ಮಂಗಳೂರು: ಗುಣಮಟ್ಟದ ಹೆಸರಿನಲ್ಲಿ ಕರ್ನಾಟಕದ ಅಡಕೆ ಸಾಗಾಟ ಕಂಟೈನರ್‌ಗಳಿಗೆ ಮಹಾರಾಷ್ಟ್ರದಲ್ಲಿ ತಡೆ ಒಡ್ಡುವುದನ್ನು ನಿಲ್ಲಿಸುವಂತೆ ಅಲ್ಲಿನ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಿರುವುದು ಫಲಪ್ರದವಾಗಿದೆ ಎಂದು ಮಾಜಿ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದ್ದಾರೆ.
ಮಂಗಳೂರಿನ ಕ್ಯಾಂಪ್ಕೋ ಪ್ರಧಾನ ಕಚೇರಿಯಲ್ಲಿ ಕ್ಯಾಂಪ್ಕೋ ಸ್ಥಾಪಕ ವಾರಣಾಸಿ ಸುಬ್ರಾಯ ಭಟ್ ಜನ್ಮಶತಮಾನೋತ್ಸವ ಸಂದರ್ಭ ಶನಿವಾರ ನಡೆದ ಅಂತಾರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೋ 53ನೇ ‘ಸ್ಥಾಪನಾ ದಿನಾಚರಣೆ’ ಉದ್ಘಾಟಿಸಿ ಅವರು ಮಾತನಾಡಿದರು. ‘ಒಂದು ದೇಶ-ಒಂದು ಉತ್ಪನ್ನ’ ಎಂಬ ಕೇಂದ್ರದ ಪರಿಕಲ್ಪನೆ ಸಾಕಾರಗೊಳ್ಳುತ್ತಿದ್ದರೂ ಆಯಾ ರಾಜ್ಯಗಳಿಗೆ ಅದರದ್ದೇ ಆದ ತೆರಿಗೆ ನಿಯಮ ಈಗಲೂ ಚಾಲ್ತಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ಅಡಕೆ ಗುಣಮಟ್ಟ ತಪಾಸಣೆ, ತೆರಿಗೆ ಹಾಗೂ ಅಡಕೆ ಸಾಗಾಟದ ಟ್ರಕ್‌ಗಳಿಗೆ ತಡೆ ಒಡ್ಡುತ್ತಿದೆ. ಇದರಿಂದಾಗಿ ಅಡಕೆ ಮಾರಾಟ, ರಫ್ತು ಹಾಗೂ ಬೆಳೆಗಾರರಿಗೆ ಆಗುತ್ತಿರುವ ತೊಂದರೆಯನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ಗೆ ಮನವರಿಕೆ ಮಾಡಲಾಗಿದೆ. ಅವರು ಕರ್ನಾಟಕ ಅಡಕೆ ಸಾಗಾಟ ಕಂಟೈನರ್‌ಗಳನ್ನು ತಡೆಯದಂತೆ ಅಧಿಕಾರಿಗಳಿಗೆ ಸೂಚನೆ ನೀಡುವುದಾಗಿ ಭರವಸೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಕ್ಯಾಂಪ್ಕೋ ಸಹಿತ ಎಲ್ಲ ಅಡಕೆ ಬೆಳೆಗಾರ ಸಂಘಟನೆಗಳು ಹಾಗೂ ಸಂಸದರು, ಕೇಂದ್ರ ಸಚಿವರು ಸಕಾಲದಲ್ಲಿ ನಿಯೋಗ ಮೂಲಕ ತೆರಳಿ ಸಂಬಂಧಿಸಿದವರನ್ನು ಆಗ್ರಹಿಸುವಲ್ಲಿ ಸಫಲರಾಗಿದ್ದಾರೆ ಎಂದರು. ಅಡಕೆ ತೋಟಗಳಿಗೆ ಬಾಧಿಸಿರುವ ಹಳದಿ ಎಲೆ ರೋಗ, ಎಲೆ ಚುಕ್ಕಿ ರೋಗ ಹಾಗೂ ಕೊಳೆ ರೋಗ ನಿವಾರಣೆಗೆ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.ಜಿಎಸ್‌ಟಿ ಸುಂಕ ಶೇ.5 ಇಳಿಕೆ ಭರವಸೆ: ಮೈಲುತುತ್ತು ಮಾರಾಟ ಮೇಲಿನ ಜಿಎಸ್‌ಟಿ ತೆರಿಗೆಯನ್ನು ಶೇ. 18 ರಿಂದ ಶೇ. 5ಕ್ಕೆ ಇಳಿಕೆ ಮಾಡುವಂತೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಲ್ಲಿ ಕೋರಿಕೊಳ್ಳಲಾಗಿದೆ. ಇದಕ್ಕೆ ಪೂರಕ ಸ್ಪಂದನ ದೊರೆತಿದೆ ಎಂದರು. ವಾಜಪೇಯಿ ಅವಧಿಯಿಂದ ತೊಡಗಿ ಪ್ರಧಾನಿ ನರೇಂದ್ರ ಮೋದಿ ಅವರೆಗೆ ಅಡಕೆ ಬೆಳೆಗಾರರ ಹಿತಾಸಕ್ತಿ ಕಾಪಾಡುವಲ್ಲಿ ಕೇಂದ್ರ ಸರ್ಕಾರ ಬದ್ಧವಾಗಿದೆ. ಇದು ಇನ್ನೂ ಮುಂದುವರಿಯುತ್ತದೆ ಎಂದರು.
ಕ್ಯಾಂಪ್ಕೋ ಆ್ಯಪ್‌ಗೆ ಚಾಲನೆ : ‘ಬೆಳೆಗಾರರ ಮಿತ್ರ’ ಕ್ಯಾಂಪ್ಕೋ ಆ್ಯಪ್‌ಗೆ ಚಾಲನೆ ನೀಡಿ ಮಾತನಾಡಿದ ಮಾಜಿ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ, ಕ್ಯಾಂಪ್ಕೋ ಒಂದು ವಿಶ್ವವಿದ್ಯಾಲಯ ಇದ್ದಂತೆ. ಅಡಕೆ ಉತ್ಪಾದನೆಯಿಂದ ತೊಡಗಿ ಮಾರಾಟ ವರೆಗೆ ಎಲ್ಲ ಮಗ್ಗುಲುಗಳನ್ನೂ ಒಂದೇ ಕಡೆ ಕಲಿಯಲು ಸಾಧ್ಯ. ಅಡಕೆ ಕೃಷಿಗೆ ಸಂಬಂಧಿಸಿ ಬೇರೆ ಪದವಿ ಕಲಿಕೆಯ ಅಗತ್ಯ ಇಲ್ಲ ಎಂದರು.ಕ್ಯಾಂಪ್ಕೋ ಹೊರತಂದ ಆ್ಯಪ್ ಬೆಳೆಗಾರ ಸದಸ್ಯರಿಗೆ ಎಲ್ಲ ರೀತಿಯ ಮಾಹಿತಿಯನ್ನು ನೀಡಲಿದೆ ಎಂದರು. ವಾರಣಾಸಿ ಹೆಸರು ಚಿರಸ್ಥಾಯಿಯಾಗಿಸಿ: ಸ್ಥಾಪನಾ ದಿನಾಚರಣೆ ಕುರಿತು ಭಾಷಣ ಮಾಡಿದ ಪ್ರಗತಿಪರ ಕೃಷಿಕ, ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಂಕರ್ ಸಾರಡ್ಕ, ಅಡಕೆ ಬೆಳೆಗಾರರ ಸಂಕಷ್ಟದ ಕಾಲದಲ್ಲಿ ಕ್ಯಾಂಪ್ಕೋ ಹಾಗೂ ಚಾಕಲೇಟ್ ಕಾರ್ಖಾನೆ ಸ್ಥಾಪಿಸಿದ ವಾರಣಾಸಿ ಸುಬ್ರಾಯ ಭಟ್ಟರ ದೂರದೃಷ್ಟಿತ್ವವನ್ನು ವಿವರಿಸಿದರು. ಬಂಟ್ವಾಳ ತಾಲೂಕಿನ ಸಾರಡ್ಕ-ಪರಿಯಾಲ್ತಡ್ಕ ರಸ್ತೆಗೆ ವಾರಣಾಸಿ ಸುಬ್ರಾಯ ಭಟ್ಟರ ಹೆಸರು ಇರಿಸಬೇಕು. ಅಡ್ಯನಡ್ಕದಲ್ಲಿ ಪ್ರೀಮಿಯರ್ ಕ್ಯಾಂಪ್ಕೋ ಶಾಖೆ ತೆರೆಯಬೇಕು. ಇನ್ನಷ್ಟು ಮೌಲ್ಯವರ್ಧಿತ ಚಾಕಲೇಟ್ ಮಾರುಕಟ್ಟೆಗೆ ಬರಬೇಕು, ಅಡಕೆಯ ಮೌಲ್ಯವರ್ಧಿತ ಉತ್ಪನ್ನಗಳ ಬಗ್ಗೆ ಸಂಶೋಧನೆ ನಡೆಯಬೇಕು ಎಂದು ಆಶಿಸಿದರು.
