ಬೆಂಗಳೂರು ಸರಿಮಾಡಲು ಆಗದಷ್ಟು ಕೆಟ್ಟಿದೆ : ಅದಮ್ಯ ಚೇತನ ಸಂಸ್ಥೆ ಅಧ್ಯಕ್ಷೆ ಡಾ.ತೇಜಸ್ವಿನಿ

KannadaprabhaNewsNetwork | Updated : Mar 27 2025, 12:09 PM IST

ಸಾರಾಂಶ

ಮಹಿಳೆ  ರಾಜಕೀಯ, ವೈದ್ಯಕೀಯ, ಕಲೆ, ಸಾಹಿತ್ಯ, ವಿಜ್ಞಾನ, ತಂತ್ರಜ್ಞಾನ  ಕ್ಷೇತ್ರಗಳಲ್ಲೂ ಸಾಧನೆ ಮಾಡುತ್ತಿದ್ದಾರೆ. ಮಹಿಳೆಯರಿಗೆ ಸಂವೇದನೆ ಹೆಚ್ಚು. ತನಗಿಂತಲೂ ಸಮಾಜದ ಬಗ್ಗೆ ಚಿಂತನೆ ಮಾಡುತ್ತಾರೆ ಎಂದು ಎಂದು ಬೆಂಗಳೂರಿನ ಅದಮ್ಯ ಚೇತನ ಸಂಸ್ಥೆ ಅಧ್ಯಕ್ಷೆ ಡಾ.ತೇಜಸ್ವಿನಿ ಅನಂತಕುಮಾರ್   ಹೇಳಿದ್ದಾರೆ.

 ದಾವಣಗೆರೆ :  ಮಹಿಳೆಯರು ರಾಜಕೀಯ, ವೈದ್ಯಕೀಯ, ಕಲೆ, ಸಾಹಿತ್ಯ, ವಿಜ್ಞಾನ, ತಂತ್ರಜ್ಞಾನ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡುತ್ತಿದ್ದಾರೆ. ಮಹಿಳೆಯರಿಗೆ ಸಂವೇದನೆ ಹೆಚ್ಚು. ತನಗಿಂತಲೂ ಸಮಾಜದ ಬಗ್ಗೆ ಚಿಂತನೆ ಮಾಡುತ್ತಾರೆ ಎಂದು ಬೆಂಗಳೂರಿನ ಅದಮ್ಯ ಚೇತನ ಸಂಸ್ಥೆ ಅಧ್ಯಕ್ಷೆ ಡಾ.ತೇಜಸ್ವಿನಿ ಅನಂತಕುಮಾರ್ ಹೇಳಿದರು.

ನಗರದ ಎಂಸಿಸಿ ಎ ಬ್ಲಾಕ್‌ನಲ್ಲಿ ಬುಧವಾರ ವನಿತಾ ಸಮಾಜದ ನೂತನ ಡಾ.ನಾಗಮ್ಮ ಕೇಶವಮೂರ್ತಿ ಸಭಾಂಗಣ ಉದ್ಘಾಟಿಸಿ ಅವರು ಮಾತನಾಡಿದರು. ಹೆತ್ತವರನ್ನೇ ಸ್ಮರಿಸದಿರುವ ಈ ಕಾಲದಲ್ಲಿ ವನಿತಾ ಸಮಾಜದ ಸಂಸ್ಥಾಪಕಿ ಡಾ.ನಾಗಮ್ಮ ಕೇಶವಮೂರ್ತಿ ಸ್ಮರಣಾರ್ಥ ಸಭಾಂಗಣ ನಿರ್ಮಿಸಿರುವುದು ಶ್ಲಾಘನೀಯ. ಮಹಿಳಾ ಸಬಲೀಕರಣಕ್ಕೆ ವೇಗ ನೀಡಬೇಕೆಂಬ ಈ ಬಾರಿಯ ಮಹಿಳಾ ದಿನಾಚರಣೆ ಘೋಷವಾಕ್ಯ ಇಲ್ಲಿ ಸಾರ್ಥಕತೆ ಕಂಡಿದೆ ಎಂದರು.

