ಕನ್ನಡಪ್ರಭ ವಾರ್ತೆ ಮಡಿಕೇರಿ

ಗೃಹ ಜ್ಯೋತಿ ಯೋಜನೆಗೆ ಸಂಬಂಧಿಸಿದಂತೆ ದಾಖಲೆ ಪರಿಷ್ಕರಣಾ ಕಾರ್ಯ ನಡೆಯುತ್ತಿದ್ದು, ಫಲಾನುಭವಿಗಳು ಕೇಳಿರುವ ಮಾಹಿತಿ ಒದಗಿಸಬೇಕು ಎಂದು ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಹೇಳಿದ್ದಾರೆ.

ನಗರದ ಜಿಪಂ ಕೆಡಿಪಿ ಸಭಾಂಗಣದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಂಬಂಧ ಶುಕ್ರವಾರ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸರ್ಕಾರ ಅರ್ಹರಿಗೆ ಗ್ಯಾರಂಟಿ ಯೋಜನೆ ಸೌಲಭ್ಯ ತಲುಪಿಸಬೇಕು ಎಂಬುದು ಉದ್ದೇಶವಾಗಿದೆ. ಆದ್ದರಿಂದ ಮಾಹಿತಿ ಕೇಳುವ ಸಂದರ್ಭದಲ್ಲಿ ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ, ಪಡಿತರ ಚೀಟಿ, ಭಾವಚಿತ್ರ ಮತ್ತಿತರ ಮಾಹಿತಿ ಒದಗಿಸುವಂತಾಗಬೇಕು ಎಂದು ಧರ್ಮಜ ಉತ್ತಪ್ಪ ಕೋರಿದರು.

ಗೃಹಲಕ್ಷ್ಮಿ ಯೋಜನೆ ಸಂಬಂಧಿಸಿದಂತೆ ಈಗಾಗಲೇ ಹೆಸರು ನೋಂದಾಯಿಸಿಕೊಂಡಿರುವ ಫಲಾನುಭವಿಗಳು ಜೀವಂತ ಪ್ರಮಾಣ ಪತ್ರ ನೀಡಬೇಕೆಂದು ಸೈಬರ್ ಕೇಂದ್ರಗಳಿಗೆ ಓಡಾಡುತ್ತಿದ್ದು, ಇಂತಹ ಮಾಹಿತಿಗೆ ಕಿವಿಗೊಡಬಾರದು, ಯಾರೂ ಸಹ ಗಾಬರಿಗೆ ಒಳಗಾಗುವುದು ಬೇಡ ಎಂದು ಧರ್ಮಜ ಉತ್ತಪ್ಪ ಹೇಳಿದರು.


ಕೊಡಗು ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗುತ್ತಿದ್ದು, ಅಲ್ಲಲ್ಲಿ ಮರದ ಕೊಂಬೆಗಳು ಬೀಳುತ್ತಿವೆ. ಇವುಗಳನ್ನು ತೆರವುಗೊಳಿಸಬೇಕು ಎಂದು ಧರ್ಮಜ ಉತ್ತಪ್ಪ ನಿರ್ದೇಶನ ನೀಡಿದರು.

ಗೃಹಲಕ್ಷ್ಮಿ ಯೋಜನೆಯಡಿ ಮೇ ತಿಂಗಳವರೆಗೆ ಹಣ ಬಿಡುಗಡೆಯಾಗಿದ್ದು. ಸದ್ಯ 1,17,905 ಫಲಾನುಭವಿಗಳಿಗೆ ಹಣ ಪಾವತಿಯಾಗಲಿದೆ. ಇದುವರೆಗೆ ಶೇ. 98ರಷ್ಟು ಅರ್ಹ ಫಲಾನುಭವಿಗಳಿಗೆ ಗೃಹಲಕ್ಷ್ಮಿ ಯೋಜನೆ ತಲುಪಿದೆ ಎಂದರು.

ಅನ್ನಭಾಗ್ಯ ಯೋಜನೆ ಸಂಬಂಧಿಸಿದಂತೆ ಮಾಹಿತಿ ಪಡೆದ ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಧರ್ಮಜ ಉತ್ತಪ್ಪ ಅವರು ಬಡವರಿಗೆ ಆಹಾರ ತಲುಪಿಸಬೇಕು. ಎಪಿಎಲ್ ಕಾರ್ಡ್‍ಗಳನ್ನು ಬಿಪಿಎಲ್ ಕಾರ್ಡ್‍ಗೆ ವರ್ಗಾಯಿಸಬೇಕು ಎಂದು ತಿಳಿಸಿದರು.

ಈ ಸಂದರ್ಭ ಮಾತನಾಡಿದ ಸಮಿತಿ ಸದಸ್ಯ ಕಾಳಿಮಾಡ ಪ್ರಶಾಂತ್ ಅವರು ಮನೆ ಮನೆಗೆ ಆಹಾರ ನಿರೀಕ್ಷಕರು ಭೇಟಿ ನೀಡಿ ಪರಿಶೀಲನೆ ಮಾಡಬೇಕಿದೆ. ಆದರೆ ತಹಸೀಲ್ದಾರರೇ ಸ್ಥಳ ಪರಿಶೀಲಿಸಬೇಕು ಎಂದು ವರದಿ ನೀಡುತ್ತಿದ್ದಾರೆ. ಇದು ಸರಿಯಲ್ಲ. ಕೆಲವು ಕುಟುಂಬಗಳಲ್ಲಿ ಬಿಪಿಎಲ್ ಪಡಿತರ ಚೀಟಿಗಳು ಎಪಿಎಲ್ ಕಾರ್ಡ್ ಆಗಿ ಪರಿವರ್ತನೆಗೊಂಡಿದ್ದು, ಇದನ್ನು ಸರಿಪಡಿಸುವಂತಾಗಬೇಕು ಎಂದು ಕೋರಿದರು.

ಗೃಹ ಜ್ಯೋತಿ ಯೋಜನೆಯಡಿ ಶೇ. 99ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ರಾಮಚಂದ್ರ ಹೇಳಿದರು. ಸಮಿತಿ ಉಪಾಧ್ಯಕ್ಷರಾದ ಪಂಕಜ, ಸಂಜಯ್, ಸದಸ್ಯರಾದ ಮಂದ್ರೀರ ಮೋಹನ್ ದಾಸ್, ಬಶೀರ್, ಧನ್ಯ, ಇತರರು ಹಲವು ವಿಷಯಗಳ ಕುರಿತು ಪ್ರಸ್ತಾಪಿಸಿದರು.