ಬೆಂಗಳೂರು ಗ್ರಾಮಾಂತರ ಕ್ಷೇತ್ರ ಹೈವೋಲ್ಟೇಜ್ ಅಖಾಡ

KannadaprabhaNewsNetwork | Published : Mar 14, 2024 2:00 AM

ಸಾರಾಂಶ

ರಾಮನಗರ: ತೀವ್ರ ಕುತೂಹಲ ಕೆರಳಿಸಿದ್ದ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಟಿಕೆಟ್ ಅನ್ನು ಜಯದೇವ ಹೃದ್ರೋಗ ಸಂಸ್ಥೆಯ ಮಾಜಿ ನಿರ್ದೇಶಕ ಡಾ.ಸಿ.ಎನ್ .ಮಂಜುನಾಥ್ ಅವರಿಗೆ ಘೋಷಣೆಯಾಗುವ ಮೂಲಕ ಮಾಜಿ ಪ್ರಧಾನಿ ದೇವೇಗೌಡ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕುಟುಂಬಗಳ ನಡುವಿನ ಕಾದಾಟಕ್ಕೆ ಲೋಕಸಭಾ ಚುನಾವಣೆ ವೇದಿಕೆಯಾಗಲಿದೆ.

ರಾಮನಗರ: ತೀವ್ರ ಕುತೂಹಲ ಕೆರಳಿಸಿದ್ದ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಟಿಕೆಟ್ ಅನ್ನು ಜಯದೇವ ಹೃದ್ರೋಗ ಸಂಸ್ಥೆಯ ಮಾಜಿ ನಿರ್ದೇಶಕ ಡಾ.ಸಿ.ಎನ್ .ಮಂಜುನಾಥ್ ಅವರಿಗೆ ಘೋಷಣೆಯಾಗುವ ಮೂಲಕ ಮಾಜಿ ಪ್ರಧಾನಿ ದೇವೇಗೌಡ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕುಟುಂಬಗಳ ನಡುವಿನ ಕಾದಾಟಕ್ಕೆ ಲೋಕಸಭಾ ಚುನಾವಣೆ ವೇದಿಕೆಯಾಗಲಿದೆ.

ಹ್ಯಾಟ್ರಿಕ್ ಸಂಸದ ಡಿ.ಕೆ.ಸುರೇಶ್ ಅವರನ್ನು ಕಾಂಗ್ರೆಸ್ ಪಕ್ಷ ಈಗಾಗಲೇ ಅಭ್ಯರ್ಥಿಯೆಂದು ಘೋಷಿಸಿತ್ತು. ಆದರೆ, ಬಿಜೆಪಿ - ಜೆಡಿಎಸ್ ಮೈತ್ರಿಕೂಟ ಪಕ್ಷಗಳಲ್ಲಿ ಅಭ್ಯರ್ಥಿ ಆಯ್ಕೆಯ ಗೊಂದಲ ಮುಂದುವರೆದಿತ್ತು. ಕೊನೆಗೂ ಬಿಜೆಪಿ ವರಿಷ್ಠರು ಡಾ.ಸಿ.ಎನ್.ಮಂಜುನಾಥ್ ಅವರನ್ನು ಕಣಕ್ಕಿಳಿಸುವ ನಿರ್ಧಾರ ಪ್ರಕಟಿಸಿ ಎಲ್ಲ ಕುತೂಹಲಗಳಿಗೆ ತೆರೆ ಎಳೆದಿದೆ.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಹೋದರ ಡಿ.ಕೆ.ಸುರೇಶ್ ಅವರನ್ನು ಮಣಿಸಲು ಬಿಜೆಪಿ - ಜೆಡಿಎಸ್ ಪಕ್ಷಗಳಲ್ಲಿ ಪ್ರಬಲ ಅಭ್ಯರ್ಥಿಗಾಗಿ ಹುಡುಕಾಟ ನಡೆಸಿತ್ತು. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಹೆಸರುಗಳೂ ಚರ್ಚೆಗೆ ಬಂದಿದ್ದವು. ಸ್ಪರ್ಧೆಗೆ ಹಿಂದೇಟು ಹಾಕಿದ ಇಬ್ಬರು ನಾಯಕರು ಖುದ್ದಾಗಿ ಶಿಫಾರಸ್ಸು ಮಾಡಿದಂತೆ ಡಾ.ಸಿ.ಎನ್ .ಮಂಜುನಾಥ್ ಅವರಿಗೆ ಬಿಜೆಪಿ ಟಿಕೆಟ್ ಒಲಿದಿದೆ.

