ಏಳು ವರ್ಷಗಳಿಂದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಆವರಣದಲ್ಲಿ ಕೇಳಿಸದ ಆನೆಯ ಘೀಂಕಾರ ಮತ್ತೆ ಮೊಳಗುವ ದಿನಗಳು ಸಮೀಪಿಸುತ್ತಿವೆಯೇ? ದೇವಾಲಯದ ಆವರಣದಲ್ಲಿ ಖಾಲಿಯಾಗಿರುವ ಆ ಕೊರತೆ ತುಂಬಲು ಕರ್ನಾಟಕ ಸರ್ಕಾರ ಇದೀಗ ಅಧಿಕೃತವಾಗಿ ಕೇರಳದ ಬಾಗಿಲು ತಟ್ಟಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಕೇರಳ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರಿಗೆ ಪತ್ರ ಬರೆದು, ಕೊಲ್ಲೂರು ಕ್ಷೇತ್ರಕ್ಕೆ ಹೆಣ್ಣಾನೆ ದಾನವಾಗಿ ನೀಡುವಂತೆ ಮನವಿ ಮಾಡಿದ್ದಾರೆ.
ಶ್ರೀಕಾಂತ್ ಹೆಮ್ಮಾಡಿ
ಕುಂದಾಪುರ: ಏಳು ವರ್ಷಗಳಿಂದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಆವರಣದಲ್ಲಿ ಕೇಳಿಸದ ಆನೆಯ ಘೀಂಕಾರ ಮತ್ತೆ ಮೊಳಗುವ ದಿನಗಳು ಸಮೀಪಿಸುತ್ತಿವೆಯೇ? ದೇವಾಲಯದ ಆವರಣದಲ್ಲಿ ಖಾಲಿಯಾಗಿರುವ ಆ ಕೊರತೆ ತುಂಬಲು ಕರ್ನಾಟಕ ಸರ್ಕಾರ ಇದೀಗ ಅಧಿಕೃತವಾಗಿ ಕೇರಳದ ಬಾಗಿಲು ತಟ್ಟಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಕೇರಳ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರಿಗೆ ಪತ್ರ ಬರೆದು, ಕೊಲ್ಲೂರು ಕ್ಷೇತ್ರಕ್ಕೆ ಹೆಣ್ಣಾನೆ ದಾನವಾಗಿ ನೀಡುವಂತೆ ಮನವಿ ಮಾಡಿದ್ದಾರೆ.ಈ ಬೆಳವಣಿಗೆ ಸಾವಿರಾರು ಭಕ್ತರಲ್ಲಿ ಹೊಸ ಆಶಾಭಾವನೆ ಮೂಡಿಸಿದರೂ, ಕೇರಳದ ಕಟ್ಟುನಿಟ್ಟಿನ ವನ್ಯಜೀವಿ ಸಂರಕ್ಷಣಾ ನಿಯಮಗಳು ಹಾಗೂ ನ್ಯಾಯಾಲಯಗಳ ಮಾರ್ಗಸೂಚಿಗಳು ಈ ಕನಸಿಗೆ ಎಷ್ಟರ ಮಟ್ಟಿಗೆ ದಾರಿ ಮಾಡಿಕೊಡಲಿವೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.