ಸಂತನ ಜಯಂತ್ಯುತ್ಸವ । ಸಮುದಾಯದ ಬೃಹತ್ ಮೆರವಣಿಗೆ
2017 ರಲ್ಲಿ ಸರ್ಕಾರದ ಆದೇಶದಂತೆ ಸಂತಸೇವಲಾಲ್ ಅವರ ಜಯಂತಿಯನ್ನು ಸರ್ಕಾರಿ ದಿನಾಚರಣೆಯನ್ನಾಗಿ ಪ್ರತಿ ಕಛೇರಿಗಳಲ್ಲಿಯೂ ರಜಾರಹಿತವಾಗಿ ಆಚರಿಸಲಾಗುತ್ತಿದ್ದು. ಬಂಜಾರ ಸಮುದಾಯದವರು ಸಂತಸೇವಲಾಲ್ ಅವರನ್ನು ಸ್ಮರಿಸುವ ಮೂಲಕ ಗುರುಭಕ್ತಿ ಮೆರೆಯಬೇಕಿದೆ ಎಂದು ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕೃಷ್ಣನಾಯ್ಕ ಹೇಳಿದರು.
ಸಂತ ಸೇವಲಾಲ್‌ರ 286ನೇ ಜಯಂತಿ ಅಂಗವಾಗಿ ಬಂಜಾರ ಸಮುದಾಯದಿಂದ ಪಟ್ಟಣದ ಪ್ರವಾಸಿ ಮಂದಿರದಿಂದ ಮಹಾತ್ಮಗಾಂಧಿ ವೃತ್ತ, ಅಂಬೇಡ್ಕರ್ ವೃತ್ತದ ಮೂಲಕ ತಾಲೂಕು ಕಚೇರಿವರೆಗೂ ಬೆಳ್ಳಿಸಾರೋಟ್‌ನಲ್ಲಿ ಸಂತಸೇವಲಾಲ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಬೃಹತ್ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.ಬಂಜಾರರು ತಮ್ಮ ಸಮಾಜದ ಹಿತಕಾಯುವುದು ಗುರು ಎಂಬುದನ್ನು ಯಾರು ಮರೆಯಬಾರದು ಎಂದರು.
ಜಿಪಂ ಮಾಜಿ ಸದಸ್ಯ ಕೆಪಿ ಪಾಲಯ್ಯ ಮಾತನಾಡಿ, ಪ್ರತಿಯೊಂದು ಸಮುದಾಯದ ಯುವಪೀಳಿಗೆ ಆಯಾ ಸಮಾಜದ ಪೂರ್ವಜರ ಆದರ್ಶ,ಕೊಡುಗೆಗಳನ್ನು ಮೈಗೂಡಿಸಿಕೊಳ್ಳಬೇಕು.ಸಮಾಜದ ಸಂಘಟನೆ,ಶಿಕ್ಷಣಕ್ಕೆ ಒತ್ತಕೊಡಬೇಕು ಎಂದು ಕಿವಿಮಾತು ಹೇಳಿದರು.
ಕೊಟ್ಟೂರು ತಾಲೂಕು ದೂಪದಹಳ್ಳಿ ಬಂಜಾರ ಮಠದ ಶಿವಪ್ರಕಾಶ್ ಸ್ವಾಮೀಜಿ ಆಶೀರ್ವಚನ ನೀಡಿ, ಸಂತ ಸೇವಲಾಲ್ ಅವರು ಬಂಜಾರ ಸಮುದಾಯಕ್ಕೆ ಸೀಮಿತವಾಗದೆ ವಿಶ್ವಕ್ಕೆ ಸಂದೇಶ ಸಾರಿದವರು.ಅವರ ಸಂದೇಶಗಳನ್ನು ಸಮಾಜಕ್ಕೆ ಪಸರಿಸೋಣ ಎಂದು ಹೇಳಿದರು.ಇದೇ ವೇಳೆ ಬಂಜಾರ ಸಮುದಾಯದ ಯುವಕರು, ತೀಜ್ ಹೊತ್ತ ಮಹಿಳೆಯರು, ಲಂಬಾಣಿ ಉಡುಪು ಧರಿಸಿ ಡಿಜೆ ಹಾಡಿಗೆ ಹೆಜ್ಜೆಹಾಕಿದರು. ಮಾಲಾಧಾರಿಗಳು ಫೆ.13 ರಿಂದ ಆರಂಭವಾಗುವ ಸಂತಸೇವಲಾಲ್ ಜಯಂತ್ಯುತ್ಸವದ ಜಾತ್ರೆಗೆ ಮಾಲಾಧಾರಿಗಳು ಭಾಗವಹಿಸಲು ಪಾದಾಯಾತ್ರೆ ತೆರಳಿದರು.ಸಮುದಾಯ ಭವನ ನಿರ್ಮಾಣಕ್ಕೆ ನಿವೇಶನ ಕಲ್ಪಿಸಲು ಗ್ರೇಡ್ -2 ತಹಸೀಲ್ದಾರ್ ಮಂಜಾನಂದ ಅವರಿಗೆ ಮನವಿಸಲ್ಲಿಸಿದರು.
ಪಪಂ ಅಧ್ಯಕ್ಷ ನವೀನ್ ಕುಮಾರ್, ಲಂಬಾಣಿ ಸಮಾಜದ ತಾಲೂಕು ಅಧ್ಯಕ್ಷ ತಿಪ್ಪೇಸ್ವಾಮಿನಾಯ್ಕ, ತಾಪಂ ಇಒ ಕೆಂಚಪ್ಪ, ಪಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ, ಸಮಾಜದ ಮುಖಂಡರಾದ ಶಶಿ, ಮೂರ್ತಿನಾಯ್ಕ, ನರೇನಹಳ್ಳಿಕುಮಾರನಾಯ್ಕ, ಸತೀಶ್ ನಾಯ್ಕ, ವಕೀಲ ಉಮಾಪತಿನಾಯ್ಕ, ಧರ್ಮನಾಯ್ಕ, ಮಂಜಾನಾಯ್ಕ, ಶಿಕ್ಷಕ ಅಂಜಿನಾಯ್ಕ, ರಾಜುನಾಯ್ಕ, ಕೊಟ್ರೇಶ್ ನಾಯ್ಕ, ಸಮಾಜಕಲ್ಯಾಣ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.