ಹುಬ್ಬಳ್ಳಿ:
ಕಳಸಾ-ಬಂಡೂರಿ ಯೋಜನೆಗಾಗಿ ಇಲ್ಲಿನ ರೈತರು ದಶಕಗಳಿಂದಲೇ ಹೋರಾಟ ನಡೆಸುತ್ತಿದ್ದಾರೆ. ಈ ಯೋಜನೆಯ ಡಿಪಿಆರ್‌ಗೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ. ಆದರೆ ಕೇಂದ್ರದ ಅರಣ್ಯ ಮತ್ತು ಪರಿಸರ ಇಲಾಖೆಯ ಅನುಮತಿ ದೊರೆಯುವುದು ಬಾಕಿಯುಳಿದಿದ್ದು, ಬಂಡೂರಿ ನಾಲಾದ ಅನುಮತಿಯ ಪಡೆಯುವ ಪ್ರಕ್ರಿಯೆ ಅಂತಿಮ ಹಂತಕ್ಕೆ ತಲುಪಿದೆ. ಆದರೆ, ಕಳಸಾ ನಾಲೆಗೆ ಸಂಬಂಧಪಟ್ಟಂತೆ ಈವರೆಗೂ ಇಲಾಖೆಗೆ ಪ್ರಸ್ತಾವನೆಯೇ ಹೋಗಿಲ್ಲವಂತೆ. ಶೀಘ್ರವೇ ಪ್ರಸ್ತಾವನೆ ಸಲ್ಲಿಸುವಂತೆ ರೈತಸೇನಾ ಕರ್ನಾಟಕದ ಅಧ್ಯಕ್ಷ ವೀರೇಶ ಸೊಬರದಮಠ ಆಗ್ರಹಿಸಿದ್ದಾರೆ.ಆಗಿರುವುದೇನು?:
2018ರ ಆ. 14ರಂದು ಮಹದಾಯಿ ನ್ಯಾಯಾಧಿಕರಣವು ಕಳಸಾ-ಬಂಡೂರಿ ಯೋಜನೆಗೆ ನೀರು ಹಂಚಿಕೆ ಮಾಡಿ ತೀರ್ಪು ನೀಡಿತ್ತು. ಆದರೆ ಅಲ್ಲಿಂದ ಈ ವರೆಗೂ ಹಂಚಿಕೆಯಾಗಿರುವ ನೀರನ್ನು ಬಳಸಿಕೊಳ್ಳಲು ಕರ್ನಾಟಕಕ್ಕೆ ಸಾಧ್ಯವಾಗಿಲ್ಲ. ಹಿಂದಿನ ರಾಜ್ಯ ಸರ್ಕಾರ ಕಳಸಾ-ಬಂಡೂರಿ ಯೋಜನೆ ಡಿಪಿಆರ್‌ಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ ಎಂದು ಹೇಳಿತ್ತು. ಆಗ ವಿಜಯೋತ್ಸವವನ್ನೂ ಮಾಡಿತ್ತು. ಆದರೆ ನಂತರ ಟೈಗರ್ ಕಾರಿಡಾರ್ ಬರುವುದರಿಂದ ವನ್ಯಜೀವಿ ಮಂಡಳಿಯ ಅನುಮತಿ ಪಡೆಯುವುದು ಅನಿವಾರ್ಯವಾಗಿತ್ತು. ಪರಿಸರ ಮತ್ತು ಅರಣ್ಯ ಇಲಾಖೆಯಿಂದ ಪರವಾನಗಿ ಈವರೆಗೂ ಪಡೆಯಲು ಆಗಿಲ್ಲ.ಬಂಡೂರಿ ಅಂತಿಮ ಹಂತಕ್ಕೆ:
ಕಳಸಾ ನಾಲಾದಿಂದ 1.72 ಟಿಎಂಸಿ ಅಡಿ, ಬಂಡೂರಿ ನಾಲಾದಿಂದ 2.18 ಟಿಎಂಸಿ ಅಡಿ ನೀರು ಕರ್ನಾಟಕಕ್ಕೆ ಹಂಚಿಕೆಯಾಗಿದೆ. ಬೆಂಗಳೂರಲ್ಲಿ ಕೇಂದ್ರ ಸರ್ಕಾರದ ಮಂತ್ರಾಲಯ ಭವನ ಇದೆ. ಅಲ್ಲಿಂದಲೇ ರಾಜ್ಯ ಸರ್ಕಾರದ ಪ್ರಸ್ತಾವನೆ ಕೇಂದ್ರ ಸರ್ಕಾರಕ್ಕೆ ಹೋಗಬೇಕು. ಆ ಬಳಿಕವೇ ಕೇಂದ್ರ ಸರ್ಕಾರದ ಆ ಇಲಾಖೆ ಅದಕ್ಕೆ ಅನುಮತಿ ಕೊಡುತ್ತದೆ. ಇದು ಪದ್ಧತಿ. ಅದರಂತೆ ಇದೀಗ ಕಳೆದ ಎರಡ್ಮೂರು ದಿನಗಳ ಹಿಂದೆಯಷ್ಟೇ ಬಂಡೂರಿ ನಾಲಾದ ಅನುಮತಿಗಾಗಿ ಕೇಂದ್ರ ಅರಣ್ಯ ಹಾಗೂ ಪರಿಸರ ಇಲಾಖೆಗೆ ಪ್ರಸ್ತಾವನೆ ಹೋಗಿದೆ. ರಾಜ್ಯದಲ್ಲೇ ಇರುವುದರಿಂದ ಯಾವುದೇ ಸಮಸ್ಯೆಯಿಲ್ಲ. ಅನುಮತಿ ಕೊಡಬಹುದು ಎಂದು ಇಲ್ಲಿನ ಕೇಂದ್ರ ಸರ್ಕಾರದ ಮಂತ್ರಾಲಯ ಭವನದಿಂದ ಪ್ರಸ್ತಾವನೆ ಹೋಗಿದೆಯಂತೆ. ಹೀಗಾಗಿ ಬಂಡೂರಿ ನಾಲಾದ ಅನುಮತಿ ಪಡೆಯುವ ಪ್ರಕ್ರಿಯೆ ಅಂತಿಮ ಹಂತಕ್ಕೆ ತಲುಪಿದಂತಾಗಿದೆ. ಅನುಮತಿ ಸಿಕ್ಕ ಬಳಿಕ ಕೆಲಸ ಶುರು ಮಾಡಬಹುದಾಗಿದೆ ಎಂದು ಸೊಬರದಮಠ ತಿಳಿಸುತ್ತಾರೆ.ಕಳಸಾ ಪ್ರಸ್ತಾವನೆ ಬಂದಿಲ್ಲ:
ಆದರೆ ಕಳಸಾ ನಾಲೆಯ ಪ್ರಸ್ತಾವನೆ ಇನ್ನು ರಾಜ್ಯ ಸರ್ಕಾರ ಹಾಗೂ ರಾಜ್ಯದಲ್ಲಿನ ಕೇಂದ್ರದ ಮಂತ್ರಾಲಯ ಭವನದಿಂದ ಇಲಾಖೆಗೆ ಬಂದಿಲ್ಲ. ಅಲ್ಲಿಂದ ಬಂದ ಬಳಿಕ ಅನುಮತಿ ದೊರೆಯಲಿದೆ. ಆ ಕೆಲಸವನ್ನು ರಾಜ್ಯ ಸರ್ಕಾರ ಹಾಗೂ ಇಲ್ಲಿನ ಮಂತ್ರಾಲಯ ಭವನದ ಅಧಿಕಾರಿ ವರ್ಗ ಶೀಘ್ರವೇ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಈ ನಡುವೆ ರಾಜ್ಯದಿಂದ ಆಯ್ಕೆಯಾಗಿರುವ ಕೇಂದ್ರ ಸಚಿವರಾದ ಎಚ್.ಡಿ. ಕುಮಾರಸ್ವಾಮಿ, ವಿ. ಸೋಮಣ್ಣ, ಸೇರಿದಂತೆ 19 ಜನ ಸಂಸದರಿಗೆ ಸೊಬರದಮಠ ನೇತೃತ್ವದ ನಿಯೋಗವೂ ಕಳಸಾ-ಬಂಡೂರಿಗೆ ಸಂಬಂಧಪಟ್ಟಂತೆ ಮನವಿ ಸಲ್ಲಿಸಿದೆ. ಕೇಂದ್ರದ ಮೇಲೆ ಒತ್ತಡ ಹೇರಿ ಆದಷ್ಟು ಶೀಘ್ರದಲ್ಲೇ ಅನುಮತಿ ಕೊಡಿಸಬೇಕು ಎಂಬ ಒತ್ತಾಯವನ್ನು ನಿಯೋಗವೂ ಮಾಡಿದೆ.ಒಟ್ಟಿನಲ್ಲಿ ಬಂಡೂರಿ ನಾಲಾ ಯೋಜನೆಗೆ ಅನುಮತಿ ಪಡೆಯುವ ಕೆಲಸ ಅಂತಿಮ ಹಂತಕ್ಕೆ ತಲುಪಿದಂತಾಗಿರುವುದಂತೂ ನಿಜ. ಆದಷ್ಟು ಬೇಗನೆ ಕಳಸಾ ಬಗ್ಗೆಯೂ ಪ್ರಸ್ತಾವನೆಯನ್ನೂ ಕಳುಹಿಸಬೇಕು ಎಂಬ ಬೇಡಿಕೆ ಹೋರಾಟಗಾರರದ್ದು.ಕಳೆದ ಮೂರು ದಿನಗಳಿಂದ ದೆಹಲಿಯಲ್ಲಿ ಓಡಾಡಿ ಎಲ್ಲ ಸಂಸದರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ. ಬಂಡೂರಿ ನಾಲಾದ ಪ್ರಸ್ತಾವನೆ ಜು. 23ರಂದು ಕೇಂದ್ರ ಅರಣ್ಯ ಹಾಗೂ ಪರಿಸರ ಇಲಾಖೆಗೆ ತಲುಪಿದೆ. ಶೀಘ್ರದಲ್ಲೇ ಅನುಮತಿ ದೊರೆಯುವ ಸಾಧ್ಯತೆ ಇದೆ. ಆದರೆ ಕಳಸಾ ಬಗ್ಗೆ ಪ್ರಸ್ತಾವನೆ ಇನ್ನು ರಾಜ್ಯದಿಂದ ಬಂದಿಲ್ಲ. ಅದನ್ನು ಶೀಘ್ರವೇ ಕಳುಹಿಸಬೇಕು ಎಂದು ವೀರೇಶ ಸೊಬರಮಠ ಹೇಳಿದ್ದಾರೆ.