ಕಾಡಾನೆ ದಾಳಿಗೆ ಬಾಳೆ ಗಿಡ ನಾಶ

KannadaprabhaNewsNetwork | Published : May 4, 2024 12:32 AM

ಸಾರಾಂಶ

ತಾಲೂಕಿನ ಕುರುಬರಹುಂಡಿ ಗ್ರಾಮದ ರೈತರೊಬ್ಬರ ಬಾಳೆ ತೋಟಕ್ಕೆ ಕಾಡಾನೆಯೊಂದು ದಾಳಿ ನಡೆಸಿ ನೂರಾರು ಬಾಳೆ ಗಿಡ ನೆಲಕ್ಕುರುಳಿದ ಘಟನೆ ಶುಕ್ರವಾರ ಮುಂಜಾನೆ ನಡೆದಿದೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ತಾಲೂಕಿನ ಕುರುಬರಹುಂಡಿ ಗ್ರಾಮದ ರೈತರೊಬ್ಬರ ಬಾಳೆ ತೋಟಕ್ಕೆ ಕಾಡಾನೆಯೊಂದು ದಾಳಿ ನಡೆಸಿ ನೂರಾರು ಬಾಳೆ ಗಿಡ ನೆಲಕ್ಕುರುಳಿದ ಘಟನೆ ಶುಕ್ರವಾರ ಮುಂಜಾನೆ ನಡೆದಿದೆ.ಗ್ರಾಮದ ರೈತ ಹಾಗೂ ಪ್ರಥಮ ದರ್ಜೆ ಗುತ್ತಿಗೆದಾರ ಕೆ.ಎಂ. ಮಹದೇವಸ್ವಾಮಿಗೆ ಸೇರಿದ ಬಾಳೆ ತೋಟಕ್ಕೆ ಗುರುವಾರ ಮಧ್ಯ ರಾತ್ರಿ ಕಾಡಾನೆಯೊಂದು ನುಗ್ಗಿ ನೂರಾರು ಬಾಳೆ ಗಿಡ ತುಳಿದು ನಾಶ ಪಡಿಸಿದೆ. ಬಾಳೆ ತೋಟಕ್ಕೆ ಕಾಡಾನೆ ದಾಳಿ ನಡೆಸಿದ ವಿಷಯ ತಿಳಿದು ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದ್ದಾರೆ. 90 ಗಿಡಗಳು ಹಾಳಾಗಿವೆ ಎಂದು ಆರ್‌ಎಫ್‌ಒ ಕೆ.ಪಿ. ಸತೀಶ್‌ ಕುಮಾರ್‌ ಹೇಳಿದ್ದಾರೆ.

ರೈತನ ಆಕ್ರೋಶ: ಕಾಡಾನೆಯೊಂದು ಕುರುಬರ ಹುಂಡಿ ಸುತ್ತ ಮುತ್ತಲಿನ ರೈತರ ಜಮೀನಿಗೆ ದಾಳಿ ನಡೆಸಿ ರೈತ ಬೆಳೆದ ಫಸಲನ್ನು ನಾಶ ಮಾಡುತ್ತಿದೆ. ನನ್ನ ಜಮೀನಿಗೆ ಮೂರು ಬಾರಿ ದಾಳಿ ಮಾಡಿ ಲಕ್ಷಾಂತರ ರು. ನಷ್ಟವಾಗಿದೆ ಎಂದು ರೈತ ಕೆ.ಎಂ. ಮಹದೇವಸ್ವಾಮಿ ಆಕ್ರೋಶ ಹೊರ ಹಾಕಿದ್ದಾರೆ. ಬರಗಾಲದಲ್ಲೂ ರೈತರು ಕಷ್ಟ ಪಟ್ಟು ಬೆಳೆದ ಫಸಲಿನ ಮೇಲೆ ದಾಳಿ ನಡೆಸಿ ಫಸಲು ಹಾಳು ಮಾಡುತ್ತಿರುವ ಕಾಡಾನೆಗಳನ್ನು ನಾಡಿಗೆ ಬರದಂತೆ ತಡೆಯಬೇಕು ಎಂದು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.

ಕಾಡಾನೆಗಳಿಗೆ ಕಾಡಲ್ಲಿ ಮೇವು ಇಲ್ಲದ ಕಾರಣ ಆಹಾರ ಅರಸಿ ನಾಡಿನತ್ತ ಬರುತ್ತಿವೆ. ಅರಣ್ಯ ಇಲಾಖೆಯ ಸಿಬ್ಬಂದಿ ಕಾವಲು ಕಾಯುತ್ತಿದ್ದಾರೆ. ಆದರೂ ಕಣ್ತಪ್ಪಿಸಿ ಬಂದು ರೈತರ ಫಸಲು ನಾಶ ಪಡಿಸುತ್ತಿದೆ.

-ಕೆ.ಪಿ. ಸತೀಶ್‌ ಕುಮಾರ್‌, ಆರ್‌ಎಫ್‌ಒ

ಲಕ್ಷಾಂತರ ರು. ಖರ್ಚು ಮಾಡಿ ಫಸಲು ಬೆಳೆದು ಕಟಾವಿಗೆ ಬಂದ ಸಮಯದಲ್ಲಿ ಕಾಡಾನೆ ದಾಳಿಗೆ ಬಾಳೆ ಗಿಡ ಹಾಳಾಗಿವೆ. ಅರಣ್ಯ ಇಲಾಖೆ ಕಾಡಾನೆ ದಾಳಿ ತಡೆಯಬೇಕು ಹಾಗೂ ಪರಿಹಾರ ಕೂಡಲೇ ಕೊಡಬೇಕು.

-ಕೆ.ಎಂ. ಮಹದೇವಸ್ವಾಮಿ, ಕುರುಬರಹುಂಡಿ

Share this article