ಸಾರಾಂಶ
ಸಿಎಂ ಕಾರಲ್ಲಿ ರವಿಕುಮಾರ್ ಕೂತಿದ್ದು ಅಪರಾಧವೇ ? - ಆತುರಗಾರನ ಬುದ್ಧಿಮಟ್ಟ ಅನ್ನುವ ಮಾತಿದೆ. ಯಾಕೆ ಹೀಗೆ ಹೇಳಿದೆ ಅಂದರೆ, ವಿಧಾನಪರಿಷತ್ ಮುಖ್ಯ ಸಚೇತಕರಾಗಿರುವ ಎನ್.ರವಿಕುಮಾರ್ ಅವರ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಸ್ವಪಕ್ಷೀಯರಿಂದಲೇ ಅನೇಕ ಟೀಕೆ- ಟಿಪ್ಪಣಿಗಳು ಬರುತ್ತಿರುವುದಕ್ಕೆ.
ಅಷ್ಟಕ್ಕೂ ಬಿಜೆಪಿ ನಾಯಕ ಸಿಎಂರನ್ನು ಭೇಟಿಯಾಗಿದ್ದು ಏಕೆ ಗೊತ್ತಾ? ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡಬೇಕು!
- ಅಜಿತ್ ಶೆಟ್ಟಿ ಹೆರಂಜೆ, ರಾಜ್ಯ ಸಹ ಸಂಚಾಲಕರು, ಬಿಜೆಪಿ ಪ್ರಕಾಶನ ಪ್ರಕೋಷ್ಟ
ಆತುರಗಾರನ ಬುದ್ಧಿಮಟ್ಟ ಅನ್ನುವ ಮಾತಿದೆ. ಕಣ್ಣಾರೆ ಕಂಡರೂ ಪರಾಂಬರಿಸಿ ನೋಡು ಅನ್ನುವ ಮಾತೂ ಇದೆ. ಯಾಕೆ ಹೀಗೆ ಹೇಳಿದೆ ಅಂದರೆ, ವಿಧಾನಪರಿಷತ್ ಮುಖ್ಯ ಸಚೇತಕರಾಗಿರುವ ಎನ್.ರವಿಕುಮಾರ್ ಅವರ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಸ್ವಪಕ್ಷೀಯರಿಂದಲೇ ಅನೇಕ ಟೀಕೆ- ಟಿಪ್ಪಣಿಗಳು ಬರುತ್ತಿರುವುದಕ್ಕೆ. ರವಿಕುಮಾರ್ ಅವರು ಮುಖ್ಯಮಂತ್ರಿಯವರ ಕಾರಿನಲ್ಲಿ ಸಿದ್ದರಾಮಯ್ಯ ಅವರ ಜತೆ ಕೂತಿರುವ ಫೋಟೋವೊಂದು ವೈರಲ್ ಆಗಿದೆ. ಇದೇನೋ ಮಹಾಪರಾಧ ಎನ್ನುವ ರೀತಿಯಲ್ಲಿ ಅವರನ್ನು ಟೀಕೆ ಮಾಡಿ ಬರೆದವರು ಒಬ್ಬರಾ ಇಬ್ಬರಾ? ನಾವು ವೈಚಾರಿಕವಾಗಿ ಒಪ್ಪಲಿ ಬಿಡಲಿ. ಸಿದ್ದರಾಮಯ್ಯ ಅವರು ರಾಜ್ಯದ ಮುಖ್ಯಮಂತ್ರಿ. ಇದು ವಾಸ್ತವ. ಅವರನ್ನು ಆರಿಸಿದ್ದು ಕರ್ನಾಟಕದ ಜನರು. ಅದೂ ಸಂವಿಧಾನಬದ್ಧವಾಗಿ. ಅವರಿಗೂ ನಮಗೂ ರಾಜಕೀಯ ಹಾಗೂ ವೈಚಾರಿಕ ವಿರೋಧ ಇದ್ದೇ ಇದೆ. ಮುಂದೆಯೂ ಇರುತ್ತದೆ.
