಳ ಮಾರಾಟದಿಂದ ದೇಶ, ವಿದೇಶಿ ಪ್ರವಾಸಿಗರಿಗೆ ತೊಂದರೆ ಆಗಲಿದೆ ಎಂದು ಹೇಳಿ ಈಗ ಪುಸ್ತಕ ಮಾರಾಟಕ್ಕೆ ಅವಕಾಶ ನೀಡಲಾಗುತ್ತಿಲ್ಲ. ಆದರೆ, ಈ ಪುಸ್ತಕ ಮಾರಾಟಕ್ಕೆ ನಿಗದಿತ ಜಾಗ ಗುರುತಿಸಿದರೆ, ದೇಶ, ವಿದೇಶಿ ಪ್ರವಾಸಿಗರಿಗೂ ಅನುಕೂಲ ಆಗಲಿದೆ. ಪ್ರವಾಸೋದ್ಯಮದಿಂದ ಸ್ಥಳೀಯ ಯುವಕರಿಗೂ ಉದ್ಯೋಗ ದೊರೆಯಲಿದೆ.
ಹಂಪಿ ಪ್ರವಾಸೋದ್ಯಮದ ಬೆಳವಣಿಗೆಗೆ ಪೂರಕವಾಗಿ ಪುಸ್ತಕಗಳನ್ನು ಮಾರಾಟ ಮಾಡುತ್ತಿದ್ದಾರೆ. ಹಂಪಿ ಕನ್ನಡ ವಿಶ್ವವಿದ್ಯಾಲಯದ ಕೆಲವು ಪ್ರಾಧ್ಯಾಪಕರು ಬರೆದ ಪುಸ್ತಕಗಳು ಹಾಗೂ ಇತಿಹಾಸಕಾರರು ಬರೆದ ಪುಸ್ತಕಗಳನ್ನು ಮಾರಾಟ ಮಾಡುತ್ತಿದ್ದಾರೆ. ಈ ಪುಸ್ತಕಗಳು ಕೂಡ ಅಗ್ಗದ ದರದಲ್ಲಿವೆ. ದೇಶ, ವಿದೇಶಿ ಪ್ರವಾಸಿಗರಿಗೆ ಈ ಪುಸ್ತಕಗಳು ಮಾರ್ಗದರ್ಶಿ ಆಗಿವೆ. ಈ ಪುಸ್ತಕಗಳಿಗಾಗಿ ದೇಶ, ವಿದೇಶಿ ಪ್ರವಾಸಿಗರಿಂದಲೂ ಬೇಡಿಕೆ ಇದೆ.ಹಂಪಿಯ ಸ್ಮಾರಕಗಳ ಬಳಿ ಪುಸ್ತಕ ಮಾರಾಟ ಮಾಡುತ್ತಿದ್ದವರ ಪುಸ್ತಕಗಳನ್ನು ಜಪ್ತು ಮಾಡಿಕೊಳ್ಳಲಾಗಿದೆ. ಬಡ, ಮಧ್ಯಮದ ಯುವಕರು ಪುಸ್ತಕದಿಂದಲೇ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ. ಈ ಯುವಕರ ಪುಸ್ತಕಗಳನ್ನು ಮರಳಿಸಿ, ಅವರಿಗೆ ನಿಗದಿತ ಜಾಗದಲ್ಲಿ ಪುಸ್ತಕ ಮಾರಾಟಕ್ಕೆ ಅವಕಾಶ ನೀಡಬೇಕು ಎಂದು ಪ್ರಜ್ಞಾವಂತರು ಒತ್ತಾಯಿಸಿದ್ದಾರೆ.
ಹಂಪಿಯಲ್ಲಿ ಪುಸ್ತಕ ಮಾರಾಟ ಮಾಡಲು ಅವಕಾಶ ನೀಡುತ್ತಿಲ್ಲ. ನಾವೆಲ್ಲರೂ ಬಡವರು, ಪುಸ್ತಕ ಮಾರಾಟದಿಂದಲೇ ಬದುಕು ಕಟ್ಟಿಕೊಂಡಿದ್ದೇವೆ. ನಮಗೆ ಅವಕಾಶ ನೀಡಿದರೆ ನಾವು ಪ್ರವಾಸಿಗರಿಗೆ ತೊಂದರೆ ನೀಡದೇ ಪುಸ್ತಕ ಮಾರಾಟ ಮಾಡುತ್ತೇವೆ ಎನ್ನುತ್ತಾರೆ ಹೆಸರು ಬಹಿರಂಗಪಡಿಸಲು ಇಚ್ಛಿಸದ ಪುಸ್ತಕ ಮಾರಾಟ ಯುವಕರು.ಹಂಪಿಯಲ್ಲಿ ಪುಸ್ತಕ ಮಾರಾಟಕ್ಕೆ ನಿರ್ಬಂಧ ಇಲ್ಲ. ಆದರೆ, ದೇಶ, ವಿದೇಶಿ ಪ್ರವಾಸಿಗರಿಗೆ ದುಂಬಾಲು ಬಿದ್ದು, ಪುಸ್ತಕ ಮಾರಾಟ ಮಾಡಬಾರದು. ನಿಗದಿತ ಜಾಗಗಳನ್ನು ಗುರುತಿಸಿ ಪುಸ್ತಕ ಮಾರಾಟಕ್ಕೆ ಅವಕಾಶ ನೀಡಲು ಪುರಾತತ್ವ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಲಾಗುವುದು ಎನ್ನುತ್ತಾರೆ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ.