ಮೊದಲೆಲ್ಲ ಅಭಿಮಾನಿಗಳು ಬಂದು ಪಕ್ಕದಲ್ಲಿ ನಿಂತು ಸೆಲ್ಫಿ ತೆಗೆಸಿಕೊಂಡು ಹೋಗುತ್ತಿದ್ದರು. ಆದರೆ, ಈಗಿನ ಟ್ರೆಂಡ್ ಸ್ವಲ್ಪ ಭಿನ್ನ. ''ಸರ್, ನನ್ನ ಹೆಗಲ ಮೇಲೆ ಕೈಹಾಕಿ, ಒಂದು ಸೆಲ್ಫಿ ತೆಗೆದುಕೊಳ್ಳುತ್ತೇನೆ’ ಎಂದು ಅಭಿಮಾನಿಗಳೇ ಕೇಳುತ್ತಾರಂತೆ.
ಮೊದಲೆಲ್ಲ ಅಭಿಮಾನಿಗಳು ಬಂದು ಪಕ್ಕದಲ್ಲಿ ನಿಂತು ಸೆಲ್ಫಿ ತೆಗೆಸಿಕೊಂಡು ಹೋಗುತ್ತಿದ್ದರು. ಆದರೆ, ಈಗಿನ ಟ್ರೆಂಡ್ ಸ್ವಲ್ಪ ಭಿನ್ನ. ''ಸರ್, ನನ್ನ ಹೆಗಲ ಮೇಲೆ ಕೈಹಾಕಿ, ಒಂದು ಸೆಲ್ಫಿ ತೆಗೆದುಕೊಳ್ಳುತ್ತೇನೆ’ ಎಂದು ಅಭಿಮಾನಿಗಳೇ ಕೇಳುತ್ತಾರಂತೆ. ಕೇಳಿದವರಿಗೆ ಇಲ್ಲ ಎನ್ನುವಂತಿಲ್ಲ. ಹೆಗಲ ಮೇಲೆ ಕೈಹಾಕು ಎಂದಾಗ ಏಕಾಏಕಿ ಹಾಕುವುದಕ್ಕೂ ಆಗಲ್ಲ. ಆ ಫೋಟೋ ಮುಂದೆ ಯಾವ ರೂಪ ಪಡೆದುಕೊಳ್ಳುತ್ತದೆಯೋ ಎಂಬ ಆತಂಕ ಕಾಡುತ್ತದೆಯಂತೆ.
ಪ್ರಕರಣವೊಂದರ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ನ್ಯಾಯಾಧೀಶರಿಗೆ ಕಡತದ ಪುಟ ಸಂಖ್ಯೆ ಹೇಳುವ ಬದಲು ಹಿಂದೆ ಬನ್ನಿ, ಮುಂದೆ ಬನ್ನಿ ಎಂದಾಗ ಕಸಿವಿಸಿಗೊಂಡ ನ್ಯಾಯಾಧೀಶರು ರೀ ವಕೀಲರೇ ಎನ್ರೀ ಇದು? ಮುಂದೆ ಬನ್ನಿ, ಹಿಂದೆ ಬನ್ನಿ... ನಾನು ಎಲ್ಲೂ ಬರುವುದಕ್ಕೆ ಆಗುವುದಿಲ್ಲ. ಪೀಠದಲ್ಲೇ ಕುಳಿತಿರುತ್ತೇನೆ ಎಂದು ಹೇಳಿದಾಗ ಕೋರ್ಟ್ಹಾಲ್ನಲ್ಲಿ ನಗು ತುಂಬಿಕೊಂಡ ಪ್ರಸಂಗ ನಡೆಯಿತು.
ನಡೆದಿದ್ದು ಇಷ್ಟೇ... ಅರ್ಜಿದಾರರ ಪರ ವಕೀಲರು ನ್ಯಾಯಾಧೀಶರ ಮುಂದೆ ಹಾಜರಾಗಿ ಪ್ರಕರಣದ ವಿವರಗಳನ್ನು ಓದುವ ಮೂಲಕ ವಾದ ಮಂಡನೆ ಆರಂಭಿಸಿದರು. ಆಗ ನ್ಯಾಯಾಧೀಶರು ನೀವು ಯಾವ ಪುಟ ಓದುತ್ತಿದ್ದೀರಿ ಎಂದು ಕೇಳಿದರು. ವಕೀಲರು 40ನೇ ಪುಟ ಸ್ವಾಮಿ ಅಂದ್ರು. ನ್ಯಾಯಾಧೀಶರು ಪ್ರಕರಣದ ಕಡತದಲ್ಲಿನ 40ನೇ ಪುಟ ತೆಗೆದು ಓದಿ ಎಂದು ಅನುಮತಿ ನೀಡಿದರು.
