ಬೆಂಗಳೂರು : ರಾಜ್ಯದಲ್ಲಿ ‘ಗೃಹಲಕ್ಷ್ಮಿ ಯೋಜನೆ’ ಅಡಿ 20 ಕೋಟಿ ರು. ವೆಚ್ಚದಲ್ಲಿ ಬಯೋಮೆಟ್ರಿಕ್‌ ಅಥವಾ ಫೇಷಿಯಲ್‌ ಅಥೆಂಟಿಕೇಷನ್‌ ದೃಢೀಕರಣ ಮೂಲಕ ಫಲಾನುಭವಿಗಳನ್ನು ಮರು ಪರಿಶೀಲನೆಗೆ ಒಳಪಡಿಸಲು ಭಾನುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಫೇಷಿಯಲ್‌ ಅಥೆಂಟಿಕೇಷನ್‌ ಹಾಗೂ ಬಯೋಮೆಟ್ರಿಕ್‌

ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ ಡಿ.ಕೆ.ಶಿವಕುಮಾರ್‌, ಫೇಷಿಯಲ್‌ ಅಥೆಂಟಿಕೇಷನ್‌ ಹಾಗೂ ಬಯೋಮೆಟ್ರಿಕ್‌ ಮೂಲಕ ಫಲಾನುಭವಿಗಳ ಪರಿಶೀಲನೆ ನಡೆಸಿ ಅರ್ಹರಿಗೆ ಯೋಜನೆ ತಲುಪುವಂತೆ ಮಾಡಲು ನಿರ್ಧರಿಸಿದ್ದೇವೆ. ಇದಕ್ಕಾಗಿ 20 ಕೋಟಿ ರು. ನೀಡಿದ್ದೇವೆ. ಅವರಿಗೆ ಪರಿಶೀಲನೆ ವೇಳೆ ಯಾವ ನಮೂನೆ ನೀಡಿ ಯಾವುದೆಲ್ಲಾ ಮಾಹಿತಿ ಪಡೆದು ಪರಿಶೀಲನೆ ನಡೆಸಬೇಕು ಎಂಬುದನ್ನು ಅಧಿಕಾರಿಗಳು ಮಾಡುತ್ತಾರೆ ಎಂದರು.

ಬಯೋಮೆಟ್ರಿಕ್‌ ಹಾಗೂ ಬ್ಯಾಂಕ್‌ ಖಾತೆ ಸಂಖ್ಯೆ, ದೂರವಾಣಿ ಸಂಖ್ಯೆ ಸರಿಯಾಗಿರಬೇಕು

ಬಯೋಮೆಟ್ರಿಕ್‌ ಹಾಗೂ ಬ್ಯಾಂಕ್‌ ಖಾತೆ ಸಂಖ್ಯೆ, ದೂರವಾಣಿ ಸಂಖ್ಯೆ ಸರಿಯಾಗಿರಬೇಕು. ಯಾರದ್ದೋ ದೂರವಾಣಿ ಹಾಗೂ ಬ್ಯಾಂಕ್‌ ಖಾತೆಗಳ ವಿವರಗಳನ್ನು ನೀಡುವಂತಿಲ್ಲ. ಗಂಡ ಹಾಗೂ ಮಕ್ಕಳ ಖಾತೆಯನ್ನೂ ಸಹ ಪರಿಗಣಿಸುವುದಿಲ್ಲ. ಸಿಎಜಿ ವರದಿಯಲ್ಲಿ ಏನೆಲ್ಲಾ ವರದಿಯಾಗಿದೆ ಎಂಬುದು ನೋಡಿದ್ದೇವೆ. ಹೀಗಾಗಿ ಅಂಥದ್ದಕ್ಕೆ ಅವಕಾಶ ನೀಡದಂತೆ ಪರಿಶೀಲನೆ ನಡೆಸಿ ಅರ್ಹರಿಗೆ ನೀಡುತ್ತೇವೆ ಎಂದು ಹೇಳಿದರು.


ಅರ್ಹರಿಗೆ ಯೋಜನೆ ತಲುಪಿಸುವುದಷ್ಟೇ ಪರಿಶೀಲನೆ ಉದ್ದೇಶ. ಯಾರನ್ನೂ ಯೋಜನೆಯಿಂದ ತೆಗೆಯುವುದಿಲ್ಲ. ಸ್ವಯಂ ಪ್ರೇರಿತವಾಗಿ ಬಿಟ್ಟುಕೊಡುವವರು ಮಾತ್ರ ಯೋಜನೆಯ ಲಾಭ ಬಿಟ್ಟುಕೊಡಬಹುದು ಅಷ್ಟೇ ಎಂದು ಸ್ಪಷ್ಟಪಡಿಸಿದರು.