ಡಿಸಿಎಂ ಆದ ಬಳಿಕ ಜಿಲ್ಲೆಗೆ ಭೇಟಿ ಕೊಟ್ಟ ಪರಮೇಶ್ವರ್‌ । ಶಾಸಕ ರಾಜಣ್ಣ ಮನೆಗೆ ಭೇಟಿ । ನಮ್ಮ ಭೇಟಿ ಹೊಸದೇನಲ್ಲ: ಪರಂ

ಕನ್ನಡಪ್ರಭ ವಾರ್ತೆ ತುಮಕೂರು

ಉಪ ಮುಖ್ಯಮಂತ್ರಿಯಾದ ಬಳಿಕ ಇದೇ ಮೊದಲ ಬಾರಿಗೆ ಡಾ. ಜಿ. ಪರಮೇಶ್ವರ್ ತುಮಕೂರಿಗೆ ಆಗಮಿಸಿದರು.

ತುಮಕೂರಿನ ಬಟವಾಡಿ ವೃತ್ತದಿಂದ ತೆರದ ವಾಹನದಲ್ಲಿ ಮೆರವಣಿಗೆ ಮೂಲಕ ಅವರ ಅಭಿಮಾನಿಗಳು ಬರ ಮಾಡಿಕೊಂಡರು.

ತುಮಕೂರಿಗೆ ಬರುತ್ತಿದ್ದಂತೆ ಪಟಾಕಿ ಸಿಡಿಸಿ ಹರ್ಷ ವ್ಯಕ್ತಪಡಿಸಿದರು. ಪರಮೇಶ್ವರ್ ಅವರಿಗೆ ಅವರ ಅಭಿಮಾನಿಗಳು ಜೈಕಾರ ಹಾಕಿದರು. ತುಮಕೂರಿಗೆ ಪರಮೇಶ್ವರ್ ಆಗಮಿಸಿದ ಕೂಡಲೇ ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರ ಮನೆಗೆ ಭೇಟಿ ನೀಡಿದರು.


ಬಳಿಕ ಮಾತನಾಡಿದ ಅವರು, ರಾಜಣ್ಣ ಅವರದ್ದು ನನ್ನದು 50 ವರ್ಷದ ಸ್ನೇಹ. ನಾವೆಲ್ಲಾ ಒಟ್ಟಿಗೆ ರಾಜಕಾರಣ ಮಾಡಿದವರು. 2028ಕ್ಕೆ ನಮ್ಮ ಪಕ್ಷವನ್ನು ಅಧಿಕಾರಕ್ಕೆ ತರುವುದಕ್ಕೆ ಎಲ್ಲಾ ಪ್ರಯತ್ನಗಳನ್ನು ಮಾಡಬೇಕು. ಹಾಗಾಗಿ ನಾವೆಲ್ಲಾ ಇವತ್ತು ಒಟ್ಟಿಗೆ ಇದಿವಿ‌‌ ಅಂತ ಸಂದೇಶ ಹೋಗಬೇಕಲ್ಲಾ ಅದಕ್ಕಾಗಿ ಅಲ್ಲದರ ನನ್ನ ಆತ್ಮೀಯ ಸ್ನೇಹಿತ‌ರೂ ಆಗಿರುವುದರಿಂದ ಭೇಟಿ ಮಾಡಿದ್ದಾಗಿ ತಿಳಿಸಿದರು.

ರಾಜಣ್ಣ ಅವರು ಸುದೀರ್ಘ ಕಾಲ ರಾಜಕಾರಣ ಮಾಡಿದ್ದಾರೆ. ವಿಶೇಷವಾಗಿ ಸಹಕಾರಿ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಹಾಗಾಗಿ ನಮ್ಮ ಭೇಟಿ ಹೊಸದೇನಲ್ಲ. ಅನಿರೀಕ್ಷಿತನು ಅಲ್ಲ ಎಂದರು.

ಕೆ.ಎನ್. ರಾಜಣ್ಣಗೆ ಮತ್ತೆ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತೀರ ಎಂಬ ಪ್ರಶ್ನಗೆ ಪ್ರಯತ್ನ ಮಾಡ್ತಾ ಇದ್ದೀವಿ. ಯಾವಾಗಲೂ ವಿಶ್ವಾಸ ಇಟ್ಟುಕೊಂಡೆ ಅಲ್ವಾ ಪ್ರಯತ್ನ ಮಾಡಬೇಕು ಎಂದರು.

ತುಮಕೂರಿಗೆ ಸಿಎಂ ಭೇಟಿ ವಿಚಾರದ ಬಗ್ಗೆ ಮಾತನಾಡಿ, ಸಿಎಂ ಅವರದ್ದು ಖಾಸಗಿ ಭೇಟಿ. ನೊಣವಿನಕೆರೆ ಮಠಕ್ಕೆ ಭೇಟಿ ಕೊಡುತ್ತಿದ್ದಾರೆ. ಖಾಸಗಿ ಭೇಟಿಯಾದ್ದರಿಂದ ನಾನು ಹೋಗ್ತಾ ಇಲ್ಲ ಎಂದರು. ತಮಗೆ ಸಿಎಂ ಸ್ಥಾನ ಕೈ ತಪ್ಪಿದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ ನಮ್ಮಲ್ಲಿ ಹೈಕಮಾಂಡ್‌ನವರು ಏನು ತೀರ್ಮಾನ ತಗೆದುಕೊಳ್ಳುತ್ತಾರೋ ಅದಕ್ಕೆ ಬದ್ಧವಾಗಿರುತ್ತೇವೆ ಎಂದರು.

