ಮಣಿಪಾಲ: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿವಿ ಮತ್ತು ಹೈದರಾಬಾದಿನ ಧ್ರುವ ಸ್ಪೇಸ್ ಪ್ರೈ. ಲಿ. ನಡುವೆ ಮಣಿಪಾಲದ ಮಾಹೆ ಕ್ಯಾಂಪಸ್‌ನಲ್ಲಿ ಅಸೆಂಟ್ (ಅಡ್ವಾನ್ಸ್‌ಡ್ ಸ್ಪೇಸ್ ಕೆಪಿಬಿಲಿಟಿ, ಇಂಜಿನಿಯರಿಂಗ್ ಆ್ಯಂಡ್ ನ್ಯೂ ಸ್ಪೇಸ್ ಟೆಕ್ನಾಲಜಿ) ಕೇಂದ್ರ ಆರಂಭಿಸುವ ಒಪ್ಪಂದಕ್ಕೆ ಸಹಿ ಹಾಕಲಾಗಿಯಿತು.
ಭಾರತದ ವಾಣಿಜ್ಯ ಬಾಹ್ಯಾಕಾಶ ವ್ಯವಸ್ಥೆಯು ವಿಸ್ತಾರಗೊಳ್ಳುತ್ತಿದ್ದು, ನುರಿತ ಪ್ರತಿಭೆಗಳ ಬೇಡಿಕೆ ಹೆಚ್ಚಾಗುತ್ತಿದೆ. ಹಾಗಾಗಿ ಶೈಕ್ಷಣಿಕ ಸಂಶೋಧನೆ, ಕೈಗಾರಿಕಾ ಪರಿಣತಿ ಮತ್ತು ಪ್ರಾಯೋಗಿಕ ಇಂಜಿನಿಯರಿಂಗ್ ಅನ್ನು ಒಂದೇ ಸೂರಿನಡಿ ತರುವ ಉದ್ದೇಶದಿಂದ ಈ ಅಸೆಂಟ್ ಕೇಂದ್ರವನ್ನು ಸ್ಥಾಪಿಸಲಾಗಿದೆ. ಬಾಹ್ಯಾಕಾಶ ನೌಕೆಗಳ ವಿನ್ಯಾಸ, ಜೋಡಣೆ ಹಾಗೂ ಪರೀಕ್ಷೆಗಳಿಗಾಗಿ ಕ್ಲಾಸ್ 10,000 ಕ್ಲೀನ್‌ರೂಮ್, ಹೆಲ್ಮ್ ಹೋಲ್ಟ್ಜ್ ಕೇಜ್ ಮತ್ತು ಏರ್-ಬೇರಿಂಗ್ ಟೇಬಲ್‌ನಂತಹ ಅತ್ಯಾಧುನಿಕ ಮೂಲಸೌಕರ್ಯಗಳನ್ನು ಈ ಕೇಂದ್ರ ಒಳಗೊಳ್ಳುತ್ತದೆ.2026ರ ಅಂತ್ಯದ ವೇಳೆಗೆ ಉದ್ಘಾಟನೆಗೊಳ್ಳುವ ನಿರೀಕ್ಷೆಯಿರುವ ಈ ಕೇಂದ್ರವು, ಬಾಹ್ಯಾಕಾಶ ಆಧಾರಿತ ಐಒಟಿ ಮತ್ತು ಮೈಕ್ರೋಗ್ರಾವಿಟಿ ಸಂಶೋಧನೆಯಂತಹ ಕ್ಷೇತ್ರಗಳ ಮೇಲೆ ಗಮನ ಕೇಂದ್ರೀಕರಿಸಲಿದೆ ಮತ್ತು ವಿದ್ಯಾರ್ಥಿಗಳಿಗೆ ಬಾಹ್ಯಾಕಾಶ ನೌಕೆಯ ವಿನ್ಯಾಸ, ಜೋಡಣೆ, ಪರೀಕ್ಷೆ, ಉಡಾವಣಾ ಸಿದ್ಧತೆ ಮತ್ತು ಕಕ್ಷೆಯ ಕಾರ್ಯಾಚರಣೆಗಳ ಸಮಗ್ರ ಅನುಭವವನ್ನು ಒದಗಿಸಲಿದೆ.
ಪ್ರದರ್ಶನ ಮಿಷನ್ ಗುರಿ: ಅಸೆಂಟ್ ಕೇಂದ್ರವು 2028ರ ವೇಳೆಗೆ ಕನಿಷ್ಠ ಮೂರು 1ಯು-6ಯು ಕ್ಯೂಬ್‌ಸ್ಯಾಟ್ ಮಿಷನ್‌ಗಳ ಅಭಿವೃದ್ಧಿ ಮತ್ತು ಕಾರ್ಯಾಚರಣೆ, 2030ರ ವೇಳೆಗೆ ಫೆಮ್ಟೋ ಉಪಗ್ರಹಗಳ ಸಮೂಹ, ಸಂಪೂರ್ಣ ಕಾರ್ಯನಿರತ ಎಸ್‌ಎಸ್‌ಎ ಕೇಂದ್ರ ಮತ್ತು ಸ್ವದೇಶಿ ಉಪಗ್ರಹ ಪ್ಲಾಟ್‌ಫಾರ್ಮ್‌ಗಳ ನಿಯೋಜನೆ ಹಾಗೂ 2035ರ ವೇಳೆಗೆ ಡೀಪ್-ಸ್ಪೇಸ್ ಅನ್ವೇಷಣೆಗೆ ಕೊಡುಗೆ ನೀಡಬಲ್ಲ ಕನಿಷ್ಠ ಒಂದು ಅಂತರಗ್ರಹ ತಂತ್ರಜ್ಞಾನ ಪ್ರದರ್ಶನ ಮಿಷನ್ ಕೈಗೊಳ್ಳುವ ಗುರಿಗಳನ್ನು ಹೊಂದಿದೆ. ಮಾಹೆಯ ಕುಲಪತಿ ಡಾ ಶರತ್ ಕೆ. ರಾವ್ ಅವರು ಈ ಬಗ್ಗೆ, ಬಾಹ್ಯಾಕಾಶ ವಲಯವು ಗಮನಾರ್ಹ ಪರಿವರ್ತನೆಗೆ ಸಾಕ್ಷಿಯಾಗುತ್ತಿದ್ದು, ಪ್ರತಿಭೆಗಳನ್ನು ಪೋಷಿಸಲು, ಜ್ಞಾನವನ್ನು ವಿಸ್ತರಿಸಲು ಮತ್ತು ಭಾರತದ ಬೆಳೆಯುತ್ತಿರುವ ಬಾಹ್ಯಾಕಾಶ ವ್ಯವಸ್ಥೆಗೆ ಕೊಡುಗೆ ನೀಡುವ ಉದ್ದೇಶ ಅಸೆಂಟ್ ಹಿಂದಿದೆ. ಧ್ರುವ ಸ್ಪೇಸ್ ಜತೆಗಿನ ಪಾಲುದಾರಿಕೆಯು ನಮ್ಮ ವಿದ್ಯಾರ್ಥಿಗಳಿಗೆ ನೈಜ ಉಪಗ್ರಹ ಮಿಷನ್‌ಗಳಲ್ಲಿ ಕೆಲಸ ಮಾಡುವ ಪ್ರಾಯೋಗಿಕ ಅನುಭವ ನೀಡಲಿದೆ ಎಂದು ಹೇಳಿದರು.ಧ್ರುವ ಸ್ಪೇಸ್‌ನ ಸಿಒಒ ಕೃಷ್ಣತೇಜ ಪೆನಮಕೂರು, ಎಂಐಟಿಯ ಪ್ರಭಾರ ನಿರ್ದೇಶಕಿ ಪ್ರೊ. ಚಂದ್ರಕಲಾ ಸಿ.ಬಿ., ಸ್ಪೇಸ್ ಪ್ರೋಗ್ರಾಮ್ಸ್ ಸಂಯೋಜಕ ಡಾ. ಬಲ್‌ಬೀರ್ ಸಿಂಗ್ ಉಪಸ್ಥಿತರಿದ್ದರು.