ಬೆಂಗಳೂರಿಗರೇ ನೈಟ್‌ಲೈಫ್‌ಗೆ ಸಿದ್ಧರಾಗಿ

KannadaprabhaNewsNetwork |  
Published : Aug 07, 2024, 01:37 AM ISTUpdated : Aug 07, 2024, 01:38 AM IST
ಬಾರ್‌ | Kannada Prabha

ಸಾರಾಂಶ

ಅನಧಿಕೃವಾಗಿ ಚಾಲ್ತಿಯಲ್ಲಿದ್ದ ಬೆಂಗಳೂರಿನ ನೈಟ್‌ಲೈಫ್‌ಗೆ ರಾಜ್ಯ ಸರ್ಕಾರ ಅಧಿಕೃತ ಮುದ್ರೆ ಒತ್ತಿದ್ದು, ಹೋಟೆಲ್‌, ಮಾರುಕಟ್ಟೆಗಳ ಜತೆಗೆ ಇದೀಗ ಮಧ್ಯರಾತ್ರಿ 1 ಗಂಟೆವರೆಗೆ ಮದ್ಯ ಮಾರಾಟಕ್ಕೆ ಅವಕಾಶ ನೀಡಿ ಆದೇಶಿಸಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಈವರೆಗೆ ಅನಧಿಕೃವಾಗಿ ಚಾಲ್ತಿಯಲ್ಲಿದ್ದ ಬೆಂಗಳೂರಿನ ನೈಟ್‌ಲೈಫ್‌ಗೆ ರಾಜ್ಯ ಸರ್ಕಾರ ಅಧಿಕೃತ ಮುದ್ರೆ ಒತ್ತಿದ್ದು, ಹೋಟೆಲ್‌, ಮಾರುಕಟ್ಟೆಗಳ ಜತೆಗೆ ಇದೀಗ ಮಧ್ಯರಾತ್ರಿ 1 ಗಂಟೆವರೆಗೆ ಮದ್ಯ ಮಾರಾಟಕ್ಕೆ ಅವಕಾಶ ನೀಡಿ ಆದೇಶಿಸಲಾಗಿದೆ.

ಬೆಂಗಳೂರಿನಲ್ಲಿ ರಾತ್ರಿ ವೇಳೆಯಲ್ಲೂ ವ್ಯಾಪಾರ-ವಹಿವಾಟು ಹೆಚ್ಚಿಸುವ ಉದ್ದೇಶದೊಂದಿಗೆ 2016ರಲ್ಲಿ ಹೋಟೆಲ್‌, ರೆಸ್ಟೋರೆಂಟ್‌, ಮಾರುಕಟ್ಟೆಗಳನ್ನು ತೆರೆಯಲು ಅವಕಾಶ ನೀಡಲಾಗಿತ್ತು. ಮೊದಲಿಗೆ ವಾರಾಂತ್ಯದ ಎರಡು ದಿನಗಳು ಮಾತ್ರ ಅದಕ್ಕೆ ಅವಕಾಶ ನೀಡಲಾಗಿತ್ತಾದರೂ, ಜನರ ಬೇಡಿಕೆ ಹೆಚ್ಚಾದ ಕಾರಣದಿಂದಾಗಿ ವಾರದ ಏಳೂ ದಿನವೂ ಮಧ್ಯರಾತ್ರಿ 1 ಗಂಟೆಯವರೆಗೆ ವ್ಯಾಪಾರ ವಹಿವಾಟು ನಡೆಸಲು ಅವಕಾಶ ನೀಡಲಾಗಿತ್ತು. ಆದರೆ, ವ್ಯಾಪಾರಿಗಳು ಸರ್ಕಾರದ ಆದೇಶದಂತೆ ಮಧ್ಯರಾತ್ರಿವರೆಗೆ ವ್ಯಾಪಾರ ಮಾಡಲು ಸ್ಥಳೀಯ ಪೊಲೀಸರು ಅವಕಾಶ ನೀಡಿರಲಿಲ್ಲ. ಹೀಗಾಗಿ ರಾತ್ರಿ 11ರ ವೇಳೆಗೆ ಎಲ್ಲ ವ್ಯಾಪಾರ ವಹಿವಾಟುಗಳು ಸ್ಥಗಿತಗೊಳ್ಳುತ್ತಿವೆ.

