-ಪ್ರೊ. ಮಾದೇವ ಭರಣಿ.
-ಇಂದು ಪರಮೇಶ್ವರ್ ಅವರಿಗೆ ಜನ್ಮ ದಿನ
ಶಿಕ್ಷಣ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ದಶಕಗಳ ಕಾಲ ಕಳಂಕ ರಹಿತವಾಗಿ ಉಳಿದು ಸಮಸ್ತ ಶೋಷಿತ ವರ್ಗವನ್ನು ಆಶಾದಾಯಕ ಬೆಳವಣಿಗೆಯ ನಿರೀಕ್ಷೆಯಲ್ಲಿ ಇಟ್ಟಿರುವ ಸವ್ಯಸಾಚಿ ಎಂದೇ ಬಿರುದಾಂಕಿತ ಕರ್ನಾಟಕ ಸರ್ಕಾರದ ಉಪಮುಖ್ಯಮಂತ್ರಿ ಡಾ। ಜಿ.ಪರಮೇಶ್ವರ್ ಅವರಿಗೆ ಆಗಸ್ಟ್-6 2026ರಂದು 75ನೇ ವರ್ಷದ ಅಮೃತ ಮಹೋತ್ಸವದ ಸಂಭ್ರಮ.
ಬಾಬಾ ಸಾಹೇಬರು ಪಟ್ಟ ನೋವು ಮತ್ತು ಛಲದಿಂದ ಸಾಧಿಸಿದ ಸಾಧನೆಗಳು ಪರಮೇಶ್ವರ್ ಅವರಿಗೆ ದಾರಿ ದೀಪವಾಗಿದೆ. ಕಠಿಣ ಪರಿಶ್ರಮದಿಂದ ಮೇಲೆ ಬಂದ ಪರಮೇಶ್ವರ್ ಅವರಿಗೆ ದೈನಂದಿನ ಬದುಕಿನಲ್ಲಿ ಅವರ ತಂದೆಯೇ ಆದರ್ಶ. ಅವರ ತಂದೆ, ಶಿಕ್ಷಣ ಭೀಷ್ಮರೆ೦ದೇ ಹೆಸರಾಗಿದ್ದ ಎಚ್.ಎಂ.ಗಂಗಾಧರಯ್ಯ ಅವರು ಮಹಾತ್ಮ ಗಾಂಧಿ ಅವರನ್ನು ಎರಡು ಬಾರಿ, ಬಾಬಾ ಸಾಹೇಬ ಅಂಬೇಡ್ಕರ್ ಅವರನ್ನು ಒ೦ದು ಬಾರಿ ಹಾಗೂ ಭೂದಾನ ಚಳುವಳಿಯ ನೇತಾರ ಸ೦ತ ವಿನೋಬಾ ಬಾವೆ ಅವರನ್ನು ಖುದ್ದು ಭೇಟಿ ಮಾಡಿ ಅವರ ಆಶಯಗಳನ್ನು ಮೈಗೂಡಿಸಿಕೊಂಡವರು. ಸಮಾಜಮುಖ ಕಾರ್ಯಗಳಿಗೆ ದಣೇವರಿಯದೇ ದುಡಿದವರು.
ಮಾದರಿ ಶಿಕ್ಷಣ ಸಂಸ್ಥೆಗಳು:
ಭಗವಾನ್ ಬುದ್ಧರು ಹಾಗೂ ಅಂಬೇಡ್ಕರ್ ಅವರ ಆಶಯಗಳೊಂದಿಗೆ 67 ವರ್ಷಗಳ ಹಿಂದೆ ತುಮಕೂರಿನಲ್ಲಿ ಆರಂಭಿಸಿದ ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆ, ಇಂದು ಬೆಳೆದು ಆಲದ ಮರವಾಗಿ ಶಿಕ್ಷಣ ಕ್ಷೇತ್ರದಲ್ಲಿ ನಾಡಿನ ಉದ್ದಗಲಕ್ಕೂ ಪಸರಿಸಿದೆ. ಶಿಕ್ಷಣ ಸಾಮ್ರಾಜ್ಯವನ್ನೇ ಕಟ್ಟಿದ ಅವರ ತಂದೆ, ಬುದ್ಧ ತತ್ವಗಳ ಸೂಕ್ಷ್ಮತೆ ಮತ್ತು ಬಾಬಾ ಸಾಹೇಬರ ಹೋರಾಟವನ್ನು ಬಲ್ಲವರಾಗಿದ್ದರು. ಶಿಕ್ಷಣ ಸಂಘಟನೆ ಮತ್ತು ಹೋರಾಟವೇ ಅವರ ಮಾರ್ಗವಾಗಿತ್ತು. ಶಿಕ್ಷಣವಿಲ್ಲದೇ ಸಾಧನೆ ಇಲ್ಲ ಎ೦ಬುದನ್ನು ಪರಮೇಶ್ವರರು ಬಹುಬೇಗ ಕ೦ಡುಕೊ೦ಡರು.