ಹಸಿರು ಹೊದಿಕೆ, ಜೀವ ವೈವಿಧ್ಯತೆ ಬಗ್ಗೆ ಆಗಾಗ ಅಂತಾರಾಷ್ಟ್ರೀಯ ಮಟ್ಟದ ಸಭೆಗಳು ನಡೆಯುತ್ತಲೇ ಇರುತ್ತವೆ. ಆದರೆ ಈವರೆಗೆ ಇಂತಹ ಸಭೆಗಳಿಂದ ಯಾವುದೇ ಪ್ರಯೋಜನವಾಗಿಲ್ಲ. ರಾಜಧಾನಿ ಬೆಂಗಳೂರು ಸರಿ ಮಾಡಲಾಗದಷ್ಟು ಕೆಟ್ಟಿದೆ. ಉಳಿದ ಊರುಗಳಲ್ಲಾದರೂ ತ್ವರಿತ ಕ್ರಮ ಅಗತ್ಯವಿದೆ. ಮನುಷ್ಯ ಪೂರ್ಣ ಪರಿಸರಸ್ನೇಹಿಯಾಗಿ ಬದುಕಲು ಸಾಧ್ಯವಾಗದಿದ್ದರೂ, ಜೀವನಶೈಲಿ, ಆಹಾರ ಪದ್ಧತಿಯಲ್ಲಿ ಕೊಂಚ ಬದಲಾವಣೆ ಮಾಡಿಕೊಳ್ಳುವುದರಿಂದ ಮುಂದಿನ ಪೀಳಿಗೆಗೆ ಒಳ್ಳೆಯ ಪರಿಸರ ಬಿಟ್ಟುಹೋಗಬಹುದು ಎಂದು ತಿಳಿಸಿದರು.

ಒಬ್ಬರಿಗೆ ವರ್ಷಕ್ಕೆ 700 ಕೆ.ಜಿ. ಆಕ್ಸಿಜನ್ ಅಗತ್ಯವಿದೆ. ಒಂದು ಗಿಡ 100 ಕೆ.ಜಿ. ಆಮ್ಲಜನಕ ಉತ್ಪಾದಿಸುತ್ತದೆ. ಹೀಗಾಗಿ ಒಬ್ಬ ವ್ಯಕ್ತಿಗೆ 7 ಜೀವಂತ ಮರ ಇರಬೇಕು. ಆದರೆ, ನಮ್ಮಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಗಿಡ-ಮರ ಇಲ್ಲ. ಇದನ್ನು ದೃಷ್ಟಿಯಲ್ಲಿಟ್ಟುಕೊಂಡು ಬೆಂಗಳೂರಿನಲ್ಲಿ ಕಳೆದ 9 ವರ್ಷದಿಂದ ಗ್ರೀನ್ ಸಂಡೇ ಯೋಜನೆಯಡಿ ಪ್ರತಿ ಭಾನುವಾರ ಗಿಡ-ಮರ ಬೆಳೆಸುತ್ತಿದ್ದೇವೆ. ಮೊದಲು ಅಡುಗೆ ಮನೆ ತ್ಯಾಜ್ಯಮುಕ್ತವಾಗಬೇಕು. ಈ ಹಿನ್ನೆಲೆಯಲ್ಲಿ 2011ರಿಂದ ಒಂದೇ ಒಂದು ಗ್ರಾಂ ಕಸವನ್ನು ನಾವು ಬಿಬಿಎಂಪಿಗೆ ಕೊಟ್ಟಿಲ್ಲ. 16 ವರ್ಷಗಳಿಂದ ಎಲ್.ಪಿ.ಜಿ. ಗ್ಯಾಸ್ ಬಳಸದೇ 50 ಸಾವಿರ ಜನರಿಗೆ ಅಡುಗೆ ತಯಾರಿಸಿ ಒದಗಿಸುತ್ತಿದ್ದೇವೆ ಎಂದು ತಿಳಿಸಿದರು.

