ಹಾನಗಲ್ಲ: ಕನ್ನಡ ಸಾಹಿತ್ಯ ಇತಿಹಾಸದಲ್ಲಿ ಶರಣ ಸಂಸ್ಕೃತಿಯ ವಚನಗಳ ಸರಳ ನಿರೂಪಣೆ, ಜೀವನ ಮೌಲ್ಯಗಳ ಅನುಭಾವದ ಅಭಿವ್ಯಕ್ತಿ ಸಾರ್ವಕಾಲಿಕ ಸತ್ಯಗಳನ್ನು ಸಾರಿದೆ ಎಂದು ಮಕರವಳ್ಳಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ ಎನ್.ಪಿ. ರೇಣುಕಾ ಹೇಳಿದರು.

ಹಾನಗಲ್ಲಿನ ಶ್ರೀ ಕುಮಾರೇಶ್ವರ ವಿರಕ್ತಮಠದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಹಾನಗಲ್ಲ ನಗರ ಘಟಕ, ತಾಲೂಕು ಕದಳಿ ಮಹಿಳಾ ವೇದಿಕೆ ಸಂಯುಕ್ತವಾಗಿ ಆಯೋಜಿಸಿದ್ದ ಶರಣ ಸಂಗಮ ಹಾಗೂ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಬದುಕಿನ ಯಶಸ್ಸಿರುವುದೇ ಸಂತಸದ ಕ್ಷಣಗಳಲ್ಲಿ. ಶರಣರ ಸಂದೇಶಗಳು ಜಗದಗಲ ಇರುವ ಮಾನವರ ನಡೆ ನುಡಿ ಕಾಯಕದ ಪರಿಮಿತಿಯಲ್ಲಿ ಶುದ್ಧ ಸಾಮಾಜಿಕರಾಗಿ ಬದುಕುವ ಎಲ್ಲ ಸಂದೇಶಗಳನ್ನು ನೀಡಿದ್ದಾರೆ. ನಾಳೆಗಳು ಸುಂದರವಾಗಲು ಇಂದಿನ ನಮ್ಮ ಆಚಾರ ವಿಚಾರಗಳನ್ನು ಶುದ್ಧೀಕರಿಸಿಕೊಳ್ಳುವ ಮಾರ್ಗದರ್ಶನ ಇಲ್ಲಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕರಗುದರ ಪಿಡಿಒ ಪ್ರವೀಣ ಸಾಳಗುಂದಿ, ಫ.ಗು. ಹಳಕಟ್ಟಿ ಅವರು ಇಡೀ ವಚನ ಸಾಹಿತ್ಯವನ್ನು ಸಮಾಜಕ್ಕೆ ಸಮರ್ಥವಾಗಿ ಓದಿಗೆ ಸಹಕಾರಿಯಾಗಿ ಕಟ್ಟಿಕೊಟ್ಟ ಪರಿಯಿಂದಲೇ ವಚನ ಸಾಹಿತ್ಯ ನಮಗಾಗಿ ಉಳಿದಿದೆ. ವಕೀಲರಾಗಿದ್ದ ಹಳಕಟ್ಟಿ ಅವರು ಉದ್ಯೋಗಕ್ಕೆ ಮಾರು ಹೋಗದೇ ವಚನಗಳ ಸಂಗ್ರಹಕ್ಕೆ ಹಗಲಿರುಳು ಶ್ರಮಿಸಿ ಬದುಕನ್ನು ಸಾರ್ಥಕ ಮಾಡಿಕೊಂಡಿದ್ದಾರೆ. ಈಗ ಈ ಅತ್ಯಂತ ಸರಳವಾದ ವಚನಗಳನ್ನು ಮನೆ ಮನೆಗಳಿಗೆ ತಲುಪಿಸುವ ಕಾರ್ಯಕ್ಕೆ ನಾವೆಲ್ಲ ಕೈ ಜೋಡಿಸಬೇಕಾಗಿದೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶರಣ ಸಾಹಿತ್ಯ ಪರಿಷತ್ ನಗರ ಘಟಕದ ಉಪಾಧ್ಯಕ್ಷ ಎಸ್.ಸಿ. ಹೇಮಗಿರಿಮಠ, ಫ.ಗು. ಹಳಕಟ್ಟಿ ಅವರು ಸನ್ಮಾನ, ಪ್ರಶಸ್ತಿಗಾಗಿ ವಚನದ ಸೇವೆ ಮಾಡಲಿಲ್ಲ. ಮನೆ ಮನೆಗಳಿಗೆ ತೆರಳಿ ಪೂಜೆಗೊಳ್ಳುತ್ತಿರುವ ವಚನಗಳ ಕಟ್ಟುಗಳನ್ನು ಕಾಡಿ ಬೇಡಿ ಪಡೆದು ಅವನ್ನು ಉಳಿಸಿ, ಸಮಾಜಕ್ಕೆ ನೀಡಿದ ಪರಿಣಾಮವಾಗಿ ಈಗ ವಚನಗಳು ಇಡೀ ಪ್ರಪಂಚದ ಗಮನ ಸೆಳೆದಿವೆ. ಬಸವ ಸಂಸ್ಕೃತಿಯ ಹಿರಿಮೆಯ ಪರಿಚಯ ಪ್ರಯೋಜನ ಈಗ ಜನರಿಗೆ ಅರ್ಥವಾಗುತ್ತಿದೆ ಎಂದರು.


ಶರಣ ಸಾಹಿತ್ಯ ಪರಿಷತ್ತಿನ ಸದಸ್ಯರಾಗಿರುವ ರೇಖಾ ಶೆಟ್ಟರ ಹಾಗೂ ಸಿ. ಮಂಜುನಾಥ ನೂತನವಾಗಿ ಜನತಾ ಶಿಕ್ಷಣ ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕರಾಗಿ ಆಯ್ಕೆಯಾದ ನಿಮಿತ್ತ ಸನ್ಮಾನಿಸಲಾಯಿತು. ಗೌರವಾಧ್ಯಕ್ಷ ರವಿಬಾಬು ಪ್ರಜಾರ, ಸುಮಂಗಲಾ ಕಟ್ಟಿಮಠ, ರಾಮಣ್ಣ ಸುಗಂಧಿ, ವೀರಪ್ಪ ಕರೆಗೊಂಡರ, ಸುಜಾತಾ ನಂದೀಶೆಟ್ಟರ ಇದ್ದರು.

ತಾಲೂಕು ಘಟಕದ ಅಧ್ಯಕ್ಷ ಎಸ್.ಸಿ. ಕಲ್ಲನಗೌಡರ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಧ್ಯಾ ಸಾಲಗುಂದಿ, ಅಕ್ಕಮ್ಮ ಶೆಟ್ಟರ, ಶ್ರೇಯಸ್ ಸಾಳಗುಂದಿ ವಚನಗಳನ್ನು ಹಾಡಿದರು. ಉಪಾಧ್ಯಕ್ಷ ಅಶೋಕ ದಾಸರ ಸ್ವಾಗತಿಸಿದರು. ಕಾರ್ಯದರ್ಶಿ ಎಸ್.ವಿ. ಹೊಸಮನಿ ಕಾರ್ಯಕ್ರಮ ನಿರೂಪಿಸಿದರು. ಎಚ್. ಸುಧಾ ವಂದಿಸಿದರು.