ಸಾರಾಂಶ
ಕನ್ನಡಪ್ರಭ ವಾರ್ತೆ ತಾಳಿಕೋಟೆ
ಸಹಕಾರಿ ತತ್ವ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಹಾಯ ಮಾಡುತ್ತದೆ. ಎಲ್ಲ ವರ್ಗದವರನ್ನು ಎತ್ತಿ ಹಿಡಿಯುವಂತಹ ಕೆಲಸವಾಗಿದೆ. ಅಂತಹ ಕೆಲಸವನ್ನು ತಾಳಿಕೋಟೆಯ ಪಂಚಾಚಾರ್ಯ ಸಹಕಾರಿ ಸಂಘ ಸ್ಥಾಪನೆಯ ಮೂಲಕ ಮಾಡಿದ್ದು ಶ್ಲಾಘನೀಯ ಉಜ್ಜಯಿನಿ ಪೀಠದ ಜಗದ್ಗುರು ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.ಪಟ್ಟಣದ ಅಡತ್ ಮರ್ಚಂಟ್ ಅಸೋಸಿಯೇಶನ್ ಸಭಾಭವನದಲ್ಲಿ ಗುರುವಾರರಂದು ಪಂಚಾಚಾರ್ಯ ಸಹಕಾರಿ ಪತ್ತಿನ ಸಂಘ ರಜತ ಮಹೋತ್ಸವ ಸಮಾರಂಭದಲ್ಲಿ ಆಶಿರ್ವಚನ ನೀಡಿದರು. ದೇಶದಲ್ಲಿ ಸಹಕಾರಿ ಸಂಸ್ಥೆ ಮೊಟ್ಟ ಮೊದಲು ಪ್ರಾರಂಭವಾಗಿರುವದು ಕರ್ನಾಟಕದಲ್ಲಿಯೇ. ಗದಗದ ಎಸ್.ಎಸ್.ಪಾಟೀಲ ಅವರು ಮೊಟ್ಟ ಮೊದಲು ಪ್ರಾರಂಬಿಸಿದ ಬ್ಯಾಂಕು ನಂತರ ಮಂಗಳೂರಿನಲ್ಲಿ ಪ್ರಾರಂಭವಾಯಿತು. ಇವತ್ತು ಸಹಕಾರಿ ಸಂಸ್ಥೆಗಳು ರಾಜ್ಯದಲ್ಲಿಯೇ ೧.೮೫ ಲಕ್ಷ ಸಕ್ರಿಯವಾಗಿವೆ. ಭಗವಂತ ನಮಗೆ ಜನ್ಮಕೊಟ್ಟು ಜಗತ್ತಿಗೆ ಕಳುಹಿಸತ್ತಾನಲ್ಲಾ ಅದರಲ್ಲಿಯೇ ಆ ಸಹಕಾರಿ ತತ್ವ ಸಹಕಾರಿ ಸಂದೇಶ ಅಡಗಿದೆ. ಇದನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕೆಂದ ಅವರು, ಮನುಷ್ಯ ಎಡುವಿ ಬಿದ್ದಾಗ ತುರ್ತುಗತಿಯಲ್ಲಿ ಮೊದಲು ಹೋಗುವದು ಕೈಯಾಗಿದೆ. ಇಡೀ ಸಮಾಜ ಒಟ್ಟಾಗಿ ಬದುಕಬೇಕು, ಇಡೀ ಸಮಾಜದ ಒಗ್ಗಟ್ಟು ದೇಶದಲ್ಲಿ ಪ್ರದರ್ಶನವಾಗಬೇಕು. ಈ ದೇಶದ ಐಕ್ಯತೆ ಅಡಗಿದೆ. ಭಾರತೀಯ ದೇಶ ವಿವಿಧತೆಯಲ್ಲಿ ಏಕತೆಯನ್ನು ಕಾಣುವಂತಹದ್ದು. ಇಂದು ಜಾತಿ ಹಿಡಿದು ಹೊರಟಿದ್ದು, ಇದು ಸಮಾಜಕ್ಕೆ ಮಾರಕವಾಗಿದೆ. ಇತ್ತೀಚಿನ ದಿನಗಳಲ್ಲಿ ಆ ಜಾತಿಯ ಕರಮಠ ವ್ಯವಸ್ಥೆಯಿಂದಾಗಿ ಆ ಪ್ರೀತಿಯ ಬಾಂಧವ್ಯಗಳು ದೂರವಾಗುತ್ತಿರುವದು ದುರಂತದ ಸಂಗತಿ.