ಇಂದಿರಾ ಬಳಿಕ ಖಾಲಿಯಾದ ಸ್ಥಾನ:ಕೊಲ್ಲೂರು ಕ್ಷೇತ್ರದ ಆನೆ ಎಂದರೆ ಮೊದಲು ನೆನಪಾಗುವುದು ‘ಇಂದಿರಾ’. ದಾನಿಯೊಬ್ಬರ ಕಾಣಿಕೆಯಾಗಿದ್ದ ಈ ಹೆಣ್ಣಾನೆ ಸುಮಾರು ಆರು ದಶಕಗಳ ಕಾಲ ಶ್ರೀ ಮೂಕಾಂಬಿಕಾ ದೇವಿಯ ಸೇವೆಯಲ್ಲಿ ನಿರಂತರವಾಗಿ ಪಾಲ್ಗೊಂಡಿತ್ತು. ಉತ್ಸವಗಳು, ಮೆರವಣಿಗೆಗಳು, ವಿಶೇಷ ಪೂಜೆಗಳು ಹಾಗೂ ದೈನಂದಿನ ಧಾರ್ಮಿಕ ಕಾರ್ಯಕ್ರಮಗಳ ಅವಿಭಾಜ್ಯ ಅಂಗವಾಗಿದ್ದ ಇಂದಿರಾ ಸಾವಿರಾರು ಭಕ್ತರ ಭಾವನಾತ್ಮಕ ನೆನಪಿನ ಭಾಗವಾಗಿತ್ತು. 2019ರ ಆಗಸ್ಟ್‌ನಲ್ಲಿ 62ನೇ ವಯಸ್ಸಿನಲ್ಲಿ ಅನಾರೋಗ್ಯದಿಂದ ಇಂದಿರಾ ಮೃತಪಟ್ಟ ಬಳಿಕ ದೇವಸ್ಥಾನ ಆನೆಯಿಲ್ಲದೆ ಉಳಿದಿದೆ. ಬಳಿಕ ಹಲವು ದಾನಿಗಳು, ಭಕ್ತರು ಹಾಗೂ ದೇವಸ್ಥಾನದ ಆಡಳಿತ ಮಂಡಳಿ ಹೊಸ ಆನೆ ತರಲು ಪ್ರಯತ್ನಿಸಿದರೂ, ಯಾವುದೇ ಪ್ರಯತ್ನ ಯಶಸ್ವಿಯಾಗಿರಲಿಲ್ಲ.ಈಗ ಮೊದಲ ಬಾರಿಗೆ ಕರ್ನಾಟಕ ಸರ್ಕಾರವೇ ಅಧಿಕೃತವಾಗಿ ಮುಂದಾಗಿದೆ. ಕಾನೂನು ದಾರಿ ಸುಗಮವಲ್ಲ:
ಆದರೆ ಈ ಮನವಿ ಈಡೇರುವುದು ಅಷ್ಟು ಸುಲಭವಲ್ಲ. ಕೇರಳದಲ್ಲಿ ದೇವಸ್ಥಾನಗಳ ಸಾಕಾನೆಗಳನ್ನು ಬೇರೆ ರಾಜ್ಯಗಳಿಗೆ ವರ್ಗಾಯಿಸುವುದು ಅಥವಾ ದಾನವಾಗಿ ನೀಡುವುದು ವನ್ಯಜೀವಿ ಸಂರಕ್ಷಣಾ ಕಾಯ್ದೆ, ಅರಣ್ಯ ಇಲಾಖೆಯ ನಿಯಮಗಳು ಹಾಗೂ ನ್ಯಾಯಾಲಯಗಳ ನಿರ್ದೇಶನಗಳಿಗೆ ಒಳಪಟ್ಟಿರುವ ಸಂಕೀರ್ಣ ಪ್ರಕ್ರಿಯೆಯಾಗಿದೆ. ಈ ಹಿಂದೆ ತೆಲಂಗಾಣ ಸರ್ಕಾರವೂ ಧಾರ್ಮಿಕ ಉದ್ದೇಶಕ್ಕಾಗಿ ಆನೆ ನೀಡುವಂತೆ ಕೇರಳಕ್ಕೆ ಮನವಿ ಸಲ್ಲಿಸಿತ್ತು. ಆದರೆ ಕೇರಳ ಅರಣ್ಯ ಇಲಾಖೆ ಅದನ್ನು ತಿರಸ್ಕರಿಸಿತ್ತು. ಆಶಾವಾದಕ್ಕೆ ಕಾರಣಗಳೂ ಇವೆ:ಕೊಲ್ಲೂರು ಶ್ರೀ ಮೂಕಾಂಬಿಕಾ ಕ್ಷೇತ್ರಕ್ಕೆ ಕೇರಳದೊಂದಿಗೆ ಅನನ್ಯವಾದ ಧಾರ್ಮಿಕ ನಂಟಿದೆ. ಆದಿ ಶಂಕರಾಚಾರ್ಯರು