ಕನ್ನಡಪ್ರಭ ವಾರ್ತೆ ಬೀಳಗಿ
ವೈದ್ಯರ ನಿರ್ಲಕ್ಷ್ಯದಿಂದ ಹೆರಿಗೆ ನಂತರ ಬಾಣಂತಿ ಮೃತಪಟ್ಟಿದ್ದಾಳೆಂದು ಆರೋಪಿಸಿ ಆಸ್ಪತ್ರೆ ಎದುರು ಶವದೊಂದಿಗೆ ಕುಟುಂಬಸ್ಥರು ಪ್ರತಿಭಟನೆ ನಡೆಸಿದ ಘಟನೆ ಸೋಮವಾರ ಬಾಗಲಕೋಟೆ ಜಿಲ್ಲೆ ಬೀಳಗಿಯಲ್ಲಿ ನಡೆದಿದೆ.ಬೀಳಗಿ ತಾಲೂಕಿನ ಕುಂದರಗಿ ತಾಂಡಾ-೧ ಗ್ರಾಮದ ಲಕ್ಷ್ಮೀ ಅಪ್ಪಾಲಾಲ ಲಮಾಣಿ (27) ಹೆಣ್ಣು ಮಗುವಿಗೆ ಜನ್ಮ ನೀಡಿ ಮೃತಪಟ್ಟ ಬಾಣಂತಿ. ನಿರ್ಲಕ್ಷ್ಯ ತೋರಿದ ವೈದ್ಯೆಯ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಮೃತಳ ಸಂಬಂಧಿ ಮೋತಿಬಾಯಿ ಲಮಾಣಿ ಬೀಳಗಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಆಗಿದ್ದೇನು?:ಬೀಳಗಿ ತಾಲೂಕಿನ ಕುಂದರಗಿ ತಾಂಡಾ-೧ ಗ್ರಾಮದ ಮಹಿಳೆ ಲಕ್ಷ್ಮೀ ಅಪ್ಪಾಲಾಲ ಲಮಾಣಿ ಹೆರಿಗೆ ನೋವಿನಿಂದ ಭಾನುವಾರ ಬೆಳಗ್ಗೆ ಬೀಳಗಿಯ ಬಸವ ಪಾಲಿ ಕ್ಲಿನಿಕ್ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯ ವೈದ್ಯೆ ಡಾ.ಪಾರ್ವತಿ ಮೋಹನ ಚೆಟ್ಟೇರ ಹೆರಿಗೆ ಮಾಡಿಸಿಕೊಂಡಿದ್ದು, ಹೆಣ್ಣು ಮಗುವಿಗೆ ಜನ್ಮ ನೀಡಿದ ಲಕ್ಷ್ಮೀ ಲಮಾಣಿಗೆ ಹೆರಿಗೆಯಾದ ಕೆಲ ಸಮಯದ ಬಳಿಕ ತೀವ್ರ ರಕ್ತಸ್ರಾವ ಆರಂಭವಾದಾಗ ಕುಟುಂಬಸ್ಥರು ವೈದ್ಯರ ಗಮನಕ್ಕೆ ತಂದಿದ್ದಾರೆ. ಹೆರಿಗೆಯಾದಾಗ ರಕ್ತಸ್ರಾವ ಆಗೋದು ಸಾಮಾನ್ಯ ಹೆದರಬೇಡೆಂದ ವೈದ್ಯೆ, ರಕ್ತಸ್ರಾವ ತೀವ್ರವಾಗುತ್ತಿದ್ದಂತೆ ಬಾಣಂತಿಯನ್ನು ಪರೀಕ್ಷಿಸಿ ಬಾಗಲಕೋಟೆ ಆಸ್ಪತ್ರೆಗೆ ತೆಗೆದುಕೊಂಡು ಹೋಗಲು ಸೂಚಿಸಿದ್ದಾರೆ. ತಕ್ಷಣ ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಿಸದೇ ಮಧ್ಯರಾತ್ರಿ ೧ ಗಂಟೆ ಸುಮಾರಿಗೆ ಬಾಣಂತಿ ಸಾವಿಗೀಡಾಗಿದ್ದಾರೆ. ಇದರಿಂದ ರೊಚ್ಚಿಗೆದ್ದ ಸಂಬಂಧಿಕರು ಬೀಳಗಿಯ ಬಸವ ಪಾಲಿ ಕ್ಲಿನಿಕ್ ಮುಂಭಾಗದ ಮಾರುಕಟ್ಟೆಯ ರಸ್ತೆ ಮೇಲೆ ಮೃತಳ ಶವವಿಟ್ಟು ಕೆಲಕಾಲ ಪ್ರತಿಭಟನೆ ನಡೆಸಿದರು. ವೈದ್ಯರ ನಿರ್ಲಕ್ಷ್ಯದಿಂದಲೇ ಮಹಿಳೆ ಸಾವಿಗೀಡಾಗಿದ್ದು, ನಮಗೆ ನ್ಯಾಯ ಕೊಡಿಸಬೇಕು ಎಂದು ಒತ್ತಾಯಿಸಿದರು.
ಸ್ಥಳಕ್ಕೆ ಧಾವಿಸಿದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ, ಡಿವೈಎಸ್ಪಿ ಪಂಪನಗೌಡ, ಸಿಪಿಐ ಬಸವರಾಜ ಹಳಬಣ್ಣವರ ಕುಟುಂಬದವರ ಮನವೊಲಿಸಿ ಮರಣೋತ್ತರ ಪರೀಕ್ಷೆಗೆ ಶವವನ್ನು ತಾಲೂಕು ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಸಂಚಾರ ಸರಳಗೊಳಿಸಿದರು.ಶವದ ಬಳಿ ಹಸುಗೂಸಿನ ಅಕ್ರಂದನ:
ಮೃತ ಬಾಣಂತಿಯ ಬಳಿ ಹಸುಗೂಸಿನ ಆಕ್ರಂದನ ಸೇರಿದಂತೆ ವಿಕಲಚೇತನ ಪತಿಯ ಕಿರುಚಾಟ ಹಾಗೂ ಕುಟುಂಬದವರ ರೋಧನ ಕರುಳು ಚುರುಕ್ ಎನ್ನುವಂತಿತ್ತು. ಪ್ರತಿಭಟನೆಯ ಪರಿಣಾಮ ಬೀಳಗಿ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಸುಮಾರು 4 ಗಂಟೆಗೂ ಅಧಿಕ ಸಮಯ ಜನ ಹಾಗೂ ವಾಹನಗಳ ಸಂಚಾರಕ್ಕೆ ಅಡಚಣೆಯಾಗಿತ್ತು. ಪೊಲೀಸ್ ಅಧಿಕಾರಿಗಳು ಸಂಚಾರ ಸರಳಗೊಳಿಸಿದರು.ಮಹಿಳೆಯ ಸಾವಿಗೆ ನ್ಯಾಯ ಸಿಗಬೇಕು. ನಮ್ಮ ಮನೆಯ ಮಗಳಿಗೆ ಆಗಿರುವ ಅನ್ಯಾಯ ಇನ್ಯಾವ ಕುಟುಂಬಕ್ಕೆ ಆಗಬಾರದು. ಇದರ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು ಮತ್ತು ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು.
-ಮೋತಿಬಾಯಿ ಲಮಾಣಿ, ಮೃತಳ ಸಂಬಂಧಿಕ.