ವಕೀಲರು ದೂರಿನಲ್ಲಿರುವ ಅಂಶಗಳನ್ನು ಉಲ್ಲೇಖಿಸಿ, ಸ್ವಾಮಿ ಈ ಎಲ್ಲವೂ ಸುಳ್ಳು ಎಂದು ಪ್ರತಿಪಾದಿಸಿದರು. ನ್ಯಾಯಾಧೀಶರು ಎಫ್ಐಆರ್ ಪ್ರತಿ ಯಾವ ಪುಟದಲ್ಲಿದೆ ಎಂದು ಪ್ರಶ್ನಿಸಿದರು. ಅದಕ್ಕೆ ವಕೀಲರು ಎಫ್ಐಆರ್ ಪ್ರತಿಯ ಪುಟದ ಸಂಖ್ಯೆ ಹೇಳಿ ವಾದ ಮುಂದುವರೆಸುತ್ತಿದ್ದಂತೆ ನ್ಯಾಯಾಧೀಶರು, ನಿಮ್ಮ ವಾದವನ್ನು ಪುಷ್ಠೀಕರಿಸುವ ದಾಖಲೆಯು ಕಡತದ ಯಾವ ಪುಟದಲ್ಲಿದೆ ಎಂದು ಕೇಳಿದರು.
ಆಗ ವಕೀಲರು , ಸ್ವಾಮಿ ಹಿಂದೆ ಬನ್ನಿ ಎಂದರು. ನ್ಯಾಯಾಧೀಶರು ಮತ್ತೊಂದು ದಾಖಲೆ ಕೇಳಿದಾಗ ಮುಂದೆ ಬನ್ನಿ ಸ್ವಾಮಿ ಎಂದರು.
ಈ ಮಾತಿನಿಂದ ಕಸಿವಿಸಿಗೊಂಡ ನ್ಯಾಯಾಧೀಶರು, ರೀ ವಕೀಲರೇ ಎನ್ರಿ ಇದು? ಮುಂದೆ ಬನ್ನಿ; ಹಿಂದೆ ಬನ್ನಿ. ನಾನು ಎಲ್ಲೂ ಬರುವುದಕ್ಕೆ ಆಗುವುದಿಲ್ಲ. ಪೀಠದಲ್ಲೇ ಕುಳಿತಿರುತ್ತೇನೆ. ನೀವು ಸರಿಯಾಗಿ ಪುಟದ ಸಂಖ್ಯೆ ನೋಡಿ ಹೇಳಿ. ಅದು ಬಿಟ್ಟು ಮುಂದೆ ಬನ್ನಿ, ಹಿಂದೆ ಬನ್ನಿ ಎಂದರೆ ಯಾವ ಪುಟ ಅಂತ ನೋಡಲಿ ಎಂದರು.
ನ್ಯಾಯಾಧೀಶರ ಈ ಮಾತಿನಿಂದ ಗಲಿಬಿಲಿಗೊಂಡ ವಕೀಲರು, ಸ್ವಾಮಿ, ತಪ್ಪಾಯ್ತು, ಕ್ಷಮಿಸಿ ಎಂದು ನಿರ್ದಿಷ್ಟ ಪುಟದ ಸಂಖ್ಯೆ ಹೇಳಿದರು. ವಕೀಲರ ಮತ್ತು ನ್ಯಾಯಾಧೀಶರ ನಡುವಿನ ಈ ಸಂಭಾಷಣೆಯನ್ನು ಕೇಳಿ ಕೋರ್ಟ್ ಹಾಲ್ನಲ್ಲಿದ್ದವರೆಲ್ಲರೂ ಬಿದ್ದು ಬಿದ್ದು ನಕ್ಕರು.