ತಂದೆಯವರ ಆದರ್ಶಗಳನ್ನು ಚಾಚೂ ತಪ್ಪದೇ, ಶಿಕ್ಷಣ ಸಂಸ್ಥೆಗಳ ಉಸ್ತುವಾರಿ ಹೊತ್ತು ನರ್ಸರಿಯಿಂದ ವೈದ್ಯಕೀಯ ಶಿಕ್ಷಣದವರೆಗೂ ಸಂಸ್ಥೆಗಳನ್ನು ಕಡಲಾಚೆಯೂ ಕಟ್ಟಿ ಬೆಳೆಸಿದವರು. ಕರ್ನಾಟಕ ಸರ್ಕಾರದ ಮೊದಲ ದಲಿತ ಉಪಮುಖ್ಯಮಂತ್ರಿಯಾಗಿ ಶಿಕ್ಷಣ, ಗೃಹ, ಐಟಿಬಿಟಿ, ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ ಕಾರ್ಯನಿರ್ವಹಿಸಿ, ಈಗ ಕಂದಾಯ, ಕ್ರೀಡಾ ಖಾತೆಯ ಜೊತೆಗೆ ಉಪಮುಖ್ಯಮಂತ್ರಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ.ತುಮಕೂರು ವಿಶ್ವವಿದ್ಯಾಲಯದ ಸ್ಥಾಪನೆ ಹಾಗೂ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯನ್ನು ಭಾರತದಲ್ಲೇ ಮೊಟ್ಟ ಮೊದಲ ಡೀಮ್ಡ್ ವಿಶ್ವವಿದ್ಯಾನಿಲಯವಾಗಿ ಪರಿವರ್ತಿಸಿದವರು. ಜೊತೆಗೆ ಅಲಗಿನ ಮೇಲಿನ ಎಚ್ಚರದ ನಡಿಗೆಯಂತಹ ಪಾರದರ್ಶಕತೆ ಹಾಗೂ ಎಲ್ಲೂ ಆಡಳಿತಾತ್ಮಕವಾಗಿ ಹದಗೆಡದಂತಹ ಜನಪರ ರಾಜಕಾರಣ ಸಾರ್ವಜನಿಕ ಸಮತೂಕದ ಬದುಕು ಪಮೇಶ್ವರ್ ಅವರದ್ದು. ಅವರ ಬದುಕು ಬುದ್ಧನ ಕರುಣೆ ಮತ್ತು ಬಸವಣ್ಣನವರ ಜಾತ್ಯತೀತ ನಿಲುವಿನಿಂದ ಕೂಡಿದೆ. ಸಂಯಮ ಮತ್ತು ಉದಾತ್ತ ಭಾವದಿಂದ ಸಾಮಾಜಿಕ ತಲ್ಲಣಗಳಿಗೆ ಸಂವೇದನಾಶೀಲರಾಗಿದ್ದಾರೆ. ತುಳಿತಕ್ಕೆ ಒಳಗಾದವರ ನೋವಿನ ಮತ್ತು ಅಪಮಾನದ ಬದುಕಿಗೆ ಯಾರು ಕಾರಣ ಎಂಬುದು ಅವರಿಗೆ ಅರಿವಿದೆ. ಇಡೀ ಜೀವನದಲ್ಲಿ ಏರುಧ್ವನಿಯಲ್ಲಿ ಮಾತನಾಡಿದವರಲ್ಲ. ತುಟಿ ಮೀರದ ನಡೆನುಡಿ ಅವರದ್ದು. ಎಂತಹ ಪರಿಸ್ಥಿತಿಯಲ್ಲಿಯೂ ತಾಳ್ಮೆ ಕಳೆದುಕೊಳ್ಳುವುದಿಲ್ಲ. ನ್ಯಾಯದ ವಿಚಾರ ಬಂದಾಗ ಜಾತಿ, ಧರ್ಮಗಳನ್ನು ನೋಡುವುದಿಲ್ಲ. ಸರ್ವಜನಾಂಗದ ಶಾಂತಿಯ ತೋಟವಾಗಿ ಪ್ರತಿದಿನವೂ ಕಂಗೊಳಿಸಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಹನಶೀಲತೆ ಕಾಪಾಡಿಕೊಂಡು ಅಜಾತ ಶತ್ರುವಾಗಿ ಸದಾ ಆತ್ಮವಿಶ್ವಾಸದ ಚಿಂತನಾ ಕ್ರಮವನ್ನು ಪಾಲಿಸುತ್ತಿದ್ದಾರೆ.
