ತಂತ್ರಜ್ಞಾನವೇ ಪ್ರಮುಖ ರಾಜಕೀಯ ಅಸ್ತ್ರವಾಗುತ್ತಿರುವ ಈ ಕಾಲಘಟ್ಟದಲ್ಲಿ, ಭಾರತವು ಕೇವಲ ಕಡಿಮೆ ಲಾಭದಾಯಕ ಚಿಪ್ ಜೋಡಣೆಗೆ ಸೀಮಿತವಾಗದೆ, ಸ್ವತಂತ್ರ ಚಿಪ್ ವಿನ್ಯಾಸ ಮತ್ತು ಎಐ ಇನ್ಫರೆನ್ಸ್ ಕ್ಷೇತ್ರದ ನಾಯಕತ್ವ ವಹಿಸಿಕೊಳ್ಳುವುದು ಅನಿವಾರ್ಯ.
-ರಾಜೀವ್ ಚಂದ್ರಶೇಖರ್
ಶಾಸಕ, ಕೇರಳ ಬಿಜೆಪಿ ಅಧ್ಯಕ್ಷ
ತಂತ್ರಜ್ಞಾನವೇ ಪ್ರಮುಖ ರಾಜಕೀಯ ಅಸ್ತ್ರವಾಗುತ್ತಿರುವ ಈ ಕಾಲಘಟ್ಟದಲ್ಲಿ, ಭಾರತವು ಕೇವಲ ಕಡಿಮೆ ಲಾಭದಾಯಕ ಚಿಪ್ ಜೋಡಣೆಗೆ ಸೀಮಿತವಾಗದೆ, ಸ್ವತಂತ್ರ ಚಿಪ್ ವಿನ್ಯಾಸ ಮತ್ತು ಎಐ ಇನ್ಫರೆನ್ಸ್ ಕ್ಷೇತ್ರದ ನಾಯಕತ್ವ ವಹಿಸಿಕೊಳ್ಳುವುದು ಅನಿವಾರ್ಯ. ಇಡೀ ಜಗತ್ತಿಗೇ ಚಿಪ್ ಬೇಕು. ಹೀಗಾಗಿ ಚಿಪ್‌ಗಳನ್ನು ಯಾರು ವಿನ್ಯಾಸಗೊಳಿಸುತ್ತಾರೋ ಅವರೇ ಈ ಶತಮಾನದ ಕಥೆಯನ್ನು ಬರೆಯಲಿದ್ದಾರೆ.
ಚರಿತ್ರೆಯಲ್ಲಿ ಇದೇ ಮೊದಲ ಬಾರಿಗೆ, ತಂತ್ರಜ್ಞಾನ ಎಂಬುದು ಆರ್ಥಿಕ ಬೆಳವಣಿಗೆಯನ್ನು ಮುನ್ನಡೆಸುವ ಹಲವು ಅಂಶಗಳಲ್ಲಿ ಒಂದಾಗಿ ಮಾತ್ರ ಉಳಿದಿಲ್ಲ. ಬದಲಿಗೆ, ಇತರ ಎಲ್ಲಾ ಅಭಿವೃದ್ಧಿ ಹಾಗೂ ಪ್ರಗತಿಗೆ ಮೂಲ ಬುನಾದಿಯಾಗಿದೆ. ಮುಂಬರುವ ಮೂರು ವರ್ಷಗಳಲ್ಲಿ ಭಾರತವು ಸೆಮಿಕಂಡಕ್ಟರ್ ಮತ್ತು ಕೃತಕ ಬುದ್ಧಿಮತ್ತೆ (ಎಐ) ಕ್ಷೇತ್ರದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು, ಈ ಶತಮಾನದ ಜಾಗತಿಕ ಅರ್ಥವ್ಯವಸ್ಥೆಯಲ್ಲಿ ದೇಶವು ಪ್ರಮುಖ ಪಾತ್ರಧಾರಿಯಾಗಲಿದೆಯೇ ಎಂಬುದನ್ನು ನಿರ್ಧರಿಸಲಿವೆ.