ಶತಾಯಗತಾಯ ಕೆಲಸ ಮಾಡಿಯೇ ತೀರುತ್ತೇವೆ
ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ನಾವು ಶತಾಯಗತಾಯ ಕೆಲಸ ಮಾಡಿಯೇ ತೀರುತ್ತೇವೆ. ಅದರಲ್ಲಿ ಯಾವುದೇ ರಾಜಿಯಾಗಲಿ, ಮುಲಾಜಾಗಲಿ ಇಲ್ಲ. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕೇವಲ ಚುನಾವಣೆ ಮಾತ್ರ ರಾಜಕಾರಣ ಅಲ್ಲ, ಅದರಲ್ಲೂ ಬಿಜೆಪಿ ಯಾವತ್ತೂ ಕೇವಲ ಚುನಾವಣೆ ಗೆಲ್ಲುವ ಏಕೈಕ ಕಾರಣಕ್ಕೆ ರಾಜಕಾರಣದಲ್ಲಿ ಇರುವ ಸಂಘಟನೆ ಅಲ್ಲವೇ ಅಲ್ಲ. ಭಾರತವನ್ನು ಪರಮ ವೈಭವಕ್ಕೆ ತರುವ ಬೃಹತ್ ಕಾರ್ಯದಲ್ಲಿರುವ ಅನೇಕ ಆಯಾಮಗಳಲ್ಲಿ ಚುನಾವಣೆಯೂ ಒಂದು ಅಷ್ಟೆ. ಅದು ಅಷ್ಟೇ ಮುಖ್ಯ ಕೂಡ. ಆದರೆ, ಉಳಿದ ರಾಜಕೀಯ ಪಕ್ಷಗಳಂತೆ ಬಿಜೆಪಿಗೆ ಚುನಾವಣೆಯೊಂದೇ ತನ್ನ ಅಸ್ತಿತ್ವದ ಹಾದಿಯ ಅಂತ್ಯ ಅಲ್ಲ. ಇದನ್ನು ಅರಿತವರಿಗೆ ಮುಖ್ಯಮಂತ್ರಿಗಳ ಜೊತೆಗೆ ಎನ್. ರವಿಕುಮಾರ್ ಅವರು ಕಾಣಿಸಿಕೊಂಡಾಗ ಆಶ್ಚರ್ಯ ಆಗಿರಲಿಕ್ಕಿಲ್ಲ. ಒಂದು ವೇಳೆ ಅನುಮಾನ ಬಂದವರೂ ತಮ್ಮ ಸುತ್ತಮುತ್ತ ಬಿಜೆಪಿಯ ವಲಯದವರಲ್ಲಿ ಇದರ ಬಗ್ಗೆ ವಿಚಾರ ವಿಮರ್ಶೆ ಮಾಡಿ ನಂತರ ತಮ್ಮ ನಿಲುವುಗಳನ್ನು ಹಂಚಿಕೊಂಡಿರುತ್ತಿದ್ದರು. ಆದರೆ, ಹಾಗೆ ಮಾಡಲಿಲ್ಲ ಎಂಬುದು ಇವತ್ತಿನ ರಾಜಕೀಯ ವ್ಯವಸ್ಥೆಯ ದುರಂತ. ಸಂಸ್ಕಾರವನ್ನು ನಾವು ಪಾಲಿಸಬೇಡವೆ?
