ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದ ಕಿದ್ವಾಯಿ ಮೆಮೋರಿಯಲ್‌ ಕ್ಯಾನ್ಸರ್‌ ಆಸ್ಪತ್ರೆಯಲ್ಲಿ ಪ್ರೋಟೀನ್, ಟ್ರಾನ್ಸುಜುಮಬ್ ಸೇರಿದಂತೆ ಬಡರೋಗಿಗಳಿಗೆ ಅಗತ್ಯವಿರುವ ಎಲ್ಲಾ ಔಷಧಿಗಳನ್ನು ಪೂರೈಸುವಂತೆ ಆರೋಗ್ಯ ಸುರಕ್ಷಾ ಟ್ರಸ್ಟ್‌ನ ಕಾರ್ಯಕಾರಿ ನಿರ್ದೇಶಕ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್‌.ಪಾಟೀಲ್‌ ಸೂಚಿಸಿದ್ದಾರೆ.

ಕಿದ್ವಾಯಿ ಆಸ್ಪತ್ರೆಯ ನಿರ್ವಹಣೆ ವೈಫಲ್ಯ, ಅವ್ಯವಹಾರ ಹಾಗೂ ಅಕ್ರಮಗಳ ಬಗ್ಗೆ ಬಂದ ಅನಾಮಧೇಯ ದೂರಿನ ಹಿನ್ನೆಲೆಯಲ್ಲಿ ದಾಖಲಾಗಿದ್ದ ಸ್ವಯಂ ಪ್ರೇರಿತ ಪ್ರಕರಣದ ವಿಚಾರಣೆ ನಡೆಸಿದರು. ಬಡರೋಗಿಗಳಿಗೆ ಆರೋಗ್ಯ ಸೇವೆ ಒದಗಿಸುವ ವಿಚಾರದಲ್ಲಿ ಸರ್ಕಾರದ ಯೋಜನೆಗಳಾದ ಆಯುಷ್ಮಾನ್‌ ಭಾರತ ಹಾಗೂ ಆರೋಗ್ಯ ಕರ್ನಾಟಕದಲ್ಲಿನ ಕೆಲ ನಿರ್ಬಂಧಗಳನ್ನು ಸಡಿಲಗೊಳಿಸುವಂತೆ ಸೂಚಿಸಿ, ಈ ಬಗ್ಗೆ ವರದಿ ಸಲ್ಲಿಸುವಂತೆ ನಿರ್ದೇಶಿಸಿದರು.

ವೈದ್ಯರ ಕೊರತೆ ನೀಗಿಸಲು ಸೂಚನೆ:

ಆಸ್ಪತ್ರೆಯ ಮೆಡಿಕಲ್‌ ಆಂಕಾಲಜಿ ವಿಭಾಗದಲ್ಲಿ ವೈದ್ಯರ ಕೊರತೆ ನೀಗಿಸಲು ಸರ್ಕಾರ ಗಮನವಹಿಸಬೇಕು. ವಿವಿಧ ಪ್ರೋತ್ಸಾಹಗಳನ್ನು ನೀಡುವ ಮುಖಾಂತರ ವೈದ್ಯರನ್ನು ಆಕರ್ಷಿಸಿ ಕರ್ತವ್ಯ ನಿರ್ವಹಿಸಲು ಪ್ರೇರೇಪಿಸಬೇಕು. ನಿವೃತ್ತ ಉಪನ್ಯಾಸಕರು ಸಂಸ್ಥೆಗೆ ಬಂದು ಕರ್ತವ್ಯ ನಿರ್ವಹಿಸುವಂತೆ ಪ್ರೋತ್ಸಾಹಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.


ಶೇ.100ರಷ್ಟು ಸ್ವಚ್ಛತೆಗೆ ತಾಕೀತು:

ಆಸ್ಪತ್ರೆಯ ಧರ್ಮಶಾಲೆ, ಡಾರ್ಮೆಟರಿ ವಾರ್ಡ್‌, ಆವರಣದಲ್ಲಿ ಸ್ವಚ್ಛತೆ ಸುಧಾರಿಸಲು ತೆಗೆದುಕೊಂಡ ಕ್ರಮಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಶೇ.80ರಷ್ಟು ಸುಧಾರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದಾಗ, ಶೇ.100ರಷ್ಟು ಸ್ವಚ್ಛತೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು. ಕಿದ್ವಾಯಿ ಆಸ್ಪತ್ರೆಯ ನಿರ್ದೇಶಕ ಡಾ.ನವೀನ್‌, ಆರ್ಥಿಕ ಸಲಹೆಗಾರ ಹರೀಶ್‌, ಆಡಳಿತಾಧಿಕಾರಿ ವೆಂಕಟೇಶಪ್ಪ ವಿಚಾರಣೆಗೆ ಹಾಜರಾಗಿದ್ದರು. ಮುಂದಿನ ವಿಚಾರಣೆಯನ್ನು ಏ.24ಕ್ಕೆ ನಿಗದಿಗೊಳಿಸಲಾಗಿದೆ.

ಅನಾಮಧೇಯ ದೂರಿನ ಹಿನ್ನೆಲೆಯಲ್ಲಿ ಕಳೆದ ಸೆ.26ರಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್‌.ಪಾಟೀಲ್‌ ಅವರು ಖುದ್ದು ಕಿದ್ವಾಯಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ್ದರು. ಈ ವೇಳೆ ಹಲವು ಲೋಪದೋಷಗಳು ಕಂಡು ಬಂದಿದ್ದವು. ಈ ಸಂಬಂಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ವರದಿ ನೀಡುವಂತೆ ಸೂಚಿಸಿದ್ದರು.