ಸೆಮಿಕಂಡಕ್ಟರ್ ಉತ್ಪಾದನೆ ಕ್ಷೇತ್ರದಲ್ಲಿ ಪಾರಮ್ಯ ಸಾಧಿಸಿರುವುದರಿಂದಲೇ, ಇಂದು ತೈವಾನ್ ಜಾಗತಿಕ ಆರ್ಥಿಕತೆಗೆ ಅತ್ಯಗತ್ಯವಾಗಿದೆ. ಸ್ಯಾಮ್‌ಸಂಗ್ ಮತ್ತು ಎಸ್‌ಕೆ ಹೈನಿಕ್ಸ್ ಸಂಸ್ಥೆಗಳು ಎಐ ಚಿಪ್‌ಗಳ ತಾಂತ್ರಿಕ ಕ್ರಾಂತಿಯ ಅಲೆಯನ್ನು ಸದುಪಯೋಗಪಡಿಸಿಕೊಂಡಿದ್ದರಿಂದ, ದಕ್ಷಿಣ ಕೋರಿಯಾದ ‘ಕೋಸ್ಪಿ’ ಷೇರು ಮಾರುಕಟ್ಟೆ ಸೂಚ್ಯಂಕವು 2025ರಲ್ಲಿ ಶೇ.72 ರಷ್ಟು ಪ್ರಗತಿ ಸಾಧಿಸಿತು. ಚೀನಾ ದೇಶವು 2015ರಿಂದೀಚೆಗೆ ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಲು ಅಂದಾಜು 150 ಶತಕೋಟಿ ಡಾಲರ್ ಹೂಡಿಕೆ ಮಾಡಿದೆ. ಇತ್ತ ಅಮೆರಿಕ ಕೂಡ ‘ಚಿಪ್ಸ್ ಕಾಯ್ದೆ’ಯ ಮೂಲಕ 53 ಶತಕೋಟಿ ಡಾಲರ್ ನೇರ ಸಬ್ಸಿಡಿ ಘೋಷಿಸಿದ್ದು, ಇದು 450 ಶತಕೋಟಿ ಡಾಲರ್‌ಗಳ ಖಾಸಗಿ ಹೂಡಿಕೆಗೆ ಉತ್ತೇಜನ ನೀಡಿದೆ.
ಭಾರತದ ಸಾಮರ್ಥ್ಯ:
ತಾಂತ್ರಿಕ ಕ್ಷೇತ್ರದಲ್ಲಿ ಬೃಹತ್ ಸಾಧನೆ ಮಾಡಲು ಬೇಕಾಗುವ 3 ಪ್ರಮುಖ ಅಗತ್ಯತೆಗಳಲ್ಲಿ ಭಾರತ ಎರಡನ್ನು ಹೊಂದಿದೆ: ಜನಸಂಖ್ಯಾ ಸಾಮರ್ಥ್ಯ ಮತ್ತು ಬೌದ್ಧಿಕ ಶಕ್ತಿ. ನಮ್ಮ ಎಂಜಿನಿಯರ್‌ಗಳು ಹಾಗೂ ವಿಜ್ಞಾನಿಗಳು ಜಾಗತಿಕ ಎಐ ಮತ್ತು ಸೆಮಿಕಂಡಕ್ಟರ್ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದ್ದಾರೆ.
