ಕರ್ನಾಟಕ ರಾಜ್ಯ ಅಪೆಕ್ಸ್ ಬ್ಯಾಂಕ್‌ನ (ಅಪೆಕ್ಸ್) ಅಧ್ಯಕ್ಷ ಗಾದಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಂಬಂಧಿ ಹಾಗೂ ಆಪ್ತರಾಗಿರುವ ವಿಧಾನ ಪರಿಷತ್ ಸದಸ್ಯ ಎಸ್. ರವಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಶರಣಗೌಡ ಬಯ್ಯಾಪುರ ಅವರು ಅವಿರೋಧ ಆಯ್ಕೆಯಾಗಿದ್ದಾರೆ.

ಬೆಂಗಳೂರು : ಕರ್ನಾಟಕ ರಾಜ್ಯ ಅಪೆಕ್ಸ್ ಬ್ಯಾಂಕ್‌ನ (ಅಪೆಕ್ಸ್) ಅಧ್ಯಕ್ಷ ಗಾದಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಂಬಂಧಿ ಹಾಗೂ ಆಪ್ತರಾಗಿರುವ ವಿಧಾನ ಪರಿಷತ್ ಸದಸ್ಯ ಎಸ್. ರವಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಶರಣಗೌಡ ಬಯ್ಯಾಪುರ ಅವರು ಅವಿರೋಧ ಆಯ್ಕೆಯಾಗಿದ್ದಾರೆ.

ಆ ಮೂಲಕ ಅಪೆಕ್ಸ್‌ ಬ್ಯಾಂಕ್‌ ಅಧ್ಯಕ್ಷ ಸ್ಥಾನಕ್ಕೆ ನಡೆದಿದ್ದ ಬಣ ರಾಜಕೀಯದಲ್ಲಿ ಡಿ.ಕೆ.ಶಿವಕುಮಾರ್‌ ಬಣ ಮೇಲುಗೈ ಸಾಧಿಸಿದಂತಾಗಿದೆ. ಅಪೆಕ್ಸ್‌ ಬ್ಯಾಂಕ್‌ ಅಧ್ಯಕ್ಷ ಸ್ಥಾನಕ್ಕೆ ಎಸ್.ರವಿ ಪರ, ಡಿ.ಕೆ.ಶಿವಕುಮಾರ್‌ ಹಾಗೂ ಕೆ.ಎನ್‌.ರಾಜಣ್ಣ ಪರ ಮತ್ತೊಂದು ಸಿದ್ದರಾಮಯ್ಯ ಬಣ ತೀವ್ರ ಲಾಬಿ ನಡೆಸಿತ್ತು.

ತಲಾ ಎರಡೂವರೆ ವರ್ಷದ ಅವಧಿಗೆ ಹಂಚಿಕೊಳ್ಳಲು ಮೊದಲೇ ನಿರ್ಧಾರ

ಅಧ್ಯಕ್ಷ ಸ್ಥಾನವನ್ನು ತಲಾ ಎರಡೂವರೆ ವರ್ಷದ ಅವಧಿಗೆ ಹಂಚಿಕೊಳ್ಳಲು ಮೊದಲೇ ನಿರ್ಧಾರವಾಗಿತ್ತು. ಆದರೆ, ಕೆ.ಎನ್‌.ರಾಜಣ್ಣ ಅವರು ಮೊದಲ ಅವಧಿಯಲ್ಲೇ ಅಧ್ಯಕ್ಷ ಸ್ಥಾನಕ್ಕಾಗಿ ಪಟ್ಟು ಹಿಡಿದಿದ್ದರು. ಅಂತಿಮವಾಗಿ ಡಿ.ಕೆ.ಶಿವಕುಮಾರ್‌ ಅವರು ಹೈಕಮಾಂಡ್‌ ಜತೆ ಲಾಬಿ ನಡೆಸಿ ತಮ್ಮ ಸಂಬಂಧಿಗೆ ಮೊದಲ ಅವಧಿಯಲ್ಲೇ ಅಧ್ಯಕ್ಷ ಪಟ್ಟ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದರಿಂದ ಅಸಮಾಧಾನಗೊಂಡಿರುವ ಕೆ.ಎನ್‌.ರಾಜಣ್ಣ ಅವರು ಚುನಾವಣೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ತಿಳಿದುಬಂದಿದೆ. ಅಪೆಕ್ಸ್‌ ಬ್ಯಾಂಕ್‌ಗೆ 4 ತಿಂಗಳ ಮೊದಲೇ ಚುನಾವಣೆ ನಡೆಯಬೇಕಿತ್ತು. ಆದರೆ ಆಕಾಂಕ್ಷಿಗಳ ಮಧ್ಯೆ ಪ್ರಬಲ ಸ್ಪರ್ಧೆ ಇದ್ದ ಕಾರಣ ಚುನಾವಣೆ ಮುಂದೂಡಿಕೆಯಾಗಿತ್ತು.

