ಶಿವಾನಂದ ಗೊಂಬಿ

ಹುಬ್ಬಳ್ಳಿ:

ಉತ್ತರ ಕರ್ನಾಟಕದ ಸಂಜೀವಿನಿ ಎಂದೇ ಹೆಸರಾಗಿರುವ ಕರ್ನಾಟಕ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ಕೆಎಂಸಿ ಆರ್‌ಐ)ಗೆ ನಿರ್ದೇಶಕ ಹುದ್ದೆಗೆ ಭಾರೀ ಪೈಪೋಟಿ ಏರ್ಪಟ್ಟಿದೆ. ಬರೋಬ್ಬರಿ 17 ಜನರು ನಿರ್ದೇಶಕ ಹುದ್ದೆ ಬಯಸಿ ಅರ್ಜಿ ಸಲ್ಲಿಸಿದ್ದಾರೆ. ಇಷ್ಟೊಂದು ಸಂಖ್ಯೆಯಲ್ಲಿ ಈ ಹುದ್ದೆಗೆ ಅರ್ಜಿ ಸಲ್ಲಿಕೆಯಾಗಿರುವುದು ಇದೇ ಮೊದಲು.

ಉತ್ತರ ಕರ್ನಾಟಕದ ಎಂಟ್ಹತ್ತು ಜಿಲ್ಲೆಗಳ ಪಾಲಿಗೆ ಅಕ್ಷರಶಃ ಸಂಜೀವಿನಿ ಎಂದೇ ಹೆಸರು ಪಡೆದಿರುವ ಕೆಎಂಸಿಆರ್‌ಐ, ಅಕ್ಕ ಪಕ್ಕಗಳ ಜಿಲ್ಲೆಗಳಲ್ಲೂ ವೈದ್ಯಕೀಯ ಕಾಲೇಜ್‌ಗಳಿದ್ದರೂ ರೋಗಿಗಳಿಗೆ ಈ ಆಸ್ಪತ್ರೆಯೇ ಮುಖ್ಯವಾಗಿದೆ. ಅನ್ಯ ಜಿಲ್ಲೆಯ ಆಸ್ಪತ್ರೆಗೆ ಗಂಭೀರ ಸಮಸ್ಯೆಯ ರೋಗಿ ಬಂದರೆ ಕೆಎಂಸಿಆರ್‌ಐಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತದೆ. ಇಂಥ ಸಂಸ್ಥೆಗೆ ನಿರ್ದೇಶಕರಾಗುವುದು ಒಂದು ರೀತಿಯಲ್ಲಿ ಅತ್ಯುನ್ನತ ಹುದ್ದೆ ಎನಿಸಿದೆ.

ಇಲ್ಲಿ ಕಾಯಂ ನಿರ್ದೇಶಕರಿಗಿಂತ ಪ್ರಭಾರಿ ಆದವರೇ ಜಾಸ್ತಿ. ಹೀಗಾಗಿ ಹೈಕೋರ್ಟ್‌ ಆರು ತಿಂಗಳೊಳಗೆ ಕಾಯಂ ನಿರ್ದೇಶಕರ ನೇಮಕ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸೂಚಿಸಿದೆ. ಅದರಂತೆ ಜೂ.16ರಂದು ನಿರ್ದೇಶಕರ ಹುದ್ದೆಗೆ ಅರ್ಜಿ ಆಹ್ವಾನಿಸಿ, ಜೂ.30ಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನಿಗದಿ ಪಡಿಸಿತ್ತು. ವೈದ್ಯಕೀಯ ಅಧೀಕ್ಷಕ ಡಾ. ಈಶ್ವರ ಹಸಬಿ, ಈ ಹಿಂದೆ ಒಂದೂವರೆ ವರ್ಷ ಪ್ರಭಾರ ನಿರ್ದೇಶಕರಾಗಿ ಕೆಲಸ ಮಾಡಿದ ಡಾ. ಎಸ್‌.ಎಫ್‌. ಕಮ್ಮಾರ, ಧಾರವಾಡ ಡಿಮ್ಹಾನ್ಸ್‌ನ ಹಾಲಿ ಪ್ರಭಾರ ನಿರ್ದೇಶಕ ಡಾ. ಅರುಣಕುಮಾರ ಚವ್ಹಾಣ, ಪ್ರಿನ್ಸಿಪಾಲ್‌ ಡಾ. ಸೂರ್ಯಕಾಂತ ಕಲ್ಲೂರಾಯ, ಪಿಎಂಎಸ್‌ಎಸ್‌ವೈ ಅಧೀಕ್ಷಕ ಡಾ. ರಾಜಶಂಕರ ಸಂಕನಾಳ, ಡಾ. ಜಾನಕಿ ತೊರವಿ, ಡಾ. ಮಹೇಶ ದೇಸಾಯಿ ಸೇರಿದಂತೆ ಒಟ್ಟು 17 ವೈದ್ಯರು ಅರ್ಜಿ ಸಲ್ಲಿಸಿದ್ದಾರೆ. ಈ ಹದಿನೈಳು ಜನರಲ್ಲಿ 10 ಜನರು ಟಾಪ್‌ ಟೆನ್‌ನಲ್ಲಿದ್ದಾರೆ.