ಆದರೆ ಭಾರತವು ಐತಿಹಾಸಿಕವಾಗಿ ತಾಂತ್ರಿಕ ಸಾರ್ವಭೌಮತ್ವದ ವಿಷಯದಲ್ಲಿ ಅಗತ್ಯಕ್ಕಿಂತ ಕಡಿಮೆ ಹೂಡಿಕೆ ಮಾಡುತ್ತಾ ಬಂದಿದೆ. ಈ ಅಪಾಯವು ಈಗ ವೇಗವಾಗಿ ಹೆಚ್ಚುತ್ತಿದೆ. ಅಮೆರಿಕ ಸರ್ಕಾರವು ಕೆಲವು ನಿರ್ದಿಷ್ಟ ಎಐ ಮಾದರಿಗಳ ಲಭ್ಯತೆಯನ್ನು ನಿಯಂತ್ರಿಸಲು ಮುಂದಾಗಿದ್ದು, ತಂತ್ರಜ್ಞಾನ ನಿರಾಕರಣೆಯು ಭೌಗೋಳಿಕ ರಾಜಕೀಯ ಉಪಕರಣವಾಗಿದೆ ಎಂಬುದಕ್ಕೆ ಸ್ಪಷ್ಟ ಸಂಕೇತವಾಗಿದೆ. ತನ್ನ ಸ್ವಂತ ಸಾಮರ್ಥ್ಯವನ್ನು ಬೆಳೆಸಿಕೊಳ್ಳದ ಭಾರತವು, ಆ ವಿಭಜನೆಯ ತಪ್ಪು ಬದಿಯಲ್ಲಿ ಶಾಶ್ವತವಾಗಿ ಉಳಿದುಕೊಳ್ಳಬೇಕಾದ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ.
‘ಇಂಡಿಯಾ ಸೆಮಿಕಂಡಕ್ಟರ್ ಮಿಷನ್’ (ಐಎಸ್‌ಎಂ), ‘ಡಿಸೈನ್ ಲಿಂಕ್ಡ್ ಇನ್ಸೆಂಟಿವ್’ (ಡಿಎಲ್‌ಐ) ಮತ್ತು ‘ಇಂಡಿಯಾ ಎಐ ಮಿಷನ್’ಗಳು ಸರಿಯಾದ ಆರಂಭಿಕ ಹೆಜ್ಜೆಗಳಾಗಿವೆ. ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಈ ಯೋಜನಾ ಚೌಕಟ್ಟುಗಳನ್ನು ರೂಪಿಸಿದ ತಂಡದಲ್ಲಿ ನಾನೂ ಭಾಗಿಯಾಗಿದ್ದೆ. ಆದರೆ ಆರಂಭಿಕ ಹೆಜ್ಜೆಗಳೇ ಗಮ್ಯಸ್ಥಾನಗಳಲ್ಲ. ಈ ಅಡಿಪಾಯವನ್ನು ನಿಜವಾದ ತಾಂತ್ರಿಕ ವೇಗವಾಗಿ ಪರಿವರ್ತಿಸಲು ಭಾರತವು ಈಗ 2ನೇ ಮತ್ತು ಹೆಚ್ಚು ಬುದ್ಧಿವಂತ ಹೆಜ್ಜೆಗಳನ್ನು ಇಡಲಿದೆಯೇ ಎಂಬುದೇ ಪ್ರಸ್ತುತ ಇರುವ ಪ್ರಶ್ನೆಯಾಗಿದೆ.
ರಚನಾತ್ಮಕ ತೊಡಕುಗಳು:
