ಕನ್ನಡಪ್ರಭ ವಾರ್ತೆ ದಾವಣಗೆರೆಅಸ್ಪೃಶ್ಯತೆಯಿಂದ ಆದ ಅನ್ಯಾಯ, ಅವಮಾನ ಸರಿದೂಗಿಸಲು ಮೀಸಲಾತಿ ಜಾರಿಗೊಳಿಸಿದ್ದು, ಅಸ್ಪೃಶ್ಯ ಜಾತಿಗಳ ಪಟ್ಟಿಯಲ್ಲಿ ಸ್ಪೃಶ್ಯ ಜಾತಿಗಳನ್ನು ಸೇರಿಸಿದ್ದರಿಂದ ಅಸ್ಪೃಶ್ಯರ ಹಿತರಕ್ಷಣೆಗೆ ಪೂರಕವಾಗಿದ್ದ ಮೀಸಲಾತಿ ನೀತಿಯೇ ಮಾರಕವಾಗಿ ಪರಿಣಮಿಸಿದೆ ಎಂದು ದಲಿತ ಸಂಘಟನೆಗಳ ಮಹಾ ಒಕ್ಕೂಟದ ಜಿಲ್ಲಾಧ್ಯಕ್ಷ ಎಚ್. ಮಲ್ಲೇಶ ಹೇಳಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿಗಾಗಿ 3 ದಶಕದಿಂದ ಮಾದಿಗ ಸಮಾಜ ಹೋರಾಟ ನಡೆಸಿದ್ದರಿಂದಾಗಿ ಇಂದು ಸುಪ್ರೀಂ ಕೋರ್ಟ್ ಒಳ ಮೀಸಲಾತಿ ಕಲ್ಪಿಸುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇದೆಯೆಂಬ ತೀರ್ಪು ನೀಡಿದೆ. ಇಂತಹ ಒಳ ಮೀಸಲಾತಿ ವಿಚಾರದಲ್ಲಿ ಬಂಜಾರ ಸಮುದಾಯದ ನಡೆ ಸರಿಯಲ್ಲವೆಂದು ಬೇಸರ ವ್ಯಕ್ತಪಡಿಸಿದರು.ಕಳೆದ 3 ದಶಕದಿಂದ ಅಸ್ಪೃಶ್ಯ ಮಾದಿಗ ಸಮುದಾಯ ವೈಜ್ಞಾನಿಕ ರೀತಿಯಲ್ಲಿ ಒಳ ಮೀಸಲಾತಿ ಸೌಲಭ್ಯಕ್ಕಾಗಿ ಹೋರಾಡುತ್ತಾ ಬಂದಿದೆ. ಸಂವೇದನಶೀಲ ಗುಣವುಳ್ಳ ಮತ್ತು ಅಹಿಂದ ಸಮಾಜವಾದದ ಹಿನ್ನೆಯುಳ್ಳ ಮುಖ್ಯಮಂತ್ರಿ ಸಿದ್ದರಾಮಯ್ಯ ಒಳ ಮೀಸಲಾತಿ ಬಗ್ಗೆ ಸಕಾರಾತ್ಮಕ ನಿಲುವು ತಾಳಿರುವುದು ಸ್ಪಷ್ಟವಾಗಿದೆ ಎಂದರು.
ಒಳ ಮೀಸಲಾತಿ ಹೋರಾಟದ ಪರಿಣಾಮ ರಾಜ್ಯ ಸರ್ಕಾರ ನ್ಯಾ. ಸದಾಶಿವ ಆಯೋಗ ರಚಿಸಿ, ಅಭಿಪ್ರಾಯ ಪಡೆದು ನಂತರ ಉಪ ಸಮಿತಿ ರಚಿಸಿ, ವರದಿಯನ್ನು ಪಡೆದಿತ್ತು. ಅನುಷ್ಠಾನಕ್ಕಾಗಿ ಸಂವಿಧಾನ ತಿದ್ದುಪಡಿ ಅಗತ್ಯವೆಂದು ಅನುಮತಿ ಕೋರಿ ಕೇಂದ್ರಕ್ಕೆ ಪತ್ರ ಬರೆದಿದೆ ಎಂದು ಅವರು ತಿಳಿಸಿದರು.ಕಾನೂನಾತ್ಮಕ ಹೋರಾಟ ನಡೆಸಿದ ದಲಿತ ಸಮುದಾಯದ ಹೋರಾಟದ ಫಲವಾಗಿ 1-8-2024 ರಂದು ಸುಪ್ರೀಂ ಕೋರ್ಟ್ ಪೂರ್ಣ ಪೀಠವು ಒಳ ಮೀಸಲಾತಿ ಉಪ ವರ್ಗೀಕರಣದ ಅಗತ್ಯ ಮತ್ತು ಒಳ ಮೀಸಲಾತಿ ವರ್ಗೀಕರಣ ರಾಜ್ಯ ಸರ್ಕಾರದ ಅಧಿಕಾರದ ವ್ಯಾಪ್ತಿಗೆ ಬರುತ್ತದೆಂಬ ಐತಿಹಾಸಿಕ ತೀರ್ಪು ನೀಡಿದೆ. ಈ ತೀರ್ಪಿನ ಅನುಷ್ಠಾನವು ರಾಜ್ಯ ಸರ್ಕಾರಗಳ ಜವಾಬ್ದಾರಿಯೂ ಆಗಿದೆ. ಆದರೆ, ಬಂಜಾರ ಸಮುದಾಯ ಸರ್ಕಾರವನ್ನು ದಿಕ್ಕು ತಪ್ಪಿಸುವಂತೆ ಹೇಳಿಕೆ ನೀಡುತ್ತಿರುವುದು ಸರಿಯಲ್ಲ ಎಂದು ಅವರು ಆಕ್ಷೇಪಿಸಿದರು. ಸಂವಿಧಾನ ಪರಿಚ್ಛೇದ 15(4), 16(4)ರನ್ವಯ ಸಮಾನ ಸೌಲಭ್ಯ ಹಂಚಿಕೊಳ್ಳುವ ನಿಟ್ಟಿನಲ್ಲಿ ನಾವೆಲ್ಲರೂ ಇರಬೇಕು. ಒಂದು ವೇಳೆ ನಿಮ್ಮಲ್ಲಿ ಅಂಕಿ ಅಂಶಗಳು ಇದ್ದರೆ ಸರ್ಕಾರಕ್ಕೆ ನೀಡಿ. 2021ರ ಜನಸಂಖ್ಯೆಗೆ ಅನುಗುಣವಾಗಿ ಶೇಕಡವಾರು ಮೀಸಲನ್ನು ನಿಗದಿಪಡಿಸಿದ್ದು, ಆ ಎಲ್ಲಾ ದತ್ತಾಂಶಗಳು ಸರ್ಕಾರದ ಬಳಿ ಇವೆ. ಅದರ ಆಧಾರದಲ್ಲಿ ಇಂದು ಸುಪ್ರೀಂ ಕೋರ್ಟ್ ತೀರ್ಪಿನನ್ವಯ ಒಳ ಮೀಸಲಾತಿ ಜಾರಿಗೆ ನಾವೆಲ್ಲರೂ ಬದ್ಧತೆಯಿಂದ ಇರಬೇಕು. ಅಸ್ಪೃಶ್ಯತೆಯ ನೋವನ್ನು ಅನುಭವಿಸಿದ ನಮ್ಮ ಸಮುದಾಯದ ಅನುಭವ ನಿಮ್ಮ ಬಂಜಾರ ಸಮುದಾಯಕ್ಕೆ ಇಲ್ಲ ಎಂದು ಅವರು ಹೇಳಿದರು.
ಸೋದರ ಸಾಮರಸ್ಯದೊಂದಿಗೆ 101 ಜಾತಿಗಳಿಗೂ ಸಾಮಾಜಿಕ ನ್ಯಾಯದಂತೆ ಜನಸಂಖ್ಯೆಗೆ ಅನುಗುಣವಾಗಿ ಒಳ ಮೀಸಲಾತಿ ಕಲ್ಪಿಸುವುದು ಸರ್ಕಾರದ ಆದ್ಯ ಕರ್ತವ್ಯ. ಅದಕ್ಕೆ ಅಡ್ಡಿಪಡಿಸುವುದು ಸಂವಿಧಾನ ವಿರೋಧಿ ನಿಲುವು ಎಂಬುದನ್ನು ಬಂಜಾರ ಸಮುದಾಯ ಅರಿಯಬೇಕು. ಸುಪ್ರೀಂ ಕೋರ್ಟ್ ತೀರ್ಪು ಬಂದು 3 ತಿಂಗಳಾಗುತ್ತಿದ್ದರೂ ಈವರೆಗೆ ಮೌನ ತಾಳಿರುವ ಸರ್ಕಾರದ ನಡೆ ಅಸ್ಪೃಶ್ಯ ಸಮುದಾಯಕ್ಕೆ ಸೋಜಿಗವೆನಿಸಿದೆ ಎಂದು ದೂರಿದರು.ಅಹಿಂದ ನಾಯಕರಾದ ಸಿದ್ದರಾಮಯ್ಯ ಒಳ ಮೀಸಲಾತಿ ನೀಡುವ ವಿಚಾರದಲ್ಲಿ ಯಾವುದೇ ಒತ್ತಡ, ಪ್ರಭಾವಕ್ಕೂ ಒಳಗಾಗಬಾರದು. ಸುಪ್ರೀಂ ಕೋರ್ಟ್‌ನ ತೀರ್ಪಿನಂತೆ ಒಳ ಮೀಸಲಾತಿಯನ್ನು ತಕ್ಷಣ ಜಾರಿಗೊಳಿಸಬೇಕು. ಒಳ ಮೀಸಲಾತಿ ಜಾರಿಗೊಳ್ಳುವವರೆಗೂ ರಾಜ್ಯದಲ್ಲಿ ನಡೆಯುವ ಎಲ್ಲಾ ಸರ್ಕಾರಿ ಮತ್ತು ಅರೆ ಸರ್ಕಾರಿ ನೇಮಕಾತಿ ಸ್ಥಗಿತಗೊಳಿಸಬೇಕು ಎಂದು ಎಚ್. ಮಲ್ಲೇಶ ಸರ್ಕಾರಕ್ಕೆ ಒತ್ತಾಯಿಸಿದರು.
ಈ ವೇಳೆ ಒಕ್ಕೂಟದ ಮುಖಂಡರಾದ ಆಲೂರು ನಿಂಗರಾಜ, ಮುತ್ತಣ್ಣ, ಕೆಟಿಜೆ ನಗರ ದುಗ್ಗಪ್ಪ, ಕೆಟಿಜೆ ನಗರ ರವಿಕುಮಾರ, ರಾಘವೇಂದ್ರ ಕಡೇಮನಿ, ರಾಜಕುಮಾರ, ನಾಗರಾಜ, ಜಯಪ್ಪ, ತಿಪ್ಪೇಸ್ವಾಮಿ ಇತರರು ಇದ್ದರು.