ಪ್ರತಿಷ್ಠಾಪಿಸಿದ ಶ್ರೀ ಮೂಕಾಂಬಿಕಾ ದೇವಿಯನ್ನು ಕೇರಳದ ಲಕ್ಷಾಂತರ ಕುಟುಂಬಗಳು ತಮ್ಮ ಕುಲದೇವತೆ ಹಾಗೂ ಮನೆದೇವತೆಯಾಗಿ ಆರಾಧಿಸುತ್ತವೆ. ಕೊಲ್ಲೂರಿಗೆ ಹೊರರಾಜ್ಯಗಳಿಂದ ಆಗಮಿಸುವ ಭಕ್ತರಲ್ಲಿ ಅತಿ ಹೆಚ್ಚಿನ ಸಂಖ್ಯೆಯವರು ಕೇರಳದವರೇ. ತ್ರಿಶೂರ್ ಪೂರಂ, ಗುರುವಾಯೂರು, ಅರಟ್ಟುಪುಳ ಪೂರಂ, ಚಿನ್ನಕ್ಕತ್ತೂರು ಪೂರಂ, ನೆನ್ಮಾರ ವೆಲ್ಲಂಗಿ ವೇಲಾ ಸೇರಿದಂತೆ ಅನೇಕ ಉತ್ಸವಗಳಲ್ಲಿ ಆನೆಗಳು ಧಾರ್ಮಿಕ ಸಂಪ್ರದಾಯದ ಅವಿಭಾಜ್ಯ ಭಾಗವಾಗಿವೆ. ಕೇರಳದ ವಿವಿಧ ಆನೆ ಶಿಬಿರಗಳಲ್ಲೂ ಸಾಕಷ್ಟು ಸಾಕಾನೆಗಳಿವೆ. ಈ ಹಿನ್ನೆಲೆ ಕರ್ನಾಟಕದ ಮನವಿಗೆ ಧಾರ್ಮಿಕ ಹಾಗೂ ಮಾನವೀಯ ನೆಲೆಯಲ್ಲಿ ಸಕಾರಾತ್ಮಕ ಸ್ಪಂದನೆ ದೊರೆಯುವ ಸಾಧ್ಯತೆ ಇದೆ ಎಂಬ ಆಶಾವಾದವೂ ವ್ಯಕ್ತವಾಗುತ್ತಿದೆ. ಇತ್ತೀಚೆಗೆ ಕೊಲ್ಲೂರಿಗೆ ಭೇಟಿ ನೀಡಿದ್ದ ಕೇರಳ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರ ಭೇಟಿಯ ಸಂದರ್ಭದಲ್ಲೂ ಕ್ಷೇತ್ರದಲ್ಲಿ ಆನೆ ಇಲ್ಲದಿರುವ ವಿಚಾರ ಪ್ರಸ್ತಾಪವಾಗಿತ್ತು.
ಕೊಲ್ಲೂರು ಕ್ಷೇತ್ರಕ್ಕೆ ಬರುವ ಹೆಚ್ಚಿನ ಭಕ್ತರಿಗೆ ಅದರಲ್ಲೂ ವಿಶೇಷವಾಗಿ ಮಕ್ಕಳಿಗೆ ಅನೇಕ ವರ್ಷಗಳಿಂದ ಇಲ್ಲಿನ ಆನೆಯೊಂದಿಗೆ ಭಾವನಾತ್ಮಕವಾದ ಸಂಬಂಧ ಇತ್ತು.
-ಶರತ್ ಕುಮಾರ ಶೆಟ್ಟಿ ಉಪ್ಪುಂದ ಉದ್ಯಮಿಕ್ಷೇತ್ರದ ಧಾರ್ಮಿಕ ಹಾಗೂ ಇತರ ಕಾರಣಗಳಿಗಾಗಿ ಆನೆಯ ಅವಶ್ಯಕತೆ ಇದೆ ಎನ್ನುವುದನ್ನು ಕೇರಳದ ಮುಖ್ಯಮಂತ್ರಿ ಗಮನಕ್ಕೂ ತರಲಾಗಿದೆ. ಈ ಕುರಿತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಪತ್ರ ಬರೆದಿರುವುದು ಸ್ವಾಗತಾರ್ಹ.
-ಕೆ.ಬಾಬು ಶೆಟ್ಟಿ ತಗ್ಗರ್ಸೆ ಅಧ್ಯಕ್ಷರು, ವ್ಯವಸ್ಥಾಪನಾ ಸಮಿತಿ