ಬೆಂಗಳೂರು : ವಾರದಲ್ಲಿ 5 ದಿನ ಮಾತ್ರ ಕೆಲಸ ನಿರ್ವಹಿಸಲು ಅವಕಾಶ ಕಲ್ಪಿಸಬೇಕೆಂದು ಆಗ್ರಹಿಸಿ ಸಾರ್ವಜನಿಕ ವಲಯದ ಬ್ಯಾಂಕ್ ಸಿಬ್ಬಂದಿ ಮಂಗಳವಾರ ಕರೆ ನೀಡಿದ್ದ ಅಖಿಲ ಭಾರತ ಮುಷ್ಕರಕ್ಕೆ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬ್ಯಾಂಕ್ ವಹಿವಾಟು ಸಂಪೂರ್ಣ ಸ್ತಬ್ಧವಾಗಿತ್ತು.
ಜ.24 ರಂದು ನಾಲ್ಕನೇ ಶನಿವಾರ, ಜ.25 ಭಾನುವಾರ, ಜ.26 ರಂದು ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಮೂರು ದಿನ ನಿರಂತರವಾಗಿ ಬ್ಯಾಂಕ್‌ಗೆ ಸರ್ಕಾರಿ ರಜೆ ಇತ್ತು. ಮಂಗಳವಾರ ಬ್ಯಾಂಕ್ ಸಿಬ್ಬಂದಿ ಮುಷ್ಕರ ನಡೆಸಿದ್ದರಿಂದಾಗಿ ಸತತ ನಾಲ್ಕು ದಿನ ಬ್ಯಾಂಕ್ ವಹಿವಾಟು ನಡೆಯಲಿಲ್ಲ. ಇದರಿಂದಾಗಿ ಶಾಖಾ ಮಟ್ಟದಲ್ಲಿ ನಡೆಯುತ್ತಿದ್ದ ಎಲ್ಲ ವ್ಯವಹಾರಗಳೂ ಸ್ಥಗಿತವಾಗಿದ್ದವು.ಬ್ಯಾಂಕ್ ಶಾಖೆಗಳಲ್ಲಿ ಚೆಕ್ ಕ್ಲಿಯರೆನ್ಸ್, ಹಣ ವಿತ್‌ಡ್ರಾ, ಡೆಪಾಸಿಟ್, ಪಾಸ್‌ಬುಕ್ ಎಂಟ್ರಿ ಮತ್ತಿತರ ಕಾರ್ಯಗಳಿಲ್ಲದೇ ಗ್ರಾಹಕರು ಸಂಕಷ್ಟ ಅನುಭವಿಸಬೇಕಾಯಿತು. ನಾಲ್ಕು ದಿನ ರಜೆ ಇದ್ದುದರಿಂದ ಕೆಲವೆಡೆ ಎಟಿಎಂಗಳಲ್ಲೂ ಹಣದ ಕೊರತೆ ಕಂಡು ಬಂದಿದ್ದು ಸಾರ್ವಜನಿಕರು ಪರದಾಡುವಂತಾಯಿತು. ಮುಷ್ಕರದ ಮಾಹಿತಿ ಇಲ್ಲದೆ ದೂರದ ಊರುಗಳಿಂದ ಆಗಮಿಸಿದ್ದ ಗ್ರಾಹಕರು, ಸಮಸ್ಯೆ ಅನುಭವಿಸಿದರು.ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ:
ಬೆಂಗಳೂರಿನಲ್ಲಿ ಮೈಸೂರು ಬ್ಯಾಂಕ್ ವೃತ್ತದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ಹಲವು ಬ್ಯಾಂಕ್‌ಗಳ ಸಿಬ್ಬಂದಿ ಜಮಾಯಿಸಿ ಪ್ರತಿಭಟನೆ ನಡೆಸಿದರು. ಬೇಡಿಕೆಯನ್ನು ಈಡೇರಿಸದ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಹಾಸನದಲ್ಲಿ ಎನ್.ಆರ್.ವೃತ್ತದಲ್ಲಿರುವ ಭಾರತೀಯ ಸ್ಟೇಟ್ ಬ್ಯಾಂಕ್ ಶಾಖೆಯ ಎದುರು ನೂರಾರು ಬ್ಯಾಂಕ್ ಸಿಬ್ಬಂದಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡು, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಬಳಿಕ ಎನ್.ಆರ್.