ವಿಧಾನ ಪರಿಷತ್ತು ಮುಖ್ಯ ಸಚೇತಕ ಎನ್.ರವಿಕುಮಾರ್ ಮಾತನಾಡಿ, ನಾಗಮ್ಮ ಕೇಶವಮೂರ್ತಿ ಶಿಕ್ಷಣ ಸಚಿವರಾಗಿ, ಸ್ಪೀಕರ್ ಆಗಿ ಅನನ್ಯ ಕೆಲಸ ಮಾಡಿದ್ದಾರೆ. ರಾಜ್ಯದ ವನಿತೆಯರನ್ನು ಜಾಗೃತರನ್ನಾಗಿ ಮಾಡಿ ಹೋಗಿದ್ದಾರೆ. ಸಭಾಂಗಣದ ಬಾಕಿ ಕೆಲಸಗಳಿಗೆ ಈ ಭಾಗದ ವಿಪ ಸದಸ್ಯರ ನಿಧಿಯಿಂದ ₹20 ಲಕ್ಷ ಅನುದಾನ ಒದಗಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.

ವನಿತಾ ಸಮಾಜದ ಅಧ್ಯಕ್ಷೆ ಪದ್ಮ ಪ್ರಕಾಶ್ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಚನ್ನಗಿರಿ ವಿರೂಪಾಕ್ಷಪ್ಪ ಧರ್ಮಶಾಲಾ ಟ್ರಸ್ಟ್ ಅಧ್ಯಕ್ಷ ಸಿ.ಆರ್.ವಿರೂಪಾಕ್ಷಪ್ಪ, ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ, ಮಹಾನಗರ ಪಾಲಿಕೆ ಮಾಜಿ ಸದಸ್ಯ ಕೆ.ಪ್ರಸನ್ನ ಕುಮಾರ್, ಎಸ್‌.ಟಿ.ವೀರೇಶ, ವನಿತಾ ಸಮಾಜದ ಸುಷ್ಮಾ ಮೋಹನ್, ನಾಗರತ್ನ ಜಗದೀಶ್, ಉಷಾ ರಂಗನಾಥ, ಲತಿಕಾ ಶೆಟ್ಟಿ, ನಳಿನಿ ಅಚ್ಯುತ್ ಮತ್ತಿತರರು ಇದ್ದರು.

ಕೋಟ್‌ ಪ್ರಸ್ತುತ ಗಂಗಾನದಿ ಮಾತ್ರವಲ್ಲದೆ ಎಲ್ಲ ನದಿಗಳು ಕಲುಷಿತಗೊಳ್ಳುತ್ತಿವೆ. ಎಲ್ಲ ನಗರಗಳಲ್ಲಿ ಪ್ಲಾಸ್ಟಿಕ್ ರಾಶಿಯ ಬೆಟ್ಟಗಳು ಕಾಣಸಿಗುತ್ತಿವೆ. ಪರ್ಯಾಯ ಹುಡುಕಿದರೆ ಎಲ್ಲ ಸಮಸ್ಯೆಗಳಿಗೂ ನಮ್ಮಲ್ಲೇ ಉತ್ತರ ಸಿಗುತ್ತದೆ. ಇದಕ್ಕಾಗಿ ಎಲ್ಲರೂ ಸಂಘಟಿತರಾಗಿ ಒಟ್ಟಿಗೆ ಸೇರಬೇಕು. ಸಮಾಜಕ್ಕಾಗಿ ಸಮಯ ಕೊಡಬೇಕು. ಆಗ ಮಾತ್ರ ಸಮಾಜದಲ್ಲಿ ಬದಲಾವಣೆ ತರುವ ಜೊತೆಗೆ ಮನಸ್ಸಿಗೆ ಶಾಂತಿ, ನೆಮ್ಮದಿ ಪಡೆಯಬಹುದು

- ಡಾ.ತೇಜಸ್ವಿನಿ ಅನಂತಕುಮಾರ, ಅಧ್ಯಕ್ಷೆ 

Share this article