ಸೆ.10 ರಂದು ಗುರುವಾರ ಚುನಾವಣೆ ಅಂತಿಮವಾದ ಹಿನ್ನೆಲೆಯಲ್ಲಿ ಬುಧವಾರ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅಧ್ಯಕ್ಷತೆಯಲ್ಲಿ ಅಪೆಕ್ಸ್ ಬ್ಯಾಂಕ್‌ನ 19 ನಿರ್ದೇಶಕರೊಂದಿಗೆ ಸಭೆ ನಡೆಯಿತು. ಬಳಿಕ ರವಿ ಅವರನ್ನು ಆಯ್ಕೆ ನಿರ್ಧರಿಸಲಾಯಿತು ಎಂದು ತಿಳಿದುಬಂದಿದೆ.

ಚುನಾವಣೆ ಬಳಿಕ ಪ್ರತಿಕ್ರಿಯಿಸಿದ ಸಹಕಾರ ಸಚಿವ ಲಕ್ಷ್ಮಣ್ ಸವದಿ, ಮೊದಲ ಎರಡೂವರೆ ವರ್ಷಗಳ ಅವಧಿಗೆ ಪರಿಷತ್‌ ರವಿ ಅವರನ್ನು ಅಧ್ಯಕ್ಷರನ್ನಾಗಿ ಹಾಗೂ ಶರಣಗೌಡ ಬಯ್ಯಾಪುರ ಅವರನ್ನು ಉಪಾಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

ನಾಮಪತ್ರ ಸಲ್ಲಿಕೆ ಬಳಿಕ ಇಬ್ಬರ ಆಯ್ಕೆ ಅಂತಿಮ

ನಾಮಪತ್ರ ಸಲ್ಲಿಕೆ ಬಳಿಕ ಇಬ್ಬರ ಆಯ್ಕೆ ಅಂತಿಮಗೊಂಡಿದ್ದು, ಮುಂದಿನ ಎರಡೂವರೆ ವರ್ಷಗಳ ಅಧಿಕಾರಾವಧಿ ಕುರಿತು ಆ ನಂತರವೇ ತೀರ್ಮಾನಿಸಲಾಗುವುದು ಎಂದರು.

ಗೆಲುವಿನ ಬಗ್ಗೆ ಮಾತನಾಡಿದ ಎಸ್‌.ರವಿ, ಅಪೆಕ್ಸ್‌ ಬ್ಯಾಂಕ್‌ ಅಭಿವೃದ್ಧಿಗೆ ಶ್ರಮ ವಹಿಸಿ ಕೆಲಸ ಮಾಡುತ್ತೇನೆ. ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಸಹಕಾರ ಕ್ಷೇತ್ರದ ಹಿರಿಯರಾದ ಕೆ.ಎನ್‌.ರಾಜಣ್ಣ ಅವರ ಸಲಹೆಯೊಂದಿಗೆ ಮುಂದುವರೆಯುತ್ತೇನೆ ಎಂದು ಹೇಳಿದರು.

- ಸಚಿವ ಸ್ಥಾನ ತಪ್ಪಿದ್ದ ರಾಜಣ್ಣಗೆ ಸಹಕಾರ ಬ್ಯಾಂಕ್‌ ಗಾದಿಯೂ ಇಲ್ಲ । ಸಿದ್ದು ಬಣಕ್ಕೆ ಹಿನ್ನಡೆ

ಅಪೆಕ್ಸ್‌ ಬ್ಯಾಂಕ್‌ನ ಅಧ್ಯಕ್ಷ ಸ್ಥಾನಕ್ಕೆ ಪರಿಷತ್‌ ಸದಸ್ಯ ಎಸ್‌.ರವಿ, ಶಾಸಕ ಕೆ.ಎನ್‌.ರಾಜಣ್ಣ ನಡುವೆ ಭಾರೀ ಪೈಪೋಟಿ

ರವಿ ಪರವಾಗಿ ಸಿಎಂ ಡಿಕೆಶಿ, ರಾಜಣ್ಣ ಪರವಾಗಿ ಮಾಜಿ ಸಿಎಂ ಸಿದ್ದು ದೆಹಲಿ ಹೈಕಮಾಂಡ್‌ ಮಟ್ಟದಲ್ಲಿ ಭಾರೀ ಲಾಬಿ

ಆದರೆ ಅಂತಿಮವಾಗಿ ಸಿಎಂ ಸಂಬಂಧಿ ರವಿಗೆ ಒಲಿದ ಅಧ್ಯಕ್ಷ ಸ್ಥಾನ. ಹೀಗಾಗಿ ಸಿದ್ದು ಬಣಕ್ಕೆ ಹಿನ್ನಡೆ. ರಾಜಣ್ಣ ಮುನಿಸು

ಎರಡೂ ಹುದ್ದೆ 5 ವರ್ಷ ಅವಧಿಯದ್ದಾಗಿದ್ದು, ಮೊದಲ ಎರಡೂವರೆ ವರ್ಷದ ಅವಧಿಗೆ ಇದೀಗ ಇಬ್ಬರ ಆಯ್ಕೆ ಘೋಷಣೆ