ಹುಬ್ಬಳ್ಳಿ: ಬೆಂಗಳೂರು- ಮುಂಬೈ ಸ್ಲೀಪರ್ ವಂದೇ ಭಾರತ್ ರೈಲಿನ ಮಾರ್ಗ ಖಚಿತವಾಗಿದೆ. ಬೆಂಗಳೂರು, ಕಲಬುರಗಿ, ಸೊಲ್ಲಾಪುರ ಮಾರ್ಗವಾಗಿ ಈ ರೈಲು ಸಂಚರಿಸಲಿದೆ ಎಂಬುದನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸ್ಪಷ್ಟಪಡಿಸಿದ್ದಾರೆ.
ಬಹುನಿರೀಕ್ಷಿತ ಬೆಂಗಳೂರು ಮುಂಬೈ ವಂದೇ ಭಾರತ್ ಸ್ಲೀಪರ್ ರೈಲನ್ನು ರಾಜ್ಯಕ್ಕೆ ನೀಡುವುದಾಗಿ 2 ದಿನಗಳ ಹಿಂದೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಘೋಷಿಸಿದ್ದರು. ಆದರೆ, ಈ ರೈಲು ಸಂಚಾರ ಮಾರ್ಗ ಎಲ್ಲಿಂದ ಎಂಬುದರ ಕುರಿತು ಖಚಿತ ಪಡಿಸಿರಲಿಲ್ಲ. ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿ, ಪುಣೆ ಮಾರ್ಗವೋ ಅಥವಾ ಬೆಂಗಳೂರು, ಕಲಬುರಗಿ, ಸೊಲ್ಲಾಪುರ, ಪುಣೆ ಮಾರ್ಗವೋ ಎಂಬ ಗೊಂದಲ ಪ್ರಯಾಣಿಕರಲ್ಲಿತ್ತು. ಸದ್ಯ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟ್ವೀಟ್ ಮಾಡಿ ಯಾವ ಮೂರ್ಗದ ಮೂಲಕ ರೈಲು ಸಂಚರಿಸಲಿದೆ ಎಂಬುದನ್ನು ಖಚಿತಪಡಿಸಿದ್ದಾರೆ.
ಟ್ವಿಟ್‌ನಲ್ಲೇನಿದೆ?:ಬೆಂಗಳೂರಿನಿಂದ ಮುಂಬೈಗೆ ನೂತನ ವಂದೇ ಭಾರತ್ ಸ್ಲೀಪರ್ ರೈಲು ಆರಂಭಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದು, ಈ ರೈಲು ಬೆಂಗಳೂರಿನಿಂದ ಕಲ್ಯಾಣ ಕರ್ನಾಟಕದ ಮಾರ್ಗವಾಗಿ ಸಂಚರಿಸಲು ನನ್ನ ಮನವಿಗೆ ಸ್ಪಂದಿಸಿ, ನೂತನ ವಂದೇ ಭಾರತ್ ಸ್ಲೀಪರ್ ರೈಲು ಕೆಎಸ್‌ಆರ್ ಬೆಂಗಳೂರು ನಿಲ್ದಾಣದಿಂದ ಕಲ್ಯಾಣ ಕರ್ನಾಟಕದ ಮೂಲಕ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್‌ಗೆ ಸಂಚರಿಸಲಿದೆ. ಹಾಗೂ ಬೆಂಗಳೂರಿನಿಂದ ಕರ್ನಾಟಕದ ಮಧ್ಯ ಭಾಗವಾದ ತುಮಕೂರು, ದಾವಣಗೆರೆ, ಹಾವೇರಿ, ಹುಬ್ಬಳ್ಳಿ-ಧಾರವಾಡ ಮತ್ತು ಬೆಳಗಾವಿ ಮಾರ್ಗದ ಮೂಲಕ ವಾಣಿಜ್ಯ ನಗರಿ ಮುಂಬೈಗೆ ತೆರಳಲು ಬೆಂಗಳೂರು- ಮುಂಬೈ ಸೂಪರ್ ಫಾಸ್ಟ್ ರೈಲಿಗೆ ನನ್ನ ಮನವಿಯ ಮೇರೆಗೆ ಈಗಾಗಲೇ ಅನುಮೋದನೆ ನೀಡಲಾಗಿತ್ತು. ಈ ಸೂಪರ್ ಫಾಸ್ಟ್ ರೈಲನ್ನು ಶೀಘ್ರವೇ ಪ್ರಾರಂಭಿಸುವುದಾಗಿ, ತದನಂತರದ ದಿನಗಳಲ್ಲಿ ವಂದೇ ಭಾರತ್ ಸ್ಲೀಪರ್ ರೈಲಾಗಿ ಬದಲಾಯಿಸುವಂತೆ ನನ್ನ ಪ್ರಸ್ತಾವನೆಯನ್ನು ಸಕಾರಾತ್ಮಕವಾಗಿ ಪರಿಗಣಿಸುವುದಾಗಿ ಹೇಳಿರುವ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ರಾಜ್ಯದ ಪರವಾಗಿ ಧನ್ಯವಾದಗಳು.