ರಜತಮಹೋತ್ಸವ ಆಚರಿಸಿಕೊಳ್ಳುತ್ತಿರುವ ತಾಳಿಕೋಟೆಯ ಪಂಚಾಚಾರ್ಯ ಸಹಕಾರಿ ಪತ್ತಿನ ಸಂಘವು ಉತ್ತರೋತ್ತರವಾಗಿ ಬೆಳೆದು ೧೨೦೦ ಶೇರುದಾರರ ಸಂಖ್ಯೆ ೧೦ ಸಾವಿರಕ್ಕೆ ಏರಿಕೆಯಾಗಲಿ. ರಜತ ಮಹೋತ್ಸವ ಆಚರಿಸಿಕೊಂಡಿರುವ ಬ್ಯಾಂಕು ಸುವರ್ಣ ಸಂಭ್ರಮ, ಅಮೃತ ಮಹೋತ್ಸವ, ಶತಮಾನೋತ್ಸವ ಸಂಭ್ರಮ ಆಚರಿಸಿಕೊಳ್ಳಲಿ ಎಂದು ಹಾರೈಸಿದರು.ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ಎಸ್.ಪಾಟೀಲ(ಯಾಳಗಿ) ಮಾತನಾಡಿ, ಭಾರತೀಯ ಸಂಸ್ಕೃತಿಯ ಜೊತೆಗೆ ಸಹಕಾರಿ ತತ್ವ ಬಂದಿದೆ. ಧರ್ಮದಂತೆ ಪರೋಪಕಾರವನ್ನು ಬಯಸುತ್ತದೆ. ಸಹಕಾರಿ ತತ್ವವೂ ಪರೋಪಕಾರವನ್ನು ಬಯಸುತ್ತದೆ. ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದವರನ್ನು ಮೇಲಕ್ಕೆತ್ತಲು ಸಹಾಯ ಮಾಡುವುದು ಸಹಕಾರಿ ತತ್ವ. ತಾಳಿಕೋಟೆಯ ಪಂಚಾಚಾರ್ಯ ಸಹಕಾರಿ ಸಂಘ ೨೫ವರ್ಷಗಳಲ್ಲಿ ಎಲ್ಲ ಸಮುದಾಯದ ಜನರ ಮನಸ್ಸನ್ನು ಗೆಲ್ಲುವುದರೊಂದಿಗೆ ಆರ್ಥಿಕವಾಗಿ ಸಹಾಯ ಮಾಡುತ್ತಾ ಸಾಗಿ ಬಂದಿದೆ. ಅಲ್ಲಿಯ ಆಡಳಿತ ಮಂಡಳಿಯ ಸಿಬ್ಬಂದಿಗಳ ಪ್ರಾಮಾಣಿಕ ನಿಷ್ಪಕ್ಷಪಾತ ಕಾರ್ಯವೇಪಿದಕ್ಕೆ ಸಾಕ್ಷಿಯಾಗಿದೆ ಎಂದರು.ವಿಜಯಪುರ ಅನುಗ್ರಹ ಕಣ್ಣಿನ ಆಸ್ಪತ್ರೆಯ ನೇತ್ರ ತಜ್ಞ ಡಾ.ಪ್ರಭುಗೌಡ ಲಿಂಗದಳ್ಳಿ, ಜಿಪಂ ಮಾಜಿ ಸದಸ್ಯ ಬಸನಗೌಡ ವಣಕ್ಯಾಳ ಮಾತನಾಡಿ, ಸಹಕಾರಿ ಕ್ಷೇತ್ರದ ಹುಟ್ಟಿನಿಂದ ಇಂದು ದೇಶದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ದೇಶದ ಅಭಿವೃದ್ದಿಯಲ್ಲಿ ಸಹಕಾರಿ ತತ್ವದ ಕೊಡುಗೆ ಅನನ್ಯವಾಗಿದೆ. ಪಂಚಾಚಾರ್ಯ ಸಹಕಾರಿ ಸಂಘವು ಸಿಂದಗಿಯಲ್ಲಿ ತನ್ನ ಶಾಖೆಯನ್ನು ವಿಸ್ತರಿಸುತ್ತಿದ್ದು, ಪ್ರಗತಿಪಥದತ್ತ ಸಾಗುತ್ತಿದೆ ಎಂದು ಹೇಳಿದರು.