ಕೇಶವ ಅಮೈಗೆ ಸನ್ಮಾನ: ಅಲ್ಯುಮೀನಿಯಂ ಏಣಿಯೇ ಮೊದಲಾದ ಕೃಷಿಕರ ಉಪಕರಣ ತಯಾರಿಸಿದ ಪ್ರಗತಿಪರ ಕೃಷಿಕ, ಉದ್ಯಮಿ ಪುತ್ತೂರು ಎಸ್‌ಆರ್‌ಕೆ ಲ್ಯಾಡರ್ಸ್ ಮಾಲೀಕ ಕೇಶವ ಅಮೈ ಅವರನ್ನು ಸನ್ಮಾನಿಸಲಾಯಿತು. ಕೃಷಿಕರ ಸಮಸ್ಯೆ ನಿವಾರಿಸುವ ಉತ್ಪನ್ನವನ್ನು ನಾನು ತಯಾರಿಸಿದ್ದು, ಅದನ್ನು ಕೃಷಿಕರಿಗೇ ಮಾರಾಟ ಮಾಡುತ್ತಿದ್ದೇನೆ. ನನಗೆ ಸಂದ ಸನ್ಮಾನವನ್ನು ಕೃಷಿಕರಿಗೆ ಅರ್ಪಿಸುತ್ತಿದ್ದೇನೆ ಎಂದರು. ಕ್ಯಾಂಪ್ಕೋ ವ್ಯವಸ್ಥಾಪಕ ನಿರ್ದೇಶಕ ಡಾ.ಬಿ.ವಿ.ಸತ್ಯನಾರಾಯಣ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ನಿರ್ದೇಶಕ ಮುರಲೀಕೃಷ್ಣ ಪರಿಚಯಿಸಿದರು. ಉಪಾಧ್ಯಕ್ಷ ಪದ್ಮರಾಜ್ ಪಟ್ಟಾಜೆ ವಂದಿಸಿದರು. ಜಾಗತಿಕ ಮಟ್ಟಕ್ಕೆ ಕ್ಯಾಂಪ್ಕೋ ಬ್ರ್ಯಾಂಡ್ : ಎಸ್.ಆರ್.ಸತೀಶ್ಚಂದ್ರ : ಅಧ್ಯಕ್ಷತೆ ವಹಿಸಿ ಮಾತನಾಡಿದ ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ, ಗುಣಮಟ್ಟ ಹಾಗೂ ರಾಸಾಯನಿಕ ರಹಿತವಾದ ಭಾರತದ ಎಲ್ಲ ಉತ್ಪನ್ನಗಳಿಗೆ ಜಗತ್ತೇ ಮುಕ್ತವಾಗಿ ತೆರೆದುಕೊಂಡಿರುವುದರಿಂದ ಕ್ಯಾಂಪ್ಕೋ ಕೂಡ ಮುಂದಿನ ದಿನಗಳಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ತನ್ನ ಬ್ರ್ಯಾಂಡ್‌ನ್ನು ಕಂಡುಕೊಳ್ಳಲು ಯೋಜನೆ ಹಾಕಿಕೊಂಡಿದೆ ಎಂದರು.ಅಡಕೆಯ ಮೌಲ್ಯವರ್ಧಿತ ಉತ್ಪನ್ನ, ಅಡಕೆ ಮಾರಾಟ ಮಾತ್ರವಲ್ಲ ಚಾಕಲೇಟ್ ಉತ್ಪಾದನೆಯಲ್ಲೂ ಕ್ಯಾಂಪ್ಕೋ ಜಾಗತಿಕ ಸ್ಪರ್ಧೆಗೆ ಮುಂದಾಗಲಿದೆ. ಅಡಕೆ ಎಲೆ ಚುಕ್ಕಿ ರೋಗ, ಹಳದಿ ರೋಗಗಳಿಗೆ ಕೇಂದ್ರ ಸರ್ಕಾರದ ನೆರವಿನಲ್ಲಿ ವಿವಿಧ ಸಂಸ್ಥೆಗಳು ಸಂಶೋಧನೆ ನಡೆಸುತ್ತಿವೆ. ಇನ್ನು ಒಂದು ವರ್ಷದಲ್ಲಿ ಕ್ಯಾಂಪ್ಕೋ ಕೂಡ ಗುಜರಾತ್‌ನ ಅಮೂಲ್ ಮಾದರಿಯಲ್ಲೇ ಅಡಕೆ ಬೆಳೆಗಾರರ ಸಮಸ್ಯೆ, ಪ್ರಶ್ನೆಗಳಿಗೆ ಸ್ಪಂದಿಸಲು ಕೃತಕ ಬುದ್ಧಿಮತ್ತೆ(ಎಐ) ನೆರವಿನ ತಾಂತ್ರಿಕತೆಯನ್ನು ಬಳಕೆ ಮಾಡಲು ಯೋಚಿಸುತ್ತಿದೆ ಎಂದರು.