ಲಿಂಗರಾಜು ಕೋರಾ
ಬೆಂಗಳೂರು : ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್‌ಗೆ ಸಾರ್ವಜನಿಕರ ಪ್ರವೇಶಕ್ಕೆ ಇನ್ನು ಮುಂದೆ ಭಾಗಶಃ ನಿರ್ಬಂಧ ಬೀಳಲಿದೆ. ನಾಗರಬಾವಿ ಕಡೆಯಿಂದ ವಿಶ್ವವಿದ್ಯಾಲಯದ ಆಡಳಿತ ಕಚೇರಿವರೆಗಿನ ರಸ್ತೆಯಲ್ಲಿ ಸಾರ್ವಜನಿಕ ಪ್ರವೇಶ ನಿರ್ಬಂಧಿಸಲು ವಿವಿಯಯ ಇತ್ತೀಚಿನ ಸಿಂಡಿಕೇಟ್ ಸಭೆಯಲ್ಲಿ ನಿರ್ಧರಿಸಲಾಗಿದೆ.
ಸಿಂಡಿಕೇಟ್ ಸಭೆಯ ನಿರ್ಣಯವನ್ನು ವಿಶ್ವವಿದ್ಯಾಲಯ ಜಾರಿಗೆ ತರಲು ಸಿದ್ಧತೆ ನಡೆಸಿದ್ದು ಕೆಲವೇ ದಿನಗಳಲ್ಲಿ ಈ ಸಂಬಂಧ ಅಧಿಕೃತ ಆದೇಶ ಹೊರಬೀಳುವ ಸಾಧ್ಯತೆ ಇದೆ.
ವಿವಿಯ ಕ್ಯಾಂಪಸ್‌ನಲ್ಲಿ ಆಗಾಗ ಗಂಧದ ಮರ ಕಳವು, ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯ ಮತ್ತಿತರ ಅಪರಾಧ ಕೃತ್ಯಗಳು, ಅಪಘಾತ ಪ್ರಕರಣಗಳ ಜೊತೆಗೆ ಕ್ಯಾಂಪಸ್ ಆವರಣದಲ್ಲಿ ಘನತ್ಯಾಜ್ಯ ತಂದು ಎಸೆಯುವುದು ಸೇರಿದಂತೆ ಪರಿಸರ ಹಾಳು ಮಾಡುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಲೇ ಇವೆ.
ಈ ಹಿನ್ನೆಲೆಯಲ್ಲಿ ವಿವಿಯ ವಿದ್ಯಾರ್ಥಿಗಳು, ಬೋಧಕ, ಬೋಧಕೇತರ ವರ್ಗದಿಂದ ಕ್ಯಾಂಪಸ್‌ಗೆ ಸಂಪೂರ್ಣ ಸಾರ್ವಜನಿಕ ಪ್ರವೇಶ ನಿರ್ಬಂಧ ವಿಧಿಸಬೇಕೆಂಬ ಆಗ್ರಹ ಇದೆ. ಆದರೆ, ಈ ಕೂಗು ಎದ್ದಾಗ ವಾಯುವಿಹಾರಕ್ಕೆ ಬರುವವರು, ಕ್ಯಾಂಪಸ್ ಒಳಗಿನ ರಸ್ತೆಗಳಲ್ಲಿ ಸಂಚರಿಸುವ ಸುತ್ತಮುತ್ತಲ ನಿವಾಸಿಗಳ ವಿರೋಧ ವ್ಯಕ್ತವಾಗುತ್ತಲೇ ಬಂದಿದೆ. ಹಾಗಾಗಿ ಕ್ಯಾಂಪಸ್‌ಗೆ ಒಮ್ಮೆಗೇ ಸಾರ್ವಜನಿಕರ ಸಂಪೂರ್ಣ ಬಂದ್ ಸಾಧ್ಯವಿಲ್ಲ ಎನ್ನುವುದನ್ನು ಅರಿತಿರುವ ವಿಶ್ವವಿದ್ಯಾಲಯ ಹಂತ ಹಂತವಾಗಿ ಅನುಷ್ಠಾನಗೊಳಿಸಲು ಮುಂದಾಗಿದೆ.
ಇತ್ತೀಚೆಗೆ ರಾಜ್ಯ ಉನ್ನತ ಶಿಕ್ಷಣ ಪರಿಷತ್‌ನಲ್ಲಿ ನಡೆದ ವಿವಿಯ ಸಿಂಡಿಕೇಟ್ ಸಭೆಯಲ್ಲಿ ಮೊದಲ ಹಂತವಾಗಿ ನಾಗರಬಾವಿ ಕಡೆಯ ರಾಷ್ಟ್ರೀಯ ಕಾನೂನು ಶಾಲೆಯ ಕಡೆಯ ಪ್ರವೇಶ ದ್ವಾರದಿಂದ ವಿವಿಯ ಆಡಳಿತ ಕಚೇರಿ ವರೆಗಿನ ಗಾಂಧಿ ಭವನ ರಸ್ತೆಯಲ್ಲಿ ಸಾರ್ವಜನಿಕ ಪ್ರವೇಶಕ್ಕೆ ನಿಬಂಧಿಸಲು ತೀರ್ಮಾನಿಸಲಾಗಿದೆ ಎಂದು ವಿವಿಯ ಉನ್ನತ ಮೂಲಗಳು ತಿಳಿಸಿವೆ.