ಮಾಜಿ ಪ್ರಧಾನಿ ದೇವೇಗೌಡರವರಿಗೆ ಡಾ.ಮಂಜುನಾಥ್ ರವರು ಸಂಬಂಧದಲ್ಲಿ ಅಳಿಯ ಆಗಬೇಕು. ಕುಟುಂಬ ರಾಜಕಾರಣದ ಕಳಂಕದಿಂದ ತಪ್ಪಿಸಿಕೊಳ್ಳುವುದು. ಜೊತೆಗೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಸೇರಿರುವ ಬೆಂಗಳೂರು ದಕ್ಷಿಣ, ಆನೇಕಲ್ ಮತ್ತು ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ತನ್ನದೇ ಆದಂತಹ ಮತಗಳನ್ನು ಹೊಂದಿದೆ. ಆ ಮತಗಳನ್ನು ಸೆಳೆಯುವ ಉದ್ದೇಶದಿಂದಲೇ ಉಭಯ ಪಕ್ಷಗಳ ವರಿಷ್ಠರು ಬಿಜೆಪಿ ಚಿಹ್ನೆಯಡಿ ಡಾ.ಮಂಜುನಾಥ್ ಅವರನ್ನು ಕಣಕ್ಕಿಳಿಸಿದೆ.

5ನೇ ಬಾರಿ ಎರಡೂ ಕುಟುಂಬಗಳ ಮುಖಾಮುಖಿ:

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರಾಜಕೀಯವಾಗಿ ಬದ್ಧ ವೈರಿಗಳು. ಉಭಯ ನಾಯಕರ ನಡುವಿನ ರಾಜಕೀಯ ಸಂಘರ್ಷಕ್ಕೆ ಸುದೀರ್ಘ ಇತಿಹಾಸವೇ ಇದೆ. ಕೆಲವೊಂದು ಚುನಾವಣೆಗಳಲ್ಲಿ ಎಚ್.ಡಿ.ದೇವೇಗೌಡರು ಮತ್ತು ಡಿ.ಕೆ.ಶಿವಕುಮಾರ್ ನೇರವಾಗಿ ಸ್ಪರ್ಧೆ ಮಾಡಿದ್ದರೆ, ಮತ್ತೆ ಕೆಲ ಚುನಾವಣೆಯಲ್ಲಿ ಅವರ ಕುಟುಂಬದವರು ಮುಖಾಮುಖಿ ಆಗಿದ್ದಾರೆ.

1985ರಲ್ಲಿ ಸಾತನೂರು ಕ್ಷೇತ್ರದಿಂದ ಎಚ್.ಡಿ.ದೇವೇಗೌಡ ವಿರುದ್ಧ ಕಾಂಗ್ರೆಸ್ ಪಕ್ಷದಿಂದ ಡಿ.ಕೆ.ಶಿವಕುಮಾರ್ ಚೊಚ್ಚಲ ಚುನಾವಣೆ ಎದುರಿಸಿದ್ದರು. ಆ ಚುನಾವಣೆಯಲ್ಲಿ ದೇವೇಗೌಡರು ಗೆಲವು ಸಾಧಿಸಿದ್ದರು. ಬಳಿಕ 1999ರಲ್ಲಿ ಸಾತನೂರು ವಿಧಾನಸಭಾ ಕ್ಷೇತ್ರದಿಂದ ಡಿ.ಕೆ.ಶಿವಕುಮಾರ್ ವಿರುದ್ಧ ಎಚ್.ಡಿ.ಕುಮಾರಸ್ವಾಮಿ ಸ್ಪರ್ಧೆ ಮಾಡಿದ್ದರು. ಈ ಚುನಾವಣೆಯಲ್ಲಿ ಡಿ.ಕೆ.ಶಿವಕುಮಾರ್ ಗೆಲವು ಸಾಧಿಸಿ ಸಚಿವ ಸ್ಥಾನವನ್ನೂ ಅಲಂಕರಿಸಿದ್ದರು.

