ಕನ್ನಡಪ್ರಭ ವಾರ್ತೆ ಹಾವೇರಿ
ತಾಲೂಕಿನ ಕುರುಬಗೊಂಡ ಗ್ರಾಮದ ಯೂನಿಯನ್ ಬ್ಯಾಂಕ್‌ನಲ್ಲಿ ಲಕ್ಷಾಂತರ ನಗದು ಮತ್ತು ಚಿನ್ನಾಭರಣ ದೋಚಿ, ಗ್ರಾಹಕರಿಗೆ ವಂಚಿಸಿದ ಆರೋಪದ ಮೇಲೆ ಬ್ಯಾಂಕಿನ ಸಹಾಯಕ ವ್ಯವಸ್ಥಾಪಕಿ ಅರ್ಚನಾ ಬೆಟಗೇರಿಯನ್ನು ಹಾವೇರಿಯ ಸಿಇಎನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.ಬ್ಯಾಂಕಿನಲ್ಲಿ ನಡೆದಿರುವ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಂಕಿನ ಸಹಾಯಕ ವ್ಯವಸ್ಥಾಪಕಿ ಅರ್ಚನಾ ಬೆಟಗೇರಿ, ದಿನಗೂಲಿ ಕೆಲಸಗಾರ ಶಾಂತಪ್ಪ ಯಲಗಚ್ಚ, ಬಿಸಿನೆಸ್ ಕರೆಸ್ಟಾಂಡೆಂಟ್ ಪ್ರವೀಣ ಚಿಕ್ಕಲಿಂಗದಹಳ್ಳಿ ಈ ಮೂವರ ವಿರುದ್ಧ ಬ್ಯಾಂಕಿನ ಶಾಖಾ ವ್ಯವಸ್ಥಾಪಕ ರವಿರಾಜ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಪ್ರಕರಣದ ವಿವರ:ಕುರುಬಗೊಂಡ ಶಾಖೆಯ ಯೂನಿಯನ್ ಬ್ಯಾಂಕಿನಲ್ಲಿ ಅರ್ಚನಾ ಬೆಟಗೇರಿ ಕಳೆದ ಎರಡೂವರೆ ವರ್ಷಗಳಿಂದ ಪ್ರಭಾರ ವ್ಯವಸ್ಥಾಪಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸ್ವಂತ ಲಾಭಕ್ಕಾಗಿ ಗ್ರಾಹಕರಿಗೆ ಸಂಬಂಧಿಸಿದ ₹1,12,78,920 ನಗದು ಮತ್ತು ₹49,47,792 ಮೌಲ್ಯದ ಚಿನ್ನಾಭರಣ ಸೇರಿ ಒಟ್ಟು ₹1.62 ಕೋಟಿ ವಂಚಿಸಿರುವ ಬಗ್ಗೆ ದೂರಿನಲ್ಲಿ ತಿಳಿಸಲಾಗಿದೆ.
ಬ್ಯಾಂಕಿಗೆ ಹಣ ಡಿಪಾಜಿಟ್ ಮಾಡಲು ಬಂದಿದ್ದ 9 ಗ್ರಾಹಕರಿಂದ ಒಟ್ಟು ₹81,45,420 ಪಡೆದುಕೊಂಡು, ನಗದು ರಸೀದಿಗಳಿಗೆ ಮತ್ತು ಭದ್ರತಾ ಪತ್ರಗಳಿಗೆ ಸಹಿ ಮಾಡಿ, ಸೀಲು ಹಾಕಿ ಗ್ರಾಹಕರಿಗೆ ಕೊಟ್ಟಿದ್ದರು. ನಂತರ ಗ್ರಾಹಕರ ಬ್ಯಾಂಕ್ ಖಾತೆಗಳಿಗೆ ಹಣ ಜಮಾ ಮಾಡದೆ ಅರ್ಚಾನಾ ಸ್ವಂತಕ್ಕೆ ಉಪಯೋಗಿಸಿಕೊಂಡಿರುವ ಆರೋಪ ಮಾಡಲಾಗಿದೆ.ಸುಳ್ಳು ಲೆಕ್ಕ ಸೃಷ್ಟಿ:
ಬ್ಯಾಂಕಿನ ಭದ್ರತಾ ಕೊಠಡಿಗೆ ಹೋಗಿ ಅಲ್ಲಿರುವ ದಾಖಲೆ ಚೀಲಗಳಲ್ಲಿ ತುಂಬಿಕೊಂಡು, ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ. ನಂಬಿಕೆ ದ್ರೋಹ ಮಾಡಿ, ಸುಳ್ಳು ಲೆಕ್ಕ ನಮೂದಿಸಿ, ಬ್ಯಾಂಕಿನ ಎಲೆಕ್ಟ್ರಾನಿಕ್ ದಸ್ತಾವೇಜು ಸೃಷ್ಟಿ ಮಾಡಿ, ನಂತರ ದಸ್ತಾವೇಜು ನಾಶಪಡಿಸುವ ಉದ್ದೇಶದಿಂದ ಬ್ಯಾಂಕ್ ಗ್ರಾಹಕರಿಂದ ಪಡೆದ ಡಿಪಾಜಿಟ್ ಹಣದ ಬಗ್ಗೆ ಬ್ಯಾಂಕಿನ ಸಿಸ್ಟಂನಲ್ಲಿ ನಮೂದಿಸದೇ ಬ್ಯಾಂಕಿಗೆ ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.ಎಟಿಎಂನಿಂದಲೂ ಹಣ ದರೋಡೆ:
13 ಗ್ರಾಹಕರು ಸಾಲಕ್ಕಾಗಿ ಬ್ಯಾಂಕಿನಲ್ಲಿ ಚಿನ್ನಾಭರಣ ಒತ್ತೆ ಇಟ್ಟು, ಸಾಲ ಪಡೆದಿದ್ದ ಒಟ್ಟು ₹49,47,792 ಮೌಲ್ಯದ ಚಿನ್ನಾಭರಣವನ್ನು ಅರ್ಚನಾ ಬೆಟಗೇರಿ ತೆಗೆದುಕೊಂಡು ಹೋಗಿದ್ದಾರೆ. 2ನೇ ಆರೋಪಿ ಶಾಂತಪ್ಪ ಮತ್ತು 3ನೇ ಆರೋಪಿ ಪ್ರವೀಣ ಇವರೊಂದಿಗೆ ಸೇರಿಕೊಂಡು ಒಳಸಂಚು ಮಾಡಿ, ಕುರುಬಗೊಂಡ ಬ್ಯಾಂಕ್ ಆವರಣದಲ್ಲಿರುವ ಎಟಿಎಂ ಕೇಂದ್ರದಿಂದ ₹31,33,500 ನಗದನ್ನು ಚೀಲಗಳಲ್ಲಿ ತುಂಬಿಕೊಂಡು ಹೋಗಿದ್ದಾರೆ ಎಂದು ದೂರು ನೀಡಲಾಗಿದೆ.