ಆಳವಾದ ಅ೦ತಃಕರಣದ ವ್ಯಕ್ತಿತ್ವ:
ಬೆ೦ಗಳೂರಿನ ಹೆಬ್ಬಾಳದ ಕೃಷಿ ವಿಶ್ವವಿದ್ಯಾಲಯದಲ್ಲಿ ಎಂ.ಎಸ್ಸಿ ಕೃಷಿ ಪದವಿ ಪಡೆದು, 1980ರಲ್ಲಿ ಆಸ್ಟ್ರೇಲಿಯಾದ ಅಡಿಲೇಡ್ ವಿಶ್ವ ವಿದ್ಯಾಲಯದಲ್ಲಿ ಪಿ.ಎಚ್.ಡಿ ಪದವಿ ಪಡೆದು 1984ಕ್ಕೆ ತುಮಕೂರಿಗೆ ಆಗಮಿಸಿದರು. ಬಳಿಕ ತಂದೆಯವರು ಸ್ಥಾಪಿಸಿದ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿಯಾಗಿ ತಮ್ಮ ವೃತ್ತಿ ಬದುಕು ಪ್ರಾರಂಭಿಸಿದರು.
ಪರಮೇಶ್ವರರ ವ್ಯಕ್ತಿತ್ವ ಒಳಗೂ-ಹೊರಗೂ ಒಂದೇ ಆಗಿದೆ. ಬೌದ್ಧ ಬಿಕ್ಕುಗಳ ಹಾಗೆ ಆಳವಾದ ಅ೦ತಃಕರಣದಿ೦ದ ಮನುಷ್ಯರನ್ನು ನೋಡುವ ಅವರ ಗುಣ ಎಷ್ಟೋ ಜನರ ಬದುಕನ್ನು ಅರಳಿಸಿದೆ. ಎ೦ತಾ ಕಠಿಣ ಪರಿಸ್ಥಿತಿಯಲ್ಲಿಯೂ ಅವರು ವಿಚಲಿತರಾಗದೇ ಶಾಂತಚಿತ್ತರಾಗಿ, ಪರಿಸ್ಥಿತಿಯನ್ನು ನಿಭಾಯಿಸುವ ಕ್ರಮ ಅನುಪಮವಾಗಿದೆ. ಜಿ.ಪರಮೇಶ್ಚರರು ತಮ್ಮನ್ನು ತಾವು ಕಂಡುಕೊಳ್ಳಲು ಸಮಾಜಮುಖಿ ಮಾರ್ಗವನ್ನೇ ಅನುಸರಿಸಿದರು. ಹೀಗೆ ತಮ್ಮನ್ನು ತಾವು ಕಂಡುಕೊಳ್ಳುವುದು ಬಹುಕಷ್ಟಕರ. ಈ ಸಾಧನೆಗೆ ಆತ್ಮಸ್ಥೈರ್ಯ ಬೇಕು. ಸಮಾಜವೊಂದರ ಆತ್ಮ ಸಾ೦ಗತ್ಯವಿರಬೇಕು. ಅದನ್ನು ಸಾಧಿಸಲು ನಿರಂತರ ತುಡಿತವಿರಬೇಕು. ಆ ಮೂಲಕ ಒಳಲೋಕ-ಹೊರಲೋಕಗಳ ಸಮಾಗಮವಾಗುತ್ತಿರಬೇಕು. ಇಂತಹ ಆನುಭಾವಿಕ ನಡೆಯನ್ನು ಈಗಾಗಲೇ ಅವರು ತೋರಿಸಿದ್ದಾರೆ. ಉನ್ನತ ವಿದ್ಯೆ-ಉನ್ನತ ಹುದ್ದೆ ಮತ್ತು ಸಂಪತ್ತು ಬರಿಸಿದರೂ ಅವರ ಬಗೆಗಿನ ಸಾಮಾಜಿಕ ಮನೋಭಾವದಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ ಎಂಬುದನ್ನು ಅವರ ಅನುಭವದಲ್ಲೇ ತೋರಿಸಿದ್ದಾರೆ. ಹುಟ್ಟಿದ ಕುಲ ಕುಲವಲ್ಲ. ಛಲವೇ ಕುಲ, ಗುಣವೇ ಕುಲ, ಸ್ವಾಭಿಮಾನವೇ ಕುಲ. ಪರಾಕ್ರಮವೇ ಕುಲ ಎ೦ದು ಮಹಾಕವಿ ಪಂಪ ಸಾವಿರ ವರ್ಷಗಳ ಹಿಂದೆಯೇ ಕರ್ಣನ ಪಾತ್ರದ ಮೂಲಕ ತಿಳಿಸಿದ್ದಾರೆ.