ಸಿದ್ದರಾಮಯ್ಯನವರು ದೇಶದ ಪ್ರಧಾನಿಯೊಬ್ಬರಿಗೆ ಏಕವಚನದಲ್ಲಿ ಮಾತನಾಡಿದಾಗ, ವಾಚಾಮಗೋಚರವಾಗಿ ನಿಂದಿಸಿದಾಗ, ನಾವು ಯಾವ ಸಂಸ್ಕಾರವನ್ನು ಅವರಿಗೆ ನೆನಪಿಸಿ, ‘ಸ್ವಾಮಿ ಆತ ದೇಶದ ಪ್ರಧಾನಿ. ಅದಕ್ಕಾದರೂ ನೀವು ಮರ್ಯಾದೆ ಕೊಡಬೇಕು’ ಅನ್ನುತ್ತೇವೆಯೋ, ಸಮಯ ಸಂದರ್ಭದಲ್ಲಿ ನಾವೂ ಅದನ್ನು ಪಾಲಿಸಬೇಕು ತಾನೆ? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕಾರಣದ ಮೌಲ್ಯಗಳು ಉಳಿಯುವುದು ಅಧಿಕಾರದಲ್ಲಿ ಇರುವವರು ಅದನ್ನು ಉಳಿಸಿದಾಗ ಮಾತ್ರ. ಆದರೆ, ಭಾರತದ ರಾಜಕೀಯ ವ್ಯವಸ್ಥೆಯ ದುರಂತ ಅಂದರೆ ಕಳೆದ 75 ವರ್ಷದಲ್ಲಿ ಅತೀ ಹೆಚ್ಚು ಅಧಿಕಾರದಲ್ಲಿ ಇದ್ದ ರಾಜಕೀಯ ಪಕ್ಷ ಹಂತಹಂತವಾಗಿ ತನ್ನ ಜವಾಬ್ದಾರಿಯನ್ನು ಮರೆತು ನೈತಿಕವಾಗಿ ಅದೆಷ್ಟು ಕೆಳಮಟ್ಟಕ್ಕೆ ಇಳಿಯಬಹುದು ಅಷ್ಟರ ಮಟ್ಟಿಗೆ ಇಳಿಯಿತು. ಅವರ ನಿರಂಕುಶ ಆಡಳಿತ ನೋಡಿದ ಮೇಲಂತೂ ಜನರಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ನಂಬಿಕೆಯೇ ಹೋಗುವಂತಹ ಪರಿಸ್ಥಿತಿ ನಿರ್ಮಾಣ ಆಯಿತು.ಇಂತಹ ಪಕ್ಷವನ್ನು ಅಧಿಕಾರದಿಂದ ದೂರ ಇಡದೆ ಹೋದರೆ ಇವರು ದೇಶದ ಅಸ್ತಿತ್ವಕ್ಕೇ ಅಪಾಯಕಾರಿ ಎಂಬ ವಾತಾವರಣ ಬಂದಾಗ ದೇಶದಲ್ಲಿ ಕಳೆದ 12 ವರ್ಷದಿಂದ ಆ ಪ್ರಯತ್ನದಲ್ಲಿ ಜನರು ಬಿಜೆಪಿ ಮತ್ತು ಅದರ ಮಿತ್ರ ಪಕ್ಷದ ಮೇಲೆ ನಂಬಿಕೆ ಇಟ್ಟು ಬಿಜೆಪಿಯನ್ನು ಚುನಾಯಿಸಿದ್ದಾರೆ. ಹೀಗೆ ಕಳೆದ 75 ವರ್ಷ ಇಂತಹ ದುರ್ಯೋಧನ-ರಾವಣ ಸಂತತಿಯ ಜೊತೆಗೆ ಸೆಣಸಾಡುತ್ತಿರುವಾಗ ನಮಗೂ ಅಲ್ಪಸ್ವಲ್ಪ ಅವರ ಸೋಂಕು ತಗುಲಿರಬಹುದು. ಆದರೆ ಸಮಾಜ ಮಾತ್ರ ನೈತಿಕತೆ, ಸಚ್ಚಾರಿತ್ರ್ಯ ಅಂದರೆ ಬಿಜೆಪಿಯತ್ತ ಮುಖ ಮಾಡುತ್ತದೆ. ಹಾಗಾಗಿ ಬಿಜೆಪಿ ಈ ವಿಷಯಗಳಲ್ಲಿ ಸದಾ ಜಾಗರೂಕತೆಯಿಂದ ವರ್ತಿಸಬೇಕು ಮತ್ತು ಎಂದಿಗೂ ಮೈ ಮರೆಯಬಾರದು. ಈ ಕಾರಣದಿಂದಾಗಿಯೇ ಎನ್.ರವಿಕುಮಾರ್ ಅವರು ಸಿದ್ದರಾಮಯ್ಯನವರನ್ನು ಭೇಟಿ ಮಾಡಿದ್ದು ಜನರ ಹುಬ್ಬೇರಿಸಿದ್ದರೆ ಅದಕ್ಕೆ ಉತ್ತರ ಇಲ್ಲಿದೆ.
ಸಿಎಂರನ್ನು ರವಿಕುಮಾರ್ ಭೇಟಿ ಆಗಿದ್ದೇಕೆ?