‘ಸೆಮಿಕಾನ್ ಇಂಡಿಯಾ 2026’ರಲ್ಲಿ ಅಂಕಿಅಂಶಗಳು ಆಕರ್ಷಕವಾಗಿ ಕಂಡವು. 12 ಉತ್ಪಾದನಾ ಘಟಕಗಳಿಗೆ ಅನುಮೋದನೆ, 1.64 ಲಕ್ಷ ಕೋಟಿ ರು. ಬದ್ಧ ಹೂಡಿಕೆ ಹಾಗೂ 5 ಘಟಕಗಳು ಈಗಾಗಲೇ ಉತ್ಪಾದನೆಯಲ್ಲಿ ತೊಡಗಿವೆ. ಇದರ ಬೆನ್ನಲ್ಲೇ ಐಎಸ್‌ಎಂ 2.0 ಮೂಲಕ ಮತ್ತಷ್ಟು 1.275 ಲಕ್ಷ ಕೋಟಿ ರು. ಘೋಷಣೆಯಾಯಿತು. ಆದರೆ ಈ ಪ್ರಗತಿಯ ಹಿಂದೆ ಸ್ಪಷ್ಟವಾಗಿ ಗುರುತಿಸಬೇಕಾದ ಒಂದು ರಚನಾತ್ಮಕ ಸವಾಲಿದೆ. ಅನುಮೋದಿತ 12 ಘಟಕಗಳಲ್ಲಿ 9 ಘಟಕಗಳು ಸಾಂಪ್ರದಾಯಿಕ ಎಟಿಎಂಪಿ/ಒಎಸ್‌ಎಟಿ (ವೈರ್-ಬಾಂಡ್ ಜೋಡಣೆ, ಪರೀಕ್ಷೆ, ಮಾರ್ಕಿಂಗ್ ಮತ್ತು ಪ್ಯಾಕೇಜಿಂಗ್) ಸೌಲಭ್ಯಗಳಾಗಿವೆ. ಇವು ಮೌಲ್ಯವರ್ಧಿತ ಸರಪಳಿಯಲ್ಲಿ ಅತ್ಯಂತ ಕಡಿಮೆ ಲಾಭದಾಯಕ, ಸುಲಭವಾಗಿ ಪರ್ಯಾಯ ಕಂಡುಕೊಳ್ಳಬಹುದಾದ ಮತ್ತು ತಾಂತ್ರಿಕವಾಗಿ ಹಳೆಯದಾದ ವಿಭಾಗಕ್ಕೆ ಸೇರಿವೆ.
ಈ ರಚನಾತ್ಮಕ ಸವಾಲನ್ನು ಅರ್ಥೈಸಿಕೊಳ್ಳುವುದು ಅತ್ಯಗತ್ಯ. ಎಲೆಕ್ಟ್ರಾನಿಕ್ಸ್ ಉತ್ಪಾದನೆಗೆ ನೀಡಲಾದ ಪಿಎಲ್‌ಐ ಯೋಜನೆಯು ‘ಚೀನಾ + 1’ ತತ್ವದ ಮೇಲೆ ಯಶಸ್ವಿಯಾಯಿತು. ಆ್ಯಪಲ್ ಮತ್ತು ಸ್ಯಾಮ್‌ಸಂಗ್ ಸಂಸ್ಥೆಗಳಿಗೆ ತಮ್ಮ ಉತ್ಪಾದನಾ ನೆಲೆಗಳನ್ನು ವೈವಿಧ್ಯಗೊಳಿಸುವ ಅಗತ್ಯವಿತ್ತು, ಪಿಎಲ್‌ಐ ಪ್ರೋತ್ಸಾಹಕಗಳು ವೆಚ್ಚದ ಅಂತರವನ್ನು ಕಡಿಮೆ ಮಾಡಿದವು ಮತ್ತು ಭಾರತವು ಫಲಿತಾಂಶ ನೀಡಿತು. ಭಾರತವು ಇಂದು ಜಾಗತಿಕವಾಗಿ ಶೇ.25-28ರಷ್ಟು ಐಫೋನ್‌ಗಳನ್ನು ಜೋಡಣೆ ಮಾಡುತ್ತಿದೆ. ಇದು ಪ್ರಧಾನಿ ಮೋದಿಯವರ ಅತ್ಯಂತ ಪ್ರಭಾವಶಾಲಿ ಕೈಗಾರಿಕಾ ನೀತಿಯ ಸಾಧನೆಗಳಲ್ಲೊಂದಾಗಿದೆ.
ಚಿಪ್ ವಿನ್ಯಾಸದ ಅಗತ್ಯತೆ:
ಆದರೆ ಸೆಮಿಕಂಡಕ್ಟರ್‌ಗಳ ವಿಷಯದಲ್ಲಿ ಕೇವಲ ಪೂರೈಕೆ ಸರಪಳಿಯ ವೈವಿಧ್ಯೀಕರಣ ನಡೆಯುತ್ತಿಲ್ಲ, ಬದಲಿಗೆ ತಾಂತ್ರಿಕ ವಿನ್ಯಾಸದ ಕ್ರಾಂತಿಯೇ ನಡೆಯುತ್ತಿದೆ. ಎನ್‌ವಿಡಿಯಾ ಕಂಪನಿಯ ಡೇಟಾ ಸೆಂಟರ್ ಆದಾಯವು 2020ರಲ್ಲಿ 3 ಶತಕೋಟಿ ಡಾಲರ್‌ನಷ್ಟಿದ್ದುದು 2024ರ ವೇಳೆಗೆ 47 ಶತಕೋಟಿ ಡಾಲರ್‌ಗೆ ಏರಿಕೆಯಾಗಿದೆ. ಎಐ ಯುಗವು ಕಂಪ್ಯೂಟಿಂಗ್ ಮತ್ತು ಮೌಲ್ಯ ರಚನೆಯಲ್ಲಿ ಹೊಸ ಮಟ್ಟದ ಎತ್ತರವನ್ನು ಸೃಷ್ಟಿಸುತ್ತಿದೆ. ಈ ವಾತಾವರಣದಲ್ಲಿ, ಸಾಮಾನ್ಯ ವೈರ್-ಬಾಂಡ್ ಪ್ಯಾಕೇಜಿಂಗ್‌ನಲ್ಲಿ ಶೇ.6ರಷ್ಟು ಕಚ್ಚಾ ಲಾಭಾಂಶವಿದ್ದರೆ, ಸ್ವಂತ ಬೌದ್ಧಿಕ ಆಸ್ತಿ (ಐಪಿ) ಹೊಂದಿರುವ ಚಿಪ್ ವಿನ್ಯಾಸದಲ್ಲಿ ಶೇ.50-70ರಷ್ಟು ಭಾರಿ ಲಾಭಾಂಶದ ಅವಕಾಶವಿದೆ.
ಸಾಂಪ್ರದಾಯಿಕ ವೈರ್-ಬಾಂಡ್ ಪ್ಯಾಕೇಜಿಂಗ್ ನಿರಂತರವಾಗಿ ಲಾಭಾಂಶದ ಕುಸಿತವನ್ನು ಎದುರಿಸುತ್ತಿದೆ. ಆದರೆ ಜಿಪಿಯು ಹಾಗೂ ಮೆಮೊರಿಗಳನ್ನು ಸಂಯೋಜಿಸುವ ಸುಧಾರಿತ ಪ್ಯಾಕೇಜಿಂಗ್ ಶೇ.25-35ರಷ್ಟು ಲಾಭಾಂಶವನ್ನು ತಂದುಕೊಡುತ್ತದೆ. ಐಎಸ್‌ಎಂ 2.0 ನಮ್ಮನ್ನು ಆ ಹಂತಕ್ಕೆ ಕೊಂಡೊಯ್ಯಬೇಕಿದೆ.
ಹೂಡಿಕೆಯ ತಂತ್ರಜ್ಞಾನವು ನಿರ್ಣಾಯಕವಾಗಿದೆ. ಇದನ್ನು ಚಿಪ್ ವಿನ್ಯಾಸದ ಬೌದ್ಧಿಕ ಆಸ್ತಿ (ಡಿಸೈನ್ ಐಪಿ), ಸಂಶೋಧನಾ ಸಂಸ್ಥೆಗಳು ಮತ್ತು ಫ್ಯಾಬ್ ಸಾಮರ್ಥ್ಯಗಳತ್ತ ನಿರ್ದೇಶಿಸಬೇಕು. ಪ್ರಸ್ತುತ ಭಾರತದಲ್ಲಿ ಅಗತ್ಯ ತೀಕ್ಷ್ಣ ತಾಂತ್ರಿಕ ಜ್ಞಾನವಿರುವ ಪ್ರತ್ಯೇಕ ಸೆಮಿಕಂಡಕ್ಟರ್ ಸಂಶೋಧನಾ ಸಂಸ್ಥೆಗಳಿಲ್ಲ. ಸರ್ಕಾರ ಮತ್ತು ಉದ್ಯಮ ರಂಗ ಜಂಟಿ ಹೂಡಿಕೆ ಮಾಡುವ, ತಂತ್ರಜ್ಞಾನ ಪ್ರಕ್ರಿಯೆ, ಚಿಪ್ ವಿನ್ಯಾಸ ಐಪಿ ಮತ್ತು ತಾಂತ್ರಿಕ ಕೌಶಲ್ಯಪೂರ್ಣ ಮಾನವ ಸಂಪನ್ಮೂಲವನ್ನು ಅಭಿವೃದ್ಧಿಪಡಿಸುವ ‘ರಾಷ್ಟ್ರೀಯ ಸೆಮಿಕಂಡಕ್ಟರ್ ಸಂಶೋಧನಾ ಸಂಸ್ಥೆ’ ಸ್ಥಾಪನೆಯು ಐಎಸ್‌ಎಂ 1.0 ನ ಆಶಯವಾಗಿತ್ತು. ಇದನ್ನು ಇನ್ನು ಮುಂದೆ ವಿಳಂಬ ಮಾಡಬಾರದು.