ತಾಳ್ಮೆಯ ಸ್ವರೂಪ ಪರಮೇಶ್ವರ್:
ಹೀಗೆ ನಿಷ್ಠಳಂಕ ವ್ಯಕ್ತಿತ್ವದಿಂದ ಕೂಡಿದ, ವಿಶಾಲ ಹೃದಯ ಸಂಸ್ಕಾರದ ಮನೋಭಾವದಿಂದ ಪರಮೇಶ್ವರರ ಎದೆಯ ಧನಿಗಳಲ್ಲಿ ಸದಾ ಬುದ್ಧ ಹಾಗೂ ಅಂಬೇಡ್ಕರರ ಸಂವಿಧಾನವಿರುತ್ತದೆ. 75ರ ವಯಸ್ಸಲ್ಲೂ ಹಸನ್ಮುಖಿಯಾಗಿಯೇ ಸಮಾಜಕ್ಕೆ ರೂಪಕವಾಗಿದ್ದಾರೆ. ರಾಜಕೀಯ ಜೀವನದಲ್ಲಿ ಅವರು ಅನೇಕ ಸುನಾಮಿಗಳನ್ನು ಎದುರಿಸಿಯೂ ಏನೂ ನಡೆದಿಲ್ಲ ಎನ್ನುವ ತಾಳ್ಮೆ ಉಳ್ಳವರಾಗಿದ್ದಾರೆ. ಅವರು ಪ್ರಚಾರ ಪಡೆಯುವ ಜಾಯಮಾನದವರಲ್ಲ. ಕಾಲವೇ ಅವರ ಮಹತ್ವವನ್ನು ಸಾರುತ್ತಾ ಬಂದಿದೆ. ಈ ಕಾರಣದಿಂದಲೇ ಪರಮೇಶ್ವರ ಅವರು ರಾಜ್ಯ ರಾಜಕಾರಣದಲ್ಲಿ ಕಪ್ಪು ಚುಕ್ಕೆ ಇಲ್ಲದ ಮಾದರಿ ರಾಜಕಾರಣಿ ಎನಿಸಿದ್ದಾರೆ.
ಎಲ್ಲೂ ಹದಗೆಡದಂತಹ ಸಮತೂಕದ ಬದುಕು ಹಾಗೂ ತಮ್ಮ ಸ೦ಯಮೀ ಗುಣದಿಂದಲೇ ಅಪಾರ ಯಶಸ್ಸು ಸಾಧಿಸಿ ಅನನ್ಯ ಮಾದರಿ ರೂಪಿಸಿದವರು. ಅಧಿಕಾರ ಮತ್ತು ಸಂಪತ್ತಿನ ನಡುವೆಯೂ ಬದುಕಿನ ಆದರ್ಶ ಮರೆತಿದ್ದೇ ಇಲ್ಲ. ಅನುಕ್ಷಣ ಒಳಿತನ್ನೇ ಮಾಡಬೇಕೆಂಬ ಅವರ ಜೀವ ಕಾರುಣ್ಯದ ಛಲ ಬದ್ಧತೆಗಳು ಮುಂದಿನ ದಿನಗಳಲ್ಲಿ ಇಡೀ ನಾಡನ್ನು ಮುನ್ನಡೆಸಬಲ್ಲಂತಹ ಆಧಿಕಾರದ ಅವಕಾಶಗಳು ಬರಲಿ ಎಂಬುದೇ, ಎಲ್ಲರ ಆಶಯ.