ಬಜೆಟ್‌ನಲ್ಲಿಯೇ ಘೋಷಿಸಿದ್ದ ಸಿಎಂ:

ಬೆಂಗಳೂರಿನ ನೈಟ್‌ಲೈಫ್‌ ಕುರಿತಂತೆ ಕಳೆದ ಫೆಬ್ರವರಿಯಲ್ಲಿ ಸಿಎಂ ಸಿದ್ದರಾಮಯ್ಯ ಮಂಡಿಸಿದ್ದ ರಾಜ್ಯ ಬಜೆಟ್‌ನಲ್ಲಿಯೇ ಉಲ್ಲೇಖಿಸಿದ್ದು, ಮಧ್ಯರಾತ್ರಿ 1 ಗಂಟೆಯವರೆಗೆ ವ್ಯಾಪಾರ-ವಹಿವಾಟಿಗೆ ಅವಕಾಶ ನೀಡುವುದಾಗಿ ಘೋಷಿಸಿದ್ದರು. ಅದರಂತೆ ಇದೀಗ ಬೆಂಗಳೂರಿನ ನೈಟ್‌ಲೈಫ್‌ ಹೊಸರೂಪದಲ್ಲಿ ಚಾಲನೆ ನೀಡುವಂತೆ ರಾಜ್ಯ ಸರ್ಕಾರ ಆದೇಶಿಸಿದೆ. ಈವರೆಗೆ ಹೋಟೆಲ್‌, ಮಾರುಕಟ್ಟೆ, ಬಜಾರ್‌ಗಳು ಸೇರಿದಂತೆ ಇನ್ನಿತರ ವಾಣಿಜ್ಯ ಚಟುವಟಿಕೆಗಳು ಮಧ್ಯರಾತ್ರಿವರೆಗೆ 1 ಗಂಟೆಯವರೆಗೆ ತೆರೆದಿರಲು ಈ ಹಿಂದೆಯೇ ಅವಕಾಶ ನೀಡಲಾಗಿತ್ತು.

ಆದರ ಜತೆಗೆ ಇದೀಗ ಮದ್ಯ ಮಾರಾಟ ಮಾಡುವ ಹೋಟೆಲ್‌, ಪಬ್‌, ಕ್ಲಬ್‌, ಬಾರ್‌ಗಳೂ ಮಧ್ಯರಾತ್ರಿ 1 ಗಂಟೆಯವರೆಗೆ ತೆರೆಯಬಹುದು ಎಂದು ಆದೇಶಿಸಲಾಗಿದೆ. ಆಮೂಲಕ ಈವರೆಗೆ ರಾತ್ರಿ 10 ಗಂಟೆಗೆ ಮುಚ್ಚಲಾಗುತ್ತಿದ್ದ ಮದ್ಯ ಮಾರಾಟ ಹೋಟೆಲ್‌, ಕ್ಲಬ್‌, ಬಾರ್‌ಗಳು ಇನ್ನು ಮುಂದೆ ಮಧ್ಯರಾತ್ರಿ 1 ಗಂಟೆಯವರೆಗೆ ವ್ಯಾಪಾರ ಮಾಡಬಹುದಾಗಿದೆ.

ಬೆಳಗ್ಗೆ 10ರಿಂದ ಬಾರ್‌ ಓಪನ್‌

ಕ್ಲಬ್‌ಗಳು (ಸಿಎಲ್‌ 4 ಪರವಾನಗಿ) ಸ್ಟಾರ್‌ ಹೊಟೇಲ್‌ಗಳು(ಸಿಎಲ್‌ 6) ಹಾಗೂ ಸಿಎಲ್‌ 7 ಮತ್ತು ಸಿಎಲ್‌7ಡಿ ಪರವಾನಗಿಯಿರುವ ಹೋಟೆಲ್‌ ಮತ್ತು ಲಾಡ್ಜ್‌ಗಳು ಬೆಳಗ್ಗೆ 9ರಿಂದ ಮಧ್ಯರಾತ್ರಿ 1ರವರೆಗೆ ಹಾಗೂ ಸಿಎಲ್‌ 9 ಪರವಾನಗಿ ಹೊಂದಿದ ರಿಫ್ರೆಷ್‌ಮೆಂಟ್‌ ರೂಂ (ಬಾರ್‌)ಗಳು ಬೆಳಗ್ಗೆ 10ರಿಂದ ರಾತ್ರಿ 1ರವರೆಗೆ ವಹಿವಾಟು ನಡೆಸಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

PREV

Recommended Stories

ಬೆಂಗಳೂರಿನ ಬಾರ್‌ಗಳಲ್ಲಿ ವೋಟ್‌ ಖರೀದಿ ಲೆಕ್ಕಾಚಾರ!!!
ಸಿಎಂಗೆ ಕಣ್ಣು ಪರೀಕ್ಷೆ ನಡೆಸಿ ಎರಡು ಕನ್ನಡಕ ಕೊಟ್ಟ ಶಾಸಕ ಶ್ರೀನಿವಾಸ್‌