ಸಸಿ ನೆಡಬೇಕೋ, ನೀಡಬೇಕೋ...
ಮೊನ್ನೆ ರಾಜ್ಯ ಪೊಲೀಸ್ ಕೇಂದ್ರ ಕಚೇರಿಯಲ್ಲಿ ಅಖಿಲ ಭಾರತ ಪೊಲೀಸ್ ಲಾನ್ ಟೆನಿಸ್ ಚಾಂಪಿಯನ್ಶಿಪ್ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟದ ಅಧಿಕೃತ ಲೋಗೋ, ಟಿ-ಶರ್ಟ್ ಮತ್ತು ಕ್ಯಾಪ್ ಅನಾವರಣ ಕಾರ್ಯಕ್ರಮದಲ್ಲಿ ‘ಕನ್ನಡ’ ಪದಗಳ ಉಚ್ಚಾರಣೆ ಬಗ್ಗೆ ಸ್ವಾರಸ್ಯಕರ ಚರ್ಚೆ ನಡೆಯಿತು.
ಅತಿಥಿಗಳನ್ನು ಸ್ವಾಗತಿಸುತ್ತಿದ್ದ ಹಿರಿಯ ಐಪಿಎಸ್ ಅಧಿಕಾರಿಯೊಬ್ಬರು, ವೇದಿಕೆಯಲ್ಲಿ ಉಪಸ್ಥಿತರಿರುವ ಅತಿಥಿ ಮಹೋದಯರಿಗೆ ಸಸಿ ನೆಡಲು ಐಜಿಪಿ ಅವರನ್ನು ಆಹ್ವಾನಿಸುತ್ತಿದ್ದೇನೆ ಎಂದರು. ಈ ನುಡಿ ಕೇಳಿ ಒಮ್ಮೆಗೆ ಎಲ್ಲರೂ ಗೊಳ್ಳೆಂದರು.
ಸಸಿ ನೀಡಬೇಕೋ... ನೆಡಬೇಕೋ ಎಂದು ಸಭೆಯಲ್ಲಿದ್ದವರಲ್ಲಿ ಗುಸು ಗುಸು. ಓರ್ವ ಅಧಿಕಾರಿ ಅದು ನೆಡಲು ಅಲ್ಲ ನೀಡಲು ಎಂದು ಜೋರಾಗಿ ಕೂಗಿದರು. ಆಗ ತಮ್ಮ ತಪ್ಪು ತಿದ್ದಿಕೊಂಡು ಅತಿಥಿಗಳಿಗೆ ಸಸಿ ನೀಡಲು ಬರಬೇಕು ಎಂದು ಆಹ್ವಾನಿಸಿದರು. ಸ್ವಾಗತ ಭಾಷಣ ಮಾಡುತ್ತಿದ್ದವರು ಉತ್ತರ ಭಾರತ ಮೂಲದ ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿ. ‘ಹಿಂದಿ’ ಉಸುರಿದಂತೆ ಸುಲಲಿತವಾಗಿ ಅವರಿಗೆ ಕನ್ನಡ ಪದಗಳು ಸರಳವಾಗಿಲ್ಲ ಎಂದರು.
‘ಶಾಲೆಗೆ ಹೋಗಲು ರಸ್ತೆ ಸರಿಯಿಲ್ಲ, ಬೇರೆಡೆ ಡೆಪ್ಯೂಟೇಶನ್ ಮಾಡಿ’
ಅನಾರೋಗ್ಯ, ಚಿಕ್ಕಮಕ್ಕಳು ಇರುವುದು, ವೈಯಕ್ತಿಕ ಸಮಸ್ಯೆ ಇತ್ಯಾದಿ ಕಾರಣಗಳಿಂದ ಬೇರೆಡೆ ನಿಯೋಜನೆ ಮಾಡುವಂತೆ ಸರ್ಕಾರಿ ಉದ್ಯೋಗಿಗಳು ಮನವಿ ಮಾಡುವುದು ಮಾಮೂಲು. ಆದರೆ ಹಾಳಾದ ರಸ್ತೆಗಳಿಂದ ಬೆನ್ನು ನೋವು ಬಂದಿರುವುದರಿಂದ ಬೇರೆಡೆ ಡೆಪ್ಯೂಟೇಶನ್ ಮಾಡುವಂತೆ ಮನವಿ ಸಲ್ಲಿಸಿರುವುದು ಇದೇ ಮೊದಲಿರಬೇಕು!
