ಬಣಜಿಗರು ಸರ್ವರೊಡನೆ ಸಹಜೀವನ ನಡೆಸುವವರು

KannadaprabhaNewsNetwork | Published : Mar 16, 2024 1:50 AM

ಸಾರಾಂಶ

ರಬಕವಿಯ ಬಣಜಿಗ ಸಮಾಜ ಬಾಗೋಜಿಮಠದಲ್ಲಿ ಗುರುವಾರ ಆಯೋಜಿಸಿದ್ದ ಶ್ರೀನಿಧಿ ಸಂಸ್ಥೆಗೆ ಆಯ್ಕೆಗೊಂಡ ಸಮಾಜದ ಎಲ್ಲ 8 ಜನ ನಿರ್ದೇಶಕರ ಸನ್ಮಾನ ಸಮಾರಂಭದಲ್ಲಿ ಹಿರಿಯ ಧುರೀಣ ನೀಲಕಂಠ ಮುತ್ತೂರ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಎಲ್ಲ ಬಲ್ಲವ ಬಣಜಿಗ ಎಂದು ಸರ್ವಜ್ಞ ಮಹಾಕವಿಯಿಂದ ಬಿರುದಾಂಕಿತಗೊಂಡ ಸಮುದಾಯವೇ ಬಣಜಿಗ ಸಮಾಜ. ಎಲ್ಲ ಸಮಾಜಗಳ ಜನರೊಡನೆ ಸೌಹಾರ್ದತೆಯಿಂದ ವ್ಯವಹರಿಸಿ, ಸರ್ವರೊಡನೆ ಸಹಕಾರಯುತ ಸಹಜೀವನ ನಡೆಸುವ ಮೂಲಕ ಸಮಾಜಕ್ಕೆ ತನ್ನದೆ ಕೊಡುಗೆ ಬಣಜಿಗ ಸಮಾಜ ನೀಡಿದೆ ಎಂದು ಹಿರಿಯ ಧುರೀಣ ನೀಲಕಂಠ ಮುತ್ತೂರ ಹೇಳಿದರು.

ರಬಕವಿಯ ಬಣಜಿಗ ಸಮಾಜ ಬಾಗೋಜಿಮಠದಲ್ಲಿ ಗುರುವಾರ ಆಯೋಜಿಸಿದ್ದ ಶ್ರೀನಿಧಿ ಸಂಸ್ಥೆಗೆ ಆಯ್ಕೆಗೊಂಡ ಸಮಾಜದ ಎಲ್ಲ 8 ಜನ ನಿರ್ದೇಶಕರ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸಂಸ್ಕೃತಿ ಮತ್ತು ಸಹಬಾಳ್ವೆಗೆ ಬಣಜಿಗರು ಮುಂದಿದ್ದು, ಎಲ್ಲ ವರ್ಗದ ಜನರೊಡನೆ ಸದಾಶಯದೊಡನೆ ಬೆರೆತು ಸರ್ವರ ಅಭ್ಯುದಯಕ್ಕೆ ಶ್ರಮಿಸುವ ಜನಾಂಗವಾಗಿ ಮುಂಚೂಣಿಯಲ್ಲಿದೆ ಎಂದರು. ನಗರ ಘಟಕದ ಅಧ್ಯಕ್ಷ ಗಿರೀಶ ಮುತ್ತೂರ ಮಾತನಾಡಿ, ಸಮಾಜದ ಬಹುತೇಕರು ಆರ್ಥಿಕವಾಗಿ ಸಬಲರಿದ್ದು, ಆರ್ಥಿಕವಾಗಿ ದುರ್ಬಲವಿರುವ ಜನರಿಗೆ ನೆರವಾಗಬೇಕು. ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ನಾವು ಯಾವುದೇ ದಾಕ್ಷಿಣ್ಯಕ್ಕೀಡಾಗದೇ ಸ್ವಾಭಿಮಾನದಿಂದ ಮುಂದಾಗಿದ್ದು, ನಮಗೆ ನಿವೇಶನ ನೀಡಲು ಸರ್ಕಾರಕ್ಕೆ ಅವಕಾಶವಿಲ್ಲದ ಕಾರಣ ವಿಳಂಬವಾಗಿದೆ. ಸೂಕ್ತ ನಿವೇಶನ ಪಡೆಯಲು ನಾವು ನಿರಂತರ ಯತ್ನಿಸುತ್ತಿದ್ದು, ಬರುವ ದಿನಗಳಲ್ಲಿ ಸಮಾಜದ ಸದಸ್ಯರ ಮತ್ತು ಸಂಘ-ಸಂಸ್ಥೆಗಳ ನೆರವಿನಲ್ಲಿ ನಮ್ಮದೇ ಸಮುದಾಯ ಭವನ ತಯಾರಾಗಲಿದೆ ಎಂದರು.