ಸಿಎಂರನ್ನು ರವಿಕುಮಾರ್ ಭೇಟಿ ಆಗಿದ್ದೇಕೆ? ‘ಗೌಚರ್’ ಅನ್ನುವ ಅತ್ಯಂತ ಮಾರಕ ವಂಶವಾಹಿನಿಯಿಂದ ಬರುವ ರೋಗವೊಂದಿದೆ. ಸದ್ಯಕ್ಕೆ ಆ ರೋಗವನ್ನು ಗುಣಪಡಿಸಲು ಯಾವುದೇ ಔಷಧಿ ಇಲ್ಲ. ಸರಳವಾಗಿ ಹೇಳಬೇಕು ಅಂದರೆ, ಈ ರೋಗಪೀಡಿತರಿಗೆ ದೇಹದೊಳಗೆ ಸಹಜವಾಗಿ ‘ಗ್ಲುಕೋಸರಿಬ್ರೋಸೈಡ್’ ಎನ್ನುವ ಕೊಬ್ಬು ಜೀರ್ಣ ಆಗುವುದಿಲ್ಲ. ಕಾರಣ ರೋಗಪೀಡಿತರ ದೇಹ ಈ ಕೊಬ್ಬನ್ನು ಜೀರ್ಣ ಮಾಡುವ ಕಿಣ್ವ (ಎನ್ಜೈಮ್)ವನ್ನು ಉತ್ಪಾದನೆ ಮಾಡುವ ಸಾಮರ್ಥ್ಯ ಕಳೆದುಕೊಳ್ಳುತ್ತದೆ. ಇದು ಹುಟ್ಟಿನಿಂದಲೇ ಬರುವ ಕಾಯಿಲೆ. ಇದರ ಕಾರಣ ದೇಹದ ವಿವಿಧ ಅಂಗಗಳು ಕೆಲಸ ಮಾಡುವುದರಲ್ಲಿ ವ್ಯತ್ಯಾಸ ಆಗುತ್ತದೆ. ಯಕೃತ್ತು, ರಕ್ತ ಸಂಬಂಧಿ ದೌರ್ಬಲ್ಯ, ಎಲುಬು, ಕಣ್ಣು, ನರಮಂಡಲಗಳ ಮೇಲೂ ಇದರ ವ್ಯತಿರಿಕ್ತ ಪರಿಣಾವಾಗುತ್ತದೆ. ಇದಕ್ಕಿರುವ ಚಿಕತ್ಸೆ ಎಂದರೆ ಜೀವನ ಪರ್ಯಂತರೋಗಿಗೆ ಗ್ಲುಕೋಸೆರಿಬ್ರೋಸಿಡೇಸ್ ಎನ್ನುವ ಕಿಣ್ವವನ್ನು ಕೃತಕವಾಗಿ ಸೇರಿಸಬೇಕು. ಇದು ಎನ್‌ಜೈಮ್ ರೀಪ್ಲೇಸ್ಮೆಂಟ್ ಥೆರಪಿ (ERT). ಇದಕ್ಕೆ ವರ್ಷಕ್ಕೆ ತಗಲುವ ವೆಚ್ಚ 80 ಲಕ್ಷದಿಂದ 2 ಕೋಟಿ ರುಪಾಯಿ. ಇದರ ಈ ಚಿಕಿತ್ಸೆಯನ್ನು ಬಡವರು ಪಡೆಯಲು ಸಾಧ್ಯವೇ ಇಲ್ಲ. ಜೊತೆಗೆ ಇದು ಅತ್ಯಂತ ವಿರಳಾತಿ ವಿರಳ ಆದ ಕಾರಣಕ್ಕೆ ಇದರ ಬಗ್ಗೆ ಯಾವುದೇ ಔಷಧಿಗಳನ್ನೂ ಅಭಿವೃದ್ಧಿ ಮಾಡಿಲ್ಲ. ಕಾರಣ ಕಂಪನಿಗಳಿಗೆ ಅರ್ಥಿಕವಾಗಿ ಅದು ಲಾಭದಾಯಕ ಅಲ್ಲ. ಈ ರೋಗಿಗಳು ಮೇಲ್ನೋಟಕ್ಕೆ ಬಹುತೇಕ ಸಾಮಾನ್ಯ ಮಕ್ಕಳಂತೆಯೇ ಕಾಣುತ್ತಾರೆ ಹಾಗೂ ಸಾಮಾನ್ಯರ ರೀತಿಯ ಎಲ್ಲಾ ಚಟುವಟಿಕೆ ಕೂಡ ಮಾಡುತ್ತಾರೆ. ಈ ರೋಗಪೀಡಿತರು ಇವತ್ತು ರಾಜ್ಯವನ್ನು ಕ್ರೀಡೆಯಲ್ಲಿಯೂ ಪ್ರತಿನಿಧಿಸಿದ್ದಾರೆ. ಬೆಂಗಳೂರಿನ ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆ (IGICH)ಯಲ್ಲಿ ಇಂತಹ 34 ಮಂದಿ ಗೌಚರ್ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. 