ದೆಹಲಿಯ ವಿದ್ಯಾರ್ಥಿ ಚಳುವಳಿಗೆ ವಿರಾಮ ದೊರೆತ ಬೆನ್ನಲ್ಲೇ ಸಂಪುಟ ವಿಸ್ತರಣೆ ಕುರಿತು ಚರ್ಚೆಗೆ ರಾಜ್ಯ ನಾಯಕರಿಗೆ ದೆಹಲಿಯಿಂದ ಬುಲಾವ್‌ ಬಂದಿದ್ದು, ಸೋಮವಾರ ದೆಹಲಿಯಲ್ಲಿ ಹೈಕಮಾಂಡ್‌ ಚರ್ಚೆಗೆ ಸಮಯ ನಿಗದಿಯಾಗಿದೆ.

ಬೆಂಗಳೂರು : ದೆಹಲಿಯ ವಿದ್ಯಾರ್ಥಿ ಚಳುವಳಿಗೆ ವಿರಾಮ ದೊರೆತ ಬೆನ್ನಲ್ಲೇ ಸಂಪುಟ ವಿಸ್ತರಣೆ ಕುರಿತು ಚರ್ಚೆಗೆ ರಾಜ್ಯ ನಾಯಕರಿಗೆ ದೆಹಲಿಯಿಂದ ಬುಲಾವ್‌ ಬಂದಿದ್ದು, ಸೋಮವಾರ ದೆಹಲಿಯಲ್ಲಿ ಹೈಕಮಾಂಡ್‌ ಚರ್ಚೆಗೆ ಸಮಯ ನಿಗದಿಯಾಗಿದೆ. ಎಲ್ಲ ಅಂದುಕೊಂಡಂತೆ ಆದರೆ ವಿಸ್ತರಣೆ ಬುಧವಾರ ನಡೆಯುವ ಸಾಧ್ಯತೆ ಇದೆ.

ಬೆಂಗಳೂರಲ್ಲೇ ಇರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾನುವಾರ ಬೆಳಗ್ಗೆ ದಿಲ್ಲಿಗೆ ಹೋಗಲಿದ್ದು, ಸಂಜೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ರಾಜಧಾನಿಗೆ ತೆರಳಲಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್‌ ಅವರು ಸೋಮವಾರ ದೆಹಲಿಗೆ ತೆರಳಲಿದ್ದಾರೆ.

ಸೋಮವಾರ ವರಿಷ್ಠರೊಂದಿಗೆ ಸಂಪುಟ ವಿಸ್ತರಣೆ ಕುರಿತು ಸಭೆ ನಡೆಯಲಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ ಬುಧವಾರ ನೂತನ ಸಚಿವರು ಪ್ರಮಾಣವಚನ ಸ್ವೀಕಾರ ಮಾಡುವ ಸಾಧ್ಯತೆಯಿದೆ.

ಸಂಪುಟ ವಿಸ್ತರಣೆ ಕುರಿತು ವರಿಷ್ಠರೊಂದಿಗೆ ಈಗಾಗಲೇ ಪೂರ್ವ ಭಾವಿ ಸಭೆಗಳು ನಡೆದಿದ್ದು, ರಾಜ್ಯ ನಾಯಕರು ಹಾಗೂ ಎಐಸಿಸಿ ನಾಯಕರು ಪ್ರತ್ಯೇಕ ಪಟ್ಟಿಗಳನ್ನು ನೀಡಿದ್ದಾರೆ. ಸೋಮವಾರ ನಡೆಯಲಿರುವ ಸಭೆಯಲ್ಲಿ ಈ ಪಟ್ಟಿಗಳ ಪರಿಶೀಲಿಸಿ ದಲಿತ, ಹಿಂದುಳಿದ ವರ್ಗಗಳಿಗೆ ಆದ್ಯತೆ ಹಾಗೂ ಜಿಲ್ಲಾವಾರು ಪ್ರಾತಿನಿಧ್ಯತೆ ಪರಿಗಣಿಸಿ ಅಂತಿಮ ಪಟ್ಟಿಗೆ ಹೈಕಮಾಂಡ್‌ ಅಸ್ತು ನೀಡಲಿದೆ ಎಂದು ಮೂಲಗಳು ತಿಳಿಸಿವೆ.

ಜೂ. 3 ರಂದೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಮಾಣವಚನ

ಜೂ. 3 ರಂದೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ 13 ಮಂದಿ ಸಚಿವರು ಪ್ರಮಾಣವಚನ ಸ್ವೀಕರಿಸಿದ್ದರು. ಬಳಿಕ 50ಕ್ಕೂ ಹೆಚ್ಚು ದಿನ ಕಳೆದರೂ ಸಂಪುಟ ವಿಸ್ತರಣೆಯಾಗಿ ಉಳಿದ ಖಾತೆಗಳು ಭರ್ತಿಯಾಗಿಲ್ಲ.

ರಾಜ್ಯಾದ್ಯಂತ ಬರ ಇದ್ದರೂ ಕೃಷಿ, ತೋಟಗಾರಿಕೆಯಂತಹ ಇಲಾಖೆ, ಶೈಕ್ಷಣಿಕ ವರ್ಷ ಆರಂಭವಾದರೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ಉನ್ನತ ಶಿಕ್ಷಣ ಇಲಾಖೆಗೆ ಸಚಿವರ ನೇಮಕ ಮಾಡಿಲ್ಲ ಎಂಬ ಟೀಕೆಗಳು ವ್ಯಕ್ತವಾಗುತ್ತಿದ್ದವು. ಜತೆಗೆ ಆಕಾಂಕ್ಷಿಗಳ ಒತ್ತಡವೂ ಹೆಚ್ಚಾಗುತ್ತಿತ್ತು.

ಹಲವು ಬಾರಿ ವರಿಷ್ಠರೊಂದಿಗೆ ರಾಜ್ಯ ನಾಯಕರು ಸಭೆ

ಇದರ ನಡುವೆ ಹಲವು ಬಾರಿ ವರಿಷ್ಠರೊಂದಿಗೆ ರಾಜ್ಯ ನಾಯಕರು ಸಭೆ ನಡೆಸಿದ್ದರೂ, ಈವರೆಗೆ ಅಂತಿಮ ತೀರ್ಮಾನ ಆಗಿಲ್ಲ.

ಕಳೆದ ವಾರ ರಾಜ್ಯ ನಾಯಕರು ವರಿಷ್ಠರನ್ನು ಭೇಟಿ ಮಾಡಲು ತೆರಳಿದ್ದರೂ ಕಾಕ್ರೋಚ್‌ ಜನತಾ ಪಕ್ಷದ ಹೋರಾಟದಿಂದಾಗಿ ಮುಂದೂಡಲ್ಪಟ್ಟಿತ್ತು. ಇದೀಗ ಕಾಕ್ರೋಚ್‌ ಹೋರಾಟಕ್ಕೆ ವಿರಾಮ ದೊರೆತಿರುವ ಹಿನ್ನೆಲೆಯಲ್ಲಿ ವರಿಷ್ಠರಿಂದ ಬುಲಾವ್‌ ಬಂದಿದೆ. ಹೀಗಾಗಿ ಈ ಬಾರಿ ಬಹುತೇಕ ಸಂಪುಟ ವಿಸ್ತರಣೆ ಅಂತಿಮವಾಗುವ ಸಾಧ್ಯತೆಯಿದೆ ಎನ್ನಲಾಗಿದೆ.