ಭಾರತಕ್ಕಿದೆ ಸುವರ್ಣ ಅವಕಾಶ:
ಎಐ ಕ್ರಾಂತಿಯು ಸೆಮಿಕಂಡಕ್ಟರ್ ಮಾರುಕಟ್ಟೆಯನ್ನು 2 ಭಾಗಗಳಾಗಿ ವಿಂಗಡಿಸಿದೆ. ಎಐ ಮಾದರಿಗಳನ್ನು ತರಬೇತಿಗೊಳಿಸುವ ಮಾರುಕಟ್ಟೆಯು ಎನ್‌ವಿಡಿಯಾದ ಸಿಯುಡಿಎ ತಂತ್ರಜ್ಞಾನ ವ್ಯವಸ್ಥೆ ಮತ್ತು ಪ್ರಮುಖ ಹೈಪರ್‌ಸ್ಕೇಲರ್‌ಗಳ ಕಸ್ಟಮ್ ಎಎಸ್‌ಐಸಿಗಳ ಸುತ್ತ ಕೇಂದ್ರೀಕೃತಗೊಳ್ಳುತ್ತಿದೆ. ಆ ಮಾರುಕಟ್ಟೆ ಪ್ರವೇಶಿಸುವುದು ಪ್ರಸ್ತುತ ಕಷ್ಟಕರ.
ಆದರೆ ‘ಇನ್ಫರೆನ್ಸ್’ ಮಾರುಕಟ್ಟೆಯು ಮುಕ್ತವಾಗಿದೆ. ಕ್ಲೌಡ್, ಎಡ್ಜ್ ಸಾಧನಗಳು, ಡಿಫೆನ್ಸ್, ಕೃಷಿ ಮತ್ತು ಕೈಗಾರಿಕಾ ಅನ್ವಯಿಕೆಗಳಲ್ಲಿ ಇನ್ಫರೆನ್ಸ್‌ನ ಅಗತ್ಯತೆಗಳು ವಿಭಿನ್ನವಾಗಿದ್ದು, ಯಾವುದೇ ಒಂದೇ ಮಾದರಿಯ ವಿನ್ಯಾಸವು ಸಂಪೂರ್ಣವಾಗಿ ಆಧಿಪತ್ಯ ಸಾಧಿಸಲು ಸಾಧ್ಯವಿಲ್ಲ. ನಿರ್ದಿಷ್ಟ ಉದ್ದೇಶಕ್ಕಾಗಿ ವಿನ್ಯಾಸಗೊಳಿಸಿದ ಇನ್ಫರೆನ್ಸ್ ಚಿಪ್‌ಗಳು ಶೇ.50-70ರಷ್ಟು ಭಾರಿ ಲಾಭಾಂಶವನ್ನು ನೀಡುತ್ತವೆ. ಇವುಗಳನ್ನು ವಿನ್ಯಾಸಗೊಳಿಸಲು ಅರ್ಹತೆ ಹೊಂದಿರುವ 1,25,000 ಚಿಪ್ ಡಿಸೈನ್ ಎಂಜಿನಿಯರ್‌ಗಳು ಭಾರತದಲ್ಲಿದ್ದಾರೆ. ಆರ್‌ಐಎಸ್‌ಸಿ-ವಿ ಓಪನ್ ಸೋರ್ಸ್ ಆಧಾರಿತ ಭಾರತದ ಡಿಐಆರ್-ವಿ ಕಾರ್ಯಕ್ರಮವು