ಆಕ್ಷೇಪಣೆ:

ಈ ನಡುವೆ ಕೆಎಂಸಿಆರ್‌ಐನ ವೆಬ್‌ಸೈಟ್‌ನಲ್ಲಿ ಜೇಷ್ಠತಾ ಪಟ್ಟಿ ಪ್ರಕಟಿಸಿದ್ದು 82 ಜನ ವೈದ್ಯರು, ಪ್ರಾಧ್ಯಾಪಕ ಹುದ್ದೆಯಲ್ಲಿದ್ದಾರೆ. 26 ವೈದ್ಯರು ಈಗಾಗಲೇ ಜೇಷ್ಠತಾ ಪಟ್ಟಿ ಬಗ್ಗೆ ಆಕ್ಷೇಪಣೆ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ನಿರ್ದೇಶಕ ಹುದ್ದೆಗೆ 10 ವರ್ಷ ಬೋಧನಾ ಅನುಭವ ಮತ್ತು ಇದೇ ಸಂಸ್ಥೆಯಲ್ಲಿ 5 ವರ್ಷ ಸೇವೆ ಸಲ್ಲಿಸಿರುವ ಜತೆಗೆ ಅವರಿಗೆ 50 ವರ್ಷ ತುಂಬಿರಬೇಕು. ಒಂದು ಬಾರಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದವರಿಗೆ ಅವಕಾಶ ಇಲ್ಲ ಎಂಬ ಪ್ರಮುಖ ಮಾನದಂಡ ಪ್ರಕಟಿಸಿದೆ. ಇದರ ಪ್ರಕಾರ ಕನಿಷ್ಠ 35 ವೈದ್ಯರು ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿದ್ದಾರೆ. ಇದರಲ್ಲಿ 17 ಪ್ರಾಧ್ಯಾಪಕರು ಅರ್ಜಿ ಸಲ್ಲಿಸಿದ್ದಾರೆ. ಈ ನಡುವೆ ಕೆಲವರಿಗೆ ಹುದ್ದೆಯ ಬಗ್ಗೆ ಆಸಕ್ತಿ ಇಲ್ಲದೆ ಇದ್ದರೂ ತಮಗೆ ಆಗದವರನ್ನು ತಡೆಯುವ ಉದ್ದೇಶದಿಂದ ಅರ್ಜಿ ಸಲ್ಲಿಸಿದವರು ಉಂಟು. ಹೀಗಾಗಿ ಪೈಪೋಟಿ ಏರ್ಪಟ್ಟಿದೆ ಎಂದು ಕೆಎಂಸಿಯಲ್ಲಿನ ಗುಸುಗುಸು ಜೋರಾಗಿದೆ.

