ಕಾರ್ಕಳ: ಕ್ರಿಯೇಟಿವ್ ಪುಸ್ತಕ ಮನೆ ವತಿಯಿಂದ ಆಯೋಜಿಸಲಾಗಿರುವ ‘ಕ್ರಿಯೇಟಿವ್ ಪುಸ್ತಕ ಧಾರೆ-3’ ಕಾರ್ಯಕ್ರಮ 19ರಂದು ಬೆಳಗ್ಗೆ 10.30ಕ್ಕೆ ನಡೆಯಲಿದ್ದು, ವಿವಿಧ ಲೇಖಕರ 25 ಕನ್ನಡ ಕೃತಿಗಳು ಲೋಕಾರ್ಪಣೆಗೊಳ್ಳಲಿವೆ ಎಂದು ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಲ್ಲೊಬ್ಬರಾದ ಅಶ್ವಥ್ ಎಸ್. ಎಲ್. ತಿಳಿಸಿದರು.ಕಾರ್ಕಳದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಮೂರು ವರ್ಷಗಳಿಂದ ಕ್ರಿಯೇಟಿವ್ ಪುಸ್ತಕ ಮನೆ ಕನ್ನಡ ಸಾಹಿತ್ಯದ ಶ್ರೇಷ್ಠ ಕೃತಿಗಳನ್ನು ಪ್ರಕಟಿಸುವುದರ ಜೊತೆಗೆ ನಾಡಿನ ಹೆಸರಾಂತ ಬರಹಗಾರರು, ಚಿಂತಕರು ಹಾಗೂ ಸಾಹಿತ್ಯಾಸಕ್ತರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಮಹತ್ವದ ಕಾರ್ಯವನ್ನು ನಿರಂತರವಾಗಿ ನಡೆಸಿಕೊಂಡು ಬಂದಿದೆ ಎಂದರು.ಏಷ್ಯಾನೆಟ್ ಸುವರ್ಣ ನ್ಯೂಸ್‌ ವಾಹಿನಿ ಸಂಪಾದಕ ಅಜಿತ್ ಹನುಮಕ್ಕನವರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಶಿಕ್ಷಣ ತಜ್ಞ ಡಾ. ಮಹಾಬಲೇಶ್ವರ್ ರಾವ್, ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಡಾ. ಧನಂಜಯ ಕುಂಬ್ಳೆ ಸೇರಿದಂತೆ ರಾಜ್ಯದ ಅನೇಕ ಹಿರಿಯ ಸಾಹಿತಿಗಳು, ಬರಹಗಾರರು ಹಾಗೂ ಸಾಹಿತ್ಯಾಭಿಮಾನಿಗಳು ಉಪಸ್ಥಿತರಿರಲಿದ್ದಾರೆ.‘ಹೊಸಪಟ್ಟಣ’, ‘ಖ್ಯಾತ ಶಿಕ್ಷಣ ಸಿದ್ಧಾಂತಿಗಳು’, ‘ಪೀಯೂಷಾಮೃತ’, ‘ಸುಭಾಷಿತ ಸಾಗರ’, ‘ಬದುಕಿನ ಕನ್ನಡಿಯಲಿ’, ‘ಭಾವಮುದ್ರೆ’, ‘ದೇವಯಾನ’, ‘ತರ್ಕಕ್ಕೆ ನಿಲುಕದ್ದು’, ‘ಸಮುದ್ರ ಮಾತಾಡಿತು’, ‘ನಿತ್ಯದ ನೋಟಗಳಿಗೆ ನಿರುತ್ತರ’, ‘ಅಪ್ಪನ ಅಂಗಡಿ’, ‘ಜಿಗುರು ಜಿವುಡಿದ ಫೇಸ್‌ಬುಕ್’, ‘ಗೆಲುವಿನ ದಾರಿ’, ‘ನದಿಯಂಚಿನ ನಡಿಗೆ’, ‘ಜಂದನವ ಕಡಿದು ತೋದೊಡೆ’, ‘ಜಗತ್ತಿನ ಪ್ರಸಿದ್ಧ ಮಕ್ಕಳ ಕಥೆಗಳು’, ‘ಮೌನ ಈ ಮಳೆಬಿಲ್ಲು’, ‘ನಂಬಿಕೆ’, ‘ಗೆಲುವಿನ ಏಣಿ’, ‘ಅಂತರಂಗ ಯಾನ’, ‘ಮೌಲ್ಯದರಿವಿನ ಹೊಂಬೆಳಕು’, ‘ನೀಲಿ’, ‘ಒಲವೇ ಹಾಡಾಗಿದೆ’, ‘ಸಾಹಿತ್ಯ ವಿಸ್ಮಯ’ ಹಾಗೂ ‘ರಣರಂಗ’ ಸೇರಿದಂತೆ ಒಟ್ಟು 25 ಪುಸ್ತಕಗಳು ಬಿಡುಗಡೆಯಾಗಲಿವೆ.ರಾಜ್ಯಮಟ್ಟದ ಕ್ರಿಯೇಟಿವ್ ಪುಸ್ತಕ ಪ್ರಶಸ್ತಿಯನ್ನು ಕುಂದಾಪುರದ ಲೇಖಕ ಶಶಿಧರ ಹಾಲಾಡಿ ಅವರ ‘ನದಿದಾಟಿ ಬಂದವರು’ ಕೃತಿಗೆ ಪ್ರದಾನ ಮಾಡಲಾಗುವುದು ಎಂದು ಅಶ್ವಥ್ ಎಸ್. ಎಲ್. ಮಾಹಿತಿ ನೀಡಿದರು.ಸುದ್ದಿಗೋಷ್ಠಿಯಲ್ಲಿ ಕಾದಂಬರಿಕಾರ ಅನುಬೆಳ್ಳೆ, ಚಂದ್ರಕಾಂತ್, ನವೀನ್ ನಾಯಕ್ ಸೇರಿದಂತೆ ಇತರರು ಉಪಸ್ಥಿತರಿದ್ದರು.