ಭಾರತ ಬ್ರ್ಯಾಂಡ್‌ ಅಕ್ಕಿ ಮಾರಾಟಕ್ಕೆ ತಡೆ

KannadaprabhaNewsNetwork | Published : Apr 12, 2024 1:04 AM

ಸಾರಾಂಶ

ಸಾರ್ವಜನಿಕರ ವಿರೋಧದ ಹಿನ್ನೆಲೆ ಉಪವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಜತೆ ಚುನಾವಣಾ ಅಧಿಕಾರಿಗಳು ಮಾತನಾಡಿ, ಭಾರತ ಬ್ರ್ಯಾಂಡ್‌ ಅಕ್ಕಿ- ಬೇಳೆ ಮಾರಾಟಕ್ಕೆ ಅನುವು ಮಾಡಿಕೊಟ್ಟರು.

ಕುಮಟಾ: ಕೇಂದ್ರ ಸರ್ಕಾರದ ಭಾರತ ಬ್ರ್ಯಾಂಡ್‌ ಅಡಿ ವಿತರಿಸುತ್ತಿದ್ದ ಅಕ್ಕಿ- ಬೇಳೆಯನ್ನು ನೀತಿ ಸಂಹಿತೆಯ ನೆಪವೊಡ್ಡಿ ಮಾರಾಟಕ್ಕೆ ತಡೆಯೊಡ್ಡಿದ ಘಟನೆ ಪಟ್ಟಣದಲ್ಲಿ ನಡೆದಿದೆ.

ಪಟ್ಟಣದ ರಾಣಿ ಚೆನ್ನಮ್ಮ ಉದ್ಯಾನದ ಎದುರು ಗುರುವಾರ ಬೆಳಗ್ಗೆ ಸಾರ್ವಜನಿಕರು ಕೇಂದ್ರ ಸರ್ಕಾರದ ಭಾರತ ಬ್ರ್ಯಾಂಡ್‌ ಅಕ್ಕಿ- ಬೇಳೆಯನ್ನು ಖರೀದಿಸುತ್ತಿದ್ದ ವೇಳೆ ಚುನಾವಣಾ ಅಧಿಕಾರಿಗಳು ಆಗಮಿಸಿ ನೀತಿ ಸಂಹಿತೆ ನೆಪವೊಡ್ಡಿ ಮಾರಾಟ ಮಾಡದಂತೆ ಸೂಚಿಸಿದ್ದಾರೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಸಾರ್ವಜನಿಕರು, ನಾವು ಯಾವುದೇ ಪಕ್ಷದ ಉಚಿತ ಸೌಲಭ್ಯ ಪಡೆಯಲು ಬಂದಿಲ್ಲ. ಸರ್ಕಾರದ ರಿಯಾಯಿತಿ ಆಹಾರ ಧಾನ್ಯವನ್ನು ದುಡ್ಡು ಕೊಟ್ಟು ಖರೀದಿಸುತ್ತಿದ್ದೇವೆ. ಇದರಲ್ಲಿ ನೀತಿ ಸಂಹಿತೆಗೆ ಎಲ್ಲಿಂದ ಅಡ್ಡಿ ಎಂದು ಪ್ರತಿಕ್ರಿಯಿಸಿದರು.

ಬಿಜೆಪಿ ಮಂಡಲಾಧ್ಯಕ್ಷ ಜಿ.ಐ. ಹೆಗಡೆ ಮಾತನಾಡಿ, ನೀತಿ ಸಂಹಿತೆ ನೆಪದಲ್ಲಿ ಭಾರತ ಬ್ರ್ಯಾಂಡ್‌ ಅಕ್ಕಿ ಮಾರಾಟಕ್ಕೂ ನಿರ್ಬಂಧ ವಿಧಿಸುವುದಾದರೆ ರೇಷನ್ ಅಕ್ಕಿ ಕೊಡುವುದನ್ನು ನಿಲ್ಲಿಸಬೇಕು. ಪೂರ್ಣ ಕರೆಂಟ್ ಬಿಲ್ ಕಟ್ಟಿಸಿಕೊಳ್ಳಬೇಕು. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ರದ್ದು ಮಾಡಬೇಕು. ಗೃಹಲಕ್ಷ್ಮಿ ಯೋಜನೆಯಡಿ ಮಾಸಿಕ ₹೨೦೦೦ ಹಣ ನೀಡುವುದನ್ನು ರದ್ದು ಮಾಡಬೇಕು. ಆದರೆ ಬರೀ ಭಾರತ ಬ್ರ್ಯಾಂಡ್‌ ಅಕ್ಕಿ ಮಾರಾಟಕ್ಕೆ ನಿರ್ಬಂಧಿಸುವುದು ಅತಾರ್ಕಿಕ ಮತ್ತು ನ್ಯಾಯೋಚಿತವಲ್ಲ ಎಂದರು.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಶಾಸಕ ದಿನಕರ ಶೆಟ್ಟಿ, ಇಲ್ಲಿ ಅಕ್ಕಿ- ಬೇಳೆ ಉಚಿತ ವಿತರಣೆ ನಡೆಯುತ್ತಿಲ್ಲ. ಮಾರಾಟ ನಡೆಯುತ್ತಿದೆ. ಹಾಗೆ ನೋಡಿದರೆ, ಅನ್ನಭಾಗ್ಯ, ಗೃಹಜ್ಯೋತಿ, ಗೃಹಲಕ್ಷ್ಮೀ ಮುಂತಾದ ಉಚಿತ ಸವಲತ್ತಿನ ಯೋಜನೆಗಳನ್ನು ನೀತಿ ಸಂಹಿತೆ ಕಾರಣಕ್ಕೆ ಬಂದ್‌ ಮಾಡಬೇಕು. ಯಾವುದೇ ಕಾರಣಕ್ಕೂ ಭಾರತ ಬ್ರ್ಯಾಂಡ್‌ ಅಕ್ಕಿ- ಬೇಳೆ ವಿತರಣೆ ತಡೆಯುವಂತಿಲ್ಲ ಎಂದು ತಾಕೀತು ಮಾಡಿದರು. ಬಳಿಕ ಉಪವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಜತೆ ಚುನಾವಣಾ ಅಧಿಕಾರಿಗಳು ಮಾತನಾಡಿ, ಭಾರತ ಬ್ರ್ಯಾಂಡ್‌ ಅಕ್ಕಿ- ಬೇಳೆ ಮಾರಾಟಕ್ಕೆ ಅನುವು ಮಾಡಿಕೊಟ್ಟರು.

ಸಾರ್ವಜನಿಕರು ಸಾಲುಗಟ್ಟಿ ರಿಯಾಯಿತಿ ದರದ ಭಾರತ ಬ್ರ್ಯಾಂಡ್‌ ಅಕ್ಕಿ, ಬೇಳೆ ಮುಂತಾದವನ್ನು ಖರೀದಿಸಿದರು.

Share this article