ಗೃಹಲಕ್ಷ್ಮಿ ಹಣ ಯಾವುದೇ ಅಡಚಣೆಯಿಲ್ಲದೆ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ. ಫಲಾನುಭವಿಗಳು ವದಂತಿಗಳಿಗೆ ಕಿವಿಗೊಡದೆ ವಿನಾಕಾರಣ ಸೈಬರ್ ಸೆಂಟರ್‌ಗಳಿಗೆ ಅಲೆದಾಡಿ ನೋಂದಣಿ ಮಾಡಿಸಿಕೊಳ್ಳುವ ಗೋಜಿಗೆ ಹೋಗಬಾರದು ಎಂದು ಪಂಚ

ನವಲಗುಂದ:

ಗೃಹಲಕ್ಷ್ಮಿ ಹಣ ಯಾವುದೇ ಅಡಚಣೆಯಿಲ್ಲದೆ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ. ಫಲಾನುಭವಿಗಳು ವದಂತಿಗಳಿಗೆ ಕಿವಿಗೊಡದೆ ವಿನಾಕಾರಣ ಸೈಬರ್ ಸೆಂಟರ್‌ಗಳಿಗೆ ಅಲೆದಾಡಿ ನೋಂದಣಿ ಮಾಡಿಸಿಕೊಳ್ಳುವ ಗೋಜಿಗೆ ಹೋಗಬಾರದು. ಗೃಹಜ್ಯೋತಿ ಹಾಗೆಯೇ ಗೃಹಲಕ್ಷ್ಮಿಗೂ ಕೂಡಾ ಇಲಾಖೆ ಅಧಿಕಾರಿಗಳು ನಿಮ್ಮ ಮನೆಗೆ ಬಂದು ಇ-ಕೆವೈಸಿ ಅಪ್‌ಡೇಟ್ ಮಾಡಿಕೊಂಡು ಹೋಗುತ್ತಾರೆ ಎಂದು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಎಸ್.ಆರ್. ಪಾಟೀಲ ತಿಳಿಸಿದರು.

ತಾಲೂಕು ಪಂಚಾಯಿತಿಯಲ್ಲಿ ಬುಧವಾರ ಜರುಗಿದ ತಾಲೂಕು ಮಟ್ಟದ ಪಂಚ ಗ್ಯಾರಂಟಿ ಸಮಿತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅನವಶ್ಯಕ ಅಲೆದಾಡಿಸುವ ಸೈಬರ್ ಕೇಂದ್ರಗಳ ವಿರುದ್ಧ ಕ್ರಮಕೈಗೊಳ್ಳಲು ಮೇಲಧಿಕಾರಿಗಳಿಗೆ ಶಿಫಾರಸು ಮಾಡಲಾಗುವುದು. ಈ ವರೆಗೆ ಇ-ಕೆವೈಸಿ ಅಪ್‌ಡೇಟ್ ಕುರಿತಂತೆ ಸರ್ಕಾರದಿಂದ ಯಾವುದೇ ರೀತಿಯ ಮಾರ್ಗಸೂಚಿ ಅಥವಾ ಅಧಿಕೃತ ಸೂಚನೆ ಬಿಡುಗಡೆಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ತಾಲೂಕು ಅಧ್ಯಕ್ಷ ವರ್ಧಮಾನಗೌಡ ಹಿರೇಗೌಡ್ರ ಮಾತನಾಡಿ, ತಾಲೂಕಿನಲ್ಲಿ ಮರಣ ಹೊಂದಿದ ಗೃಹಲಕ್ಷ್ಮಿ ಫಲಾನುಭವಿಗಳಿಂದ ₹1,26,000 ಬ್ಯಾಂಕ್ ಮೂಲಕ ಸರ್ಕಾರಕ್ಕೆ ಮರಳಿ ಭರಣಾ ಮಾಡಿಸಲಾಗಿದೆ. ತಾಲೂಕಿನಲ್ಲಿ ಗ್ಯಾರಂಟಿ ಯೋಜನೆಗಳಿಂದ ಯಾವುದೇ ಫಲಾನುಭವಿಗಳು ವಂಚಿತರಾಗದಂತೆ ಅಧಿಕಾರಿಗಳು ಕ್ರಮವಹಿಸಬೇಕು ಎಂದರು.

ತಾಪಂ ಇಒ ರವೀಂದ್ರಗೌಡ ಪಾಟೀಲ, ಕಲ್ಲಪ್ಪ ತಲವಾಯಿ, ಅನ್ನಪೂರ್ಣ ಶಿರಹಟ್ಟಿಮಠ, ಈರಣ್ಣ ಅಂಗಡಿ, ವಿಜಯ ಪೂಜಾರ, ಮಲ್ಲಿಕಾರ್ಜುನ ಗುಜ್ಜಳ ಸೇರಿ ಗ್ಯಾರಂಟಿಗೆ ಸಂಬಂಧಿಸಿದ ಅಧಿಕಾರಿಗಳು ಪಾಲ್ಗೊಂಡಿದ್ದರು.