ಶಿವಕುಮಾರ್ ಅವರು ಅಪಾರವಾದ ಅನುಭವ ಇರುವಂತಹವರು. ಅವರು ಉಪ ಮುಖ್ಯಮಂತ್ರಿಗಳು ಆಗಿದ್ದರು. ಕೆಪಿಸಿಸಿ ಅಧ್ಯಕ್ಷರಾಗಿದ್ದರು. ಹಾಗಾಗಿ ಅವರನ್ನು ಈ ಸಂದರ್ಭದಲ್ಲಿ ಹೈಕಮಾಂಡ್ ಪರಿಗಣಿಸಿದ್ದಾರೆ. ನಾವೆಲ್ಲರೂ ಅವರ ಜೊತೆಯಲ್ಲಿ ಒಟ್ಟಾಗಿ ಕೆಲಸ ಮಾಡುವುದಾಗಿ ತಿಳಿಸಿದರು.

ಮೂರು ವರ್ಷ ಸತತವಾಗಿ ಸಿದ್ದರಾಮಯ್ಯ ನವರು ಒಳ್ಳೆಯ ಆಡಳಿತ ಕೊಟ್ಟಿದ್ದಾರೆ. ಹಣಕಾಸಿನ ಶಿಸ್ತನ್ನು ಕಾಪಾಡಿದ್ದಾರೆ. ಅದಕ್ಕಾಗಿ ನಾವು ಅವರಿಗೆ ಅಭಿನಂದನೆ ಹೇಳಬೇಕಾಗುತ್ತದೆ. ಕ್ಯಾಬಿನೆಟ್‌ನಲ್ಲಿ ಹೇಳಿದ್ದೇವೆ ಎಂದರು.

ಡಿಸಿಎಂ ಆಗಿರುವುದು ನಿಮಗೆ ತೃಪ್ತಿ ಇದಿಯಾ ಎಂಬ ಪ್ರಶ್ನೆಗೆ ತೃಪ್ತಿ ಯಾವಾಗಲೂ ಇರುತ್ತದೆ. ಅತೃಪ್ತಿಯಾಗಿ ಯಾವತ್ತು ಇಲ್ಲ ನಾನು. ತೃಪ್ತಿಯಾಗಿಯೇ ಇದ್ದೀನಿ ನಾನು ಎಂದರು.

ರಾಮಲಿಂಗಾ ರೆಡ್ಡಿ ರಾಜಿನಾಮೆ ವಿಚಾರದ ಬಗ್ಗೆ ಮುಖ್ಯಮಂತ್ರಿಗಳು ಅವರ ಜೊತೆ ರಾತ್ರಿ ಮಾತನಾಡಿದ್ದಾರೆ. ಅವರ ಮಧ್ಯೆ ಏನ್ ಚರ್ಚೆ ನಡೆಯಿತು ಅದು ನಮ್ಮ ಗಮನದಲ್ಲಿ ಇಲ್ಲ. ನನಗೆ ಬಂದ ಮಾಹಿತಿ ಪ್ರಕಾರ ಅವರನ್ನು ಒಪ್ಪಿಸುತ್ತಿದ್ದಾರೆ ಅಂತ ಹೇಳಿದ್ದಾರೆ. ಅವಶ್ಯಕತೆ ಇದ್ದರೆ ನಾನು ಅವರ ಬಳಿ ಮಾತನಾಡುವುದಾಗಿ ತಿಳಿಸಿದರು.

ಎರಡನೇ ಲಿಸ್ಟ್‌ನಲ್ಲಿ ರಾಜಣ್ಣ ಅವರ ಹೆಸರು ಇರಬಹುದಾ ಎಂಬ ಪ್ರಶ್ನೆಗೆ ತುಮಕೂರಿಗೆ ಇನ್ನೊಂದು ಸ್ಥಾನ ಕೊಡಿ ಅಂತ ಎಂದರು. ನಿಮಗೆ ಸಿಎಂ ಸ್ಥಾನ ಸಿಗುತ್ತಾ ಎಂಬ ವಿಚಾರಕ್ಕೆ ಅದನ್ನು ಮುಂದೆ ನೊಡೋಣ ಎಂದರು.

ಕೆಪಿಸಿಸಿ ಅಧ್ಯಕ್ಷ ಸ್ಥಾನ ಸತೀಶ್ ಜಾರಕಿಹೊಳಿಗೆ ಕೈತಪ್ಪಿದ ವಿಚಾರದ ಬಗ್ಗೆ ಮಾತನಾಡಿ ಆ ರೀತಿ ಏನಿಲ್ಲ. ಕೊಡುವುದಾಗಿ ಯಾರಿಗೂ ಯಾರು ಭರವಸೆ ಕೊಟ್ಟಿರಲಿಲ್ಲ ಎಂದರು.