ಸಲ್ಲಿಕೆಯಾದ 17 ಅರ್ಜಿಗಳಲ್ಲಿ 10 ವೈದ್ಯರನ್ನು ಸಂದರ್ಶನಕ್ಕೆ ಅಂತಿಮಗೊಳಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ. ಸಿನಿಯಾರಿಟಿ, ಅರ್ಹತೆ, ಅವರ ಸಂಶೋಧನೆ, ಪ್ರಬಂಧ, ಕೆಲಸದ ಗುಣಮಟ್ಟ, ಜರ್ನಲ್‌ಗಳಲ್ಲಿ ಪ್ರಕಟಗೊಂಡ ಪ್ರಬಂಧಗಳ ಸಂಖ್ಯೆ, ಅನುಭವ ಆಧರಿಸಿ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಲಾಗುತ್ತದೆ ಎನ್ನಲಾಗಿದೆ. ಅಂತಿಮವಾಗಿ ವೈದ್ಯಕೀಯ ಶಿಕ್ಷಣ ಇಲಾಖೆ ಮಂತ್ರಿಗಳ ಅಧ್ಯಕ್ಷತೆ ಇಲಾಖೆ ಸೆಕ್ರೆಟರಿ, ಆರೋಗ್ಯ ವಿವಿ ಉಪಕುಲಪತಿ, ಇಲಾಖೆ ನಿರ್ದೇಶಕರ ಒಳಗೊಂಡ ನೇಮಕಾತಿ ಸಮಿತಿ ಸಂದರ್ಶನ ನಡೆಸಲಿದೆ. ಸಮಿತಿಗೆ ಅಭ್ಯರ್ಥಿಗಳ ಸಂಪೂರ್ಣ ಮಾಹಿತಿ ಮತ್ತು ಅವರ ಸಮರ್ಥ ದಾಖಲೆಗಳನ್ನು ಕೆಎಂಸಿ ಆಡಳಿತಾಧಿಕಾರಿ ಒದಗಿಸಲಿದ್ದಾರೆ.

ಸಂದರ್ಶನದ ಮಾನದಂಡ

ನಿರ್ದೇಶಕರ ಹುದ್ದೆಗೆ ಎಷ್ಟು ಜನ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಯ್ಕೆ ಮಾಡಬೇಕೆಂಬ ನಿರ್ದಿಷ್ಟವಾಗಿ ಎಲ್ಲಿಯೂ ಹೇಳಿಲ್ಲ. 2014-15ರ ಬೈಲಾ ಪ್ರಕಾರ ಜೇಷ್ಠತಾ ಮತ್ತು ಅರ್ಹತೆ ಹಾಗೂ ಕನಿಷ್ಠ 2 ವರ್ಷ ಸೇವಾವಧಿ ಇರುವ ಕನಿಷ್ಠ 5 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿತ್ತು. ಆದರೆ, 2023ರ ನಿಯಮಾವಳಿಗಳಲ್ಲಿ ಇಲ್ಲವಾಗಿದೆ. ಹಾಗಾಗಿ ಎಷ್ಟು ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಅಂತಿಮಗೊಳಿಸಲಾಗುತ್ತದೆ ಎಂಬುದು ಸ್ಪಷ್ಟತೆ ಇಲ್ಲ ಎಂದು ಕೆಎಂಸಿಆರ್‌ಐನ ಉನ್ನತ ಮೂಲಗಳು ತಿಳಿಸುತ್ತವೆ.

ಜುಲೈನಲ್ಲಿ ಆಯ್ಕೆ ಪ್ರಕ್ರಿಯೆ ಪೂರ್ಣ?

ನೋಟಿಫಿಕೇಶನ್‌ದಲ್ಲಿ ನಿರ್ದೇಶಕರ ನೇಮಕ ಪ್ರಕ್ರಿಯೆ ಪೂರ್ಣಗೊಳಿಸುವ ಬಗ್ಗೆ ಯಾವುದೇ ದಿನಾಂಕ ಗೊತ್ತುಪಡಿಸಿಲ್ಲ. ಆದರೂ ಹಾಲಿ ಪ್ರಭಾರ ನಿರ್ದೇಶಕ ಕೆ.ಎಫ್‌. ಕಮ್ಮಾರ ಜು.31ಕ್ಕೆ ನಿವೃತ್ತಿಯಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಈ ತಿಂಗಳಾಂತ್ಯದಲ್ಲಿ ನೇಮಕಾತಿ ಪ್ರಕ್ರಿಯೆ ಪೂರ್ಣವಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಒಟ್ಟಿನಲ್ಲಿ ಕೆಎಂಸಿಆರ್‌ಐನಲ್ಲಿ ಇದೀಗ ನಿರ್ದೇಶಕರ ನೇಮಕಾತಿ ವಿಷಯವೇ ಬಲುಚರ್ಚಿತ ವಿಷಯವಾಗಿರುವುದಂತೂ ಸತ್ಯ.