ಎಆರ್‌ಎಂ ಲೈಸೆನ್ಸಿಂಗ್ ವೆಚ್ಚಗಳನ್ನು ಇಲ್ಲದಂತೆ ಮಾಡುತ್ತದೆ. ಇಂಡಿಯಾ ಎಐನ ಸ್ವತಂತ್ರ ಕಂಪ್ಯೂಟ್ ಕಾರ್ಯಕ್ರಮ, ರಕ್ಷಣಾ ಇಲಾಖೆಯ ಖರೀದಿಗಳು, 5ಜಿ ಮೂಲಸೌಕರ್ಯ ಮತ್ತು ಶತಕೋಟಿ ಬಳಕೆದಾರರಿರುವ ದೇಶೀಯ ಮಾರುಕಟ್ಟೆಯು ಸಿದ್ಧ ಬೇಡಿಕೆಯನ್ನು ಒದಗಿಸುತ್ತವೆ.
ಮುಂದಿನ ಹೆಜ್ಜೆ:
ಪ್ರಸ್ತುತ ಕೊರತೆಯಿರುವುದು ಭಾರತೀಯ ಫ್ಯಾಬ್‌ಲೆಸ್ ಕಂಪನಿಗಳಿಗೆ ಕೇವಲ ಮಾದರಿ ರೂಪಿಸಲು ಮಾತ್ರವಲ್ಲದೆ, ವಾಣಿಜ್ಯಿಕ ಉತ್ಪಾದನೆಯ ಹಂತದವರೆಗೂ ಬೆಂಬಲಿಸುವ ಬಂಡವಾಳ. ಡಿಎಲ್‌ಐ ಯೋಜನೆಯನ್ನು ವಿಸ್ತರಿಸಬೇಕು. ಐಎಸ್‌ಎಂ 2.0 2.0 ಮೂಲಕ ಎನ್‌ಐಐಎಫ್ ಮಾದರಿಯಲ್ಲಿ 1,000 ಕೋಟಿ ರು. ಪ್ರಮಾಣದ ‘ಚಿಪ್ ಡಿಸೈನ್ ವಾಣಿಜ್ಯೀಕರಣ ನಿಧಿ’ಯನ್ನು ಸ್ಥಾಪಿಸಬೇಕು ಮತ್ತು ಸರ್ಕಾರವೇ ಕನಿಷ್ಠ ಎರಡು ಸ್ವದೇಶಿ ಎಐ ಇನ್ಫರೆನ್ಸ್ ಚಿಪ್ ಕಾರ್ಯಕ್ರಮಗಳಿಂದ ಕಡ್ಡಾಯವಾಗಿ ಖರೀದಿ ಮಾಡುವ ಭರವಸೆ ನೀಡಬೇಕು. ಮುಂಬರುವ ಬಜೆಟ್‌ನಲ್ಲಿ ಈ ಎರಡು ಬದಲಾವಣೆಗಳನ್ನು ಜಾರಿಗೊಳಿಸಿದರೆ, ಅದು ಹೆಚ್ಚಿನ ವೈರ್-ಬಾಂಡ್ ಪ್ಯಾಕೇಜಿಂಗ್ ಯೋಜನೆಗಳಿಗಿಂತ ಭಾರತದ ಸೆಮಿಕಂಡಕ್ಟರ್ ಭವಿಷ್ಯಕ್ಕೆ ಅತ್ಯಂತ ಹೆಚ್ಚಿನ ಬಲ ತಂದುಕೊಡಲಿದೆ.
