ಬಂಡೀಪುರ ರಾತ್ರಿ ಸಂಚಾರ 10 ಗಂಟೆ ತನಕ ವಿಸ್ತರಿಸಿ : ಮಂಗಲ ಸೀಮೆಯ ಜನರ ಮನವಿ

KannadaprabhaNewsNetwork | Updated : Apr 06 2025, 01:07 PM IST

ಸಾರಾಂಶ

ಗುಂಡ್ಲುಪೇಟೆ ತಾಲೂಕಿನ ಮಂಗಲ ಗ್ರಾಪಂ ವ್ಯಾಪ್ತಿಯ ಗ್ರಾಮಸ್ಥರು ಸಿಎಫ್‌ ಕಚೇರಿಗೆ ದೂರು ಸಲ್ಲಿಸಲು ತೆರಳುತ್ತಿರುವುದು.

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮೈಸೂರು-ಊಟಿ ಹೆದ್ದಾರಿಯಲ್ಲಿ ರಾತ್ರಿ ಸಂಚಾರದ ನಿಷೇಧದ ಅವಧಿ ಸಡಿಲಗೊಳಿಸಬೇಕು ಎಂದು ತಾಲೂಕಿನ ಮಂಗಲ ಸೀಮೆಯ ಜನರು ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.

ಬಂಡೀಪುರ ಕಾಡಿಗೆ ಅಂಟಿಕೊಂಡಿರುವ ಮಂಗಲ ಗ್ರಾಪಂ ವ್ಯಾಪ್ತಿಯ ಜನರು ಸಲ್ಲಿಸಿರುವ ಮನವಿಯಲ್ಲಿ ಮೇಲುಕಾಮನಹಳ್ಳಿ ಗೇಟ್‌ ಬಳಿ ರಾತ್ರಿ ೯ ಗಂಟೆಗೆ ಚೆಕ್‌ ಪೋಸ್ಟ್‌ ಬಂದ್‌ ಆಗುತ್ತಿದೆ. ೯ ಗಂಟೆಗೆ ಮುಚ್ಚಿದರೆ ಮಂಗಲ ಸೀಮೆಯ ರೈತರು ಹಾಗೂ ಜನರಿಗೆ ತೊಂದರೆಯಾಗುತ್ತದೆ. ೯ ರ ಬದಲು ೧೦ ಗಂಟೆಗೆ ಗೇಟ್‌ ಮುಚ್ಚಲಿ ಎಂದು ಗ್ರಾಪಂ ಅಧ್ಯಕ್ಷ ವಿಷಕಂಠ ನೇತೃತ್ವದಲ್ಲಿ ಆಗ್ರಹಿಸಿದ್ದಾರೆ. ತುರ್ತು ಆರೋಗ್ಯದ ಸಮಯದಲ್ಲಿ ಯಾವ ಸಮಯದಲ್ಲಾದರೂ ಬಿಡಬೇಕು. ಮೇಲುಕಾಮನಹಳ್ಳಿ ಬಳಿ ಗ್ರೀನ್‌ ಟ್ಯಾಕ್ಸ್‌ ಸ್ಥಳೀಯರಿಂದ ಪಡೆಯಬಾರದು ಎಂದು ಒತ್ತಾಯಿಸಿದ್ದಾರೆ. ಬಂಡೀಪುರ ಸಿಎಫ್‌ ಕಚೇರಿಯಲ್ಲಿ ವ್ಯವಸ್ಥಾಪಕ ಗಿರೀಶ್‌ ಮಂಗಲ ಸೀಮೆಯ ಜನರ ಮನವಿ ಸ್ವೀಕರಿಸಿ ಮೇಲಧಿಕಾರಿಗಳ ಗಮನಕ್ಕೆ ತರುವುದಾಗಿ ಹೇಳಿದ್ದಾರೆ.

ಒಂದು ಕಡೆ ನಿರ್ಬಂಧ ಇರಲಿ ಎಂದರೆ, ಮತ್ತೊಂದೆಡೆ ನಿರ್ಬಂಧ ಸಡಿಲಿಸಿ ಅಂತಾರೆ!

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಒಂದು ಕಡೆ ರಾತ್ರಿ ವಾಹನ ಸಂಚಾರ ನಿಷೇಧ ಮುಂದುವರಿಸಬೇಕು ಎಂದರೆ, ಮತ್ತೊಂದೆಡೆ ರಾತ್ರಿ ಸಂಚಾರದ ಅವಧಿ ಒಂದು ಗಂಟೆ ವಿಸ್ತರಿಸಬೇಕು ಎಂದು ಪ್ರತಿಭಟನೆಯ ಮೂಲಕ ಮನವಿ ಸಲ್ಲಿಸಿದ್ದಾರೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗುಂಡ್ಲುಪೇಟೆ-ಸುಲ್ತಾನ್‌ ಬತ್ತೇರಿ ಹೆದ್ದಾರಿಯಲ್ಲಿ ರಾತ್ರಿ ಸಂಚಾರ ನಿಷೇಧ ತೆರವು ಆಗಬಾರದು ಎಂದು ಪರಿಸವಾದಿಗಳು ಹೋರಾಟಕ್ಕೆ ಧುಮುಕಿದ್ದಾರೆ. ಆದರೆ ಬಂಡೀಪುರ ಮೇಲುಕಾಮನಹಳ್ಳಿ ಗೇಟ್‌ ಬಳಿ ೯ಗಂಟೆಗೆ ಬಂದ್‌ ಆಗುತ್ತದೆ. ಮಂಗಲ ಸೀಮೆಯ ಜನರಿಗೆ ೯ ರ ಬದಲು ೧೦ ಗಂಟೆಗೆ ಅವಕಾಶ ನೀಡಿ ಎಂದು ಮಂಗಲ ಸೀಮೆಯ ಜನರು ಪ್ರತಿಭಟನೆ ಮೂಲಕ ಸಿಎಫ್‌ ಕಚೇರಿಗೆ ಆಗಮಿಸಿ ಮನವಿ ಸಲ್ಲಿಸಿದ್ದಾರೆ.

Share this article