ಮನೆಯಲ್ಲಿ ಹೆಣ್ಣು ಮಗಳು ಸಂತೋಷವಾಗಿದ್ದರೆ ಇಡೀ ಮನೆಯೇ ಸಂತೋಷವಾಗಿರುತ್ತದೆ. ಇಂದು ದಸರಾ ಆಚರಣೆಯಿಂದ ಚಾಮುಂಡಿ ದೇವಿಯೂ ಸಂತೋಷಗೊಂಡಿದ್ದಾಳೆ. ಅದಕ್ಕಾಗಿಯೇ ಇಲ್ಲಿ ಮಳೆ ಬರುತ್ತಿದೆ.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಜನರು, ಅಭಿಮಾನಿಗಳು ತೋರುವ ಪ್ರೀತಿ, ಆತ್ಮೀಯತೆಗೆ ಬೆಲೆ ಕಟ್ಟಲಾಗದು. ನಾನು ಸಾಕಷ್ಟು ಕಾರ್ಯಕ್ರಮಗಳಿಗೆ ಹೋಗಿದ್ದೇನೆ. ಆದರೆ, ಇಲ್ಲಿ ದೊರೆತ ಪ್ರೀತಿ ವಿಶೇಷವಾದದ್ದು ಎಂದು ಹಿರಿಯ ನಟ, ನಿರ್ದೇಶಕ ಡಾ.ವಿ.ರವಿಚಂದ್ರನ್ ಹೇಳಿದರು.ಶ್ರೀರಂಗಪಟ್ಟಣ ದಸರಾ ಸಾಂಸ್ಕೃತಿಕ ವೇದಿಕೆಯಲ್ಲಿ ಮಾತನಾಡಿದ ಅವರು, ಶ್ರೀರಂಗಪಟ್ಟಣದಲ್ಲಿ ಹಲವು ಸಿನಿಮಾಗಳ ಚಿತ್ರೀಕರಣ ಮಾಡಿದ್ದೇನೆ. ನಾನು ಸಾವಿರ ಸಿನಿಮಾಗಳಲ್ಲಿ ನಟಿಸಿದ್ದರೆ, ಅವುಗಳಲ್ಲಿ ಸುಮಾರು 700 ಸಿನಿಮಾಗಳ ಚಿತ್ರೀಕರಣವನ್ನು ಶ್ರೀರಂಗಪಟ್ಟಣದಲ್ಲಿಯೇ ಮಾಡಿಸುತ್ತಾರೆ ಎಂಬಷ್ಟು ಈ ಊರಿನೊಂದಿಗೆ ನಂಟು ಬೆಸೆದುಕೊಂಡಿದೆ ಎಂದು ತಮ್ಮ ಅನುಭವ ಹಂಚಿಕೊಂಡರು.
ದಸರಾ ಜಂಬೂ ಸವಾರಿ ಉದ್ಘಾಟನೆಗೆ ಶಾಸಕ ರಮೇಶ್ ಬಂಡಿಸಿದ್ದೇಗೌಡ ಹಾಗೂ ಜಿಲ್ಲಾಧಿಕಾರಿ ಡಾ.ಕುಮಾರ ಅವರು ತಮ್ಮ ಮನೆಗೆ ಆಹ್ವಾನ ನೀಡಲು ಬಂದಿದ್ದಾಗ ನನ್ನ ಪತ್ನಿ ಅವರಿಗೆ ತಿಂಡಿ ನೀಡಿದ್ದರು. ಬಳಿಕ ಶಾಸಕ ರಮೇಶ್ ಬಂಡಿಸಿದ್ದೇಗೌಡರು ತಮ್ಮ ಪತ್ನಿಗೆ ಸೀರೆ ನೀಡಿದರು. ಅದು ಆಕೆಗೆ ಮರೆಯಲಾಗದ ನೆನಪಾಗಿದೆ ಎಂದು ಸಂತಸ ಹಂಚಿಕೊಂಡರು.ಸಾಮಾನ್ಯವಾಗಿ ಇಂತಹ ಕಾರ್ಯಕ್ರಮಗಳಿಗೆ ಬಾರದ ನನ್ನ ಪತ್ನಿ ಶ್ರೀರಂಗಪಟ್ಟಣದ ಕಾರ್ಯಕ್ರಮವನ್ನು ನೋಡಿ ನಾನೂ ಬರಬೇಕಿತ್ತು ಎಂದು ಬಯಸಿದ್ದಳು. ಇಲ್ಲಿನ ಜನರ ಪ್ರೀತಿ ಮತ್ತು ಆತ್ಮೀಯತೆ ಅಷ್ಟೊಂದು ವಿಶೇಷವಾಗಿದೆ ಎಂದು ಸ್ಮರಿಸಿದರು.