ಭವಿಷ್ಯದ ದಾರಿ:
ಎಐ ಯುಗದಲ್ಲಿ ಭಾರತದ ಆರ್ಥಿಕ ಭವಿಷ್ಯವು ಈ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವುದರ ಮೇಲೆ ಆಧರಿತವಾಗಿದೆ ಎಂದು ನಾನು ಬಲವಾಗಿ ನಂಬಿರುವುದರಿಂದಲೇ ಇಂಡಿಯಾ ಸೆಮಿಕಂಡಕ್ಟರ್ ಮಿಷನ್, ಡಿಎಲ್‌ಐ ಮತ್ತು ಇಂಡಿಯಾ ಎಐ ಯೋಜನೆಗಳನ್ನು ರೂಪಿಸಿದ ತಂಡದ ಭಾಗವಾಗಿದ್ದೆ. ಆದರೆ ಕೈಗಾರಿಕಾ ನೀತಿಯಲ್ಲಿ ಅತ್ಯಂತ ಸುಲಭವಾದ ಮಾರ್ಗವೆಂದರೆ – ಸುಲಭವಾಗಿ ಅನುಮೋದಿಸಬಹುದಾದ ಯೋಜನೆಗಳಿಗೆ ವೇಗವಾಗಿ ಅನುಮತಿ ನೀಡುವುದು ಮತ್ತು ತಂತ್ರಜ್ಞಾನದಲ್ಲಿ ಸಾಧಿಸಿದ ಜಾಗತಿಕ ಸ್ಥಾನಮಾನಕ್ಕಿಂತ ಕೇವಲ ಬಂದ ಹೂಡಿಕೆಯ ಪ್ರಮಾಣದಿಂದ ಯಶಸ್ಸನ್ನು ಅಳೆಯುವುದು. ಭಾರತದಲ್ಲಿ ಸೂಕ್ತ ಪ್ರತಿಭೆ ಇದೆ, ದೇಶೀಯ ಬೇಡಿಕೆಯಿದೆ ಮತ್ತು ಈ ಗುರಿಗಳನ್ನು ಬೆಂಬಲಿಸುವ ದೃಷ್ಟಿಕೋನವಿರುವ ಪ್ರಧಾನಿಯಿದ್ದಾರೆ. ಈಗ ದೇಶಕ್ಕೆ ಬೇಕಿರುವುದು ಚಿಪ್ ವಿನ್ಯಾಸ ಹಾಗೂ ತಾಂತ್ರಿಕ ವಿನ್ಯಾಸದತ್ತ ನೇರವಾದ ರಾಷ್ಟ್ರೀಯ ಕಾರ್ಯತಂತ್ರ.
ಹಲವು ದಶಕಗಳಿಂದ, ಭಾರತವು ಪ್ರಮುಖ ಆರ್ಥಿಕ ಮತ್ತು ಕೈಗಾರಿಕಾ ಮಹಾಕ್ರಾಂತಿಗಳನ್ನು ಕಳೆದುಕೊಂಡಿದೆ ಅಥವಾ ಬಹಳ ಹಿಂದುಳಿದಿದೆ. ಆದರೆ ಈ ಬಾರಿಯ ತಾಂತ್ರಿಕ ಮಹಾಕ್ರಾಂತಿಯನ್ನು ತಪ್ಪಿಸಿಕೊಳ್ಳುವ ಉದ್ದೇಶ ನಮಗಿಲ್ಲ. ಜಗತ್ತು ಬಳಸುವ ಚಿಪ್‌ಗಳನ್ನು ಯಾರು ವಿನ್ಯಾಸಗೊಳಿಸುತ್ತಾರೋ ಅವರೇ ಈ ಶತಮಾನದ ಕಥೆಯನ್ನು ಬರೆಯಲಿದ್ದಾರೆ. ಆ ಪ್ರಮುಖರ ಪಟ್ಟಿಗೆ ಸೇರಲು ಭಾರತಕ್ಕೆ ಎಲ್ಲಾ ಸಾಮರ್ಥ್ಯವೂ ಇದೆ.