2016ರಲ್ಲಿ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿ ಇದನ್ನು ಪ್ರಾರಂಭಿಸಲಾಯಿತು. ನಂತರ ಇದಕ್ಕೆ 2022ರಲ್ಲಿ ಕರ್ನಾಟಕದಲ್ಲಿ ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಿದ್ದಾಗ ಕೇಂದ್ರದಿಂದ ಪ್ರತಿ ಕುಟುಂಬಕ್ಕೆ ₹50 ಲಕ್ಷದಂತೆ ಒಟ್ಟು 34 ರೋಗಿಗೆ ಸುಮಾರು ₹18 ಕೋಟಿ ಸಹಾಯಧನ ಕೊಡಿಸಿದ್ದರು. ಜೊತೆಗೆ ರಾಜ್ಯ ಸರಕಾರವೂ ಇದಕ್ಕೆ ಯಾವುದೇ ರೀತಿಯ ತೊಂದರೆ ಆಗದಂತೆ ಅನುದಾನಗಳನ್ನು ಕೊಡುತ್ತಾ ಬಂದಿತು. ಈಗ ವರ್ತಮಾನದ ಸಿದ್ದರಾಮಯ್ಯನವರ ಸರಕಾರ ಈ ಸಾಲಿನಲ್ಲಿ ಕೊಡಬೇಕಾಗಿದ್ದ ₹14 ಕೋಟಿಯಲ್ಲಿ ಕೇವಲ ₹1.8 ಕೋಟಿ ಕೊಟ್ಟು ಉಳಿದ ಹಣವನ್ನು ಹಾಗೇ ಬಾಕಿ ಇಟ್ಟುಕೊಂಡಿದೆ. ದುಬಾರಿ ಎನ್‌ಜೈಮ್ ರೀಪ್ಲೇಸ್ಮೆಂಟ್ ಥೆರಪಿ (ERT) ಯನ್ನು ಸರಕಾರದ ಸಹಾಯ ಇಲ್ಲದೆ ಮಾಡುವುದು ರೋಗಿಗಳಿಗೆ ಆಸ್ಪತ್ರೆಗೆ ಕಷ್ಟದ ಕೆಲಸ. ಚಿಕಿತ್ಸೆಯ ವಿಳಂಬದ ಕಾರಣ ಪರಿಸ್ಥಿತಿ ಚಿಂತಾಜನಕವಾಯಿತು. ತಮ್ಮದೇ ರಾಜಕೀಯ ಕಚ್ಚಾಟದಲ್ಲಿ ಬಿದ್ದಿರುವ ಸರಕಾರಕ್ಕೆ ಈ ಬಡವರ ಕೂಗು ಹೇಗೆ ಕೇಳಬೇಕು. ಅದಕ್ಕೆ ಅವರು ಆಯ್ಕೆ ಮಾಡಿಕೊಂಡಿದ್ದು ವಿಧಾನಪರಿಷತ್ತಿನ ಮುಖ್ಯ ಸಚೇತಕರಾಗಿರುವ ಎನ್.ರವಿಕುಮಾರ್ ಅವರನ್ನು. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಎನ್.ರವಿಕುಮಾರ್ ಕೂಡಲೇ ಮುಖ್ಯಮಂತ್ರಿಯನ್ನು ಕಂಡು ದಾರಿ ಮಧ್ಯೆ ಅವರ ಕಾರಿನಲ್ಲಿ ಕೂತು ಮುಖ್ಯಮಂತ್ರಿಯವರಿಗೆ ಪರಿಸ್ಥಿತಿಯ ತೀವ್ರತೆಯ ಮನವರಿಕೆ ಮಾಡಿ ಅದಕ್ಕೊಂದು ಶಾಶ್ವತ ಪರಿಹಾರದ ಉಪಾಯವನ್ನು ಕೊಟ್ಟರು. ಇನ್ನೂ ಸರಕಾರ ಬಾಕಿ ಹಣ ಕೊಟ್ಟಿಲ್ಲ. ಸರಕಾರ ಈ ಬಗ್ಗೆ ಪರಿಶೀಲನೆ ಮಾಡಲು ಆರ್ಥಿಕ ಇಲಾಖೆಗೆ ಪತ್ರವನ್ನು ವರ್ಗಾಯಿಸಿದೆ.