ತಮ್ಮ ತಂದೆ-ತಾಯಿಯ ಅಸ್ಥಿಯನ್ನು ಶ್ರೀರಂಗಪಟ್ಟಣದಲ್ಲಿ ವಿಸರ್ಜಿಸಿರುವುದನ್ನು ನೆನಪಿಸಿಕೊಂಡ ರವಿಚಂದ್ರನ್, ತಮ್ಮ ಕುಟುಂಬದವರು ರಾಮೇಶ್ವರದಲ್ಲಿ ಅಸ್ಥಿ ವಿಸರ್ಜನೆ ಮಾಡಬೇಕೆಂದು ಹೇಳಿದ್ದರೂ ತಾವು ಶ್ರೀರಂಗಪಟ್ಟಣದಲ್ಲಿಯೇ ವಿಸರ್ಜಿಸಲು ನಿರ್ಧರಿಸಿದ್ದಾಗಿ ತಿಳಿಸಿದರು.ನಾನು ನನ್ನ ತಂದೆ-ತಾಯಿಯನ್ನು ಸದಾ ನೆನಪಿಸಿಕೊಳ್ಳುತ್ತೇನೆ. ಸತ್ತವರು ನಿಜವಾಗಿ ಸಾಯುವುದಿಲ್ಲ. ನಾವು ಅವರನ್ನು ಮರೆತಾಗ ಮಾತ್ರ ಅವರು ಸತ್ತಂತಾಗುತ್ತಾರೆ ಎಂಬ ಮಾತು ಜೀವನದ ಮಹತ್ವವನ್ನು ಸಾರುತ್ತದೆ ಎಂದು ಭಾವುಕರಾದರು.
ಹೆಣ್ಣುಮಗಳು ಖುಷಿಯಾಗಿದ್ದರೆ ಮನೆ ಖುಷಿಯಾಗಿರುತ್ತದೆ:ಮನೆಯಲ್ಲಿ ಹೆಣ್ಣು ಮಗಳು ಸಂತೋಷವಾಗಿದ್ದರೆ ಇಡೀ ಮನೆಯೇ ಸಂತೋಷವಾಗಿರುತ್ತದೆ. ಇಂದು ದಸರಾ ಆಚರಣೆಯಿಂದ ಚಾಮುಂಡಿ ದೇವಿಯೂ ಸಂತೋಷಗೊಂಡಿದ್ದಾಳೆ. ಅದಕ್ಕಾಗಿಯೇ ಇಲ್ಲಿ ಮಳೆ ಬರುತ್ತಿದೆ ಎಂದು ಹಾಸ್ಯಮಿಶ್ರಿತವಾಗಿ ಹೇಳಿದರು.
ಸಿನಿಮಾ ಬಿಟ್ಟರೆ ನನಗೆ ಬೇರೆ ಏನೂ ಗೊತ್ತಿಲ್ಲ. ಜನರು ಪ್ರೀತಿ ತೋರಿಸಿದಾಗ ಅವರ ಪ್ರೀತಿಗೆ ನಾನು ಮನಸೋತು ಹೋಗುತ್ತೇನೆ ಎಂದು ಹೇಳುವ ಮೂಲಕ ಶ್ರೀರಂಗಪಟ್ಟಣದ ಜನರ ಮೇಲಿನ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದರು.ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಅಭಿನಂದಿಸಲಾಯಿತು.
ಮಳೆ ನಡುವೆ ಸಂಗೀತ ಸಂಜೆ:ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ದೊರೆಯುತ್ತಿದ್ದಂತೆ ಮಳೆ ಆರಂಭವಾಯಿತು. ಒಂದೆಡೆ ಸಂಗೀತ ಸುಧೆಯ ರಸದೌತಣ, ಮತ್ತೊಂದೆಡೆ ನಿರಂತರವಾಗಿ ಸುರಿಯುತ್ತಿದ್ದ ಮಳೆ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಶಾಸಕ, ಸೆಸ್ಕ್ ಅಧ್ಯಕ್ಷ ರಮೇಶ್ ಬಂಡಿಸಿದ್ದೇಗೌಡ, ಶಾಸಕ ದರ್ಶನ್ ಪುಟ್ಟಣ್ಣಯ್ಯ, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಮೈಷುಗರ್ ಕಾರ್ಖಾನೆ ಅಧ್ಯಕ್ಷ ಸಿ.ಡಿ. ಗಂಗಾಧರ್, ರಾಜ್ಯ ಕೈಮಗ್ಗ ನಿಗಮದ ಅಧ್ಯಕ್ಷ ವಿ.ನಾಗೇಂದ್ರ ಕುಮಾರ್, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಡಾ. ಶೋಭಾರಾಣಿ, ಅಪರ ಜಿಲ್ಲಾಧಿಕಾರಿ ಶಿವಾನಂದ್, ಭಾನುಪ್ರಕಾಶ್ ಶರ್ಮ ಗುರೂಜಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.