ಮರಿಯಪ್ಪನಪಾಳ್ಯ ಕಡೆಯ ವಿವಿ ಗೇಟ್ ಬಂದ್ ಸಾಧ್ಯತೆ
ಪ್ರಸ್ತುತ ಮೈಸೂರು ರಸ್ತೆ, ಮಲ್ಲತ್ತಹಳ್ಳಿ, ನಾಗರಭಾವಿ ಮತ್ತು ಕ್ರೀಡಾ ಪ್ರಾಧಿಕಾರ ಅಥವಾ ಮರಿಯಪ್ಪನ ಪಾಳ್ಯ ಭಾಗಗಳಿಂದ ಜ್ಞಾನಭಾರತಿ ಕ್ಯಾಂಪಸ್ ಪ್ರವೇಶಿಸಬಹುದಾಗಿದೆ. ಈ ಪೈಕಿ ಮೈಸೂರು ರಸ್ತೆಯಿಂದ ಮಲ್ಲತ್ತಹಳ್ಳಿ ಮಾರ್ಗವನ್ನು ಸಾರ್ವಜನಿಕರಿಗೆ ನಿರ್ಬಂಧಿಸಲು ಸದ್ಯಕ್ಕಂತೂ ಸಾಧ್ಯವಿಲ್ಲ. ಈ ರಸ್ತೆ ಬಿಬಿಎಂಪಿ ಸಿದ್ಧಪಡಿಸಿರುವ ರಸ್ತೆಯಾಗಿದೆ. ಅಲ್ಲದೆ, ಇದು ಆಗಬೇಕಾದರೆ ಈ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕ ವಾಹನಗಳ ಸಂಚಾರಕ್ಕೆ ಸರ್ಕಾರ ಪರ್ಯಾಯ ವ್ಯವಸ್ಥೆ ಮಾಡಿ ನಿರ್ಬಂಧ ವಿಧಿಸಬೇಕಾಗುತ್ತದೆ.
ಇನ್ನು ನಾಗರಬಾವಿ ಕಡೆಯಿಂದ ಪ್ರವೇಶವನ್ನು ವಿವಿ ನಿರ್ಬಂಧಿಸಬಹುದಾಗಿದೆ. ಈ ಬಗ್ಗೆ ನಿರ್ಧಾರ ಕೈಗೊಳ್ಳುವ ಸಂಪೂರ್ಣ ಅಧಿಕಾರ ವಿವಿಗಿದೆ. ಅದೇ ರೀತಿ ಮರಿಯಪ್ಪನಪಾಳ್ಯ ಕಡೆಯ ಗೇಟನ್ನೂ ಕಾಂಪೌಂಡ್ ನಿರ್ಮಾಣ ಮಾಡಿ ಬಂದ್ ಮಾಡಬಹುದು. ಮುಂದಿನ ಹಂತದಲ್ಲಿ ಈ ದ್ವಾರ ಬಂದ್ ಮಾಡುವ ಆಲೋಚನೆ ವಿವಿಯಲ್ಲಿದೆ ಎಂದು ತಿಳಿದು ಬಂದಿದೆ.
ವಿಶ್ವವಿದ್ಯಾಲಯ ಕ್ಯಾಂಪಸ್‌ಗೆ ಸಾರ್ವಜನಿಕರ ಪ್ರವೇಶವನ್ನು ಸಂಪೂರ್ಣ ನಿರ್ಬಂಧಿಸಬೇಕೆಂಬ ಬಗ್ಗೆ ಮೊದಲಿನಿಂದಲೂ ವಿದ್ಯಾರ್ಥಿಗಳು, ಬೋಧಕ, ಬೋಧಕೇತರ ಸಿಬ್ಬಂದಿಯ ಹಾಗೂ ಶಿಕ್ಷಣ ತಜ್ಞರ ಆಗ್ರಹಿಸುತ್ತೇ ಬಂದಿದ್ದಾರೆ. ಆದರೆ, ವಿವಿ ಈಗ ಕೇವಲ ಭಾಗಶಃ ಪ್ರವೇಶ ನಿರ್ಬಂಧ ಮಾಡಿದರೆ ಸರಿಯಲ್ಲ. ಪೂರ್ಣ ನಿರ್ಬಂಧ ಮಾಡಬೇಕು.
- ಸಂತೋಷ್ ಕುಮಾರ್, ವಿದ್ಯಾರ್ಥಿ
ಕ್ಯಾಂಪಸ್‌ನಲ್ಲಿ ಸಾರ್ವಜನಿಕ ವಾಹನಗಳಿಂದ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿವೆ. ಪರಿಸರವೂ ಹಾಳಾಗುತ್ತಿದೆ. ಅಪರಾಧ ಕೃತ್ಯಗಳು ನಡೆದರೆ ಹೊಣೆ ಮಾಡುವುದು ವಿವಿಯ ಅಧಿಕಾರಿಗಳನ್ನೇ, ಹಾಗಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕ್ಯಾಂಪಸ್‌ಗೆ ಸಾರ್ವಜನಿಕ ಪ್ರವೇಶ ನಿರ್ಬಂಧಿಸಬೇಕೆಂದು ಆಗ್ರಹಿವಿದೆ. ವಿವಿ ಅದೇ ರೀತಿ ಕ್ರಮ ಕೈಗೊಳ್ಳಬೇಕು.
- ಶಿವಪ್ಪ, ಬೆಂಗಳೂರು ವಿವಿ ಬೋಧಕೇತರ ನೌಕರರ ಸಂಘದ ಅಧ್ಯಕ್ಷ