ಗಂಗಾವತಿಯ ಶಿಕ್ಷಕಿಯೊಬ್ಬರು ನಿತ್ಯ ಗಂಗಾವತಿ ತಾಲೂಕಿನ ಮರಕುಂಬಿ ಗ್ರಾಮದ ಶಾಲೆಗೆ ಹೋಗಿ ಬರುತ್ತಾರೆ. ಈ ಊರ ರಸ್ತೆ ತೀರಾ ಹದಗೆಟ್ಟು ಹೋಗಿದ್ದು, ನಿತ್ಯವೂ ಹೋಗುವುದರಿಂದ ರಸ್ತೆಯಲ್ಲಿರುವ ಗುಂಡಿಗಳಿಂದ ಬೆನ್ನು ನೋವು ಬಂದಿದೆ. ಹೀಗಾಗಿ, ನನ್ನನ್ನು ಗಂಗಾವತಿ ನಗರದ ಯಾವುದಾದರೂ ಶಾಲೆಗೆ ನಿಯೋಜನೆ ಮಾಡಿ ಎಂದು ಅರ್ಜಿ ಸಲ್ಲಿಸಿದ್ದಾರೆ.
ಅರ್ಜಿ ನೋಡಿದ ಅಧಿಕಾರಿಗಳು ದಂಗಾಗಿದ್ದಾರೆ. ರಸ್ತೆ ಸರಿ ಇಲ್ಲ ಎನ್ನುವ ಕಾರಣಕ್ಕಾಗಿ ಈ ಶಿಕ್ಷಕಿಯನ್ನೇನೋ ಬೇರೆಡೆ ನಿಯೋಜನೆ ಮಾಡಬಹುದು. ಆದರೆ, ಬೇರೆ ಯಾರು ಆ ಊರಿನ ಶಾಲೆಗೆ ಹೋಗಬಹುದು ಎಂದು ತಲೆ ಕೆರೆದುಕೊಳ್ಳುತ್ತಿದ್ದಾರೆ. ಹೀಗೆ, ರಸ್ತೆ ಸರಿ ಇಲ್ಲ ಎನ್ನುವ ಕಾರಣಕ್ಕೆ ಶಿಕ್ಷಕಿಯನ್ನು ವರ್ಗಾಯಿಸಿದರೆ ಆ ಊರಿನ ಜನರನ್ನು ಎಲ್ಲಿಗೆ ಸ್ಥಳಾಂತರ ಮಾಡಬೇಕು ಎನ್ನುವ ಪ್ರಶ್ನೆಯೂ ಎದುರಾಗಿದೆ!
‘ಹೆಗಲ ಮೇಲೆ ಕೈಹಾಕಿ ಸಾರ್, ಸೆಲ್ಫಿ ತೆಗೆದುಕೊಳ್ಳುತ್ತೇನೆ...’
ಸಿನಿಮಾ ನಟರು, ಕ್ರೀಡಾ ತಾರೆಯರು, ಜನಪ್ರತಿನಿಧಿಗಳು ಸಾರ್ವಜನಿಕವಾಗಿ ಕಾಣಿಸಿಕೊಂಡರೆ ಸಾಕು, ಅಭಿಮಾನಿಗಳ ಮೊಬೈಲ್ ಕ್ಯಾಮೆರಾಗಳು ಫುಲ್ ಆ್ಯಕ್ಟಿವ್. ಒಂದು ಸೆಲ್ಫಿ ಪ್ಲೀಸ್ ಎಂದು ಮುಗಿ ಬೀಳುವವರಿಗೇನೂ ಕಡಿಮೆ ಇಲ್ಲ. ಕೇಳಿದವರಿಗೆಲ್ಲ ನಗುತ್ತಲೇ ಪೋಸ್ ಕೊಡದಿದ್ದರೆ ಅಭಿಮಾನಿಗಳಿಗೆ ಬೇಸರ, ಅಹಂಕಾರಿ ಎಂಬ ಹಣೆಪಟ್ಟಿ ಬೇರೆ.
