ರೋಣ: ಉತ್ತರ ಕರ್ನಾಟಕದ ಸುಪ್ರಸಿದ್ಧ ಜಾತ್ರೆಗಳಲ್ಲಿ ಒಂದಾದ ಬಾಗಲಕೋಟೆ ಜಿಲ್ಲೆಯ ಬದಾಮಿ ತಾಲೂಕಿನ ಬನಶಂಕರಿದೇವಿ ಜಾತ್ರೆ ತೇರು ಎಳೆಯಲು ತಾಲೂಕಿನ ಮಾಡಲಗೇರಿ ಗ್ರಾಮದಿಂದ ಹಗ್ಗ ಕಳುಹಿಸಲಾಯಿತು.
ಮಾಡಲಗೇರಿ ಗ್ರಾಮದಿಂದ ಬೆಳಗ್ಗೆ 9 ಗಂಟೆಗೆ ತೇರಿನ 2 ಹಗ್ಗಗಳನ್ನು 2 ಪ್ರತ್ಯೇಕ ಹಳಿ ಬಂಡಿಗಳಲ್ಲಿಟ್ಟು ವಿವಿಧ ವಾದ್ಯಮೇಳ, ಜಯಘೋಷದೊಂದಿಗೆ ಪ್ರಯಾಣ ಆರಂಭಿಸಲಾಯಿತು. ಮಾಡಲಗೇರಿ ಮೂಲಕ ನೈನಾಪುರ, ಬೇಲೂರ, ನಸಬಿ, ಚೊಳಚಗುಡ್ಡ ಕ್ರಾಸ್ ಮಾರ್ಗವಾಗಿ ಬನಶಂಕರಿಗೆ ತೆರಳಿತು.
ಹೊಳೆ ದಾಟದೇ ಸುತ್ತುವರಿದು ಪ್ರಯಾಣ: ಬನಶಂಕರಿದೇವಿ ಜಾತ್ರಾ ರಥಕ್ಕೆ 8 ಇಂಚು ದಪ್ಪದ ಪುಡಿನಾರಿನಿಂದ ಉರಿಗೊಳಿದ 250 ಅಡಿ ಉದ್ದ ಹಾಗೂ 450 ಕೆಜಿ ತೂಕದ 2 ಹಗ್ಗಗಳನ್ನು ಪ್ರತ್ಯೆಕವಾಗಿ 2 ಹಳಿ ಬಂಡಿಯಲ್ಲಿಟ್ಟು ಮೆರವಣಿಗೆ ಮೂಲಕ ಕೊಂಡೊಯ್ಯಲಾಯಿತು. ಪ್ರತಿ ವರ್ಷ ಮಾಡಲಗೇರಿ ಗ್ರಾಮದಿಂದ 20 ಕಿಮೀ ದೂರದ ಬನಶಂಕರಿಗೆ ನೈನಾಪುರ, ಡಾಣಕಶಿರೂರ, ಮಣ್ಣೇರಿ ಮೂಲಕ ಮಲಪ್ರಭೆ ನದಿ ದಾಟಿ ಚೋಳಚಗುಡ್ಡ ಗ್ರಾಮ ಮಾರ್ಗವಾಗಿ ಬನಶಂಕರಿ ತಲುಲುಪಲಾಗುತ್ತಿತ್ತು. ಹಳಿಬಂಡಿ ನದಿ ದಾಟುವಾಗ ಆ ವೈಭವ ನೋಡಲು ಸಾವಿರಾರು ಜನರು ನೆರೆದಿರುತ್ತಿದ್ದರು. ಆದರೆ ಈ ಬಾರಿ ಮಲಪ್ರಭೆ ಹೊಳೆಯಲ್ಲಿ ಪ್ರತಿ ವರ್ಷಕ್ಕಿಂತ ನೀರಿನ ಹರಿವು ಹೆಚ್ಚಿರುವುದು ಮತ್ತು ರಸ್ತೆ ಹದಗೆಟ್ಟಿದ್ದರಿಂದ ಮಾಡಲಗೇರಿ, ನೈನಾಪುರದಿಂದ ಸುತ್ತುವರಿದು ಬೇಲೂರ, ನಸಬಿ, ಚೋಳಚಗುಡ್ಡ ಕ್ರಾಸ್ ಮಾರ್ಗವಾಗಿ ತೆರಳಲಾಯಿತು. ರಸ್ತೆಯುದ್ದಕ್ಕೂ ಅಪಾರ ಸಂಖ್ಯೆಯಲ್ಲಿ ಭಕ್ತರು ಸೇರಿ ಹಳಿಬಂಡಿ ಮೇರವಣಿಗೆ ಸಂಭ್ರಮವನ್ನು ಕಣ್ತುಂಬಿಕೊಂಡರು. ಈ ಮಧ್ಯೆ ಚೋಳಚಗುಡ್ಡ ವೀರಭದ್ರೇಶ್ವರ ದೇವಸ್ಥಾನದಲ್ಲಿ ಪೂಜೆಗೈಯ್ಯಲಾಯಿತು.