ಉದ್ಯಮಿ ಸೋಮಶೇಖರ ಕೊಟ್ರಶೆಟ್ಟಿ ಮಾತನಾಡಿ, ಬಣಜಿಗರು ಸ್ವಾಭಿಮಾನಿಗಳು ಆದರೆ, ದುರಹಂಕಾರಿಗಳಲ್ಲ. ಪ್ರತಿ ಸಮುದಾಯದೊಡನೆ ಉತ್ತಮ ಸಂಬಂಧವಿರಿಸಕೊಂಡು ಸರ್ವರ ಅಭಿವೃದ್ಧಿಗೆ ಶ್ರಮಿಸುವ ಗುಣಧರ್ಮ ಹೊಂದಿದ್ದೇವೆ. ಸಹಕಾರಿ ಸಂಸ್ಥೆಯು ಅಬಾಧಿತವಾಗಿ ನಡೆದುಕೊಂಡು ಹೋಗಲು ಮತ್ತು ಎಲ್ಲ ಸಮುದಾಯದ ಜನತೆಗೂ ಆರ್ಥಿಕ ನೆರವು ಕಲ್ಪಿಸುವ ಮೂಲಕ ಶ್ರೀನಿಧಿ ಸಾರ್ವಜನಿಕ ಮನ್ನಣೆಯ ಸಂಸ್ಥೆಯಾಗಿದೆ. ಆಡಳಿತ ಮಂಡಳಿಗೆ ಸಂಸ್ಥೆ ಉಳಿಸಿ, ಬೆಳೆಸಿಕೊಂಡು ಹೋಗುವ ಹೊಣೆಗಾರಿಕೆಯಿದ್ದು, ಅದಕ್ಕೆ ಚ್ಯುತಿ ಆಗದಂತೆ ನಿರ್ದೇಶಕರು, ಸಿಬ್ಬಂದಿ ಶ್ರಮಿಸಲು ಮತ್ತು ಪ್ರಾಮಾಣಿಕ, ಪಾರದರ್ಶಕ ಆಡಳಿತವೇ ಕಾರಣ ಎಂದರು.

ನೂತನ ನಿರ್ದೇಶಕ ಅಂದಾನಿ ಮುತ್ತೂರ, ಉದಯಕುಮಾರ ಜಿಗಜಿನ್ನಿ, ಬಸವರಾಜ ತೆಗ್ಗಿ, ವಿಜಯ ನಾಶಿ, ರವಿ ಮುತ್ತೂರ ಅವರನ್ನು ಸತ್ಕರಿಸಲಾಯಿತು.

ಉಮೇಶ ಹನಗಂಡಿ, ವಿಜಯಕುಮಾರ ಹಲಕುರ್ಕಿ, ಪ್ರಭು ಢಪಳಾಪೂರ, ಸಂಜಯ ತೆಗ್ಗಿ, ಸಂಜಯ ಮುತ್ತೂರ, ಚಂದ್ರಶೇಖರ ಹುಲಗಬಾಳಿ, ಬಸವರಾಜ ಕುಂಚನೂರ, ನೀಲಕಂಠ ಬಾಗೇವಾಡಿ, ಗಜಾನನ ತೆಗ್ಗಿ, ಪರಮಶೆಟ್ಟಿ ಮುಂತಾದವರಿದ್ದರು. ಮಲ್ಲಿಕಾರ್ಜುನ ಗಡೆನ್ನವರ ಕಾರ್ಯಕ್ರಮ ನಿರ್ವಹಿಸಿದರು.

Share this article