ಶಿವಮೊಗ್ಗ: ಪ್ರವಾಸದಿಂದ ನಮ್ಮ ಮನಸ್ಸು ಮತ್ತು ಜೀವನ ಶೈಲಿ ಉತ್ಸಾಹಕವಾಗಿರುತ್ತದೆ ಹಾಗೂ ವಿದೇಶ ಪ್ರವಾಸದಿಂದ ಅಲ್ಲಿಯ ಜನರ ಸಂಸ್ಕೃತಿ ನಮಗೆ ಸಂಪೂರ್ಣ ಅರ್ಥವಾಗುತ್ತದೆ ಎಂದು ಡಾ. ಪರಮೇಶ್ವರ ಶಿಗ್ಗಾವ್ ಹೇಳಿದರು.

ರೋಟರಿ ಕ್ಲಬ್ ಶಿವಮೊಗ್ಗ ಪೂರ್ವ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರವಾಸೋದ್ಯಮದಿಂದ ಭಾಷೆಗಳ ವಿನಿಮಯ, ಜನರ ಭಾವನೆಗಳನ್ನು ಅರಿತು ಜೀವನವನ್ನು ಇನ್ನೂ ಉನ್ನತ ಮಟ್ಟಕ್ಕೆ ಹಾಗೂ ಗುಣಮಟ್ಟಕ್ಕೆ ತೆಗೆದುಕೊಂಡು ಹೋಗಬಹುದು ಎಂದು ತಿಳಿಸಿದರು.

ಶ್ರೀಲಂಕಾ ಪ್ರವಾಸದ ಅನುಭವ ವಿವರಿಸುವಾಗ ವಿದೇಶ ಪ್ರವಾಸದಿಂದ ಅಲ್ಲಿರುವಂತಹ ವಾಸ್ತುಶಿಲ್ಪ, ಆರ್ಥಿಕ ಅಭಿವೃದ್ಧಿ, ಕಾನೂನು ಮತ್ತು ಪ್ರವಾಸೋದ್ಯಮ ಇಲಾಖೆಗಳು ಅಭಿವೃದ್ಧಿ ಪಥದಲ್ಲಿ ಸಾಗಿದೆ ಎಂದು ಭಾವಿಸಬಹುದು ಎಂದರು.

ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಧನಂಜಯ್ ಮಾತನಾಡಿ, ಹಿರಿಯರು ಹೇಳುವ ಗಾದೆ ಮಾತು ದೇಶ ಸುತ್ತಬೇಕು ಕೋಶ ಓದಬೇಕು. ಇದರಿಂದ ಜ್ಞಾನ ವೃದ್ಧಿಸುತ್ತದೆ. ದೇಶದ ವಿವಿಧ ಜೀವನ ಶೈಲಿಯಲ್ಲಿ ವಿಭಿನ್ನ ರೀತಿಯ ಬದಲಾವಣೆಗಳನ್ನು ಅಳವಡಿಸಿಕೊಳ್ಳಬಹುದು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸತೀಶ್ ಚಂದ್ರ ಮಾತನಾಡಿ, ವಿದೇಶ ಮತ್ತು ಸ್ವದೇಶ ಪ್ರವಾಸದಿಂದ ಜೀವನ ಉಲ್ಲಾಸಗೊಳ್ಳುವುದರ ಜತೆಗೆ ವಿಭಿನ್ನ ರೀತಿಯ ಸಂಸ್ಕೃತಿ, ಸಾಹಿತ್ಯ ವಿಷಯಗಳ ಬಗ್ಗೆ ಅರ್ಥೈಸಿಕೊಳ್ಳಬಹುದು ಎಂದರು.


ರೋಟರಿ ನಿಯೋಜಿತ ಜಿಲ್ಲಾ ಗವರ್ನರ್ ವಸಂತ ಹೋಬಳಿದಾರ್, ಶ್ರೀಕಾಂತ್, ಎ.ಒ.ಮಹೇಶ್, ಗಣೇಶ್, ಅರುಣ್ ದೀಕ್ಷಿತ್, ಕೇಶವಪ್ಪ, ಗಂಗಪ್ಪ, ಎಸ್.ಜಗದೀಶ್, ಮಾಜಿ ಸಹಾಯಕ ಗವರ್ನರ್ ವಿಜಯಕುಮಾರ್, ಅಜಿತ್, ನಾಗರಾಜ್ ಎಂ ಪಿ, ನಾಗರಾಜ್ ಪಿ, ಜಯರಾಮ ಭಟ್, ಚಂದ್ರಹಾಸ್ ಪಿ ರಾಯ್ಕರ್, ಮಹಾದೇವ ಸ್ವಾಮಿ, ರವಿಪ್ರಕಾಶ್ ಜನ್ನೆ ಹಾಗೂ ಮುಂತಾದ ಸದಸ್ಯರು ಉಪಸ್ಥಿತರಿದ್ದರು.