ವೃತ್ತದಿಂದ ಹೇಮಾವತಿ ಪ್ರತಿಮೆವರೆಗೆ ಬೃಹತ್ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಚಿಕ್ಕಮಗಳೂರಿನಲ್ಲಿ ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಮುಖಂಡರು ಕೆನರಾ ಬ್ಯಾಂಕ್ ಮುಖ್ಯ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಬೀದರ್ ನಲ್ಲಿ ನಗರದ ಎಸ್‌ಬಿಐ ಬ್ಯಾಂಕ್ ಬಳಿ ಬ್ಯಾಂಕ್ ನೌಕರರು ಪ್ರತಿಭಟನೆ ನಡೆಸಿ, ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಫೆಡರಲ್ ಬ್ಯಾಂಕ್ ಶಾಖೆ ಮುಂದೆ ಸರ್ಕಾರಿ ಮತ್ತು ಖಾಸಗಿ ಬ್ಯಾಂಕುಗಳ ಸಿಬ್ಬಂದಿ ಕೈಗೆ ಕಪ್ಪು ಬಟ್ಟೆ ಧರಿಸಿ, ಧರಣಿ ನಡೆಸಿದರು. ಬೀದರ್ ನಲ್ಲಿ ನಗರದ ಎಸ್‌ಬಿಐ ಬ್ಯಾಂಕ್ ಬಳಿ ಬ್ಯಾಂಕ್ ನೌಕರರು ಪ್ರತಿಭಟನೆ ನಡೆಸಿ, ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳ್ಳಾರಿಯಲ್ಲಿ ಎಸ್‌ಬಿಐ ಪ್ರಧಾನ ಕಚೇರಿ ಎದುರು, ಕಲಬುರಗಿಯಲ್ಲಿ ಕೆನರಾ ಬ್ಯಾಂಕ್ ಮುಂಭಾಗ ಹಾಗೂ ಕರ್ನಾಟಕ ಗ್ರಾಮೀಣ ಬ್ಯಾಂಕ್ ಪ್ರಾದೇಶಿಕ ಕಚೇರಿ ಕುಸನೂರ ರಸ್ತೆ ಆವರಣದಲ್ಲಿ ಪ್ರತಿಭಟನೆ ನಡೆಸಿದ ನೌಕರರು, 5 ದಿನಗಳ ಕೆಲಸಕ್ಕಾಗಿ ಆಗ್ರಹಿಸಿದರು.
ಹಾವೇರಿಯಲ್ಲಿ ಹಾನಗಲ್ಲ ರಸ್ತೆಯ ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿಯಿಂದ ಪ್ರತಿಭಟನೆ ಆರಂಭಿಸಿದ ಬ್ಯಾಂಕ್ ಸಿಬ್ಬಂದಿ, ಹಾನಗಲ್ ರಸ್ತೆಯ ಎಪಿಎಂಸಿ ಮಾರ್ಗವಾಗಿ ಹೊಸಮನಿ ಸಿದ್ದಪ್ಪ ವೃತ್ತ ತಲುಪಿ ಮತ್ತೆ ಅದೇ ಮಾರ್ಗವಾಗಿ ಹಿಂದಿರುಗಿ ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿ ಮುಂಭಾಗ ಧರಣಿ ನಡೆಸಿದರು. ಮಂಗಳೂರಿನಲ್ಲಿ ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಯಿತು. ಮೈಸೂರಿನಲ್ಲಿ ಸರಸ್ವತಿಪುರಂನಲ್ಲಿರುವ ಎಸ್ ಬಿಐ ಪ್ರಾದೇಶಿಕ ಕಚೇರಿ ಮುಂಭಾಗದಲ್ಲಿ ಬ್ಯಾಂಕ್ ಅಧಿಕಾರಿಗಳ ಮತ್ತು ನೌಕರರು ಪ್ರತಿಭಟನೆ ನಡೆಸಿದರು. ಇದೇ ವೇಳೆ, ರಾಮನಗರ, ಚಿಕ್ಕಬಳ್ಳಾಪುರ, ಶಿವಮೊಗ್ಗ ಸೇರಿ ರಾಜ್ಯದ ಇತರೆಡೆಯೂ ಪ್ರತಿಭಟನೆಗಳು ನಡೆದವು.
ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (ಯುಎಫ್‌ಬಿಯು) ದೇಶಾದ್ಯಂತ ಮುಷ್ಕರಕ್ಕೆ ಕರೆ ನೀಡಿದ್ದು ಈ ಒಕ್ಕೂಟದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಒಳಗೊಂಡ ಒಂಬತ್ತು ಸಂಘಟನೆಗಳು ಇರುವುದರಿಂದ ಮುಷ್ಕರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.