ಇದೇನು ದೊಡ್ಡ ಅಪರಾಧವೇ? ರಾಜಕಾರಣ ಇರುವುದು ಕೇವಲ ಅಧಿಕಾರಕ್ಕೆ ಏರಲು ಮಾತ್ರವಲ್ಲ. ರಾಜಕಾರಣವೆಂಬುದು ಜನರ ಸೇವೆಗೆ ಮಾರ್ಗವಾಗಬೇಕು ಎಂಬ ವಾಕ್ಯದಂತೆ ಅವರು ನಡುಬೀದಿಯಲ್ಲಿ ಮುಖ್ಯಮಂತ್ರಿಯವರ ಕಾರನ್ನು ಏರಿ ಕೂತಾಗ ಈ ಕಲುಷಿತಗೊಂಡ ರಾಜಕೀಯ ವ್ಯವಸ್ಥೆಯಲ್ಲಿ ಜನ ತನ್ನ ವೈಚಾರಿಕ ಬದ್ಧತೆಯ ಬಗ್ಗೆ ಪ್ರಶ್ನೆ ಮಾಡಿಯಾರು, ಮಾಧ್ಯಮಗಳಲ್ಲಿ ಇಂತಹ ಸುದ್ದಿಗಳು ಹರಿದಾಗ ಅದಕ್ಕೆ ಸ್ಪಷ್ಟನೇ ಕೊಡುತ್ತಲೇ ಕೂರಬೇಕು, ತನ್ನ ವೈಯಕ್ತಿಕ ವರ್ಚಸ್ಸಿಗೆ ಇದು ಧಕ್ಕೆಯಾಗಲಿದೆ ಎನ್ನುವ ಯಾವ ಯೋಚನೆಯೂ ಅವರಲ್ಲಿ ಇರಲಿಲ್ಲ. ಆ ಕ್ಷಣಕ್ಕೆ ರಾಜ್ಯದ ಮುಖ್ಯಮಂತ್ರಿಗಳ ಗಮನವನ್ನು ತುರ್ತಾಗಿ ಇದರ ಕಡೆ ಹರಿಸಬೇಕಿತ್ತು. ಅದಷ್ಟನ್ನೇ ಅವರು ಮಾಡಿದ್ದು. ಆದರೆ ನಂತರ ಅವರ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದಾಗ ಬಹುತೇಕ ಜನರಿಗೆ ಅದರ ಹಿನ್ನಲೆ ಗೊತ್ತೇ ಇರಲಿಲ್ಲ. ಇನ್ನು ಕೆಲವರು ಅದರ ಹಿನ್ನೆಲೆಯನ್ನು ತಿಳಿಯುವುದಕ್ಕೂ ಹೋಗದೆ ತಮ್ಮ ಜಡ್ಜ್‌ಮೆಂಟ್‌ಗಳನ್ನು ಬರೆದೇ ಬಿಟ್ಟರು. ಆಗ ನನಗೆ ಅನಿಸಿದ್ದು ವಿಧಾನಪರಿಷತ್ತಿನ ಮುಖ್ಯ ಸಚೇತಕರೊಬ್ಬರು ಸಮಾಜ ಕಾರ್ಯಕ್ಕೆ ಸಾರ್ವಜನಿಕ ಸ್ಥಳದಲ್ಲಿ ಮುಖ್ಯಮಂತ್ರಿಯ ಕಾರಿನಲ್ಲಿ ಕುಳಿತೊಂಡು ಅಷ್ಟು ದೊಡ್ಡ ಅಪರಾಧ ಮಾಡಿದರಾ?
;Resize=(690,390))
)
;Resize=(128,128))
;Resize=(128,128))
;Resize=(128,128))
;Resize=(128,128))