ಆದರೆ, ಈ ಸೆಲ್ಫಿ ಸಂಸ್ಕೃತಿಯಲ್ಲೂ ಈಗ ಹೊಸದೊಂದು ಟ್ರೆಂಡ್ ಶುರುವಾಗಿದೆಯಂತೆ. ಇದು ಸಚಿವರಿಗೆ ಕೊಂಚ ಆತಂಕ ತಂದಿದೆಯಂತೆ. ಇದನ್ನು ಹೇಳಿಕೊಂಡವರು ಸಕ್ಕರೆ ಮತ್ತು ಜವಳಿ ಖಾತೆ ಸಚಿವ ರುದ್ರಪ್ಪ ಲಮಾಣಿ.
ಮೊದಲೆಲ್ಲ ಅಭಿಮಾನಿಗಳು ಬಂದು ಪಕ್ಕದಲ್ಲಿ ನಿಂತು ಸೆಲ್ಫಿ ತೆಗೆಸಿಕೊಂಡು ಹೋಗುತ್ತಿದ್ದರು. ಆದರೆ, ಈಗಿನ ಟ್ರೆಂಡ್ ಸ್ವಲ್ಪ ಭಿನ್ನ. ''ಸರ್, ನನ್ನ ಹೆಗಲ ಮೇಲೆ ಕೈಹಾಕಿ, ಒಂದು ಸೆಲ್ಫಿ ತೆಗೆದುಕೊಳ್ಳುತ್ತೇನೆ’ ಎಂದು ಅಭಿಮಾನಿಗಳೇ ಕೇಳುತ್ತಾರಂತೆ.
ಕೇಳಿದವರಿಗೆ ಇಲ್ಲ ಎನ್ನುವಂತಿಲ್ಲ. ಹೆಗಲ ಮೇಲೆ ಕೈಹಾಕು ಎಂದಾಗ ಏಕಾಏಕಿ ಹಾಕುವುದಕ್ಕೂ ಆಗಲ್ಲ. ಆ ಫೋಟೋ ಮುಂದೆ ಯಾವ ರೂಪ ಪಡೆದುಕೊಳ್ಳುತ್ತದೆಯೋ ಎಂಬ ಆತಂಕ ಕಾಡುತ್ತದೆಯಂತೆ. ಅವರು ಯಾರು, ಅವರ ಹಿನ್ನೆಲೆ ಏನು ಎಂಬುದು ನಮಗೆ ಗೊತ್ತಿರುವುದಿಲ್ಲ. ಪ್ರೀತಿಯಿಂದ ಕೇಳಿದಾಗ ಬೇಡ ಎನ್ನಲೂ ಆಗುವುದಿಲ್ಲ. ಆದರೆ, ಏನಾದರೂ ಕೇಸ್ ಮಾಡಿಕೊಂಡು ಸಿಕ್ಕಿಹಾಕಿಕೊಂಡರೆ ಏನು ಗತಿ? ಆಗ ನೀವೇ ಪೇಪರ್ನಲ್ಲಿ ಆರೋಪಿಗೆ ಮಿನಿಸ್ಟರ್ ಕ್ಲೋಸ್, ಸಚಿವರ ಬೆಂಬಲಿಗ, ಈತ ನಿಮ್ಮ ಪಕ್ಷದ ಕಾರ್ಯಕರ್ತ ಎಂದೆಲ್ಲ ಬರೆಯುತ್ತೀರಿ. ಅಸಲಿಗೆ ಆತ ಯಾರು ಎಂಬುದೇ ನಮಗೆ ಗೊತ್ತಿರುವುದಿಲ್ಲ ಎಂದು ಸಚಿವರು ತಮ್ಮ ಅಂತರಾಳದ ಆತಂಕವನ್ನು ಮಾಧ್ಯಮದವರ ಎದುರಿಗೇ ಬಿಚ್ಚಿಟ್ಟರು.
-ವೆಂಕಟೇಶ್ ಕಲಿಪಿ
-ಗಿರೀಶ್ ಮಾದೇನಹಳ್ಳಿ
-ಸೋಮರಡ್ಡಿ ಅಳವಂಡಿ
-ನಾರಾಯಣ ಹೆಗಡೆ