2002ರಲ್ಲಿ ನಡೆದ ಕನಕಪುರ ಲೋಕಸಭಾ ಉಪಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ವಿರುದ್ಧ ಡಿ.ಕೆ.ಶಿವಕುಮಾರ್ ಸ್ಪರ್ಧೆ ಮಾಡಿದ್ದರು. ಆ ಚುನಾವಣೆಯಲ್ಲಿ ದೇವೇಗೌಡರಿಗೆ ಗೆಲವು ಒಲಿಯಿತು. ಬಳಿಕ 2013ರಲ್ಲಿ ಕುಮಾರಸ್ವಾಮಿ ರಾಜೀನಾಮೆಯಿಂದ ಎದುರಾದ ಬೆಂಗಳೂರು ಗ್ರಾಮಾಂತರ ಲೋಕಸಭಾ ಚುನಾವಣೆಯಲ್ಲಿ ಡಿ.ಕೆ.ಸುರೇಶ್ ವಿರುದ್ಧ ಅನಿತಾ ಕುಮಾರಸ್ವಾಮಿ ಸ್ಪರ್ಧೆ ಮಾಡಿದ್ದರು. ಈ ಚುನಾವಣೆಯಲ್ಲಿ ಡಿ.ಕೆ.ಸುರೇಶ್ ಗೆಲವು ಸಾಧಿಸಿ ಕ್ಷೇತ್ರದ ಮೇಲೆ ಹಿಡಿತು ಸಾಧಿಸಿದರು.

ಈಗ ದೇವೇಗೌಡರ ಅಳಿಯ ಡಾ.ಸಿ.ಎನ್ .ಮಂಜುನಾಥ್ ಬಿಜೆಪಿ ಹಾಗೂ ಡಿ.ಕೆ.ಶಿವಕುಮಾರ್ ಸಹೋದರ ಡಿ.ಕೆ.ಸುರೇಶ್ ರವರು ಸ್ಪರ್ಧೆ ಮಾಡುತ್ತಿರುವುದರಿಂದ 5ನೇ ಬಾರಿಗೆ ಎರಡೂ ಕುಟುಂಬಗಳು ಮುಖಾಮುಖಿಯಾಗುತ್ತಿವೆ.

ಸಂಸದ ಡಿ.ಕೆ.ಸುರೇಶ್ 4ನೇ ಬಾರಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದರೆ, ದೇವೇಗೌಡರ ಕುಟುಂಬದ ಮೂಲದವರು ಇದೇ ಮೊದಲ ಬಾರಿಗೆ ಬಿಜೆಪಿಯಿಂದ ಸ್ಪರ್ಧೆ ಮಾಡುತ್ತಿರುವ ಕಾರಣ ಎರಡು ಕುಟುಂಬಗಳ ಸೆಣೆಸಾಟದಿಂದಾಗಿ ಹೈವೋಲ್ಟೇಜ್ ಅಖಾಡವಾಗಿ ಮಾರ್ಪಟ್ಟಿರುವ ಬೆಂಗಳೂರು ಗ್ರಾಮಾಂತರ ಕ್ಷೇತ್ರ ರಾಜ್ಯದ ಗಮನ ಸೆಳೆದಿದೆ.

13ಕೆಆರ್ ಎಂಎನ್ 11,12.ಜೆಪಿಜಿ11.ಡಿ.ಕೆ.ಸುರೇಶ್

12.ಡಾ.ಸಿ.ಎನ್ .ಮಂಜುನಾಥ್

Share this article