ಆಸ್ತಿ ತೆರಿಗೆ ಬಾಕಿದಾರರಿಗೆ ಬ್ಯಾಂಕ್‌ ಮಾದರಿ ಬಿಬಿಎಂಪಿ ಧ್ವನಿ ಸಂದೇಶ

KannadaprabhaNewsNetwork | Published : Feb 7, 2024 1:47 AM

ಸಾರಾಂಶ

ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರ ಫೋನ್‌ಗಳಿಗೆ ಖಾಸಗಿ ಬ್ಯಾಂಕ್‌ಗಳ ಮಾದರಿಯಲ್ಲಿ ‘ಇಂಟಿಗ್ರೇಟೆಡ್ ವಾಯಿಸ್‌ ರೆಸ್ಪಾನ್ಸ್‌ ಸಿಸ್ಟಂ’ (ಐವಿಆರ್‌ಎಸ್‌) ಮೂಲಕ ಎಚ್ಚರಿಕೆ ಸಂದೇಶ ರವಾನಿಸಲು ಬಿಬಿಎಂಪಿ ಮುಂದಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರ ಫೋನ್‌ಗಳಿಗೆ ಖಾಸಗಿ ಬ್ಯಾಂಕ್‌ಗಳ ಮಾದರಿಯಲ್ಲಿ ಎಚ್ಚರಿಕೆ ಸಂದೇಶ ರವಾನಿಸಲು ಬಿಬಿಎಂಪಿ ಮುಂದಾಗಿದೆ.

ಆಸ್ತಿ ತೆರಿಗೆ ವಸೂಲಿಗೆ ಕಟ್ಟಡಗಳನ್ನು ಸೀಜ್‌ ಮಾಡುವುದು ಸೇರಿದಂತೆ ಹಲವು ರೀತಿಯ ಕ್ರಮ ಕೈಗೊಂಡಿರುವ ಪಾಲಿಕೆ, ಇದೀಗ ಬಾಕಿ ಉಳಿಸಿಕೊಂಡ ಆಸ್ತಿ ಮಾಲೀಕರ ಮೊಬೈಲ್‌ ಸಂಖ್ಯೆಗಳಿಗೆ ನಿಯಮಿತವಾಗಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಮೊತ್ತದ ಆಧಾರದ ಮೇಲೆ ಇಂತಿಷ್ಟು ಸಂಖ್ಯೆಯ ‘ಇಂಟಿಗ್ರೇಟೆಡ್ ವಾಯಿಸ್‌ ರೆಸ್ಪಾನ್ಸ್‌ ಸಿಸ್ಟಂ’ (ಐವಿಆರ್‌ಎಸ್‌) ಮೂಲಕ ಧ್ವನಿ ಸಂದೇಶ ಕಳುಹಿಸಲು ನಿರ್ಧರಿಸಿದೆ.

ಧ್ವನಿ ಸಂದೇಶ ಕಳಿಸಲು ಖಾಸಗಿ ಏಜನ್ಸಿ ನೇಮಕ ಮಾಡಿಕೊಳ್ಳಲು ಟೆಂಡರ್‌ ಆಹ್ವಾನಿಸಲಾಗಿದ್ದು, ಎರಡು ವರ್ಷದ ಅವಧಿಗೆ ಗುತ್ತಿಗೆ ನೀಡಲಾಗುವುದು. ಹೊಸ ಮಾದರಿಯ ಟೆಂಡರ್‌ ಆಗಿರುವುದರಿಂದ ಕಡಿಮೆ ಹಣ ನಿಗದಿ ಪಡಿಸುವ ಸಂಸ್ಥೆಗೆ ಟೆಂಡರ್‌ ನೀಡಲು ನಿರ್ಧರಿಸಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.ಬಾಕಿ ಹಣಕ್ಕೆ ತಕ್ಕಂತೆ ಕರೆ

ಕನ್ನಡ ಮತ್ತು ಇಂಗ್ಲಿಷ್‌ ಎರಡು ಭಾಷೆಯಲ್ಲಿ ವಾರದ ಎಲ್ಲಾ ದಿನ ಬೆಳಗ್ಗೆ 8 ಗಂಟೆಯಿಂದ ಸಂಜೆ 7 ಗಂಟೆ ಅವಧಿಯಲ್ಲಿ ಈ ಸಂದೇಶ ಕಳಿಸಲಾಗುವುದು. ₹10 ಸಾವಿರ ಒಳಗೆ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರಿಗೆ ತಿಂಗಳಿಗೆ ಒಂದು ದ್ವನಿ ಸಂದೇಶ ಕಳುಹಿಸುವುದು. ₹10 ಸಾವಿರದಿಂದ ₹1 ಲಕ್ಷ ವರೆಗೆ ಬಾಕಿದಾರರಿಗೆ ತಿಂಗಳಿಗೆ ಎರಡು ಬಾರಿ, ಅದೇ ರೀತಿ, ₹1 ಲಕ್ಷದಿಂದ ₹10 ಲಕ್ಷ ಬಾಕಿದಾರರಿಗೆ 3 ಬಾರಿ, ₹10 ಲಕ್ಷ ದಿಂದ ₹1 ಕೋಟಿ ಬಾಕಿದಾರರಿಗೆ 4 ಬಾರಿ, ₹1 ಕೋಟಿಗಿಂತ ಹೆಚ್ಚಿನ ಬಾಕಿ ಉಳಿಸಿಕೊಂಡವರಿಗೆ ಮಾಸಿಕ 8 ಬಾರಿ ಧ್ವನಿ ಸಂದೇಶ ಕಳುಹಿಸಲು ನಿರ್ಧರಿಸಲಾಗಿದೆ.

Share this article