ಕೊಡೇಕಲ್ಲ ದುರದುಂಡೇಶ್ವರಮಠದ ಶಿವಕುಮಾರ ಮಹಾಸ್ವಾಮಿಗಳು ಸಾನಿದ್ಯ ವಹಿಸಿ ಮಾತನಾಡಿದರು. ಉಪನ್ಯಾಸಕ ಐ.ಬಿ.ಹಿರೇಮಠ ಪ್ರಾಸ್ಥಾವಿಕ ಮಾತನಾಡಿದರು. ನೇತೃತ್ವವನ್ನು ಚಬನೂರಿನ ರಾಮಲಿಂಗಯ್ಯ ಸ್ವಾಮಿಗಳು ವಹಿಸಿದ್ದರು. ಅಧ್ಯಕ್ಷತೆಯನ್ನು ಬ್ಯಾಂಕ್ ಅಧ್ಯಕ್ಷ ಮುತ್ತುರಾಜ ಜಾಹಗೀರದಾರ ವಹಿಸಿದ್ದರು. ಈ ಸಮಯದಲ್ಲಿ ಸರ್ಕಾರಿ ಉನ್ನತ ಹುದ್ದೆಗೆ ಪದೋನ್ನತಿ ಹೊಂದಿದ ಆರ್.ಬಿ.ದಮ್ಮೂರಮಠ ಅವರಿಗೆ ಹಾಗೂ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಬ್ಯಾಂಕ್ ವ್ಯವಸ್ಥಾಪಕ ಶ್ರೀಕಾಂತ ಹಿರೇಮಠ ವರದಿ ವಾಚಿಸಿದರು.ಸಿಂದಗಿ ಸಾರಂಗಮಠದ ಪ್ರಭುಸಾರಂಗದೇವ ಶಿವಾಚಾರ್ಯರು, ಗುಂಡಕನಾಳ ಬೃಹನ್ ಮಠದ ಗುರುಲಿಂಗ ಶಿವಾಚಾರ್ಯರು, ಹಿರೂರ ಅನ್ನದಾನೇಶ್ವರಮಠದ ಜಯಸಿದ್ದೇಶ್ವರ ಮಹಾಸ್ವಾಮಿಗಳು, ಕಲಕೇರಿಯ ಸಿದ್ದರಾಮ ಶಿವಾಚಾರ್ಯ ಮಹಾಸ್ವಾಮಿಗಳು, ಪಡೇಕನೂರಿನ ಮಲ್ಲಿಕಾರ್ಜುನ ಮಹಾಸ್ವಾಮಿಗಳು, ನಾವದಗಿಯ ರಾಜಗುರು ರಾಜೇಂದ್ರ ಒಡೆಯರ ಮಹಾಸ್ವಾಮಿಗಳು, ದೇವರಹಿಪ್ಪರಗಿಯ ಶಿವಯೋಗಿ ಸ್ವಾಮಿಗಳು, ಬ್ಯಾಂಕ್ ಸಂಸ್ಥಾಪಕ ಅಧ್ಯಕ್ಷರಾದ ಕುಮಾರಸ್ವಾಮಿ ಮಠ, ಬಸಯ್ಯ ಹಿರೇಮಠ, ಹಾಲಿ ಉಪಾಧ್ಯಕ್ಷ ನಾಗಲಿಂಗಯ್ಯ ಡೋಣೂರಮಠ, ನಿರ್ದೇಶಕರಾದ ಸಂಗಯ್ಯ ಕೊಡಗಾನೂರ, ಚಿನ್ನಯ್ಯ ಹಿರೇಮಠ, ಈರಯ್ಯ ಹಿರೇಮಠ, ಪಂಚಾಕ್ಷರಿ ಹಿರೇಮಠ, ಮಲ್ಲಯ್ಯ ಸಾಲಿಮಠ, ವಿದ್ಯಾ ಮಠ, ರಾಜೇಶ್ವರಿ ವಿಭೂತಿಮಠ, ಒಳಗೊಂಡು ಸಲಹಾ ಸಮಿತಿ ಸದಸ್ಯರು, ಸಿಬ್ಬಂದಿ ಉಪಸ್ಥಿತರಿದ್ದರು. ಶಿಕ್ಷಕ ಆರ್.ಬಿ.ದಮ್ಮೂರಮಠ ನಿರೂಪಿಸಿದರು. ರಾಜಶೇಖರ ಹಿರೇಮಠ ವಂದಿಸಿದರು.